Monday, October 28, 2013

ಜಯ ವಾಯು ಹನುಮಂತ ಜಯ ಭೀಮ ಬಲವಂತ

ರಾಗ : ನಾಟಿ
ತಾಳ : ಝಂಪೆ ತಾಳ
ವ್ಯಾಸರಾಜರ ಕೃತಿ

ಜಯ ವಾಯು ಹನುಮಂತ ಜಯ ಭೀಮ ಬಲವಂತ | |

ಜಯ ಪೂರ್ಣ ಮತಿವಂತ ಜಯ ಸಲಹೊ ಸಂತ | ಅ ಪ |

ಅಂಜನೆಯಲಿ ಜನಿಸಿ ಅಂದು ರಾಮನ ಸೇವೆ
ನಂದದಲಿ ಮಾಡಿ ಕಪಿ ಬಲವ ಕೂಡಿ
ಸಿಂಧು ಲಂಘಿಸಿ ವನ ಭಂಗಿಸಿ
ಸೀತೆಗುಂಗುರ ಕೊಟ್ಟೆ ಲಂಕಾಪುರವ ಸುಟ್ಟೆ | |

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಅರಿಬಲವ ಕುಟ್ಟಿ
ಉರಗ ಬಂಧನದಿಂದ ಕಪಿವರರು ಮೈಮರೆಯೆ
ಗಿರಿಯ ಸಂಜೀವನವ ತಂದು ಬದುಕಿಸಿದೆ | |

ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ
ಶ್ರೀಪಾರ್ಥಸಾರಥಿಯ ಭಜಕ ನೀನಾದೆ
ಪಾಪಿ ಮಾಗಧ ಬಕ ಕೀಚಕ ಹಿಡಿಂಬಕರ
ಕೋಪದಿಂದಲಿ ತರಿದೆ ಮೂಜಗದಿ ಮೆರೆದೆ | |

ಧುರದಲಿ ದುರ್ಯೋಧನನ ಬಲವನ್ನು ತರಿದೆ
ಅರಿತು ದುಶ್ಯಾಸನನ ಒಡಲನ್ನು ಬಗೆದೆ
ಉರವ ತಪ್ಪಿಸಿ ಕೌರವನ್ನ ತೊಡೆಗಳ ಮುರಿದೆ
ಹರಿಯ ಕಿಂಕರ ಧುರಂಧರಗಾರು ಸರಿಯೆ | |

ಕಲಿಯುಗದಲಿ ಕಳ್ಳರುದಿಸಿ ದುರ್ಮತಗಳನು
ಬಲಿಸಿ ಶ್ರೀಹರಿಯ ಗುಣಗಳನು ಮರೆಸಿ
ಕಲಿಯನನುಸರಿಸಲು ಗುರುವಾಗಿ ಅವತರಿಸಿ
ಖಳರ ದುರ್ಮತ ಮುರಿದೆ ಶ್ರೀಕೃಷ್ಣ ಪರನೆಂದೆ | |

No comments:

Post a Comment