Sunday, September 29, 2013

ಹನುಮನ ಮತವೇ ಹರಿಯ ಮತವೋ

ರಾಗ : ಬೇಹಾಗ್
ತಾಳ : ಆದಿತಾಳ

ಹನುಮನ ಮತವೇ ಹರಿಯ ಮತವೋ | |
ಹರಿಯ ಮತವೋ ಹನುಮನ ಮತವೋ | ಅ ಪ |

ಹನುಮನ ನಂಬಿದ ಸುಗ್ರೀವ ಗೆದ್ದ
ಹನುಮನ ನಂಬದ ವಾಲಿಯು ಬಿದ್ದ | |

ಹನುಮನ ನಂಬಿದ ವಿಭೀಷಣ ಗೆದ್ದ
ಹನುಮನ ನಂಬದ ರಾವಣ ಬಿದ್ದ | |

ಹನುಮ ಪುರಂದರವಿಠಲನ ದಾಸ
ಪುರಂದರವಿಠಲನು ಹನುಮನೋಳ್ವಾಸ | |

Thursday, September 26, 2013

ಏನ ಬಣ್ಣಿಪೆನಮ್ಮ

ರಾಗ : ನಾಟಿ
ತಾಳ : ಮಿಶ್ರಛಾಪುತಾಳ
ವಾದಿರಾಜರ ಕೃತಿ

ಏನ ಬಣ್ಣಿಪೆನಮ್ಮ | |
ಬಣ್ಣಿಪೆ ನಮ್ಮಯ್ಯ ಗುರುರಾಯರ | ಅ ಪ |

ಮಧ್ವಸರೋವರ ತೀರದ ಮುದ್ದುಕೃಷ್ಣನ
ಪ್ರಸಿದ್ಧಿಯಿಂದ ಪೂಜೆಮಾಡಿ ಗೆದ್ದ ಬಲವಂತ ರಾಯರ | |

ಭವಬಂಧ ಮಾಯಿಗಳ ಕಾಲಲೊದ್ದು ಮೂಲಿಲ್ಹಾಕಿ
ಮಧ್ವಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದ ಯತಿರಾಯರ | |

ಸಿರಿ ಹಯವದನ ಚರಣಕಮಲವನ್ನು
ನಿರುತವಾಗಿ ಸೇವಿಸುವ ಅಚ್ಚಿನ್ನ ನಿಜದಾಸರ | |

Tuesday, September 24, 2013

ಗುರು ಮಧ್ವಮುನಿರನ್ನ ಮೂರು ಪರಿಯದೋರಿದೆ ನಿನ್ನ

ರಾಗ : ಕಮಾಚ್
ತಾಳ : ಆದಿತಾಳ
ಮಹಿಪತಿದಾಸರ ಕೃತಿ.

ಗುರು ಮಧ್ವಮುನಿರನ್ನ ಮೂರು ಪರಿಯದೋರಿದೆ ನಿನ್ನ
ಹರಿಭಕ್ತಿಯಲಿ ಅವಿಚ್ಛಿನ್ನ ಸರಿಯಾರು ಧರೆಯೊಳು ನಿನ್ನ
ಸ್ಮರಣೆಯಲಿಹೆ ರಾಮನ್ನ ಪರಮಪಾವನ್ನ | |

ಅತಿಬಾಹು ಪರಾಕ್ರಮ ಕ್ಷಿತಿಯೊಳು ನಿನ್ನದೇ ನೇಮ
ಪ್ರಥಮಲ್ಯಾದೆ ಹನುಮ ದ್ವಿತಿಯಲ್ಯಾದೆ ಭೀಮ
ತೃತಿಯಲ್ಲಿ ಪೂರ್ಣ ಪ್ರಾಜ್ಞನೆನಿಸಿದೆ ನಿಸ್ಸೀಮ | |

ಸಾಹ್ಯಕ್ಕೆ ಕಾರಣ ಮಹಾದೈತ್ಯರ ಮರ್ದನ
ಶ್ರೀಹರಿ ಸಾನ್ನಿಧ್ಯ ಪೂರ್ಣ ಇಹ ಸಕಲನಿಪುಣ
ಮಹಿಪತಿ ಮುಖ್ಯಪ್ರಾಣ ಸ್ವಹಿತ ಸಾಧನ | |

Sunday, September 22, 2013

ನೆರೆನಂಬಿ ಪಡೆಯಿರೋ ಹಿತವ ನಮ್ಮ

ರಾಗ : ಪಂತುವರಾಳಿ
ತಾಳ : ತಿಶ್ರಛಾಪು
ವಾದಿರಾಜರ ಕೃತಿ

ನೆರೆನಂಬಿ ಪಡೆಯಿರೋ ಹಿತವ ನಮ್ಮ
ಗುರುವಾದ ಮಧ್ವಮುನಿ ಸಮ್ಮತವ | |

ತ್ರೇತೆಯೊಳಂಜನಾ ತನಯನಾಗಿ
ಸೀತಾರಮಣ ರಘುನಾಥಗೆ ಪ್ರಿಯ
ದೂತತನದಿ ಖಳತತಿಯ ಕೊಂದು
ಖ್ಯಾತಿ ಪಡೆದ ಹನುಮನಾದ ಯತಿಯ | |

ದ್ವಾಪರದಲಿ ಭೀಮನೆನಿಸಿ ಪಾಂಡು
ಭೂಪನರಸಿ ಕುಂತಿದೇವಿಯೊಳುದಿಸಿ
ಶ್ರೀಪತಿಗರ್ಥಿಯ ಸಲಿಸಿ ನೃಪಾನೃಪರೆಲ್ಲರ
ಕೊಂದ ಮಹಿಮನ್ನ ಭಜಿಸಿ | |

ಕಲಿಯುಗದಲ್ಲಿ ಯತಿಯಾಗಿ ಈ
ಇಳೆಯ ದುಶ್ಶ್ಯಾಸ್ತ್ರವ ಜಾರಿದ ವಿರಾಗಿ
ಕುಲಗುರು ಶ್ರೀ ಮಧ್ವಯೋಗಿ ನಮ್ಮ
ಚೆಲುವ ಹಯವದನ ಭಂಟನೆಂದು ಬಾಗಿ | |