Friday, October 18, 2013

ಅಪಮೃತ್ಯು ಪರಿಹರಿಸೋ ಅನಿಲದೇವ

ರಾಗ : ಕಾಂಭೋದಿ
ತಾಳ : ಝಂಪೆತಾಳ
ಜಗನ್ನಾಥದಾಸರ ಕೃತಿ

ಅಪಮೃತ್ಯು ಪರಿಹರಿಸೋ ಅನಿಲದೇವ
ಕೃಪಣವತ್ಸಲನೆ ಕಾವರ ಕಾಣೆ ಜಗದೊಳಗೆ | |

ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನವು ಎಮ್ಮನು ಉದಾಸೀನ ಮಾಡುವುದು
ಅನುಚಿತವು ಜಗದಿ ಸಜ್ಜನ ಶಿಖಾಮಣಿಯೆ | |

ಕರುಣಾಭಿಮಾನಿಗಳು ಕಿಂಕರರು ಮೂರ್ಲೋಕದರಸು
ಹರಿಯು ನಿನ್ನೊಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ
ಗುರುವರ್ಯ ನೀ ದಯಾಕರನೆಂದು ಪ್ರಾರ್ಥಿಸುವೆ | |

ಭವರೋಗ ಮೋಚಕನೆ ಪವಮಾನರಾಯ
ನಿನ್ನವರನು ನಾನು ಮಾಧವಪ್ರಿಯನೆ
ಜವನ ಬಾಧೆಯ ಬಿಡಿಸೋ ಅವನಿಯೊಳು ಸುಜನರಿಗೆ
ದಿವಿಜಗಣ ಮಧ್ಯದಲಿ ಪ್ರವರ ನೀನಹುದೋ | |

ಜ್ಞಾನಾಯುರೂಪಕನು ನೀನಹುದೋ ವಾಣಿ
ಪಂಚಾನನಾದ್ಯಮರಿಗೆ ಪ್ರಾಣದೇವ
ದೀನವತ್ಸಲನೆಂದು ನಾ ನಿನ್ನ ಮೊರೆಹೊಕ್ಕೆ
ದಾನವಾರಣ್ಯ ಕೃಶಾನು ಸರ್ವದಾ ಎನ್ನ | |

ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವಲ್ಲ ಸಾಧು ಪ್ರಿಯನೇ
ವೇದವಾದೋದಿತ ಜಗನ್ನಾಥವಿಠಲನ
ಪಾದಭಜನೆಯಿತ್ತು ಮೋದ ಕೊಡು ಸತತ | ೫ ।

No comments:

Post a Comment