Thursday, January 30, 2014

ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು

ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು
ಭೂತ ದಯಾಪರನಾಗಿರಬೇಕು
ಪಾತಕವೆಲ್ಲ ಕಳೆಯಲು ಬೇಕು
ಮಾತುಮಾತಿಗೆ ಹರಿಯೆನ್ನಬೇಕು ।।೧।।

ಆರು ವರ್ಗವ ನಳಿಯಬೇಕು
ಮೂರು ಗಣಂಗಳು ಮೀರಲು ಬೇಕು
ಸೇರಿ ಬ್ರಹ್ಮನೊಳಿರಬೇಕು
ಅಷ್ಟ ಮದಂಗಳ ತಿಳಿಯಲು ಬೇಕು ।।೨।।

ದುಷ್ಟರ ಸಂಗವ ಬಿಡಲುಬೇಕು
ಕೃಷ್ಣ ಕೇಶವ ಎನ್ನಬೇಕು
ವೇದ ಶಾಸ್ತ್ರವನೋದಲು ಬೇಕು
ಭೇದಹಂಕಾರವ ನೀಗಲು ಬೇಕು ।।೩।।

ಮಾಧವ ಸ್ಮರಣೆಯೊಳಿರಬೇಕು
ಶಾಂತಿ ಕ್ಷಮೆ ದಯೆ ಪಿಡಿಯಲು ಬೇಕು
ಭ್ರಾಂತಿ ಕ್ರೋಧನ ಕಳೆಯಲು ಬೇಕು
ಸಂತರ ಸಂಗದಿ ರತಿಯಿರಬೇಕು ।।೪।।

ಗುರುವಿನ ಚರಣಕ್ಕೆರಗಲು ಬೇಕು
ತರುಂಓಪಾಯನವನರಿಯಲು ಬೇಕು
ವಿರಕ್ತಿ ಮಾರ್ಗದಲಿರಬೇಕು
ಬಂದದ್ದುಂಡು ಸುಖಿಸಲು ಬೇಕು ।।೫।।

ಕಾಯೋ ಶ್ರೀ ನಾರಸಿಂಹ

ರಾಗ : ಮುಖಾರಿ
ತಾಳ : ಆದಿತಾಳ

ಕಾಯೋ ಶ್ರೀ ನಾರಸಿಂಹ ಕಾಯೋ ಜಯ ನಾರಸಿಂಹ ಪ।

ಕಾಯೋ ಶ್ರೀ ನಾರಸಿಂಹ ತ್ರಿಯಂಬಕಾದ್ಯಮರೇಶ
ಭಯಾಂಧತಿಮಿರಮಾರ್ತಾಂಡ ಶ್ರೀನಾರಸಿಂಹ ಪ।

ಘೋರ ಅಕಾಲಮೃತ್ಯು ಮೀರಿ ಬರಲು ಕಂಡು
ಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ।।೧।।

ಧೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯು
ಸುಷಮ್ನಾನಾಡಿಸ್ಥಿತವಿಭುವೆ ಶ್ರೀನಾರಸಿಂಹ ।।೨।।

ಜ್ಞಾನರಹಿತನಾಗಿ ನಾ ನಿನ್ನ ಮರೆತರೆ
ನೀನೂ ಮರೆತದ್ಯಾಕೆ ಪೇಳೋ ಶ್ರೀ ನಾರಸಿಂಹ ।।೩।।

ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆ
ಸುಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ।।೪।।

ಪಾಲಮುನ್ನೀರಾಗರ ಪದುಮಮನೋಹರ
ಗೋಪಾಲ ವಿಠಲ ಜಗತ್ಪಾಲ ಶ್ರೀ ನಾರಸಿಂಹ ।।೫।।

Monday, January 27, 2014

ನಾರಸಿಂಹ ಶ್ರೀ ನಾರಸಿಂಹ

ರಾಗ : ಹಂಸಧ್ವನಿ
ತಾಳ : ಆದಿತಾಳ

ನಾರಸಿಂಹ ಶ್ರೀ ನಾರಸಿಂಹ
ಪಾರುಗಾಣಿಸಿ ದುರಿತೌಘ ಹರಿಸಿ ಕಾಯೋ ಪ।

ನರಹರಿ ಜ್ವರಹರ ಘೋರವ್ಯಾಧಿಯ
ಪರಿಹಾರಗೈಸಿ ಪರಿಪಾಲಿಸಬೇಕಯ್ಯ ಪ।

ಘುಡುಘುಡಿಸುತ ಪಲ್ಕಡಿದು ಚೆಂಡಾಡುತ
ಮೃಡನೆ ಪರನೆಂದು ನುಡಿದು ಕಶಿಪುವಿನ
ಒಡನೆ ಕಂಬದಿ ಬಂದು ಒಡಲ ಬಗೆದು ನಿನ್ನ
ದೃಢಭಕುತಗೆ ಬಂದೆಡರ ಬಿಡಿಸಿದೆ ।।೧।।

ತುಷ್ಟಿ ಪಡಿಸೋ ಪರಮೇಷ್ಠಿಯಪಿತ ನಿನ್ನ
ದೃಷ್ಟಿಯಿಂದ ಅನಿಷ್ಟನಿವಾರಣ
ಅಷ್ಟಕರ್ತೃತ್ವದ ಪ್ರಭೋ ಕಷ್ಟ ಹರಿಸಿ ಭಕ್ತರಿಷ್ಟಪಾಲಿಪ
ಸರ್ವಸೃಷ್ಟಿಗೊಡೆಯ ದೇವ ।।೨।।

ಸಂಕಟ ಬಿಡಿಸೋ ಭವಸಂಕಟದಿಂದ
ಶ್ರೀವೆಂಕಟೇಶಾತ್ಮಕ ಭೀಕರರೂಪ
ಶಂಕರಾಂತರ್ಗತ ಸಂಕರುಷಣಮೂರ್ತೆ
ಮಂಕುಹರಿಸಿ ಪಾದಪಂಕಜ ತೋರಯ್ಯ ।।೩।।