Friday, June 26, 2015

ಶ್ರೀ ವ್ಯಾಸರಾಜರು


ಜನನ - ೧೪೪೭ ಏಪ್ರಿಲ್ ೨೨ ಪ್ರಭವನಾಮ ಸಂವತ್ಸರ ವೈಶಾಖ ಶುದ್ಧ ದಶಮಿ ಅಧಿಕಮಾಸ, ಭಾನುವಾರ
ಸ್ಥಳ - ಬನ್ನೂರು ಗ್ರಾಮ, ಮೈಸೂರು ಜಿಲ್ಲೆ
ಜನ್ಮನಾಮ - ಯತಿರಾಜ
ತಂದೆ - ರಾಮಾಚಾರ್ಯ
ತಾಯಿ - ಸೀತಾಬಾಯಿ
ವಿದ್ಯಾಗುರುಗಳು - ಶ್ರೀಪಾದರಾಜರು
ಆಶ್ರಮಗುರುಗಳು - ಶ್ರೀ ಬ್ರಹ್ಮಣ್ಯ ತೀರ್ಥರು

ಒಮ್ಮೆ ಅಬ್ಬೂರು ಮಠದ ಪರಮ ಶಿಷ್ಯರಾಗಿದ್ದ ಸೀತಾಬಾಯಿಯವರು  ತಮ್ಮ ಪತಿ ನಿಧನರಾಗಿದ್ದರಿಂದ ಸಹಗಮನ ಮಾಡಲು ಬ್ರಹ್ಮಣ್ಯತೀರ್ಥರ ಬಳಿ ಅನುಮತಿ ಯಾಚಿಸಲು ಬಂದು ನಮಸ್ಕರಿಸಿದಾಗ ಶ್ರೀಗಳು ಎಂದಿನಂತೆ ದೀರ್ಘಸುಮಂಗಲೀಭವ ಎಂದು ಆಶೀರ್ವದಿಸಿದರು. ಆಗ ನೆರೆದಿದ್ದ ಶಿಷ್ಯರೆಲ್ಲ ಆಶ್ಚರ್ಯಭರಿತರಾಗಿ ಶ್ರೀಗಳಿಗೆ ವಿಷಯ ತಿಳಿಸಿದಾಗ, ನನ್ನ ಬಾಯಿಂದ ದೀರ್ಘಸುಮಂಗಲೀಭವ ಎಂದು ಬಂದಾಯ್ತು. ವಿಠಲನೇ  ನನ್ನ ಬಾಯಲ್ಲಿ ಮಾತನಾಡಿಸಿದ್ದಾನೆ. ನನ್ನ ಸನ್ಯಾಸಧರ್ಮ ನಿಜವೇ ಆಗಿದ್ದರೆ ನನ್ನ ಮಾತು ಸತ್ಯವಾಗಬೇಕು. ಇಲ್ಲವಾದಲ್ಲಿ ಸ್ತ್ರೀಹತ್ಯಾದೋಷ - ವಿಠಲನಿಗೆ ಹತ್ಯಾದೋಷ ಎರಡೂ ಸಂಭವಿಸಬೇಕಾಗುತ್ತದೆ. ನಿನ್ನ ಪತಿಯ ಮೃತನಾದ ಸ್ಥಳವನ್ನು ತೋರಿಸು ಎಂದು ಸೀತಾಬಾಯಿ ಯೊಡನೆ ಹೊರಟೇಬಿಟ್ಟರು.

ಆದರೆ ಯತಿಗಳು ಮೃತದೇಹವನ್ನು ನೋಡಬಾರದ ಕಾರಣ ಶಿಷ್ಯರು ತಡೆಯೊಡ್ಡಿದರು. ಸ್ವಾಮಿಗಳು ಅವರನ್ನು ಲೆಕ್ಕಿಸದೆ ನೇರವಾಗಿ ಮೃತದೇಹದ ಬಳಿ ಬಂದು ಮಂತ್ರ ಪಠನೆ ಮಾಡಿ ಕಮಂಡಲದಿಂದ ಮಂತ್ರೋದಕವನ್ನು ರಾಮಾಚಾರ್ಯರ ಮೇಲೆ ಪ್ರೋಕ್ಷಣೆ ಮಾಡುತ್ತಿದ್ದಂತೆ, ನಿದ್ದೆಯಿಂದ  ಎದ್ದು ಶ್ರೀಗಳಿಗೆ ನಮಸ್ಕರಿಸಲು ಶ್ರೀಗಳು ಸುಪುತ್ರಾ ಪ್ರಾಪ್ತಿರಸ್ತು ಎಂದು ಆಶೀರ್ವದಿಸಿದರು. ಆಗಲೇ ಮುಪ್ಪಿನಲ್ಲಿದ್ದ ದಂಪತಿಗಳಿಗೆ ಶ್ರೀಗಳ ಆಶೀರ್ವಾದ ಆಶ್ಚರ್ಯವೆನಿಸಿತು. ಆಗ ಶ್ರೀಗಳು, ನಿಮ್ಮ ಮೊದಲ ಸಂತಾನವನ್ನು ನಮಗೇ ನೀಡಬೇಕು. ಮತ್ತು ಪ್ರಸವಕಾಲದಲ್ಲಿ ಶಿಶುವನ್ನು ಭೂಸ್ಪರ್ಶವಾಗದಂತೆ ತರಬೇಕು ಎಂದು ಬಂಗಾರದ ಹರಿವಾಣವನ್ನು ಕೊಟ್ಟು ಕಳುಹಿಸಿದರು.

ಹೀಗೆ ಜನಿಸಿದ ಶಿಶುವನ್ನು ಶ್ರೀಗಳು ಕಣ್ವನದಿಯಲ್ಲಿ ತೊಳೆದು ಶ್ರೀಕೃಷ್ಣನ ಮುಂದೆ ಮಲಗಿಸಿ ಅದನ್ನು ಸಂರಕ್ಷಿಸಿದರು. ಮುಂದೆ ಮಗುವಿಗೆ ವ್ಯಾಸತೀರ್ಥ ಎಂದು ನಾಮಕರಣ ಮಾಡಿ ಆಶ್ರಮ ನೀಡಿದರು. ವ್ಯಾಸತೀರ್ಥರೇ ಮುಂದೆ ವ್ಯಾಸರಾಜರೆಂದು ಪ್ರಸಿದ್ಧಿ ಹೊಂದಿದರು.

ವ್ಯಾಸರಾಜರ ಪಾಂಡಿತ್ಯ:

ಒಮ್ಮೆ ವ್ಯಾಸರಾಜರು ಸಂಚಾರದಲ್ಲಿದ್ದಾಗ ಕಂಚಿಗೆ ಆಗಮಿಸಿದರು. ವೇದಾಂತ ವಿದ್ಯೆಗೆ, ಮಹೋನ್ನತ ಪಾಂಡಿತ್ಯಕ್ಕೆ ಪ್ರಖ್ಯಾತವಾಗಿತ್ತು. ಅಂಥಹ ಕಂಚಿಯಲ್ಲಿ ಕೆಲವೇ ದಿನಗಳಲ್ಲಿ ವ್ಯಾಸರಾಜರು ತಮ್ಮ ಪಾಂಡಿತ್ಯದಿಂದ ವಿಖ್ಯಾತರಾದರು. ಅಂಥಹ ವ್ಯಾಸರಾಜರನ್ನು ಕೆಣಕಲು ಬಂದ ಪಂಡಿತರಿಗೆ ವ್ಯಾಸರಾಜರು ಹೀಗೆ ಉತ್ತರಿಸಿದರು :

ಶ್ರೀಮಧ್ವಮತಪ್ರಮೇಯನವರತ್ನಮಾಲಿಕಾ
ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ ತತ್ವತೋ
ಭೇದೋ ಜೀವಗಣಾ ಹರೇರನುಚರಾಃ ನೀಚೋಚ್ಚಭಾವಂ ಗತಾಃ ।।
ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮ್ಯ್ನಾಯೈಕವೇದ್ಯೋ ಹರಿಃ ।।  

ಶ್ರೀ ಹರಿಯೇ ಸರ್ವೋತ್ತಮನು,
ಪ್ರಮಾಣ ಪರಿಮಿತವಾದ ಜಗತ್ತು ಪಾರಮಾರ್ಥತಃ ಸತ್ಯವು,
ಜೀವೇಶ್ವರ ಭೇದ, ಜಡೇಶ್ವರ ಭೇದ, ಜೀವ ಜಡ ಭೇದ, ಜೀವ ಜೀವಭೇದ, ಜಡ ಜಡ ಭೇದಗಳೆಂಬ ಭೇದಪಂಚಕವು ಪಾರಮಾರ್ಥಿಕವು
ಸಾತ್ವಿಕ,ರಾಜಸ, ತಾಮಸರೆಂಬ ತ್ರಿವಿಧ ಜೀವರುಗಳು ಯಾವಾಗ್ಯೂ ಶ್ರೀಹರಿಯ ಅಧೀನರು, ಸ್ವಭಾವತಃ ತಾರತಮ್ಯದಲ್ಲಿ ಇರುವವರು
ಸ್ವರೂಪಭೂತಾನಂದಾನುಭವವೇ ಸಾತ್ವಿಕರಿಗೆ ಮುಕ್ತಿಯು
ಪರಮ ನಿರ್ಮಲ ವಿಷ್ಣು ಭಕ್ತಿಯೇ ಮುಕ್ತಿಯ  ಸಾಧನವು,
ಪ್ರತ್ಯಕ್ಷ,ಅನುಮಾನ, ಆಗಮಗಳೆಂದು ಮೂರೇ, ಶ್ರೀ ಹರಿಯೇ ಅಖಿಲ ಸದಾಗಮಗಳಿಂದ ಪರಮ ತಾತ್ಪರ್ಯಪೂರ್ವಕ ಮುಖ್ಯ ಪ್ರತಿಪಾದ್ಯನು, ಎಂದು ಪ್ರಮೇಯ ನವರತ್ನಗಳು ಪ್ರಕಾಶಿಸುತ್ತವೆ

ಹೀಗೆ ಪ್ರತಿಪಾದಿಸಿದ ವ್ಯಾಸರಾಜರ ಪಾಂಡಿತ್ಯಕ್ಕೆ  ಮಾರುಹೋದ ವಿಷ್ಣುಕಂಚಿಯ ಪಂಡಿತರು ವ್ಯಾಸರಾಜರನ್ನ  ದಿವ್ಯವಾದ ಪಲ್ಲಕ್ಕಿಯಲ್ಲಿ ಕೂರಿಸಿ  ದೇವಾಲಯದ ಸಕಲ ಸಾಂಪ್ರದಾಯಿಕ ವೈಭವದೊಡನೆ ವರದರಾಜಸ್ವಾಮಿ ದೇವಾಲಯಕ್ಕೆ ಕರೆದೊಯ್ದರು

ವ್ಯಾಸತೀರ್ಥರ  ಖ್ಯಾತಿಯನ್ನು ಸೈರಿಸಲಾಗದೆ ಪರಾಜಿತರಾಗಿದ್ದ ಕೆಲ ವಿದ್ವಾಂಸರು  ಒಮ್ಮೆ ಪೂಜೆಯಾದ ನಂತರ ಅಡಿಗೆಯವನೊಡನೆ ಸೇರಿ ಸೇರಿ ಪಿತೂರಿ ಮಾಡಿ ವಿಷಪ್ರಾಶನ ಮಾಡಿಸಿದರು. ಆದರೆ ಭಗವದರ್ಪಣವಾದ ವಿಷಾಹಾರ ಶ್ರೀಗಳವರನ್ನು ಏನೂ ಮಾಡಲಿಲ್ಲ. ಅದು ಅವರಿಗೆ ಅಮೃತವಾಯಿತು.


ಶ್ರೀಪಾದರಾಜರ ಸನ್ನಿಧಿಯಲ್ಲಿ ವ್ಯಾಸರಾಜರು
 

ಬ್ರಹ್ಮಣ್ಯತೀರ್ಥರ ಆಶಯದಂತೆ ವ್ಯಾಸರಾಜರು ಮುಳಬಾಗಿಲಿನ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಶ್ರೀಪಾದರಾಜರ ಬಳಿ ತರ್ಕ, ವ್ಯಾಕರಣ, ಛಂದಸ್ಸು, ಮೀಮಾಂಸ, ಷಡ್ಡರ್ಶನಗಳನ್ನು ಕಲಿಯಲು ಆಗಮಿಸಿದರು. ಕ್ರಮೇಣ ಶ್ರೀಮನ್ಯಾಯಸುಧಾ ಗ್ರಂಥ ಪಾಠ ಮುಗಿದಂತೆಲ್ಲಾ ವ್ಯಾಸರಾಜರ ಜ್ಞಾನ ಮತ್ತು ಕಾಂತಿ ಮತ್ತಷ್ಟು ಹೆಚ್ಚಾಗುತ್ತಿತ್ತು.

ಪದ್ಮನಾಭತೀರ್ಥರ ಅನುಗ್ರಹ:
ಒಮ್ಮೆ ಮುಳಬಾಗಿಲಿನ ನರಸಿಂಹತೀರ್ಥದಲ್ಲಿರುವ ಗುಹೆಯಲ್ಲಿ ಎಂದಿನಂತೆ ಅಂದಿನ ಪಾಠಗಳನ್ನು ಮನನ ಮಾಡುತ್ತಿದ್ದಾಗ ಒಂದು ಘಟಸರ್ಪವು ವ್ಯಾಸರಾಜರನ್ನು ಸುತ್ತುವರೆದಿತ್ತು.  ಅದನ್ನು ಕಂಡ ಶ್ರೀಪಾದರಾಜರು ತಮ್ಮ ಅಪರೋಕ್ಷ ಜ್ಞಾನದಿಂದ ಮನನ ಮಾಡಿದಾಗ ಅದು ಸರ್ಪರೂಪದಲ್ಲಿರುವ ಯತಿವರ್ಯರೆಂದು, ತಮ್ಮ ಮಠದ ಮೂಲಪುರುಷರೇ ಆದ ಪದ್ಮನಾಭತೀರ್ಥರೆಂದು ಗೋಚರವಾಯಿತು. ತಮ್ಮ ದಿವ್ಯಶಕ್ತಿಯಿಂದ ಸರ್ಪದೊಡನೆ ಸರ್ಪಭಾಷೆಯಲ್ಲಿ ಮಾತನಾಡಿಸಿದಾಗ ವ್ಯಾಸರಾಜರು ಮುಂದೆ ಮಹತ್ಕಾರ್ಯಗಳನ್ನು ಸಾಧಿಸಬೇಕಾಗಿರುವುದರಿಂದ ಅವರನ್ನು ಆಶೀರ್ವದಿಸಲು ಬಂದಿರುವುದಾಗಿ ತಮ್ಮ ಸ್ಪರ್ಶ ಹಾಗೂ ಸಾನ್ನಿಧ್ಯದಿಂದಾಗಿ ಮುಂದೆಂದೂ ವ್ಯಾಸರಾಯರಿಗೆ ಶತ್ರುಗಳ ವಿಷಭಾದೆ ತಟ್ಟುವುದಿಲ್ಲ ಎಂದು ಹೇಳಿ ಸರ್ಪ ಕಣ್ಮರೆಯಾಯಿತು.

ಸ್ವಪ್ನದಲ್ಲಿ ಸೂಚನೆ:
ಒಮ್ಮೆ ವ್ಯಾಸರಾಜರಿಗೆ ಸ್ವಪ್ನದಲ್ಲಿ ವಿಠಲನು ಕಾಣಿಸಿಕೊಂಡು ಪಂಡರಾಪುರಕ್ಕೆ ಬರಬೇಕೆಂದು ಆಹ್ವಾನವಿತ್ತಂತೆ ಗೋಚರವಾಯಿತು. ಅದೇ  ರೀತಿ ಶ್ರೀಪಾದರಾಜರಿಗೆ ಭೀಮರಥಿ ಪುಷ್ಪಾವತಿ ಸಂಗಮ ಕ್ಷೇತ್ರದಲ್ಲಿ ಪಾಂಡವ ವಂಶೀಯನಾದ ಶ್ರೀಕ್ಷೇಮಕಾಂಟ ಮಹಾರಾಜನು ಒಂದು ದೇವರ ಪೆಟ್ಟಿಗೆಯನ್ನು ಭೂಸ್ಥಾಪನ ಮಾಡಿರುವುದಾಗಿ ತಿಳಿಸಿ ಅದನ್ನು ತೆಗೆದು ಪ್ರತಿನಿತ್ಯ ಪೂಜಿಸಲು ಆದೇಶ ಮಾಡಿದಂತಾಯಿತು. ಅದರಂತೆ ಮಾರನೆ ದಿನ ಭೂಗರ್ಭದಲ್ಲಿ ಒಂದು ದೇವರ ಪೆಟ್ಟಿಗೆ ದೊರೆಯಿತು. ಅದರಲ್ಲಿ ಎರಡು ಸಂಪುಟಗಳು ದೊರೆತವು. ಒಂದನ್ನು ತೆಗೆದಾಗ ಶ್ರೀ ಜಾಂಬವತೀದೇವಿಯರಿಂದ ನಂತರದಲ್ಲಿ ಅರ್ಜುನನಿಂದ ಪೂಜಿತನಾಗಿದ್ದ ರುಕ್ಮಿಣೀಸತ್ಯಭಾಮಾಸಹಿತ ಶ್ರೀ ರಂಗವಿಠಲಮೂರ್ತಿಯ ದರ್ಶನವಾಯಿತು. ಅಲ್ಲಿಯವರೆಗೂ ಗೋಪೀನಾಥ ಎಂಬ ಅಂಕಿತ ಬಳಸುತ್ತಿದ್ದ ಶ್ರೀಪಾದರಾಜರು ಅಂದಿನಿಂದ ತಮ್ಮ ದೇವರನಾಮಗಳು, ಪದ್ಯಗಳು, ಸುಳಾದಿಗಳಿಗೆ ರಂಗವಿಠಲ ಎಂಬ ಅಂಕಿತ ಬಳಸಲು ಶುರುಮಾಡಿದರು.

ಇದಾದ ಕೆಲವು ದಿನಗಳಲ್ಲಿ ಒಮ್ಮೆ ಶ್ರೀಪಾದರಾಜರು ವ್ಯಾಸರಾಜರಿಗೆ ಪ್ರತಿಮೆಗಳ ಪೂಜೆ ಆರಂಭಿಸಲು ಹೇಳಿ ತಾವು ಸ್ನಾನ ಮಾಡಲು ಹೊರಟರು. ವ್ಯಾಸರಾಜರು ಒಂದೊಂದೇ ಪ್ರತಿಮೆಗಳನ್ನು ತೆಗೆದು ಸಿದ್ಧಗೊಳಿಸುತ್ತಿದ್ದರು. ಹಾಗೆಯೇ ತೆಗೆಯುತ್ತಿದ್ದಾಗ ಶ್ರೀಪಾದರಾಜರಿಗೆ ಭೂಗರ್ಭದಲ್ಲಿ ದೊರೆತ ಪೆಟ್ಟಿಗೆಯ ಮತ್ತೊಂದು ಸಂಪುಟವನ್ನು ತೆರೆದರು. ಅಲ್ಲಿಯವರೆಗೂ ಶ್ರೀಪಾದರಾಜರು ಸಂಪುಟವನ್ನು ತೆರೆದಿರಲಿಲ್ಲ. ಸಂಪುಟವನ್ನು ತೆರೆಯುತ್ತಿದ್ದಂತೆ ಒಳಗಿನಿಂದ ವೇಣುಗೋಪಾಲಸ್ವಾಮಿಯು ಹೊರಬಂದು ನರ್ತಿಸಲು ಶುರುಮಾಡಿದನು.

ರುಕ್ಮಿಣೀಸತ್ಯಭಾಮಾಸಹಿತ ಶ್ರೀರಂಗವಿಠಲನನ್ನು ಕಂಡ ವೇಣುಗೋಪಾಲಸ್ವಾಮಿ ಆನಂದಾತಿರೇಕದಿಂದ ವ್ಯಾಸರಾಜರೆದುರು ಕೊಳಲನೋಡುತಾ ನರ್ತಿಸುತ್ತಿದ್ದನು. ಸ್ವಾಮಿಯ ನರ್ತನಕ್ಕೆ ಸಾಲಿಗ್ರಾಮಗಳೂ ತಾಳ ಹಾಕಲು ಶುರುಮಾಡಿದವು. ಸುತ್ತಾ ನೆರೆದು ನೋಡುತ್ತಾ ನಿಂತಿದ್ದ ಶಿಷ್ಯವೃಂದ ಓಡಿಹೋಗಿ ಶ್ರೀಪಾದರಾಜರಿಗೆ ನಡೆದ ಅಚ್ಚರಿಯನ್ನು ವಿವರಿಸಿದಾಗ ಶ್ರೀಪಾದರಾಜರು ಕೂಡಲೇ ಸ್ಥಳಕ್ಕೆ ಬಂದು ದೂರದಿಂದಲೇ ಬಗ್ಗಿ ನೋಡಿದರು. ವೇಣುಗೋಪಾಲಸ್ವಾಮಿ ನರ್ತಿಸುತ್ತಿರಲು ವ್ಯಾಸರಾಜರು ಆನಂದದಿಂದ ಹಾಡುತ್ತಾ ತಾವೂ ನರ್ತಿಸುತ್ತಿದ್ದರು. ಶ್ರೀಪಾದರಾಜರು ತದೇಕಚಿತ್ತದಿಂದ ಮೂರ್ತಿಯನ್ನೇ ನೋಡುತ್ತಿರಲು, ವೇಣುಗೋಪಾಲಸ್ವಾಮಿ  ಭಂಗಿಯಲ್ಲಿ ನರ್ತಿಸುತ್ತಿದ್ದನೋ ಅದೇ ಭಂಗಿಯಲ್ಲಿ ನಿಂತನು. ಸ್ವಾಮಿ ನಿಂತಿದ್ದ ಪರಿ ಹೇಗಿತ್ತೆಂದರೆ ತನ್ನ ಬಲಪಾದದ ಮೇಲೆ ಎಡಪಾದವನ್ನಿಟ್ಟು ಮೋಹಕ ಭಂಗಿಯಲ್ಲಿ ನಿಂತಿದ್ದನು.

ಇದನ್ನು ಕಂಡ ಶ್ರೀಪಾದರಾಜರು ಆನಂದಪರವಶದಿಂದ ವ್ಯಾಸರಾಜರ ಬಳಿ ಬಂದು ನೀವು ಅತ್ಯಂತ ಪುಣ್ಯಶಾಲಿಗಳು. ಭೀಮಾತೀರದಲ್ಲಿ ದೊರೆತಿದ್ದ ಒಂದು ಸಂಪುಟದಲ್ಲಿ ನನಗೆ ಶ್ರೀರಂಗವಿಠಲ ಒಲಿದಿದ್ದ. ನಿಮಗೆ ವೇಣುಗೋಪಾಲಸ್ವಾಮಿ ಒಲಿದಿದ್ದಾನೆ. ಸ್ವಾಮಿಯ ವಿಗ್ರಹವನ್ನು ನೀವೇ ಸ್ವೀಕರಿಸಿ, ನಿರಂತರವಾಗಿ ಪೂಜೆ ನಡೆಸಿಕೊಂಡು ಬನ್ನಿ ಎಂದು ಸಂಪುಟವನ್ನು ವ್ಯಾಸರಾಜರಿಗೆ ಒಪ್ಪಿಸಿದರು.

ಪಟ್ಟಾಭಿಷೇಕ:

ಹೀಗೆ ಶ್ರೀಪಾದರಾಜರ ಬಳಿ ಸಂಪೂರ್ಣ ವಿದ್ಯಾಭ್ಯಾಸವಾದ ಬಳಿಕ ಬ್ರಹ್ಮಣ್ಯ ತೀರ್ಥರು ಒಂದು ಸುಮುಹೂರ್ತದಲ್ಲಿ ವ್ಯಾಸಮುಷ್ಟಿಯ ಸಂಪುಟವನ್ನು ಬಂಗಾರದ ಹರಿವಾಣದಲ್ಲಿಟ್ಟು ವ್ಯಾಸರಾಜರ ತಲೆಯ ಮೇಲಿಟ್ಟು ಪಟ್ಟಾಭಿಷೇಕ ಮಹೋತ್ಸವವನ್ನು ನೆರವೇರಿಸಿ ಮಠದ ಮುಂದಿನ ಅಧಿಪತಿಗಳೆಂದು ಘೋಷಿಸಿದರು.

ಶ್ರೀನಿವಾಸ ಸನ್ನಿಧಿಯಲ್ಲಿ ವ್ಯಾಸರಾಜರು:

ಒಮ್ಮೆ ತಿರುಮಲದಲ್ಲಿ ಶ್ರೀನಿವಾಸನ ಅರ್ಚಕರು ತಮ್ಮ ಸ್ವಾರ್ಥಕ್ಕಾಗಿ ತಮ್ಮ ಅಧಿಕಾರವನ್ನು ದುರ್ವಿನಿಯೋಗ ಪಡಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಸಾಳ್ವ ನರಸಿಂಹನು ಅರ್ಚಕರನ್ನೆಲ್ಲ ಕೊಂದು ಬ್ರಹ್ಮ ಹತ್ಯಾ ದೋಷಕ್ಕೆ ಗುರಿಯಾದನು. ಅದರ ಪರಿಹಾರಕ್ಕಾಗಿ ಶ್ರೀಪಾದರಾಜರ ಬಳಿ ಬಂದಾಗ ರಾಜರು ಸಾಳ್ವನಿಗೆ ಬಂದಿದ್ದ ದೋಷವನ್ನು ಪರಿಹರಿಸಿದರು.

ಅದೇ ಸಂದರ್ಭದಲ್ಲಿ ಶ್ರೀನಿವಾಸನ ಪೂಜೆಗೆ ಅರ್ಹರಾದ ಮನೆತನದ ಬ್ರಾಹ್ಮಣರು ಯಾರೂ ಇರದ ಕಾರಣ ಸಾಳ್ವನು ವ್ಯಾಸರಾಜರನ್ನು ಪೂಜೆ ಮಾಡಲು ಕೇಳಿಕೊಂಡಾಗ ವ್ಯಾಸರಾಜರು ಒಪ್ಪಿಕೊಂಡು ಸತತವಾಗಿ ಹನ್ನೆರೆಡು ವರ್ಷಗಳ ಕಾಲ ಶ್ರೀನಿವಾಸನ ಪೂಜೆಯನ್ನು ನೆರವೇರಿಸಿದರು. ನಂತರದಲ್ಲಿ ಅರ್ಚಕ ತಾತಾಚಾರ್ಯರ ಮಗನೊಬ್ಬ ಉಳಿದಿರುವುದಾಗಿ ತಿಳಿದು ಅವನನ್ನು ಕರೆಸಿ ಅವನಿಗೆ ಉಪನಯನಾದಿ ಕೈಂಕರ್ಯಗಳನ್ನು ಮಾಡಿಸಿ ಆಗಮೋಕ್ತ ಪೂಜಾಪದ್ಧತಿಯನ್ನು ತಿಳಿಸಿ ಶ್ರೀನಿವಾಸನ ಪೂಜೆಯನ್ನು ಅವನಿಗೊಪ್ಪಿಸಿ ತಾವು ವಿಜಯನಗರದ ಕಡೆ ಹೊರಟರು.

ಯಂತ್ರೋದ್ಧಾರಕ ಪ್ರಾಣದೇವರು :
ಒಮ್ಮೆ ವ್ಯಾಸರಾಜರು ಯಥಾಪ್ರಕಾರದಂತೆ ತುಂಗಭದ್ರೆಯ ಚಕ್ರತೀರ್ಥದ ಬಳಿ ಸ್ನಾನ ಮುಗಿಸಿ ಆಹ್ನಿಕದಲ್ಲಿ ಕುಳಿತಿದ್ದಾಗ ಬಂಡೆಯೊಂದರಿಂದ ಕಪಿಯೊಂದು ಬಂದು ಹಾಗೆಯೇ ಕಣ್ಮರೆಯಾಯಿತು. ಘಟನೆ ಹಲವಾರು ಬಾರಿ ಪುನರಾವರ್ತನೆಯಾಯಿತು. ಆಗ ವ್ಯಾಸರಾಜರು ಅದೇ ಬಂಡೆಯ ಮೇಲೆ ಅಂಗಾರದಿಂದ ಪ್ರಾಣದೇವರನ್ನು ಬರೆದು ದ್ವಾದಶನಾಮಗಳನ್ನು ತಿದ್ದಿ ಧ್ಯಾನಿಸಲು ಕುಳಿತರು. ಕಣ್ಣು ಬಿಟ್ಟಾಗ ಬಂಡೆಯ ಮೇಲೆ ಕೆತ್ತಿದ್ದ ಮೂರ್ತಿಯು ಜೀವ ತಳೆದು ಬಂಡೆಯಿಂದ  ಕೆಳಗೆ ಹಾರಿ ಮಾಯವಾಯಿತು. ವ್ಯಾಸರಾಜರು ಮತ್ತೆ ಅಂಗಾರದಿಂದ ಮೂರ್ತಿಯನ್ನು ತಿದ್ದಿದರು. ಅದು ಮತ್ತೆ ಜೀವ ತಳೆದು ಮಾಯವಾಯಿತು. ಹೀಗೆ ವ್ಯಾಸರಾಜರು ಹನ್ನೆರೆಡು ಸಲ ಮೂರ್ತಿಯನ್ನು ಕೆತ್ತಲು ಪ್ರಯತ್ನಿಸಿದಾಗಲೂ ಹನ್ನೆರೆಡು ಸಲವೂ ಮೂರ್ತಿ ಜೀವತಳೆದು ಹಾರಿ ಹೋಯಿತು.

ನಂತರ ಧ್ಯಾನಕ್ಕೆ ಕುಳಿತು ಮನಸಿನಲ್ಲೇ ಅದರ ಕಾರಣವನ್ನು ಅರಿತರು. ನಂತರ ಬಂಡೆಯ ಮೇಲೆ ಮೊದಲು ಷಟ್ಕೋನವನ್ನು ಬರೆದು ಅದರ ಸುತ್ತ ವಲಯಾಕಾರವನ್ನು ಯಂತ್ರದಂತೆ ರಚಿಸಿ ಮಧ್ಯದಲ್ಲಿ ಯೋಗಾಸನ ರೂಢನಾಗಿ ಜಪಮಾಲೆ ಹಿಡಿದು ಕುಳಿತ ಧ್ಯಾನಮಗ್ನ ಮುಖ್ಯ ಪ್ರಾಣದೇವರನ್ನು ಬರೆದು ಮೊದಲು ಹಾರಿಹೋದ ಹನ್ನೆರೆಡು ಕಪಿಗಳನ್ನೂ, ಪದ್ಮದಳಗಳ ತುದಿಯಲ್ಲಿ ಮುಖ್ಯಪ್ರಾಣನಿಗೆ ಮಾಲಾಕಾರವಾಗಿ ಕಪಿಬಂಧ ಹೆಣೆದರು. ಯಂತ್ರದಲ್ಲಿ ಒಂದು ಕೋಟಿ ಬೀಜಾಕ್ಷರ ಮಂತ್ರ ಅಡಕವಾಗಿದೆಯಂದೂ ಇದರ ಸಿದ್ಧಿಗಾಗಿ ವ್ಯಾಸರಾಜರು ಮೂರುಕೋಟಿ ಮಂತ್ರಗಳನ್ನು ಜಪಿಸಿ ಪ್ರಾಣದೇವರ ಸನ್ನಿಧಾನವನ್ನು ಸ್ಥಿರವಾಗಿ ನಿಲ್ಲಿಸಿದ್ದಾರೆಂದೂ, ಅಪರೋಕ್ಷ ಜ್ಞಾನಿಗಳಾದ ವಿಜಯದಾಸರು ತಮ್ಮ ಯಂತ್ರೋದ್ಧಾರಕ ಸುಳಾದಿಯಲ್ಲಿ ತಿಳಿಸಿದ್ದಾರೆ.

ಒಮ್ಮೆ ಮುಳಬಾಗಿಲಿನಲ್ಲಿ ವ್ಯಾಸರಾಜರು ನಿದ್ರೆಯಲ್ಲಿದ್ದಾಗ ಅವರು ಪ್ರಾಣದೇವರನ್ನು ಪೂಜಿಸಿತ್ತಿರುವಂತೆಯೂ ಅದು ನೋಡ ನೋಡುತ್ತಿದ್ದಂತೆ ವಿಭಜನೆ ಹೊಡಿ ೭೩೨ ಮೂರ್ತಿಗಳಾಗಿ ಸ್ವಪ್ನ ಬಿದ್ದಿತು. ಕೂಡಲೇ ಸ್ವಪ್ನದಿಂದ ಎಚ್ಚೆತ್ತ ವ್ಯಾಸರಾಜರು ೭೩೨ ಮುಖ್ಯ ಪ್ರಾಣಪ್ರತೀಕಗಳನ್ನು ಪ್ರತಿಷ್ಠಾಪಿಸುವ ಸಂಕಲ್ಪ ಕೈಗೊಂಡರು. ಅದೇ ರೀತಿ ಮುಂದೆ ೭೩೨ ಪ್ರಾಣದೇವರನ್ನು ಪ್ರತಿಷ್ಟಾಪಿಸಿದರು.

ನಂತರದಲ್ಲಿ ಹಲವಾರು ಗ್ರಂಥಗಳು, ಸ್ತೋತ್ರಗಳು, ಮಂಗಲಾಷ್ಟಕಗಳು ರಚಿಸಿ ನಂತರದಲ್ಲಿ ಆನೆಗೊಂದಿಯ ಗಜಗಹ್ವಕ್ಷೇತ್ರದಲ್ಲಿ (ನವವೃಂದಾವನ) ಫಾಲ್ಗುಣ ಬಹುಳ ಚತುರ್ಥಿಯಂದು ವೃಂದಾವನಸ್ತರಾದರು.