ರಾಗ : ಕಲ್ಯಾಣಿ
ತಾಳ : ಆಟತಾಳ
ವ್ಯಾಸರಾಜರ ಕೃತಿ
ಜಾಣ ನೀನಹುದೋ ಗುರು ಮುಖ್ಯಪ್ರಾಣ ನೀನಹುದೋ | ಪ |
ರಾಣಿ ಭಾರತೀರಮಣ ನಿನಗೆಣೆಕಾಣೆ ತ್ರಿಭುವನದೊಳಗೆ
ಸರ್ವ
ಪ್ರಾಣಿಗಳ ಹೃದಯದಲಿ ಮುಖ್ಯ
ಪ್ರಾಣನೆಂದೆನಿಸಿದೆಯೋ ಸ್ವಾಮಿ | ಅ ಪ |
ಧೀರ ನೀನಹುದೋ ವಾಯುಕುಮಾರ ನೀನಹುದೋ
ಸಾರಿದವರ ಮನೋರಥಂಗಳ
ಬಾರಿಬಾರಿಗೆ ಕೊಡುವೆನೆನುತಲಿ
ಕ್ಷೀರನದೀತೀರದಲಿ ನೆಲೆಸಿಹ
ಮಾರುತಾವತಾರ ಹನುಮ | ೧ |
ಧಿಟ್ಟ ನೀನಹುದೋ ಬೆಟ್ಟ ತಂದಿಟ್ಟವ ನೀನಹುದೋ
ರಟ್ಟೆ ಹಿಡಿದಕ್ಷಯಕುಮಾರನ
ಕುಟ್ಟಿ ದೈತ್ಯರ ಕೆಡಹಿ ಬೇಗದಿ
ಸುಟ್ಟು ಲಂಕೆಯ ಸೀತೆಗುಂಗುರ
ಕೊಟ್ಟೆ ಮೂಜಗಜೆಟ್ಟಿ ಹನುಮ | ೨ |
ಚಂಡ ನೀನಹುದೋ ದುರಿತ ಮಾರ್ತಾಂಡ ನೀನಹುದೋ
ಕುಂಡಲವು ಕಿರಿಘಂಟೆ ಉಡಿಯಲಿ
ಪೆಂಡೆ ನೂಪುರ ಕಾಲಲಂದಿಗೆ
ತಂಡತಂಡದಿ ಕೃಷ್ಣನಂಘ್ರಿ
ಪುಂಡರೀಕಕೆ ಕೈಯ ಮುಗಿದ | ೩ |
No comments:
Post a Comment