Thursday, February 28, 2013

ಬಾಗಿಲನು ತೆರೆದು

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ

ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ


ಪರಮಪದದೊಳಗೆ ವಿಷಧರನ ತಲ್ಪದಲಿ ನೀ

ಸಿರಿಸಹಿತ ಕ್ಷೀರವಾರುಧಿಯೊಳಿರಲು

ಕರಿರಾಜ ಕಷ್ಟದಲಿ ಆದಿಮೂಲಾ ಎಂದು

ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ


ಕಡು ಕೋಪದಲಿ ಖಳನು ಖಡುಗವನು ಹಿಡಿದು

ನಿನ್ನೊಡೆಯನೆಲ್ಲಿಹನು ಎಂದು ನುಡಿಯೇ

ದೃಢ ಭಕಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ

ಸಡಗರದಿ ಕಂಭದಿಂದೊಡೆದೆಯೋ ನರಹರಿಯೇ


ಯಮಸುತನ ರಾಣಿಗೆ ಅಕ್ಷಯವಸನವಿತ್ತೆ

ಸಮಯದಲಿ ಅಜಮಿಳನ ಪೊರೆದೆ

ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ

ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ

No comments:

Post a Comment