Friday, March 1, 2013

ರಾಘವೇಂದ್ರ ವಿಜಯ - ಪ್ರಥಮ ಸಂಧಿ

ಪ್ರಥಮ ಸಂಧಿ

ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//


ಶ್ರೀರಮಣ ಶ್ರೀದೇವಿ ಬೊಮ್ಮ

ಸಮೀರ ವಾಣೀ ಭಾರತೀ ವಿಪ

ನೂರುದಶಮುಖ ಉರಗಭೂಷಣ ರಾಣಿಯರ ಪದಕೆ

ಸಾರಿ ನಮನವ ಮಾಡಿ ಭಕ್ತ್ಯಾನುಸಾರ

ಗುರುವರ ರಾಘವೇಂದ್ರರುದಾರ

ವಿಜಯವ ಪೇಳ್ವೆ ಸುಜನರು ಕೇಳಿ ಮೋದಿಪುದು//೧//


ಘನ್ನ ಗುಣಗಣರನ್ನ ನಿಲಯಾಪನ್ನಪಾಲ

ವಿಶಾಲ ಮಹಿಮಾ ಎನ್ನ

ಯೋಗ್ಯತೆ ತಿಳಿದು ತಿಳಿಸಿದ ತನ್ನ ಮಹಾಮಹಿಮೆ

ಮುನ್ನ ಪೇಳೆಲೋ ಎಂದು ಅಭಯವ

ಘನ್ನ ಕೃಪೆಯಲಿ ನೀಡಿ ಕೃತಿಯನು

ಎನ್ನ ಮನದಲಿ ನಿಂತು ಪೇಳಿದ ತೆರದಿ ಪೇಳಿದೆನು//೨//


ವೇದಶಾಸ್ತ್ರ ಪುರಾಣ ಕಥೆಗಳನೋದಿ

ಕೇಳ್ದವನಲ್ಲ ತತ್ತ್ವದ ಹಾದಿ

ತಿಳಿದವನಲ್ಲ ಬುಧಜನಸಂಗ ಮೊದಲಿಲ್ಲ

ಮೋದತೀರ್ಥಪದಾಬ್ಜಮಧುಕರರಾದ

ಶ್ರೀ ಗುರುರಾಘವೇಂದ್ರರ

ಪಾದಪದ್ಮಪರಾಗಲೇಶದ ಸ್ಪರ್ಶ ಮಾತ್ರದಲಿ//೩//


ಕೃತಿಯ ಮಾಡುವ ಶಕ್ತಿ ಪುಟ್ಟಿತು

ಮತಿಯ ಮಾಂದ್ಯವು ತಾನೇ ಪೋಯಿತು

ಯತನವಿಲ್ಲದೆ ಸಕಲ ವೇದಗಳರ್ಥ ತಿಳಿದಿಹದು

ಪತಿತಪಾವನರಾದ ಗುರುಗಳ

ಅತುಳಮಹಿಮೆಯನಾವ ಬಲ್ಲನು

ಮತಿಮತಾಂವರ ಬುಧರಿಗಸದಳ ನರರ ಪಾಡೇನು//೪//


ಪರಸು ಸೋಕಲು ಲೋಹ ಹೇಮವು

ಅರಸು ಮುಟ್ಟಲು ದಾಸಿ ರಂಭೆಯು

ಸರಸ ಗುರುಗಳ ಪಾದಧೂಳಿಯ ಸ್ಪರ್ಶ ಮಾತ್ರದಲಿ

ಪರಮ ಪಾಮರನಾದ ನರನೂ

ಹರಣ ತೆರದಲಿ ಜ್ಞಾನಯೈಯ್ದುವ

ದುರಿತರಾಶಿಯ ದೂರಮಾಡುವ ದುರಿತವನಾದವ//೫//


ಆವ ಗುರುಗಳ ಪಾದತೋಯದಿ

ದೇವನದಿ ಮೊದಲಾದ ತೀರ್ಥಗಳಾವ

ಕಾಲದಲಿಂದ ತಾವೇ ಬೆರೆತು ನಿಂತಿಹವೋ

ಶ್ರೀವರನು ತಾ ಚಕ್ರರೂಪದಿ

ಜೀವರೋತ್ತಮ ಪ್ರಾಣದೇವನು

ಸಾವಿರಾಸ್ಯನೆ ರಾಯರೆಂದೂ ಸುರರು ನಿಂತಿಹರು//೬//


ಅಲವಬೋಧಸುತೀರ್ಥ ಮುನಿಗಳು

ಹಲವು ಕಾಲದಿ ನಿಂತು ಜನರಘವಳಿದು

ಕೀರುತಿಯಿತ್ತು ಲೋಕದಿ ಖ್ಯಾತಿ ಮಾಡಿಹರು

ಸುಲಭಸಾಧ್ಯನು ತನ್ನ ಜನರಿಗೆ

ಫಲಗಳೀಯ(ವ)ನು ಸರ್ವ ಜನರಿಗೆ

ಒಲಿಯನೀತನು ಎಂದಿಗಾದರೂ ಮಂದಭಾಗ್ಯರಿಗೆ//೭//


ಈತನೊಲಿಯಲು ಪ್ರಾಣನೊಲಿವನು

ವಾತನೊಲಿಯಲು ಹರಿಯು ಒಲಿವಾ

ಈತ ಸಕಲಕೆ ಮುಖ್ಯ ಕಾರಣನಾಗಿ ಇರುತಿಪ್ಪ

ಈತನೇ ಬಲವಂತ ಲೋಕದಿ

ಈತನೇ ಮಹಾದಾತ ಜನರಿಗೆ

ಈತನಂಘ್ರಿಸರೋಜ ಕಾಮಿತ ಫಲಕೆ ಕಾರಣವು//೮//


ರಾಯರಂಘ್ರಿಸುತೋಯಕಣಗಳು

ಕಾಯದಲಿ ಸಲ್ಲಗ್ನವಾಗಲು

ಹೇಯಕುಷ್ಟಭಗಂದರಾದಿ ಸಮಸ್ತವ್ಯಾಧಿಗಳು

ಮಾಯಮಯ ಭೂತಾದಿ ಬಾಧವಪಾಯ

ತಾನೇ ಪೊಂದಿಪೋಪದಜೇಯ

ತನ್ನಯ ಶಕ್ತಿಯಿಂದಲಿ ಕಾರ್ಯ ಮಾಡುವನು//೯//


ದೃಷ್ಟಿಯೆಂಬ ಸುವಜ್ರದಿಂದಲಿ

ಬೆಟ್ಟದಂತಿಹ ಪಾಪರಾಶಿಯ

ಅಟ್ಟಿಕಳಿಸುವ ದೂರದೇಶಕೆ ದುರಿತಗಜಸಿಂಹ

ಮುಟ್ಟಿ ತನಪದ ಸೇವೆ ಮಾಡಲು

ಇಷ್ಟ ಕಾಮಿತ ಸಿದ್ದಿ ನೀಡುವ

ಕಷ್ಟಕೋಟಿಯ ಸುಟ್ಟು ಬಿಡುವನು ಸರ್ವಕಾಲದಲಿ//೧೦//


ಇಂದು ಸೂರ್ಯಗ್ರಹಣಪರ್ವವು

ಬಂದ ಕಾಲದಿ ನೇಮಪೂರ್ವಕ

ಪೊಂದಿದಾಸನದಲ್ಲಿ ಕುಳಿತಷ್ಟೋತ್ತರಾವರ್ತಿ

ಒಂದೆ ಮನದಲಿ ಮಾಡೆ ಗುರುವರ

ನಂದದಲಿ ಸಕಲಾರ್ಥ ಸಿದ್ಧಿಯ

ತಂದುಕೊಡುವನು ತನ್ನ ಸೇವಕ ಜನರ ಸಂತತಿಗೆ//೧೧//


ತನಯರಿಲ್ಲದ ಜನಕೆ ಸುತರನು

ಮನಿಯು ಮಾನಿನಿ ವೃತ್ತಿ ಕ್ಷೇತ್ರವು

ಕನಕ ಧನ ಸಂತಾನ ಸಂಪತು ಇನಿತೆ ಫಲಗಳನು

ಜನ ಸಮೂಹಕೆ ಇತ್ತು ತೋಷದಿ

ವಿನಯಪೂರ್ವಕ ಸಲಿಸಿ ಕಾವನು

ಅನುಪಮೋಪಮಚರಿತ ಸದ್ಗುಣಭರಿತ ಯತಿನಾಥ//೧೨//


ಶಾಪಾನುಗ್ರಹಶಕ್ತನೊಬ್ಬನು

ಲೋಪವಾಗದು ನುಡಿದ ವಾಕ್ಯವು

ವ್ಯಾಪಕನು ತಾನಾಗಿ ಇಪ್ಪನು ಸರ್ವಕಾಲದಲಿ

ಕೋಪವಿಲ್ಲವೋ ಜ್ಞಾನಮಯ ಸುಖರೂಪ

ಸಂತತ ಸಾಧುವರ್ತಿಯು

ಪಾಪನಾಶಕ ಕವಿಕುಲೋತ್ತಮ ಪುಣ್ಯಮಯಕಾಯ//೧೩//


ಭೂತ ಪ್ರೇತ ಪಿಶಾಚಿ ಯಕ್ಷಿಣಿ

ಭೀತಿ ಬಡಕರ ಭೀತಿ ಬಿಡಿಸೀ

ಮಾತೆಯಂದದಿ ಪೊರೆವ ಸಂತತ ಭೀತಿವರ್ಜಿತನು

ದಾತ ಎನ್ನಯ ಮಾತು ಲಾಲಿಸೊ

ಯಾತಕೀತೆರ ಮಾಡ್ದ್ಯೋ ಗುರುವರ

ಪೋತ ನಾ ನಿನಗಲ್ಲೆ ಯತಿಕುಲನಾಥ ಸರ್ವಜ್ಞ//೧೪//


ಮಾತ ಪಿತ ಸುತ ಭ್ರಾತ ಬಾಂಧವ

ದೂತ ಸತಿ ಗುರುನಾಥ ಗತಿಮತಿ

ನೀತಸಖ ಮುಖವ್ರಾತ ಸಂತತ ಎನಗೆ ನೀನಯ್ಯ

ಭೂತಿದಾಯಕ ಸರ್ವಲೋಕದಿ

ಖ್ಯಾತ ಗುರುಪವಮಾನ ವಂದಿತ

ದಾತ ಗುರುಜಗನ್ನಾಥವಿಠಲನ ಪ್ರೀತಿ ಪಡೆದಿರುವಿ//೧೫//


//ಇತಿ ಶ್ರೀ ರಾಘವೇಂದ್ರ ವಿಜಯ ಪ್ರಥಮ ಸಂಧಿ ಸಮಾಪ್ತಂ//

No comments:

Post a Comment