ಅಷ್ಟಮ ಸಂಧಿ
ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುಣ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು//
ಶರಣು ಶ್ರೀಗುರುರಾಜ ನಿನ್ನಯ
ಚರಣಕಮಲಕೆ ಮೊರೆಯ ಪೊಕ್ಕೆನೊ
ಕರುಣ ಎನ್ನೊಳಗಿರಿಸಿ ಪಾಲಿಸು ಕರುಣಸಾಗರನೆ
ಕರಣಮಾನಿಗಳಾದ ದಿವಿಜರು
ಶರಣು ಪೊಕ್ಕರು ಪೊರೆಯರೆನ್ನನು
ಕರುಣನಿಧಿ ನೀನೆಂದು ಬೇಡಿದೆ ಶರಣ ವತ್ಸಲನೆ//೧//
ಪಾಹಿ ಪಂಕಜನಯನ ಪಾವನ
ಪಾಹಿ ಗುಣಗಣನಿಲಯ ಶುಭಕರ
ಪಾಹಿ ಪರಮೋದಾರ ಸಜ್ಜನಪಾಲ ಗಂಭೀರ
ಪಾಹಿ ಚಾರುವಿಚಿತ್ರಚರ್ಯನೆ
ಪಾಹಿ ಕರ್ಮಂಧೀಶ ಸರ್ವದ
ಪಾಹಿ ಜ್ಞಾನ ಸುಭಕ್ತಿದಾಯಕ ಪಾಹಿ ಪರಮಾಪ್ತ//೨//
ಏನು ಬೇಡಲು ನಿನ್ನ ಬೇಡುವೆ
ಹೀನಮನುಜರ ಕೇಳಲಾರೆನೋ
ದೀನಜನರುದ್ಧಾರಿ ಈಪ್ಸಿತದಾನಿ ನೀನೆಂದು
ಸಾನುರಾಗದಿ ನಿನ್ನ ನಂಬಿದೆ
ನೀನೆ ಎನ್ನಭಿಮಾನರಕ್ಷಕ
ನಾನಾ ವಿಧವಿಧದಿಂದ ಕ್ಲೇಶಗಳಿನ್ನು ಬರಲೇನು//೩//
ಮುಗಿಲು ಪರಿಮಿತ ಕಲ್ಲುಮುರಿದೂ
ಹೆಗಲ ಶಿರದಲಿ ಬೀಳಲೇನೂ
ಹಗಲಿರುಳು ಏಕಾಗಿ ಬೆಂಕಿಯ ಮಳೆಯು ಬರಲೇನು
ಜಗವನಾಳುವ ಧ್ವರಿಯು ಮುನಿದೂ
ನಿಗಡ ಕಾಲಿಗೆ ಹಾಕಲೇನೂ
ಮಿಗಿಲು ದುಃಖ ತರಂಗ ಥರಥರ ಮೀರಿ ಬರಲೇನು//೪//
ರಾಘವೇಂದ್ರನೆ ನಿನ್ನ ಕರುಣದ
ಮೋಘ ವೀಕ್ಷಣಲೇಶ ಎನ್ನಲಿ
ಯೋಗವಾದುದರಿಂದ ಚಿಂತೆಯು ಯಾತಕೆನಗಿನ್ನು
ಯೋಗಿಕುಲ ಶಿರೋರತ್ನ ನೀನಿರೆ
ಜೋಗಿ ಮಾನವಗಣಗಳಿಂದೆನಗಾಗ್ವ
ಕಾರ್ಯಗಳೇನು ಇಲ್ಲವೋ ನೀನೆ ಸರ್ವಜ್ಞ//೫//
ಅಮರಶಕ್ವರಿ ಮನೆಯೊಳಿರುತಿರೆ
ಶ್ರಮದಿ ಗೋಮಯ ಪುಡುಕಿ ತರುವರೆ
ಅಮಲತರ ಸುರವೃಕ್ಷ ನೀನಿರೆ ತಿಂತ್ರೀಣಿ ಬಯಕೆ?
ಅಮಿತಮಹಿಮೋಪೇತ ನೀನಿರೆ
ಭ್ರಮಿತರಾಗಿಹ ನರರ ಬೇಡೋದಪ್ರಮಿತ
ವಂದಿತ ಪಾದಯುಗಳನೆ ನಿನಗೆ ಸಮ್ಮತವೆ//೬//
ಭೂಪನಂದನೆನಿಸಿ ತಾ
ಕರದೀಪದೆಣ್ಣಿಗೆ ತಿರುಪೆಬೇಡ್ವರೆ
ಆ ಪಯೋನಿಧಿ ತಟದಿ ಸಂತತ ವಾಸವಾಗಿರ್ದು
ಕೂಪಜಲ ತಾ ಬಯಸುವಂದದಿ
ತಾಪ ಮೂರರ ಹಾರಿ ನೀನಿರೆ
ಈಪರೀಪರಿಯಿಂದ ಪರರಿಗೆ ಬೇಡಿಕೊಂಬುವದೆ//೭//
ಬಲ್ಲಿದರಿಗತಿ ಬಲ್ಲಿದನು ನೀನೆಲ್ಲ
ತಿಳಿದವರೊಳಗೆ ತಿಳಿದವನೆಲ್ಲಿ
ಕಾಣೆನೋ ನನಗೆ ಸಮ ಸುರಸಂಘದೊಳಗಿನ್ನು
ಎಲ್ಲಕಾಲದಿ ಪ್ರಾಣಲಕುಮೀನಲ್ಲ
ನಿನ್ನೊಳು ನಿಂತು ಕಾರ್ಯಗಲೆಲ್ಲ
ತಾನೇ ಮಾಡಿ ಕೀರ್ತಿಯ ನಿನಗೆ ಕೊಡುತಿಪ್ಪ//೮//
ಏನು ಪುಣ್ಯವೋ ನಿನ್ನ ವಶದಲಿ
ಶ್ರೀನಿವಾಸನು ಸತತಯಿಪ್ಪನು
ನೀನೆ ಲೋಕತ್ರಯದಿ ಧನ್ಯನು ಮಾನ್ಯ ಸುರರಿಂದ
ದೀನರಾಗಿಹ ಭಕುತ ಜನರಿಗೆ
ನಾನಕಾಮಿತ ನೀಡೊಗೋಸುಗ
ತಾನೇ ಸರ್ವಸ್ಥಳದಿ ನಿಂತು ಕೊಡುವನಖಿಳಾರ್ಥ//೯//
ಕ್ಷಾಂತಿ ಗುಣದಲಿ ಶಿವನತೆರ ಶ್ರೀಕಾಂತ
ಸೇವೆಗೆ ಬೊಮ್ಮ ಪೋಲುವ-
ನಂತರಂಗಗಭೀರತನದಲಿ ಸಿಂಧುಸಮನೆನಿಪದಾಂತ
ಜನರಘಕುಲಕೆ ವರುಣನ
ಕಾಂತೆ ತೆರ ತಾನಿಪ್ಪ ಶಬ್ದದ್ಯ
ನಂತಪೋಲುವನರ್ಥದಲಿ ಗುರು ರಾಜ್ಯದಲಿ ರಾಮ//೧೦//
ಆರುಮೊಗನಮರೇ೦ದ್ರಾಮರು
ಮೂರುಜನ ಸರಿಯಿಲ್ಲ ನಿನಗೇ
ಸಾರಿ ಪೇಳುವೆ ದೋಷಿಗಳು ನಿರ್ದೋಷಿ ನೀನೆಂದು
ಆರುವದನ ವಿಶಾಖನಿಂದ್ರನಿಗೆ
ನೂರು ಕೋಪವು ರಾಮದೇವನು
ಸಾರಧರ್ಮದ ಭಂಗಮಾಡಿದ ದೋಷ ನಿನಗಿಲ್ಲ//೧೧//
ಸಕಲ ಶಾಖಗಳುಂಟು ನಿನಗೇ
ವಿಕಲ ಕೋಪಗಳಿಲ್ಲವೆಂದಿಗು
ನಿಖಿಳ ಧರ್ಮಾಚಾರ್ಯ ಶುಭತಮಚರ್ಯ ಗುರುವರ್ಯ
ಬಕವಿರೋಧಿಯ ಸಖಗೆ ಮುದ್ದಿನ
ಭಕುತವರ ನೀನಾದ ಕಾರಣ
ಲಕುಮಿರಮಣನ ಕರುಣ ನಿನ್ನೊಳು ಪೂರ್ಣವಾಗಿಹದೊ//೧೨//
ಹರಿಯ ತೆರದಲಿ ಬಲವಿಶಿಷ್ಟನು
ಹರನ ತೆರದಲಿ ರಾಜಶೇಖರ
ಸರಸಿಜೋದ್ಭವನಂತೆ ಸಂತತ ಚತುರ ಸದ್ವದನ
ಶರಧಿತೆರದಲನಂತರತ್ನನು
ಸರಸಿರುಹ ಸನ್ಮಿತ್ರನಂದದಿ
ನಿರುತ ನಿರ್ಜಿತದೋಷ ಭಾಸುರಕಾಯ ಗುರುರಾಯ//೧೩//
ಇಂದ್ರ ತೆರದಲಿ ಸುರಭಿರಮ್ಯನು
ಚಂದ್ರ ತೆರದಲಿ ಶ್ರಿತ ಕುವಲಯೋಪೇಂದ್ರ
ತೆರದಲಿ ನಂದಕದಿ ರಾಜಿತನು ಗುರುರಾಜ
ಮಂದ್ರಗಿರಿ ತೆರ ಕೂರ್ಮಪೀಠನು
ವೀಂದ್ರನಂದದಲರುಣಗಾತ್ರನು
ಇಂದಿರೇಶನ ತೆರದಿ ಸಂತತ ಚಕ್ರಧರ ಶೋಭಿಪುದು//೧೪//
ಜಿತತಮನು ತಾನೆನಿಪ ಸರ್ವದ
ರತುನವರ ತಾ ಭುವನ ಮಧ್ಯದಿ
ವಿತತ ಧರಿಗಾಧರ ಸಂತತಪಂಚಮುಖ ಮೂರ್ತಿ
ನತಸುಪಾಲಕ ಕಷ್ಯಪಾತ್ಮಜ
ಪ್ರಥಿತರಾಜಸುತೇಜಹಾರಕ
ಸತತ ದೂಷಣವೈರಿ ಗೋಕುಲಪೋಷ ತಾನೆನಿಪ//೧೫//
ವಿತತಕಾಂತಿಲಿ ಲಸದಿಗಂಬರ
ಪತಿತ ಕಲಿಕೃತ ಪಾಪಹಾರಕ
ಸತತ ಹರಿಯವತಾರ ದಶಕವ ತಾಳಿ ತಾನೆಸೆವ
ಕೃತಿಯ ರಮಣನ ಕರುಣ ಬಲದಲಿ
ನತಿಪಜನಕಖಿಳಾರ್ಥ ನೀಡುವ
ಮತಿಮತಾಂವರನೆನಿಸಿ ಲೋಕದಿ ಖ್ಯಾತನಾಗಿಪ್ಪ//೧೬//
ವರ ವಿಭೂತಿಯ ಧರಿಸಿ ಮೆರೆವನು
ಹರನು ತಾನೇನಲ್ಲ ಸರ್ವದ
ಹರಿನಿವಾಸನು ಎನಿಸಲಾ ಪಾಲ್ಗಡಲು ತಾನಲ್ಲ
ಸುರಭಿ ಸಂಯುತನಾಗಿ ಇರಲೂ
ಮಿರುಪುಗೋಕುಲವಲ್ಲ ತಾನೂ
ಸುರರ ಸಂತತಿ ಸಂತತಿರಲೂ ಸ್ವರ್ಗತಾನಲ್ಲ//೧೭//
ತುರಗ ಕರಿ ರಥನಾರಾ ಸಮೇತನು
ನರವರೇಶನ ದಳವುಯೆನಿಸನು
ನಿರುತ ಪರಿಮಳ ಸೇವಿಯಾದರು ಭ್ರಮರ ತಾನಲ್ಲ
ಕರದಿ ದಂಡವ ಪಿಡಿದುಯಿರುವನು
ನಿರಯಪತಿ ತಾನಲ್ಲವೆಂದಿಗು
ಸುರರಿಗಸದಳವೆನಿಪೋದಿತನ ಚರ್ಯವಾಶ್ಚರ್ಯ//೧೮//
ಕರದಿ ಪಿಡಿದಿಹ ಗುರುವರೇಣ್ಯನು
ಶರಣ ಜನರಭೀಷ್ಠಫಲಗಳ
ತ್ವರದಿ ಸಲಿಸುತಲವರ ಭಾರವ ತಾನೇ ಪೊತ್ತಿಹನು
ಮರೆಯಬೇಡವೋ ಕರುಣನಿಧಿಯನು
ಸ್ಮರಣೆ ಮಾಡಲು ಬಂದು ನಿಲ್ಲುವ
ಪರಮ ಪಾವನರೂಪ ತೋರಿಸಿ ತಾನೆ ಕಾಯ್ದಿಹನೂ//೧೯//
ಅತಸಿ ಪೂ ನಿಭಗಾತ್ರ ಸರ್ವದ
ಸ್ಮಿತಸುನೀರಜನೇತ್ರ ಮಂಗಳ
ಸ್ಮಿತಯುತಾಂಬುಜವದನ ಶುಭತಮರದನ ಜಿತಮದನ
ಅತುಲ ತುಳಸಿಯ ಮಾಲಕಂಧರ
ನತಿಪ ಜನತತಿಲೋಲ ಕಾಮದ
ಪತಿತ ಪಾವನ ಚರಣ ಶರಣಾಂಭರಣ ಗುರುಕರುಣಾ//೨೦//
ಚಂದ್ರಮಂಡಲವದನ ನಗೆ
ನವಚಂದ್ರಿಕೆಯತೆರ ಮೆರೆಯೋ ಮೇಣ್ಘನ
ಚಂದ್ರತಿಲಕದ ರಾಗ ಮನದನುರಾಗ ಸೂಚಿಪದೂ
ಇಂದ್ರನೀಲದ ಮಣಿಯ ಮೀರುವ
ಸಾಂದ್ರದೇಹದ ಕಾಂತಿ ಜನನಯನೇಂದ್ರಿಯದ್ವಯ
ಘಟಿತ ಪಾತಕ ತರಿದು ರಕ್ಷಿಪುದು//೨೧//
ಶರಣಜನ ಪಾಪೌಘನಾಶನ
ಶರಣ ನೀರಜ ಸೂರ್ಯಸನ್ನಿಭ
ಶರಣ ಕುವಲಯಚಂದ್ರ ಸದ್ಗುಣಸಾಂದ್ರ ರಾಜೇಂದ್ರ
ಶರಣಸಂಘಚಕೋರ ಚಂದ್ರಿಕ
ಶರಣಜನ ಮಂದಾರ ಶಾಶ್ವತ
ಶರಣಪಾಲಕ ಚರಣಯುಗವಾಶ್ರಯಿಸಿ ಬಾಳುವೆನೊ//೨೨//
ಪಾತಕಾದ್ರಿಗೆ ಕುಲಿಶನೆನಿಸುವ
ಪಾತಕಾಂಬುಧಿ ಕುಂಭಸಂಭವ
ಪಾತಕಾವಳಿ ವ್ಯಾಳವೀಂದ್ರನು ದುರಿತಗಜಸಿಂಹ
ಪಾತಕಾಭಿಧತಿಮಿರಸೂರ್ಯನು
ಪಾತಕಾಂಬುದವಾತ ಗುರು
ಜಗನ್ನಾಥವಿಠಲಗೆ ಪ್ರೀತಿಪುತ್ರನು ನೀನೆ ಮಹಾರಾಯ//
//ಇತಿ ಶ್ರೀ ರಾಘವೇಂದ್ರ ವಿಜಯ ಅಷ್ಟಮ ಸಂಧಿ ಸಮಾಪ್ತಂ//
No comments:
Post a Comment