Thursday, March 7, 2013

ರಾಘವೇಂದ್ರ ವಿಜಯ - ಚತುರ್ಥ ಸಂಧಿ

ಚತುರ್ಥ ಸಂಧಿ


ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//


ಪರಮಕರುಣಾಕರನು ಲೋಕಕೆ

ಚರಣಸೇವಕರಾದ ಜನರಿಗೆ

ಸುರತರುವರದಂತೆ ಕಾಮಿತ ನಿರುತ ಕೊಡುತಿಪ್ಪಿ

ಶರಣು ಪೊಕ್ಕೆನೊ ದುಃಖಮಯ ಭವ

ಅರಣದಾಟಿಸು ಶೀಘ್ರ ನಿನ್ನಯ

ಚರಣಯುಗದಲಿ ಎನ್ನನಿಟ್ಟು ಸಲಹೊ ಗುರುವರನೆ//೧//


ಇನಿತು ಬಾಲನ ವಾಕ್ಯಲಾಲಿಸಿ

ಮುನಿಕುಲೋತ್ತಮನಾದ ಯತಿವರ

ಮತಿಮತಾಂವರನಾದ ಬಾಲನ ನೋಡಿ ಸಂತಸದಿ

ಮನದಿ ಯೋಚಿಸಿ ಸಪ್ತವತ್ಸರ

ತನಯಗಾಗಲು ಮುಂಜಿ ಮಾಡಿಸಿ

ವಿನಯದಿಂದಾಶ್ರಮವ ಕೊಟ್ಟು ವ್ಯಾಸಮುನಿಯೆಂದ//೨//


ಮುಂದೆ ತಾ ಬ್ರಹ್ಮಣ್ಯಯತಿವರ

ಪೊಂದಿ ತಾ ಶ್ರೀಪಾದರಾಯ

ಮುಂದೆ ಬಾಲನು ನಿಮ್ಮ ಸನ್ನಿಧಿಯಲ್ಲಿ ಇರಲೆಂದ

ಮಧ್ವಮತವುದ್ಧರಿಸಲೋಸುಗ

ಬಂದ ಬಾಲನ ತತ್ತ್ವ ತಿಳಿದೂ

ಛಂದದಲಿ ತಾ ವಿದ್ಯೆ ಪೇಳಿದ ವೇದ್ಯಮತಿ ಯತಿಗೆ//೩//


ಮೂಲಮೂವತ್ತೇಳು ಗ್ರಂಥದ

ಜಾಲಟೀಕಾಟಿಪ್ಪಣೀ ಸಹ

ಪೇಳಿ ತಾ ಶ್ರೀಪಾದರಾಜರು ಧನ್ಯರೆನಿಸಿದರು

ಶೀಲಗುರುಬ್ರಹ್ಮಣ್ಯತೀರ್ಥರು

ಕಾಲದಲಿ ವೈಕುಂಠ ಲೋಕವ

ಶೀಲಮನದಲಿ ಹರಿಯ ಸ್ಮರಿಸುತ ತಾವೆ ಪೊಂದಿದರು//೪//


ಅಂದು ಗುರುಗಳ ಛಂದದಿಂದಲಿ

ಒಂದು ಬೃಂದಾವನದಿ ಪೂಜಿಸಿ

ಬಂದ ಭೂಸುರತತಿಗೆ ಭೋಜನ ಕನಕ ದಕ್ಷಿಣೆಯ

ಛಂದದಿಂದಲಿಯಿತ್ತು ದಿನದಿನ

ಇಂದಿರೇಶನ ಭಜಿಸುತಲಿ ತಾನಂದು

ಗುರುಗಳ ಪ್ರೀತಿಪಡಿಸಿದ ವ್ಯಾಸಮುನಿರಾಯ//೫//


ಮುಳಬಾಗಿಲ ಮಠದ ಮಧ್ಯದಿ

ಒಳ್ಳೆಮುತ್ತಿನ ಚಿತ್ರದಾಸನದಲ್ಲಿ

ತಾ ಕುಳಿತಿರ್ದು ಶಿಷ್ಯರ ತತಿಗೆ ನಿತ್ಯದಲಿ

ಖುಲ್ಲಮಾಯ್ಗಿಳ ಮತವಿಚಾರವ

ಸುಳ್ಳು ಮಾಡಿದ ಮಧ್ವಶಾಸ್ತ್ರಗಳೆಲ್ಲ

ಬೋಧಿಸಿ ಹರಿಯೇ ಸರ್ವೋತ್ತಮನು ನಿಜವೆಂದ//೬//


ಏಕೋನಾರಾಯಣನೆ ಲಯದಲನೇಕ

ಜೀವರ ತನ್ನ ಜಠರದಿ

ಎಕಭಾಗದಲ್ಲಿಟ್ಟು ಲಕುಮಿಯ ಭುಜಗಳಾಂತರದಿ

ಶ್ರೀಕರನು ತಾ ಶೂನ್ಯನಾಮದಿ

ಏಕರೂಪದಿ ಪೊಂದುಗೊಳಿಸುತ

ಶ್ರೀಕರಾತ್ಮಕವಟದ ಪತ್ರದಿ ಯೋಗನಿದ್ರೆಯನು//೭//


ಮಾಡುತಿರಲಾಕಾಲಕಂಭ್ರಣಿ

ಪಾಡಿ ಜಯಜಯವೆಂದು ಸ್ತವನವ

ಮಾಡಿ ಬೋಧಿಸಿ ಸೃಷ್ಟಿಕಾಲವು ಪ್ರಾಪ್ತವಾಗಿಹುದೋ

ನೋಡಿ ಜೀವರ ಉದರದಿರುವರ

ಮಾಡಿ ಭಾಗವ ಮೂರುಮುಷ್ಟಿಯ

ಒಡೆಯ ತಾನೇ ಸೃಷ್ಟಿ ಮಾಡಿದ ಸೃಜ್ಯಜೀವರನ//೮//


ಆದಿನಾರಾಯಣನೆ ಮೂಲನು

ವೇದಗಮ್ಯಾನಂತನಾಮಕ

ಆದನಾತನು ಅಂಶಿರೂಪನು ವಿಶ್ವತೋಮುಖನು

ಪಾದಹಸ್ತಾದ್ಯವಯಂಗಳು

ವೇದರಾಶಿಗೆ ನಿಲುಕಲಾರವು

ವೇದಮಾನಿಯು ಲಕುಮಿ ತಿಳಿಯಲು ತಿಳಿವ ಸರ್ವಜ್ಞ//೯//


ವಿಶ್ವತೋಮುಖ ಚಕ್ಷು ಕರ್ಣನು

ವಿಶ್ವತೋದರ ನಾಭಿ ಕುಕ್ಷನು

ವಿಶ್ವತೋಕಟಿ ಊರು ಜಾನೂ ಜಂಘೆಯುಗ ಗುಲ್ಫ

ವಿಶ್ವತೋಮಯ ಪಾದವಾರಿಜ

ವಿಶ್ವತಾಂಗುಲಿರಾಜಿನಖಗಳು

ವಿಶ್ವಕಾಯನು ವಿಶ್ವದೊಳಗಿಹ ವಿಶ್ವ ವಿಶ್ವೇಶ//೧೦//


ಅಪದಪಾಣಿಯು ಜವನಪಿಡವನು

ಲುಪಿತಶ್ರುತಿಕಣ್ಕೇಳಿನೊಡ್ವನು

ಅಪರಮಹಿಮನ ಶಿರಿಯು ಅರಿಯಳು ಸುರರ ಪಾಡೇನು

ಜಪಿಸಿ ಕಾಣುವೆನೆಂದು ಲಕುಮಿಯು

ಅಪರಿಮಿತ ತಾ ರೂಪಧರಿಸೀ

ತಪಿಸಿ ಗುಣಗಳ ರಾಶಿಯೊಳು ತಾನೊಂದು ತಿಳಿಲಿಲ್ಲ//೧೧//


ಅಂದುಪೋಗಿಹ ಲಕುಮಿ

ರೂಪಗಳಿಂದಿಗೂ ಬರಲಿಲ್ಲ ಕಾರಣ

ಛಂದದಿಂದಲಿ ವೇದಪೇಳ್ವದನಂತ ಮಹಿಮೆಂದು

ಒಂದೆರೂಪದಿ ಹಲವು ರೂಪವು

ಒಂದೆಗುಣದೊಳನಂತಗುಣಗಳು

ಎಂದಿಗಾದರುಪೊಂದಿಯಿಪ್ಪವನಂತಕಾಲದಲಿ//೧೨//


ಪೂರ್ಣವೆನಿಪವು ಗುಣಗಣ೦ಗಳು

ಪೂರ್ಣವೆನಿಪವು ಅವಯವಂಗಳು

ಪೂರ್ಣವೆನಿಪವು ರೂಪಕರ್ಮಗಳಾವಕಾಲದಲಿ

ಪೂರ್ಣನಗುಮುಖ ಕಂಠಹೃದಯನು

ಪೂರ್ಣಜಾನು ಸುಕಕ್ಷ ಕುಕ್ಷನು

ಪೂರ್ಣಕಟಿ ತಟ ನಾಭಿ ಊರು ಜಾನು ಜಂಘೆಗಳು//೧೩//


ಪೂರ್ಣಗುಲ್ಫ ಸುಪಾದಪದುಮವು

ಪೂರ್ಣವಾದ೦ಗುಲಿಯ ಸಂಘವು

ಪೂರ್ಣ ನಖ ಧ್ವಜ ವಕ್ರ ಚಕ್ರ ಸುಶಂಖ ರೇಖೆಗಳು

ಪೂರ್ಣವಾದುದು ಅಂಶಿರೂಪವು

ಪೂರ್ಣವಾದುದು ಅಂಶಿರೂಪವು

ಪೂರ್ಣವಾಗಿಹವೆಲ್ಲ ಜೀವರ ಬಿಂಬರೂಪಗಳು//೧೪//


ಪುರುಷ ಸ್ತ್ರೀಯಳುಯೆಂಬ ಬೇಧದಿ

ಎರಡುರೂಪಗಳುಂಟು ಈತಗೆ

ಪುರುಷನಾಮಕ ನಂದಮಯ ಬಲಭಾಗ ತಾನೆನಿಪ

ಕರಸುವನು ವಿಜ್ಞಾನಮಯ

ತಾನರಸಿಯೆನಿಸುತ ವಾಮಭಾಗದಿ

ಇರುವ ಕಾರಣ ಸ್ವರಮಣನು ತಾನಾಗಿಯಿರುತಿಪ್ಪ//೧೫//


ನಾರಾಯಣನು ಪುರುಷರೂಪದಿ

ನಾರಾಯಣಿಯು ಸ್ತ್ರೀಯ ರೂಪದಿ

ಬೇರೆಯಲ್ಲವು ತಾನೆ ಈವಿಧ ಎರಡುರೂಪದಲಿ

ತೋರುತಿಪ್ಪನು ಸ್ತ್ರೀಯ ರೂಪವೆ

ಚಾರುತರ ಶ್ರೀವತ್ಸನಾಮದಿ

ಸೇರಿಯಪ್ಪದು ಪುರುಷರೂಪದ ವಕ್ಷೊಮಂದಿರದಿ//೧೬//


ಲಕುಮಿದೇವಿಗೆ ಬಿಂಬವೆನಿಪುದು

ಸಕಲ ಸ್ತ್ರೀಯರ ಗಣದಲಿಪ್ಪುದು

ವ್ಯಕುತವಾಗಿಹುದಾದಿಕಾಲದಿ ಮುಕುತಿ ಸೇರಿದರು

ವಿಕಲವಾಗದು ಎಂದಿಗಾದರು

ನಿಖಿಳಜಗದಲಿ ವ್ಯಾಪಿಸಿಪ್ಪುದು

ಲಕುಮಿರಮಣಿಯ ಲಕ್ಷ್ಯವಿಲ್ಲದೆ ಸೃಜಿಪ ತಾನೆಲ್ಲ//೧೭//


ಪುರುಷಜೀವರ ಹೃದಯದಲಿ ತಾ

ಪುರುಷರೂಪದಿ ಬಿಂಬನೆನಿಸುವ

ಇರುಅ ಸರ್ವದ ಪ್ರಳಯದಲಿ ಸಹ ಬಿಡನು ತ್ರಿವಿಧರನು

ಕರಸುತಿಪ್ಪನು ಜೇವನಾಮದಿ

ಬೆರೆತು ಕರ್ಮವ ಮಾಡಿ ಮಾಡಿಸಿ

ನಿರುತಜೀವರ ಕರ್ಮರಾಶಿಗೆ ಗುರಿಯ ಮಾಡುವನು//೧೮//


ಮೂಲನಾರಾಯಣನು ತಾ ಬಲು

ಲೀಲೆ ಮಾಡುವ ನೆವದಿ ತಾನೆ

ವಿಶಾಲಗುಣಗಣ ಸಾಂಶ ಜ್ಞಾನಾನಂದ ಶುಭಕಾಯ

ಬಾಲರೂಪವ ಧರಿಸಿ ವಟದೆಲೆ

ಆಲಯದಿ ಸಿರಿ ಭೂಮಿ ದುರ್ಗೆರ

ಲೋಲನಾದಾ ಪದುಮನಾಭನೆ ವ್ಯಕುತ ತಾನಾದ//೧೯//


ನಾನಾವಿಧದವತಾರಗಳಿಗೆ ನಿಧಾನ

ಬೀಜವುಯೆನಿಸುತಿಪ್ಪೊದು

ಮೀನ ಕೂರ್ಮ ವರಾಹ ಮೊದಲೂ ಸ್ವಾಂಶಕಳೆರೂಪ

ತಾನೆ ಸಕಲಕೆ ಮೂಲಕಾರಣ

ತಾನೆ ತನ್ನಯ ರೂಪ ಸಮುದಯ

ತಾನೆ ತನ್ನಲಿಯಿಡುವ ಪ್ರಲಯದಲೇಕನೆನಿಸುವನು//೨೦//

ರಾಮರೂಪವನಂತಯಿಪ್ಪದು

ವಾಮನಾದಿಯನಂತ ಕೃಷ್ಣರು

ಸೀಮವಿಲ್ಲದೆ ರೂಪಸಂತತಿ ಬೇರೆ ತೋರುವದು

ಹೇಮನಿರ್ಮತ ಮೂರ್ತಿಗೊಪ್ಪುವ

ಚಾಮಿಕರಮಯಚಾರುಭೂಷಣ

ಸ್ತೋಮ ನೋಡುವ ಜನರ ಸಂಘಕೆ ಬೇರೆ ತೋರ್ಪಂತೆ//೨೧//


ಅಂಶಿಯಲಿ ಸಂಶ್ಲೇಷ ಐಕ್ಯವು

ಅಂಶ ಸಮುಹವು ಎಯ್ದು ತೋರ್ಪುದು

ಸಂಶಯೇನಿದರಲ್ಲಿ ತೆನೆಯೊಳು ಕಾಳ್ಗಳಿದ್ದಂತೆ

ಭ್ರಂಶರಾಗದೆ ಸುಮತಗಳನು

ಪ್ರಶಂಸಮಾಳ್ಪ ಸುಶಾಸ್ತ್ರದಲಿ

ನಿಸ್ಸಂಶಯಾತ್ಮಕರಾಗಿ ಮನದೃಢ ಮಾಡಿ ನೋಡುವದು//೨೨//


ಬಿಂಬಹರಿ ಪ್ರತಿಬಿಂಬಜೀವರು

ಬಿಂಬನೆ ತಾ ಮೂಲ ಕಾರಣ

ಇಂಬುಯೆನಿಪ ಸ್ವರೂಪದೇಹೊಪಾಧಿಯೆನಿಸುವದು

ಎಂಬ ವಾಕ್ಯದ ಭಾವ ತಿಳಿಯದೆ

ಶುಂಭರಾದರು ದ್ವಿಜರು ಕೆಲವರು

ಗುಂಭವಾಗಿದರರ್ಥಯಿರುವದು ಪರಮಗೋಪಿತವು//೨೩//


ಸತ್ಯವಾಗಿಹ ಆತ್ಮರೂಪವೆ

ನಿತ್ಯವಾದ ಉಪಾಧಿಯೆನಿಪದು

ವ್ಯತ್ಯಯವು ಏನಿಲ್ಲ ನೋಡಲು ಗೊತ್ತು ತಿಳಿಯದಲೆ

ವ್ಯತ್ಯಯಾರ್ಥವಮಾಡಿ ಕೆಡಿಸದೆ

ಸತ್ಯವಾದುದು ತಿಳಿಯಲಾ ಹರಿ

ಭೃತ್ಯರಾಗ್ರಣಿಯಾಗಿ ಪರಸುಖವೈದಿ ಮೋದಿಪನು//೨೪//


ಅಂತರಾತ್ಮನು ಸಕಲಜೀವರ

ಅಂತರಂಗಸ್ವರೂಪ ದೇಹದಿ

ನಿಂತು ತಾ ಸರ್ವಾಂಗವ್ಯಾಪಕನಾಗಿಯಿರುತಿಪ್ಪ

ಸಂತತದಿ ತಾ ನಂದರೂಪನನಂತ

ಜೀವಸ್ವರೂಪಬಹಿರದಿ

ನಿಂತು ಸದ್ವಿಜ್ಞಾನರೂಪದಿ ಆತ್ಮನೆನಿಸಿಪ್ಪ//೨೫//


ಈತನಂತಾನಂತರೂಪದಿ

ಪ್ರೀತಿಪೂರ್ವಕ ದಾಸಜನರಿಗೆ

ನೀತಫಲಗಳ ಸರ್ವವ್ಯಾಪಕ ತಾನೆ ಕೊಡುತಿಹನು

ಜಾತ ಸೂರ್ಯಾನಂತನಿಭ

ನಿಜಜ್ಯೋತಿಮಯ ಸತ್ತೇಜೋಮೂರುತಿದಾತ

ಗುರುಜಗನ್ನಾಥವಿಠಲನು ತಾನೆ ಪರಿಪೂರ್ಣ//೨೬//


//ಇತಿ ಶ್ರೀ ರಾಘವೇಂದ್ರ ವಿಜಯ ಚತುರ್ಥ ಸಂಧಿ ಸಮಾಪ್ತಂ//


No comments:

Post a Comment