Friday, March 15, 2013

ರಾಘವೇಂದ್ರ ವಿಜಯ - ಸಪ್ತಮ ಸಂಧಿ

ಸಪ್ತಮ ಸಂಧಿ


ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//


ಜಯಜಯತು ಗುರುರಾಯ ಶುಭಕರ

ಜಯಜಯತು ಕವಿಗೇಯ ಸುಂದರ

ಜಯಜಯತು ಘನ ಬೋಧ ಗುಣಗಣಪೂರ್ಣ ಗಂಭೀರ

ಜಯಜಯತು ಭಕ್ತಾಲಿಪಾಲಕ

ಜಯಜಯತು ಭಕ್ತೇಷ್ಟದಾಯಕ

ಜಯಜಯತು ಗುರುರಾಘವೇಂದ್ರನೆ ಪಾಹಿ ಮಾಂ ಸತತ//೧//


ಆದಿಯಲಿ ಪ್ರಹ್ಲಾದ ನಾಮಕನಾದ

ತ್ರೇತಾಯುಗದಿ ಲಕ್ಷ್ಮಣನಾದ

ದ್ವಾಪರಯುಗದಿ ಬಲ ಬಾಹ್ಲೀಕ ನಾಮದಲಿ

ಯಾದವೇಶನ ಭಜಿಸಿ ಕಲಿಯುಗ

ಪಾದದೊಳು ತಾ ಎರಡು ಜನ್ಮವ

ಸಾದರದಿ ತಾ ಧರಿಸಿ ಮೆರೆದನು ದೇವಗುರುರಾಯ//೨//


ಸಾರ ಸುಂದರಕಾಯ ಸುಗಣೋದಾರ

ಶುಭತಮ ಸ್ವೀಯ ಮಹಿಮಾಪಾರ

ಕವಿನುತ ಖ್ಯಾತ ನಿರ್ಜಿತದೋಷ ಹರಿತೋಷ

ಧಾರುಣೀಸುರ ಕುಮುದಚಂದಿರ

ಘೋರಪಾತಕತಿಮಿರ ದಿನಕರ

ಧೀರ ಮಧ್ವಮತಾಬ್ಜಭಾಸ್ಕರನೆನಿಸಿ ರಾಜಿಪನು//೩//


ಸೂರಿಜನಹೃದಯಾಬ್ಜಮಂದಿರ

ಹೀರಹಾರ ವಿಭೂಷಿತಾ೦ಗನು

ಚಾರು ರತ್ನ ಕಿರೀಟಕುಂಡಲ ರತ್ನಮಾಲೆಗಳ

ವಾರಿಜಾಕ್ಷೀ ಮಣಿಯು ತುಳಸೀ

ಸರಮಾಲೆಯ ಧರಿಸಿ ಯತಿವರ

ತೋರುತಿಪ್ಪನು ಬಾಲಸೂರ್ಯನ ತೆರದಿ ಲೋಕದಲಿ//೪//


ಚಾರುತರ ಕೌಪೀನ ಪಾದುಕಧಾರಿ

ದಂಡ ಕಮಂಡುಲಾಂಚಿತ

ಸಾರ ದ್ವಾದಶ ಪುಂಡ್ರ ಮುದ್ರೆಗಳಿಂದ ಚಿಹ್ನಿತನು

ಸಾರಿದವರಘ ತರಿದು ಸುಖಫಲ

ಸೂರಿ ಕೊಡುತಲಿ ಸರ್ವಕಾಲದಿ

ಧಾರುಣೀ ತಳದಲ್ಲಿ ಈಪರಿ ಮೆರೆದ ಗುರುರಾಯ//೫//


ಮತಿಮತಾಂವರ ರಾಘವೇಂದ್ರನು

ಮಿತಿಯು ಇಲ್ಲದೆ ಮಹಿಮೆ ಜನರಿಗೆ

ಸತತ ತೋರುತ ಪೊರೆಯುತಿರುವನು ಸಕಲ ಸಜ್ಜನರ

ಸತಿ ಸುತಾದಿ ಸುಭಾಗ್ಯ ಸಂಪದ

ಮತಿಯು ಜ್ಞಾನ ಸುಭಕ್ತಿ ದಿನದಿನ

ವಿತತವಾಗಿತ್ತಖಿಲ ಜನರನು ಪ್ರೀತಿಗೊಳಿಸುತಲಿ//೬//


ಸುರರ ನದಿಯಂದದಲಿ ಪಾಪವ

ತರಿವ ನರ್ಕನ ತೆರದಿ ಕತ್ತಲೆ

ಶರಧಿತನಯನ ತೆರದಿ ಶಾಪವ ಕಳೆದು ಸುಖವೀವ

ಸರಿಯುಗಾಣೆನು ಇವರ ಚರ್ಯಕೆ

ಹರಿಯು ತಾನೇ ಸಿರಿಯ ಸಹಿತದಿ

ಇರುವ ತಾನಾನಂದಮುನಿವರ ಸಕಲ ಸುರಸಹಿತ//೭//


ಇನಿತೆ ಮೊದಲಾದಮಿತ ಗುಣಗಣವನಧಿ

ಎನಿಸುತಲವನಿತಳದಲಿ

ಅನುಪಮೋಪವ ತಾನೇ ತನ್ನನು ನಂಬಿ ಭಜಿಪರಿಗೆ

ಕನಸಿಲಾದರು ಶ್ರಮವ ತೋರದೆ

ಮನದ ಬಯಕೆಯ ಸಲಿಸಿ ಕಾಯುವ

ತನುಸುಛಾಯದ ತೆರದಿ ತಿರುಗುವ ತನ್ನ ಜನರೊಡನೆ//೮//


ಏನು ಕರುಣಿಯೋ ಏನು ದಾತನೊ

ಏನು ಮಹಿಮೆಯೋ ಏನು ಶಕುತಿಯೋ

ಏನು ಇವರಲಿ ಹರಿಯ ಕರುಣವೋ ಏನು ತಪಬಲವೋ

ಏನು ಕೀರ್ತಿಯೋ ಜಗದಿ ಮೆರೆವದು

ಏನು ಪುಣ್ಯದ ಫಲವೋ ಇವರನ

ಏನು ವರ್ಣಿಪೆ ಇವರ ಚರಿಯವನಾದ ಬಲ್ಲವನು//೯//


ಧರಣಿ ತಳದಲಿ ಮೆರೆವ ಗುರುವರ

ಚರಿಯ ತಿಳಿಯಲು ಸುರರೆ ಯೋಗ್ಯರು

ಅರಿಯರೆಂದಿಗು ನರರು ದುರುಳರು ಪರಮ ಮೋಹಿತರು

ಮರುಳುಮಯ ಭವದಾಶಪಾಶದ

ಉರುಳುಗಣ್ಣಿಗೆ ಶಿಲ್ಕಿ ಹಗಲೂ

ಇರುಳುಯನದಲೆ ಏಕಾವಾಗೀ ತೊಳಲಿ ಬಳಲುವರು//೧೦//


ಕರುಣವಾರಿಧಿ ಶರಣಪಾಲಕ

ತರುಣದಿನಕರನೆನಿಪ ಗುರುವರ

ಚರಣ ಸೇವಕಜನರ ಪಾಲಿಪ ಜನನಿ ತೆರದಂತೆ

ಸುರರ ತರುವರದಂತೆ ಸಂತತ

ಪೊರೆದು ತನ್ನಯ ಭಕುತ ಜನರನು

ಧರಣಿಮಂಡಲದೊಳಗೆ ರಾಜಿಪ ನತಿಪ ಜನಭೂಪಾ//೧೧//


ಏನು ಚೋದ್ಯವೋ ಕಲಿಯ ಯುಗದಲಿ

ಏನು ಈತನ ಪುಣ್ಯ ಬಲವೋ

ಏನು ಈತನ ವಶದಿ ಶ್ರೀಹರಿ ತಾನೇ ನಿಂತಿಹನೋ

ಏನು ಕರುಣಾನಿಧಿಯೋ ಈತನು

ಏನು ಭಕುತರಿಗಭಯದಾಯಕ

ಏನು ಈತನ ಮಹಿಮೆ ಲೋಕಗಮ್ಯವೆನಿಸಿಹದೋ//೧೨//


ವಿಧಿಯು ಬರದಿಹ ಲಿಪಿಯ ಕಾರ್ಯವ

ಬದಲು ಮಾಡುವ ಶಕುತಿ ನಿನಗೆ

ಪದುಮನಾಭನು ದಯದಿ ತಾನೇಯಿತ್ತ ಕಾರಣದಿ

ಸದಯ ನಿನ್ನಯ ಪಾದಪದುಮವ

ಹೃದಯ ಮಧ್ಯದಿ ಭಜಿಪ ಶಕುತಿಯ

ಒದಗಿಸೂವದುಯೆಂದು ನಿನ್ನನು ನಮಿಸಿ ಬೇಡುವೆನು//೧೩//


ಘಟನವಾಗದ ಕಾರ್ಯಗಳ ನೀ

ಘಟನಮಾಡುವ ವಿಷಯದಲಿ ನೀ

ಧಿಟನುಯೆನುತಲಿ ಬೇಡಿಕೊಂಬೆನೊ ಕರುಣವಾರಿಧಿಯೇ

ಶಠದಿ ನಿನ್ನನು ಭಜಿಸದಿಪ್ಪರ

ಶಠವ ಕಳೆದತಿಹಿತದಿ ನಿನ್ನಯ

ಭಠರ ಕೋಟಿಗೆ ಘಟನ ಮಾಡುವುದೇನು ಅಚ್ಚರವೋ//೧೪//


ನಿನ್ನ ಕರುಣಕೆ ಎಣಿಯಗಾಣೆನೋ

ನಿನ್ನ ಶಕುತಿಗೆ ನಮನ ಮಾಡುವೆ

ನಿನ್ನ ಕರುಣಕಟಾಕ್ಷದಿಂದಲಿ ನೋಡೋ ಗುರುರಾಯ

ನಿನ್ನ ಪದಯುಗದಲ್ಲಿ ಸರ್ವದ

ನಿನ್ನ ಮನವನು ನಿಲಿಸಿ ಪಾಲಿಸೊ

ನಿನ್ನ ಜನ್ಮನು ನಾನು ಎನ್ನಯ ಜನಕ ನೀನಲ್ಲೆ//೧೫//


ಹಿಂದೆ ಮಾಡಿದ ನಿನ್ನ ಮಹಿಮೆಗಳೊ೦ದು

ತಿಳಿಯದು ಪೇಳೋ ಶಕುತಿಯು

ಎಂದಿಗಾದರೂ ಪುಟ್ಟಲಾರದು ಮನುಜರಾಧಮಗೇ

ಇಂದು ಮಹಿಮವ ತೋರಿ ಭಕುತರ

ವೃಂದ ಮೋದದಿ ಪಾಡಿ ಕುಣಿವದು

ನಂದಸಾಗರಮಗ್ನವಾದುದ ನೋಡಿ ಸುಖಿಸುವೆನು//೧೬//


ವ್ಯಾಸಮುನಿ ಗುರುವರ್ಯ ಎನ್ನಯ

ಕ್ಲೇಶ ನಾಶನ ಮಾಡಿ ಕರುಣದಿ

ವಾಸುದೇವನ ಹೃದಯಸದನದಿ ತೋರಿ ಪೊರೆಯಂದೇ

ವಾಸವಾಸರದಲ್ಲಿ ತವಪದ

ಆಶೆಯಿಂದಲಿ ಸೇವಾ ಮಾಳ್ಪೆನು

ದಾಸನೆನಿಸೀ ಭವದ ಶ್ರಮ ಪರಿಹರಿಸೋ ಗುರುರಾಯ//೧೭//


ತತ್ತ್ವಸಾರವ ತಿಳಿಸು ಭವದಿ

ವಿರಕ್ತಮತಿಯನಿತ್ತು ತ್ವತ್ಪದ

ಸಕ್ತಚಿತ್ತನ ಮಾಡಿ ಭಗವದ್ಭಕ್ತನೆಂದೆನಿಸು

ಕೆತ್ತವೋಲ್ ಮನ್ಮನದಿ ಇರುತಿಹ

ಕತ್ತಲೆಯ ಪರಿಹರಿಸಿ ದಿನದಿನ

ಉತ್ತಮೋತ್ತಮ ಜ್ಞಾನಭಕುತಿಯನಿತ್ತು ಪೊರೆಯೆನ್ನ//೧೮//


ಪ್ರಣತಜನಮಂದಾರ ಕಾಮದ

ಕ್ಷಣ ಕ್ಷಣಕ್ಕೆ ನಿನ್ನ ಗುಣಗಳ

ಗಣನಪೂರ್ವಕ ಮನದಿ ಸಂತತ ಭಜನೆಗೈವಂತೆ

ಮಣಿಸು ಮನವನು ನಿನ್ನ ಪದದಲಿ

ಗುಣಿಸಿ ನಿನ್ನಯ ರೂಪ ನೋಡೀ

ದಣಿಸು ನಿನ್ನವರೊಳಗೆ ಸಂತತ ಎಣಿಸೋ ಕರುಣಾಳೋ//೧೯//


ನಿನ್ನ ಕಥೆಗಳ ಶ್ರವಣಮಾಡಿಸೋ

ನಿನ್ನ ಗುಣಕೀರ್ತನೆಯ ಮಾಡಿಸೋ

ನಿನ್ನ ಸ್ಮರಣೆಯ ನೀಡು ಸಂತತ ನಿನ್ನ ಪದಸೇವಾ

ನಿನ್ನ ಅರ್ಚನೆಗೈಸೊ ಗುರುವರ

ನಿನ್ನ ವಂದನೆಗೈಸೋ ದಾಸ್ಯವ

ನಿನ್ನ ಗೆಳೆತನ ನೀಡೋ ಯತಿವರ ಎನ್ನನರ್ಪಿಸುವೇ//೨೦//


ಅಮಿತ ಮಹಿಮನೆ ನಿನ್ನ ಪಾದಕೆ

ನಮಿಪೆ ಮತ್ಕೃತದೋಷವೆಣಿಸದೆ

ಕ್ಷಮಿಸಿ ಸೌಖ್ಯವನಿತ್ತು ಪಾಲಿಸೊ ಸುಮನಸೋತ್ತಮನೆ

ಅಮರರಿಯರಗಮ್ಯಮಹಿಮವ

ವಿಮಲಗುಣಮಯ ಪ್ರಬಲತಮ

ನೀನಮರತರು ಚಿಂತಾಮಣಿಯು ಸುರಧೇನು ನೀನಯ್ಯಾ//೨೧//


ಶಿರದಿ ನಮನವ ಮಾಡಿ ನಿನ್ನನು

ಕರದ ಸಂಪುಟವಮಾಡಿ ವಿನಯದಿ

ಮರೆಯದಲೇ ನಾ ಬೇಡಿಕೊಂಬೆನೊ ಶರಣಪರಿಪಾಲ

ಪರಮಕರುಣಿಯೇ ದ್ವಿಜಗೆ ಬಂದಿಹ

ಮರಣ ಬಿಡಿಸೀ ಸುಖವ ನೀಡಿದೆ

ಅರಿಯಲೆಂದಿಗು ಸಾಧ್ಯವಲ್ಲವೋ ನಿನ್ನ ಮಹಮಹಿಮೆ//೨೨//


ಸಕಲಗುಣಗಣಪೂರ್ಣ ಭಕುತಗೆ

ಅಖಿಳಕಾಮಿತದಾತ ಸುಖಮಯ

ವಿಖನಸಾಂಡದಿ ಪ್ರಬಲತಮ ನೀನೆನಿಸಿ ನೆಲಿಸಿರ್ಪೆ

ಲಕುಮಿರಮಣನ ಪ್ರೀತಿಪಾತ್ರನೆ

ಭಕುತಕೈರವಸ್ತೋಮ ಚಂದಿರ

ಮುಕುತಿದಾಯಕ ಮೌನಿಕುಲಮಣಿ ನಮಿಪೆ ಸಲಹೆನ್ನಾ//೨೩//


ಸ್ವಸ್ತಿಶ್ರೀ ಗುರುರಾಘವೇಂದ್ರಗೆ

ಸ್ವಸ್ತಿಶ್ರೀ ಗುಣಗಣಸಾಂದ್ರಮೂರ್ತಿಗೆ

ಸ್ವಸ್ತಿಶ್ರೀ ಯತಿನಾಥ ಲೋಕದಿ ಖ್ಯಾತ ಮಮನಾಥ

ಸ್ವಸ್ತಿಶ್ರೀ ಗುರುಸಾರ್ವಭೌಮಗೆ

ಸ್ವಸ್ತಿಶ್ರೀ ಸರ್ವಜ್ಞತಮಗೇ

ಸ್ವಸ್ತಿಶ್ರೀ ಸುರಧೇನು ಸುರತರು ನಮಿಪ ಭಕುತರಿಗೆ//೨೪//


ಖ್ಯಾತನಾದವನು ಸಕಲಲೋಕಕ-

ನಾಥಪಾಲಕನೆಂಬೊ ಬಿರುದನು

ಈತ ಸಂತತ ಪೊತ್ತು ಮೆರೆವನು ಹರಿಯ ಕರುಣದಲಿ

ಈತನೇ ಮಹದಾತ ಜಗದೊಳು

ಖ್ಯಾತ ಮಹಿಮನು ಶರಣವತ್ಸಲದಾತ

ಗುರುಜಗನ್ನಾಥವಿಠಲನ ಸೇವಕಾಗ್ರಣಿಯೂ//೨೫//


//ಇತಿ ಶ್ರೀ ರಾಘವೇಂದ್ರ ವಿಜಯ ಸಪ್ತಮ ಸಂಧಿ ಸಮಾಪ್ತಂ//


No comments:

Post a Comment