ತೃತೀಯ ಸಂಧಿ
ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುಣ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು//
ಆ ನಮಿಪೆ ಗುರುರಾಯನಂಘ್ರಿಗೆ
ಸಾನುರಾಗದಿ ಸರ್ವಕಾಲಕೆ
ದೀನಜನರುದ್ಧಾರಿ ಜನರಘ ಹಾರಿ ಶುಭಕಾರಿ
ನೀನೆ ಎನುತಲಿ ದೀನನಾಗೀ
ನಾನೇ ನಿನ್ನನು ಬೇಡಿಕೊಂಬೆನೋ
ನೀನೆ ಪಾಲಿಸು ಪ್ರಭುವೇ ಸ್ವಾಶ್ರಿತಜನರ ಸುರತರುವೆ//೧//
ಆ ಯುಗದಿ ಪ್ರಹ್ಲಾದನಾಮಕ
ರಾಯನೀ ಯುಗದಲ್ಲಿ
ವ್ಯಾಸರಾಯನಾಗ್ಯವತರಿಸಿ ದಶಮತಿಮತವ ಸ್ಥಾಪಿಸಿ
ತೋಯಜಾಂಬಕ ಲಕುಮಿಪತಿ
ನಾರಾಯಣನೆ ತಾ ಸರ್ವರುತ್ತಮ
ತೋಯಜಾಸನದಿವಿಜರೆಲ್ಲರು ಹರಿಗೆ ಸೇವಕರು//೨//
ಇನಿತು ಶಾಸ್ತ್ರದ ಸಾರ ತೆಗೆದೂ
ವಿನಯದಿಂದಲಿ ತನ್ನ ಭಜಿಸುವ
ಜನರ ಸಂತತಿಗರುಹಿ ಮುಕುತಿಯ ಪಥವ ತೋರಿಸಿದ
ಮುನಿಕುಲೋತ್ತಮ ಯತಿಶಿರೋಮಣಿ
ಕನಕದಾಸನ ಪ್ರಿಯನು ಸಂಯಮಿಗಣಕೆ
ರಾಜನು ಯದುವರೇಶನ ಭಜಿಸಿ ತಾ ಮೆರೆದ//೩//
ಈತ ಪುಟ್ಟಿದ ಚರ್ಯವರುಹುವೆ
ಭೂತಳದೊಳಾಶ್ಚರ್ಯವೆಂದಿಗು
ಭೂತಭಾವಿಪ್ರವರ್ತಕಾಲದಲಿಲ್ಲ ನರರೊಳಗೆ
ಜಾತನಾದರು ಜನವಿಲಕ್ಷಣ
ವೀತದೋಷ ವಿಶೇಷ ಮಹಿಮನು
ಖ್ಯಾತನಾದನು ಜಗದಿ ಸರ್ವದ ಜನನ ಮೊದಲಾಗಿ//೪//
ದಕ್ಷಿಣದಿ ಬನ್ನೂರು ಗ್ರಾಮದಿ
ದಕ್ಷನೆನಿಸಿದ ದೇಶಮುಖರಲಿ
ಲಕ್ಷ್ಮಿನಾಯಕನೆನಿಸಿ ಲೋಕದಿ ಖ್ಯಾತನಾಗಿಪ್ಪ
ಯಕ್ಷನಾಥನ ಧನದಿ ತಾನೂ
ಲಕ್ಷಿಕರಿಸನು ಎನಿಪನಾತಗೆ
ಲಕ್ಷಣಾ೦ಕಿತಳಾದ ಜಯವತಿಯೆಂಬ ಸತಿಯುಂಟು//೫//
ಜಲಜಜಯಿಸುವ ವದನನೈದಲಿ
ಗೆಲುವ ನಿರ್ಮಲ ನಯನಯುಗಳವು
ಲಲಿತಚಂಪಕನಾಸ ದರ್ಪಣಕದವು ಶುಭಕರಣ
ಚಲುವದಾಡಿಯ ರದನಪಂಕ್ತಿಯು
ಕಲಿತರಕ್ತಾಧರದಿ ಮಿನುಗುತ
ಚಲಿಪ ಮಂದಸ್ಮಿತದಿ ಶೋಭಿಪ ಚುಬುಕ ರಾಜಿಪುದು//೬//
ಕಂಬು ಪೋಲುವ ಕಂಠದೇಶವು
ಕುಂಭಿ ಶುಂಡ ಸಮಾನ ಬಾಹೂ
ಅಂಬುಜೋಪಮ ಹಸ್ತಯುಗಳವು ಕಾಂಚನಾಭರಣ
ರಂಭೆಯಳ ಕುಚಯುಗಳ ಸುಂದರ
ಕುಂಭ ಪೋಲ್ವವು ಉದರದೇಶವು
ರಂಭಪರಣ ಸುರೋಮರಾಜಿತಮೂರುವಳಿಯೊಪ್ಪೆ//೭//
ಗುಂಭನಾಭಿಯ ಸುಳಿಯು ಸುರನದಿ
ಯಂಬುಸುಳಿಯಂದದಲಿ ನಾರಿ
ನಿತಂಬಪುಲಿನವು ಕದಲಿವೂರೂ ಜಾನುಕನ್ನಡಿಯು
ಶಂಬರಾರಿಯ ತೂಣ ಜಂಘೆಯು
ಅಂಬುಜೋಪಮಚರಣ ಪುತ್ಥಳಿ
ಬೊಂಬೆಯಂದದಿ ಸಕಲಭೂಷಣದಿಂದಲೊಪ್ಪಿದಳು//೮//
ಶಿರಿಯೋ ಭಾಗ್ಯದಿ ಚಲ್ಟಿನಿಂದಪ್ಸರೆಯೋ
ರೂಪದಿ ರತಿಯೋ ಕ್ಷಮದಲಿ
ಧರೆಯೋ ದಯದಲಿ ನಿರುತ ವರಮುನಿಸತಿಯೋ ಪೇಳ್ವೆರ್ಗೆ
ಅರಿಯದಂತಾ ನಾರಿ ಶಿರೋಮಣಿ
ಪ್ರಿಯ ಸಿರಿಗುಣರೂಪದಂದದಲಿ
ಮೆರೆಯುತಿಪ್ಪಳು ರಾಜಸದನದಿ ಲಕುಮಿ ತೆರದಂತೆ//೯//
ದೇಶಪತಿಯವೃದ್ಧನಾತಗೆ
ಕೂಸುಯಿಲ್ಲದೆ ಬಹಳ ಯೋಚಿಸೆ
ದೇಶತಿರುಗುತ ಬಂದನಾ ಬ್ರಹ್ಮಣ್ಯಮುನಿರಾಯ
ವಾಸಗೈಸಲು ತನ್ನ ಮನಿಯಲಿ
ಮಾಸನಾಲಕರಲ್ಲಿ ಯತಿವರೇಶ
ಸೇವೆಯ ಮಾಡಿ ತಾನಾ ಮುನಿಯ ಬೆಸಗೊಂಡ//೧೦//
ಎನಗೆ ಸುತ ಸಂತಾನವಿಲ್ಲವೋ
ಜನುಮಸಾರ್ಥಕವಾಗೋ ಬಗೆಯು
ಎನಗೆ ತೋರದು ನೀವೇ ಯೋಚಿಸಿ ಸುತನ ನೀಡುವುದು
ಎನಲು ನರವರ ವಚನಲಾಲಿಸಿ
ಮುನಿವರೋತ್ತಮ ನುಡಿದ ನರವರ
ನಿನಗೆ ಸಂತತಿಯುಂಟು ಕೃಷ್ಣನ ಭಜಿಸು
ಸತಿಸಹಿತ//೧೧//
ಎಂದು ಮುನಿವರ ಚಂದದಿಂದಲಿ
ಒಂದು ಫಲವಭಿಮಂತ್ರಿಸಿತ್ತೂ
ಮುಂದಿನೀದಿನಕೊಬ್ಬ ತನಯನು ನಿನಗೆ ಪುಟ್ಟುವನು
ನೀವಾಸುತನ ನಮಗೇ
ಪೊಂದಿಸುವದೂ ನಿಮಗೆ ಮತ್ತೂ
ಕಂದನಾಗುವ ನಿಜವು ವಚನವು ಕೇಳೋ ನರಪತಿಯೆ//೧೨//
ಯಾದವೇಶನ ಭಜನೆಗರ್ಹನು
ಆದ ಬಾಲಕ ಗರ್ಭದಿರುವನು
ಆದರಿಸಿ ಪರಿಪಾಲಿಸುವುದು ನಮ್ಮದಾಗಮನ
ವಾದನಂತರ ನಿನ್ನ ಸದನದಿ
ಹಾದಿ ನೋಡುತ ನಾಲ್ಕು ತಿಂಗಳು
ಸಾಧಿಸೂವೆವುಯೆಂದು ಯತಿವರ ನುಡಿದು ತಾ
ನಡೆದ//೧೩//
ಪೋಗಲಾ ಯತಿನಾಥ ಮುಂದಕೆ
ಆಗಲಾತನ ಸತಿಯು ಗರ್ಭವ
ಜಾಗು ಮಾಡದೆ ಧರಿಸಿ ಮೆರೆದಳು ಆಯತಾಂಬಕೆಯು
ನಾಗರೀಯರ ಸತಿಯರೆಲ್ಲರು
ಆಗ ಸಂತಸದಿಂದ ನೆರೆದರು
ಬ್ಯಾಗ ರಾಜನ ರಾಣಿ
ಗರ್ಭಿಣಿಯಾದುದಾಶ್ಚರ್ಯ//೧೪//
ಸಣ್ಣ ನಡು ತಾ ಬೆಳೆಯೆ ತ್ರಿವಳಿಯು
ಕಣ್ಣುಗಳಿಗೆ ಕಾಣದಾಗಲು
ನುಣ್ಣನೆ ಮೊಗವರಿಯೇ ಚೂಚುಕವೆರೆಡು ಕಪ್ಪಾಗೆ
ತಿಣ್ಣಪಚ್ಚಳ ಬೆಳೆಯೆ ಗಮನವು
ಸಣ್ಣದಾಗಲು ಬಿಳಿಪು ಒಡೆಯೇ
ಕಣ್ಣು ಪೂರ್ಬಿನ ಮಿಂಚು ಬೆಳೆಯಲು
ಗರ್ಭಲಾಂಛನವು//೧೫//
ಬಿಳಿಯ ತಾವರೆಯೊಳಗೆ ಇರುತಿಹ
ಅಲಿಯ ಸಮುದಯವೇನೋ ಆಗಸದೊಳಗೆ
ದಿನದಿನ ಬೆಳೆಯೋ ಚಂದ್ರನ ಕಳೆಯೋ
ಕನಕಾದ್ರಿಯೊಳಗೆ
ರಾಜಿಪ ಅಂಬುಧರತೆರ
ಪೊಳೆವ ಕಾಂತಿಯ ಚಲ್ಟಿನಾನನದೊಳಗೆ
ಮಿರುಗುವ ಗುರುಳುಗಳೊ
ಸಲೆನಡುವಿನೊಳ್ತಾನೆ//೧೬//
ಪೊಳೆವ ಗರ್ಭವಿದೇನೋ ಕುಚಯುಗ
ತೊಳಪು ಚೂಚುಕ ಕಪ್ಪಿನಿಂದಲಿ
ಪೊಳೆಯುತಿರ್ದಳು ಗರ್ಭಧಾರಣೆ ಮಾಡಿ ವನಜಾಕ್ಷಿ
ತಳಿರುಪೋಲುವ ಅಡಿಗಳಿಂದಲಿ
ಚಲುವಕದಳೀ ಊರುಯುಗದೀ
ಬಳುಕಿ ಬಾಗುತ ನಡೆಯೋ ಲಲನೆಯ ನಡಿಗೆ
ಶೋಭಿಪದು//೧೭//
ಚಂದ್ರಮುಖಿಯಳ ಜಠರವೆಂಬಾ
ಚಂದ್ರಕಾಂತದ ಮಣಿಯ ಮಧ್ಯದಿ
ಚಂದ್ರನಂದದಿ ಸಕಲಲೋಕಕೆ ನಂದಕರವಾದ
ಚಂದ್ರಬಿಂಬವ ಜೈಪ ಶಿಶು ತಾ
ಇಂದ್ರನಂದದಿ ಗರ್ಭದಿರಲೂ
ಸಾಂದ್ರತನುರುಚಿಯಿಂದಲೊಪ್ಪುತ ಮೆರೆದಳಾ
ಜನನೀ//೧೮//
ಕಾಂಚನಾಂಗಿಯ ಗರ್ಭಧಾರಣ
ಲಾಂಛನೀಪರಿ ನೋಡಿ ನೃಪ ರೋಮಾಂಚನಾಂಚಿತ
ಹರುಷದಿಂದಲಿ ಭೂಮಿ ದಿವಿಜರಿಗೆ
ವಾಂಛಿತಾರ್ಥವನಿತ್ತು ಮನದಲಿ
ಚಂಚಲಿಲ್ಲದೆ ನಾರಿಮಣಿಗೇ
ಪಂಚಮಾಸಕೆ ಕುಸುಮಮುಡಿಸೀ ಮಾಡ್ದ ಸೀಮಂತ//೧೯//
ನಾರಿಗಾಗಲು ಬಯಕೆ ಪರಿಪರಿ
ಆರುತಿಂಗಳು ಪೋಗುತಿರಲೂ
ದೂರ ದೇಶದಲಿಂದಾಗಲೇ ಬಂದ ಮುನಿರಾಯ
ವಾರಿಜಾಕ್ಷಿಯು ಯತಿಯ ಪಾದಕೆ
ಸಾರಿ ಮನವ ಮಾಡೆ ಗುರುವರ
ಧೀರತನಯನ ಬ್ಯಾಗ ನೀ ಪಡಿಯೆಂದು ಹರಸಿದನು//೨೦//
ಬಾಲೆ ಬಸಿರೊಳಗಿಪ್ಪ ಶಿಶು
ಗೋಪಾಲಪದಯುಗಭಕ್ತನವನಿಗೆ
ಪಾಲಕಾಗಿಹ ಹರಿಯ ಮಜ್ಜನಮಾಡಿ ನಿತ್ಯದಲಿ
ಪಾಲಿನಿಂದಲಿ ಗರ್ಭದಲೆ ತಾ
ಬಾಲಗೀಪರಿ ಜ್ಞಾನವಿತ್ತೂ
ಪಾಲಿಸೀ ಬ್ರಹ್ಮಣ್ಯತೀರ್ಥರು
ನಿಂತರಾಗಲ್ಲೇ//೨೧//
ಬಳಿಕ ಬರಲಾಪ್ರಸವಕಾಲದಿ
ಪೊಳೆವ ಮಿಸುಣಿಯ ಪಾತ್ರೆಯೊಳಗೆ
ತೊಳಪು ಸುಂದರ ಬೊಂಬೆಯಂದದಿ ಶಿಶುವು ಕಣ್ಗೊಪ್ಪೆ
ಕಳೆಗಳಿಂದಲಿ ನಭದಿ ದಿನದಿನ
ಬೆಳೆವ ಚಂದ್ರನೊ ಎನಿಪ ಬಾಲಕ
ಬೆಳಗುತೋರಿದ ಸೂತಿಕಾಗೃಹದೊಳಗೆ ತಾ
ಜನಿಸೀ//೨೨//
ಅಂಬುಜಾಪ್ತನು ತಾನೇ ಇಳದೀ
ಕುಂಭಿಣೀಯಲಿ ಬಂದನೇನೋ
ತುಂಬಿಸೂಸುವ ತೇಜದಿಂದಲಿ ಬಾಲ ಶೋಭಿಸಿದ
ಸಂಭ್ರಮಾಯಿತು ಮುನಿಗೆ ಹರಿಪ್ರತಿ-
ಬಿಂಬನಾಗಿಹ ಬಾಲರೂಪವ
ನಂಬಕದ್ವಯದಿಂದ ನೋಡೀ ಹರುಷಪುಲಕಾಂಕ//೨೩//
ಆಗ ಯತಿವರ ಬಂದು ಶಿಶುವಿನ
ಬೇಗ ತಾ ಸ್ವೀಕರಿಸಿ ನಡೆದನು
ಸಾಗರೋದ್ಭವ ಸುಧೆಯ ಕಲಶವ ಗರುಡನೊಯ್ದಂತೆ
ಜಾಗುಮಾಡದೆ ಮುನಿಪ ತಾನನು
ರಾಗದಿಂದಲಿ ಶಿಶುವಿನೀ ಪರಿ
ತೂಗಿ ಲಾಲಿಸಿ ಪಾಲುಬೆಣ್ಣೆಯ ತಾನೇ
ನೀಡುತಲಿ//೨೪//
ಇಂದು ತೆರದಲಿ ಬಾಲ ಕಳೆಗಳ
ಹೊಂದಿ ದಿನದಿನ ವೃದ್ಧಿಯೈಯ್ದಿದ
ಕಂದರಂದದಿ ಹಠಗಳಿಲ್ಲವೋ ಮೂರ್ಖತನವಿಲ್ಲ
ಮಂದಮತಿ ತಾನಲ್ಲ ಬುಧವರ
ವೃಂದವಂದಿತಪಾದಪಂಕಜದಿಂದ
ಶೋಭಿತನಾಗಿ ಮಠದಲಿ ಪೊಂದಿಯಿರುತಿಪ್ಪ//೨೫//
ಮೊಳೆದ ಪಲ್ಗಳು ಬಾಯೊಳೊಪ್ಪಿರೆ
ತೊಳಪು ನಗೆಮುಖ ಸೊಬಗು ಸೂಸುವ
ಹೊಳೆವ ಕಂಗಳು ನುಣುಪುಪೆಣೆ ಮುಂಗುರುಳು ತಾ ಹೊಳೆಯೆ
ಸುಳಿಯನಾಭಿಯು ಉದರವಳಿತ್ರಯ
ಎಳೆಯ ಶಂಕರಿ ತೋಳು ಯುಗಳವು
ಜೋಲಿದಂಬೇಗಾಲು ನಡಿಗೆಯ ಸೊಗಸು ಶೋಭಿಪದೂ//೨೬//
ದೂಳಿಸೋಕಲು ಸುಂದರಾಂಗವು
ನೀಲಮೇಘದ ತೆರನೆ ತೋರ್ಪದು
ನೀಳಮಾರ್ಗದಿ ನಲಿದು ನಡೆವನು ಬೀಳುತೇಳುತಲಿ
ತಿಳಿಯದತಿಸಂತೋಷವಾರಿಧಿಯೊಳಗೆ
ಸಂತತ ಮುನಿಪ ಮುಳುಗಿದ
ಪೇಳಲೆನವಶವಲ್ಲ ಬಾಲನ ಲೀಲೆ ಸುಖಮಾಲೆ//೨೭//
ಬಾಲ ಲೀಲೆಯ ನೋಡಿ ಹಿಗ್ಗುವ
ಲಾಲನೆಯ ತಾ ಮಾಡಿ ಪಾಡುವ
ಲೋಲಕುಂತಲ ಮುಖವ ಚುಂಬಿಪ ಗೋಪಿಯಂದದಲಿ
ಪಾಲಸಾಗರಶಯನ ಪದಯುಗ
ಲೋಲ ಬಾಲಕ ಎನಗೆ ದೊರೆತನು
ಪೇಳಲೇನಿಹದೆನ್ನ ಪುಣ್ಯದ ಫಲವೇ
ಫಲಿಸಿಹುದೋ//೨೮//
ಆಡುತಿಹನೆಳೆ ಮಕ್ಕಳೊಡನೆ
ಮಾಡುತಿಹ ತಾನೊಮ್ಮೆ ಲೀಲೆಯ
ನೋಡುತಿಹ ಆಶ್ಚರ್ಯಗೊಳುತಲಿ ಬಾಲರಾಟವನೂ
ಕೂಡೆ ಮನಿಮನಿ ತಿರುಗುತಿಪ್ಪನು
ರೂಢಿಜನರನು ಮೋಹಗೊಳಿಸುವ
ಗಾಡಿಕಾರನು ಕೃಷ್ಣತೆರದಲಿ ಲೀಲೆಮಾಡಿದನು//೨೯//
ಪಾಡುವಂ ಜನರನ್ನು ಪರಿಪರಿ
ನೋಡುವಂ ಥರಥರದಿ ಹಾಸ್ಯವ
ಮಾಡುವಂ ತಾನರ್ಥಿಸುತಲವರೊಡನೆ ಇರುತಿಪ್ಪ
ಕ್ರೀಡಿಸುತಲಾಪುರದ ಬಾಲರ
ಕೂಡಿ ಈ ಪರಿ ಬೀದಿಯೊಳು ತಾ
ಮೂಢಬಾಲನ ತೆರದಿ ತೋರಿದ ಗೂಢಬಾಲಕನೂ//೩೦//
ಪಿಂತೆ ನಾರದಮುನಿಯ ವಚನವ
ಚಿಂತಸೀಪರಿ ತನ್ನ ಮನದಲಿ
ಕಂತುಜನಕ ಸರ್ವಕಾಳದಿ ನೋಡಿ ನಲಿತಿಪ್ಪ
ಅಂತರಂಗದಿ ಶಿರಿಯ ರಮಣನ
ಇಂತು ಭಜನೆಯಗೈದು ಬಾಲಕ
ಅಂತು ತಿಳಿಸದೆ ತಾನೇ
ಪ್ರಾಕೃತರಂತೆಯಿರುತಿಪ್ಪ//೩೧//
ಪೋತಗಾಯಿತು ಪಂಚವತ್ಸರ
ನೀತವೇಸರಿ ಧೂಳಿಯಕ್ಷರ
ಪ್ರೀತಿಯಿಂದಲಿ ಬರೆದು ತೋರಲು ಬಾಲ ತಾ ನುಡಿದ
ತಾತ ಎನ್ನಯ ಮಾತು ಕೇಳೆಲೋ
ಧಾತನಾಂಡಕೆ ಮುಖ್ಯ ಗುರುಜಗನ್ನಾಥವಿಠಲನು
ತಾನೇ ಪೂರ್ಣನು ಸರ್ವರುತ್ತಮನು//೩೨//
//ಇತಿ ಶ್ರೀ ರಾಘವೇಂದ್ರ ವಿಜಯ ತೃತೀಯ ಸಂಧಿ ಸಮಾಪ್ತಂ//
No comments:
Post a Comment