ಷಷ್ಟಮ ಸಂಧಿ
ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುಣ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು//
ನತಿಪಜನತತಿಗಮರಪಾದಪ
ನುತಿಪಜನರಸುರಧೇನು ಕಾಮಿತ
ಸತತ ನೀಡುತ ಧರಣಿಸುರವರನಿಕರ ಪರಿಪಾಲ
ಪ್ರತಿಯುಕಾಣೆನೋ ವ್ರತಿಗಳರಸನೆ
ನತಿಪೆ ತವಪದಕಮಲಯುಗ್ಮಕೆ
ತುತಿಪೆ ಎನ್ನನು ಪೊರೆಯೋ ಗುರುವರ ಪತಿತಪಾವನನೆ//೧//
ಆವ ಪಂಪಾಕ್ಷೇತ್ರದಲಿ ಹರಿ
ಶೇವಕಾಗ್ರಣಿ ವ್ಯಾಸಮುನಿಯೂ
ಕಾವನಯ್ಯನ ಸತತ ಭಜಿಸುತ ವಾಸಮಾಡಿರಲು
ದೇವವರ್ಯರೆ ಒಂದುರೂಪದಿ
ತಾವೇ ಭೂತಳದಲ್ಲಿ ಜನಿಸುತ
ಕೋವಿದಾಗ್ರೇಸರರು ಎನಿಸೀ ಮೆರೆದರಾ ಸ್ಥಳದಿ//೨//
ನಾರದರೆ ತಾ ಶ್ರೀಪುರಂದರ
ಸೂರಿತನಯನೆ ಕನಕ ತಾ
ಜಂಭಾರಿಯೇ ವೈಕುಂಠದಾಸರು ವ್ಯಾಸ ಪ್ರಹ್ಲಾದ
ಈರು ಎರಡೀ ಜನರು ಸರ್ವದ
ಮಾರನಯ್ಯನ ಪ್ರೇಮಪಾತ್ರರು
ಸೇರಿ ಇರುವುದರಿಂದೆ ಪಂಪಾ ನಾಕಕಿನ್ನಧಿಕ//೩//
ವ್ಯಾಸರಾಯರ ಮಠದ ಮಧ್ಯದಿ
ವಾಸಮಾಡಲು ಸಕಲ ದ್ವಿಜರೂ
ದಾಸರಾಗಿಹ ಸರ್ವರಿಂದಲಿ ಸಭೆಯು ಶೋಭಿಸಿತು
ವಾಸವನ ಶುಭಸಭೆಯೋ ಮೇಣ್ಕಮಲಾಸನನ
ಸಿರಿವೈಜಯಂತಿಯೋ
ಭಾಷಿಸುವರಿಗೆ ತೋರದಂದದಿ ಸಭೆಯು ತಾನೊಪ್ಪೆ//೪//
ಪಂಪಕ್ಷೇತ್ರವು ದಾಸವರ್ಯರ
ಗುಂಪಿನಿಂದ ಸಮೇತವಾಗಿ
ಶಂಫಲಾಪುರದಂತೆ ತೋರ್ಪದು ಸುಜನಮಂಡಲಕೆ
ತಂಪುತುಂಗಾನದಿಯವನ ತಾ
ಸೊಂಪಿನಿಂದಲಿ ಸರ್ವಜನಮನ
ಕಿಂಪುಗಾಣಿಸಿ ಸರ್ವಸಂಪದದಿಂದ ಶೋಭಿಪುದು//೫//
ಒಂದುದಿನದಲಿ ವ್ಯಾಸಮುನಿಯು
ಪುರಂದರಾರ್ಯರು ಒಂದುಗೂಡಿ
ಬಂದುಸೇರ್ದರು ಸುಖವನುಣಲೂ ವಿಜಯವಿಠಲನ್ನ
ಮಂದಿರಕೆ ಬಲಸಾರೆಯಿರುತಿಹದೊಂದು
ಸುಂದರಪುಲಿನಮಧ್ಯದಿ
ಅಂದು ಹರಿಯಪರೋಕ್ಷವಾರಿಧಿಯೊಳಗೆ ಮುಳುಗಿದರು//೬//
ಬಂದನಲ್ಲಿಗೆ ಕುರುಬನೊಬ್ಬನು
ತಂದ ಕುರಿಗಳ ಬಿಟ್ಟುದೂರದಿ
ನಿಂದು ನೋಡಿದ ಇವರ ಚರ್ಯವ ಕನಕನಿಲ್ಲದಲೆ
ಮಂದಹಾಸವು ಕೆಲವುಕಾಲದಿ
ಮಂದರಾಗೊರು ಕೆಲವುಕಾಲದಿ
ಪೊಂದಿಯಿಬ್ಬರು ಅಪ್ಪಿಕೊಂಡೋ ಮುದದಿ ರೋದಿಪರೋ//೭//
ಬಿದ್ದು ಪುಲಿನದಿ ಪೊರಳಿ ಹೊರಳೊರು
ಎದ್ದು ಕುಣಿಕುಣಿದಾಡಿ ಚೀರೊರು
ಮುದ್ದು ಕೃಷ್ಣನ ತೋರಿತೋರುತ ತಾವು ಪಾಡುವರೋ
ಶಿದ್ಧಸಾಧನ ಕನಕ ಸಮಯಕೆ
ಇದ್ದರಿಲ್ಲೀ ಲಾಭವಾಗೊದು
ಇದ್ದಸ್ಥಾನಕ್ಕೆ ಪೋಗಿ ಆತನ ಕರಿವೊರಾರಿಲ್ಲಾ//೮//
ಸುದ್ದಿ ಕೇಳುತ ನಿಂತ ಕುರುಬನು
ಎದ್ದು ಕನಕನ ಕರೆದು ತೋರುವೆ
ಇದ್ದ ಸ್ಥಳವನು ಪೇಳಿರೆಂದಾ ಮುನಿಗೆ ಬೆಸಗೊಂಡಾ
ಎದ್ದು ನಡದಾನದಿಯ ತೀರದಲಿದ್ದ
ಕನಕನ ಬೇಗ ಕರೆದೂ
ತಂದು ತೋರುತ ವ್ಯಾಸಮುನಿಗೆ ಬಿದ್ದು ಬೇಡಿದನು//೯//
ದಾರಿ ಮಧ್ಯದಿ ತನಗೆ ಕನಕನು
ತೋರಿ ಪೇಳಿದ ತೆರದಿ ಕುರುಬನು
ಸಾರೆಗರೆದೂ ಬೇಡಿಕೊಂಡನು ಲಾಭ ಕೂಡಿರೆಂದು
ಧೀರಮುನಿವರ ದಾಸವರರೆ
ವಿಚಾರಮಾಡಿರಿ ಏನು ನೀಡಲಿ
ತೋರವಲ್ಲದು ಪರಿಯ ನೀವೇ ಪೇಳಿರೆಮಗೆಂದ//೧೦//
ಕನಕ ಪೇಳಿದ ಕೊಟ್ಟವಚನವು
ಮನದಿ ಯೋಚಿಸಿ ಕೊಡುವದವಗೆ
ಅನುಜನಾತನು ನಿಮಗೆ ತಿಳಿವದು ಚಿಂತೆಯಾಕದಕೆ
ಎನಲು ಮುನಿವರ ಮನದಿ ತಿಳಿದೂ
ಜನಿತವಾದಾನಂದಲಾಭವ
ಮನಸುಪೂರ್ವಕಯಿತ್ತು ಕರುಣವ ಮಾಡಿ ತಾ ಪೊರೆದ//೧೧//
ಜ್ಞಾನಿಗಳು ತಾವಂಗಿಕರಿಸಲು
ಹೀನಕೆಲಸಗಳಾದ ಕಾಲಕು
ಏನು ಶ್ರಮವದರಿಂದ ಬಂದರು ಬಿಡದೆ ಪಾಲಿಪರು
ಸಾನುರಾಗದಿ ಸಕಲಜನರಭಿ-
ಮಾನಪೂರ್ವಕ ಪೊರೆದು ಭಕ್ತಿ-
ಜ್ಞಾನವಿತ್ತೂ ಹರಿಯ ಲೋಕದಿ ಸುಖವ ಬಡಿಸುವರು//೧೨//
ತೀರ್ಥಸ್ನಾನವ ಮಾಡಿ ತಾವಾ
ತೀರ್ಥಶುದ್ಧಿಯ ಮಾಡೊರಲ್ಲದೆ
ತೀರ್ಥಸ್ನಾನಗಳಿಂದಲವರಿಗೆ ಏನು ಫಲವಿಲ್ಲಾ
ಪಾರ್ಥಸಾರಥಿಪಾದ ಮನದಲಿ
ಸ್ವಾರ್ಥವಿಲ್ಲದೆ ಭಜನೆಗೈದು
ಕ್ರುತಾರ್ಥರಾಗೀ ಜಗದಿ ಚರಿಪರು ಸತತ ನಿರ್ಭಯದಿ//೧೩//
ಬುಧರ ದರುಶನದಿಂದ ಪಾತಕ
ಸದದು ಭಾಷಣದಿಂದ ಮುಕುತಿಯ
ಪದದ ದಾರಿಯ ತೋರಿ ಕೊಡುವರು ಸದನದೊಳಗಿರಲು
ಒದಗಿಸುವರು ಭಾಗ್ಯ ಜನರಿಗೆ
ಮದವು ಏರಿದ ಗಜದ ತೆರದಲಿ
ಪದುಮನಾಭನ ದಾಸರವರಿಗಸಾಧ್ಯವೇನಿಹುದೋ//೧೪//
ಯತಿಕುಲೋತ್ತಮ ವ್ಯಾಸರಾಯರ
ಮಿತಿಯುಯಿಲ್ಲದ ಮಹಿಮೆಯಿಂದಲಿ
ಪತಿತಪಾಮರರೆಲ್ಲ ಉಧೃತರಾದುದೇನರಿದು
ಸತತ ಬಿಂಬೋಪಾಸನೋಚ್ಚ್ರಿತ
ವಿತತಜ್ಞಾನದ ವಿಭವದಿಂದಲಿ
ಪ್ರತಿಯುಯಿಲ್ಲದೆ ತಾನು ರಾಜಿಪ ಸೂರ್ಯನಂದದಲಿ//೧೫//
ಮೋದತೀರ್ಥರ ಶಾಸ್ತ್ರಜಲಧಿಗೆ
ಮೋದದಾಯಕ ಸೋಮನೋ
ಪರವಾದಿವಾರಿಜಹಂಸ ಚಂದಿರ ಸ್ವಮತ ಸತ್ಕುಮುದಕಾದ
ತಾ ನಿಜ ಸುಜನ ಕೈರವ
ಬೋಧಕರ ತಾ ಚಂದ್ರಮಂಡಲ
ಪಾದಸೇವಕರೆನಿಪ ಸುಜನ ಚಕೋರ ಚಂದ್ರಮನೋ//೧೬//
ಹರಿಯರೂಪ ಸಮಾದಿಯೋಗದಿ
ನಿರುತಕಾಣುತಲಿಪ್ಪ ಗುರುವರ
ಹೊರಗೆ ಕಾಣುವನೆಂಬ ಕಾರಣ ಕನಕಗಿನಿತೆಂದಾ
ಚರನ ತೆರದಲಿ ನಿನ್ನ ಸಂಗಡ
ತಿರುಗುತಿಪ್ಪನು ಸರ್ವಕಾಳದಿ
ಸಿರಿಯರಮಣನ ಎನಗೆ ತೋರಿಸು ಮರಿಯ ಬೇಡೆ೦ಡಾ//೧೭//
ಅಂದ ಮುನಿವರ ವಚನ ಮನಸಿಗೆ
ತಂದು ಕನಕನು ಹರಿಗೆ ಪೇಳಿದ
ಒಂದು ಕಾಲದಿ ಮುನಿಗೆ ದರುಶನ ನೀಡು ಜಗದೀಶಾ
ಇಂದಿರಾಪತಿ ಕೇಳಿ ವಚನವ
ಮಂದಹಾಸವ ಮಾಡಿ ನುಡಿದನು
ಬಂದು ಶ್ವಾನಸ್ವರೂಪದಿಂದಲಿ ಮುನಿಗೆ ತೋರುವೆನು//೧೮//
ದೇವತಾರ್ಚನೆ ಮಾಡಿ ಗುರುವರ
ಸಾವಧಾನದಿ ಭಕ್ಷ ಭೋಜ್ಯವ
ಕಾವನಯ್ಯಗೆ ನೀಡೋಕಾಲದಿ ಶ್ವಾನ ಬರಲಾಗ
ಕೋವಿದಾಗ್ರಣಿ ವ್ಯಾಸಮುನಿಯು
ಭಾವಿಶ್ಯಾಗಲೆ ಹರಿಯ ಮಹಿಮೆಯ
ದೇವದೇವನೆ ಈ ವಿಧಾನದಿ ತೋರ್ದ ತನಗೆಂದು//೧೯//
ದೃಷ್ಟಿಯಿಂದಲಿ ಕಂಡು ಮುನಿವರ
ಥಟ್ಟನೆದುಕುಲತಿಲಕಕೃಷ್ಣನ
ಬಿಟ್ಟು ತಾ ಜದಮೂರ್ತಿ ಪೂಜೆಯ ಶುನಕದರ್ಚನೆಯಾ
ಮುಟ್ಟಿ ಭಜಿಸಿದ ಭಕುತಿಯಿಂದಲಿ
ಕೊಟ್ಟ ತಾ ನೈವೇದ್ಯ ತ್ವರದಲಿ
ತಟ್ಟಿಮಂಗಳದಾರ್ತಿಮಾಡಿ ಶಿರದಿ ನಮಿಸಿದನು//೨೦//
ಅಲ್ಲಿ ದ್ವಿಜವರರಿದನು ನೋಡೀ
ಎಲ್ಲಿಯಿಲ್ಲದೆ ಚರಿಯ ಯತಿವರರಲ್ಲಿ
ನಡೆಯಿತುಯಿನ್ನುಮುಂದೆ ಮಡಿಯು ಮೈಲಿಗೆಯು
ಇಲ್ಲದಾಯಿತು ನಾಯಿಪೂಜೆಯು
ಎಲ್ಲ ಜನರಿಗೆ ಮತವು ಎನಿಪದು
ಖುಲ್ಲ ಕನಕನ ಮಾತಿಗೀಯತಿ ಮರಳುಗೊಂಡಿಹನು//೨೧//
ಈ ತೆರದಿ ತಾವೆಲ್ಲ ವಿಬುಧರು
ಮಾತನಾಡಿದರೆಂಬೋ ವಾರ್ತೆಯ
ದೂತಪರಿಮುಖದಿಂದ ಕೇಳಿ ವ್ಯಾಸಮುನಿರಾಯ
ನೀತವಾದಪರೋಕ್ಷದಿಂದಲಿ
ಜಾತಜ್ಞಾನದಿ ಹರಿಯ ರೂಪವ
ಸೋತ್ತುಮಾದ್ವಿಜರೊಳಗೆ ಓರ್ವಗೆ ತೋರಿ ಮೋದಿಸಿದ//೨೨//
ಸರ್ವಜನರಿಗೆ ಸಮ್ಮತಾಯಿತು
ಗುರುವರೇಣ್ಯನ ಮಹಿಮೆ ಪೊಗಳುತ
ಊರ್ವಿತಳದಲಿ ಖ್ಯಾತಿ ಮಾಡ್ದರು ಸರ್ವಸಜ್ಜನರು
ಶರ್ವನಾಲಯದಲ್ಲಿ ಸೂರ್ಯನ
ಪರ್ವಕಾಲದಿ ವಿಪ್ರಪುತ್ರನ
ದರ್ವಿಸರ್ಪವು ಕಚ್ಚಲಾಕ್ಷಣ ಮೃತಿಯನೈದಿದನು//೨೩//
ಮೃತಿಯನೈದಿದ ವಿಪ್ರಪುತ್ರನ
ಮೃತಿಯ ತಾ ಪರಿಹರಿಸಿ ಶೀಘ್ರದಿ
ಪಿತಗೆ ನೀಡಿದ ಸರ್ವಜನರೂ ನೋಡುತಿರಲಾಗಾ
ವ್ರತಿವರೋತ್ತಮಮಹಿಮೆ ಜಗದೊಳ-
ಗತುಳವೆನುತಲಿ ಮುನಿಯ ಗುಣಗಳ
ತುತಿಸಿ ಪೊಗಳುತ ಪಾದಕಮಲಕೆ ನಮನ ಮಾಡಿದರು//೨೪//
ವಿದ್ಯಾರಣ್ಯನ ವಾದದಲಿ ತಾ
ಗೆದ್ದ ಶ್ರೀ ಜೈತೀರ್ಥವಿರಚಿತ
ಶುದ್ಧ ಶ್ರೀಮನ್ಯಾಯಸತ್ಸುಧನಾಮಸತ್ಕೃತಿಗೆ
ಎದ್ದುತೋರುವ ಚಂದ್ರಿಕಾಭಿಧ
ಮುದ್ದು ಟಿಪ್ಪಣಿಸಹಿತ ಪಾಠವ
ಮಧ್ವರಾಯರ ಬಳಿಯೆ ಪೇಳುತಲಿದ್ದನಾಸ್ಥಳದಿ//೨೫//
ಮತ್ತೆ ಪಂಪಾಕ್ಷೇತ್ರದಲಿ ತಾ
ನಿತ್ಯನಿತ್ಯದಿ ಹರಿಯ ಭಜಿಸುತ
ಸತ್ಯಸಂಕಲ್ಪಾನುಸಾರದಿ ಕೃತ್ಯ ತಾ ಮಾಡಿ
ಉತ್ತಮೋತ್ತಮವೆನಿಪ ಸ್ಥಾನವು
ಹತ್ತಲಿಹ ಗಜಗಹ್ವರಾಭಿಧ
ಎತ್ತನೋಡಲು ತುಂಗನದಿಯುಂಟದರ ಮಧ್ಯದಲಿ//೨೬//
ಛಂದಯಿಪ್ಪದು ನೋಡಿ ಮುನಿವರ
ಬಂದು ತುಂಗಾನದಿಯ ಜಲದಲಿ
ಮಿಂದು ಪುಂಡ್ರವ ಧರಿಸಿ ಜಪತಪನೇಮಕರ್ಮಗಳ
ಒಂದು ಬಿದದಲೇ ಮಾಡಿ ಹೃದಯದಿ
ಇಂದಿರೇಶನ ಪೂಜೆಗೈದೂ
ಪೊಂದಿಶ್ಯಾತನ ಪದದಿ ಮನವನು ಸಾರ್ದವೈಕುಂಠ//೨೭//
ಇಂದಿಗಿರುತಿಹವಲ್ಲಿ ಶುಭನವ
ಛಂದಬೃಂದಾವನಗಳೊಳಗೆ
ಸುಂದರಾತ್ಮಕವಾದ ವೃಂದಾವನದಿ ಮುನಿರಾಯಾ
ಪೊಂದಿಯಿಪ್ಪನು ಸತತ ತನ್ನನು
ವಂದಿಸೀಪರಿ ಭಜಿಪ ಜನರಿಗೆ
ಕುಂದದಲೆ ಸರ್ವಾರ್ಥ ಕೊಡುತಲಿಪ್ಪ ನಮ್ಮಪ್ಪ//೨೮//
ವ್ಯಾಸರಾಯರ ಮಹಿಮೆ ದಿನದಿನ
ಬ್ಯಾಸರಿಲ್ಲದೆ ಪಠಿಪ ಜನರಿಗೆ
ಕ್ಲೇಶ ದೇಹಾಯಾಸ ಘನತರ ದೋಷ ಸಮನಿಸವು
ವಾಸುದೇವನ ಕರುಣವವನಲಿ
ಸೂಸಿತುಳಕೊದು ಸಂಶಯಾತಕೆ
ಕೀಶಗುರುಜಗನ್ನಾಥ ವಿಠಲನು ಪ್ರೀತನಾಗುವನು//೨೯//
//ಇತಿ ಶ್ರೀ ರಾಘವೇಂದ್ರ ವಿಜಯ ಷಷ್ಟಮ ಸಂಧಿ ಸಮಾಪ್ತಂ//
No comments:
Post a Comment