Monday, March 11, 2013

ರಾಘವೇಂದ್ರ ವಿಜಯ - ಪಂಚಮ ಸಂಧಿ

ಪಂಚಮ ಸಂಧಿ


ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//


ಬೇಧ ಪಂಚಕ ತಾರತಮ್ಯವ-

ನಾದಿಕಾಲದಿ ಸಿದ್ಧವೆನ್ನುವ

ಮೋದತೀರ್ಥರ ಶಾಸ್ತ್ರಮರ್ಮವ ಪೇಳ್ದ ಬುಧಜನಕೆ

ಬೇಧಜೀವನಿಯೆಂಬ ಗ್ರಂಥವ

ಸಾದರದಿ ತಾ ರಚಿಸಿ ಲೋಕದಿ

ವಾದದಲಿ ಪ್ರತಿವಾದಿ ಸಂಘವ ಜೈಸಿ ರಾಜಿಸಿದ//೧//


ತರ್ಕತಾಂಡವ ರಚನೆಮಾಡಿ

ವಿತರ್ಕವಾದಿಯ ಮುರಿದು ಪರಗತಿ

ಕರ್ಕಶಾಗಿಹ ನ್ಯಾಯವೆನಿಪಾಮೃತವ ನಿರ್ಮಿಸಿದ

ಶರ್ಕರಾಕ್ಷಗೆ ಗಹನ ಚಂದ್ರಿಕೆ-

ಯರ್ಕನಂದದಿ ತಿಮಿರಹರ

ದೇವರ್ಕರಲ್ಲದೆ ಕೃತಿಗೆ ಯೋಗ್ಯರು ನರರು ಆಗುವರೆ//೨//


ದಶಮತೀಕೃತಶಾಸ್ತ್ರಭಾವವ

ವಿಶದ ಮಾಡುವ ಟಿಪ್ಪಣೀಗಳ

ಮಸೆದ ಅಸಿತೆರಮಾಡಿ ಪರಮತ ನಾಶಗೈಯುತಲಿ

ಅಸಮ ಮಹಿಮೆಯ ತೋರಿ ತಾ ಈ

ವಸುಧಿ ಮಂಡಲ ಮಧ್ಯ ಪೂರ್ಣಿಮ

ಶಶಿಯ ತೆರದಲಿ ಪೂರ್ಣಕಳೆಯುತನಾಗಿ ಶೋಭಿಸಿದ//೩//


ತಂತ್ರಸಾರದಿ ಪೇಳ್ದ ಸುಮಹಾ

ಮಂತ್ರ ಸಂಘವ ಶಿಷ್ಯ ಜನಕೆ

ಮಂತ್ರಮರ್ಮವ ತಿಳಿಸಿ ಸಿದ್ಧಿಯಮಾಡಿ ತೋರಿಸುತ

ಅಂತವಿಲ್ಲದ ವಿಶ್ವಕೋಶದ

ತಂತ್ರಮಾಡುವ ಸರ್ವಲೋಕ

ಸ್ವತಂತ್ರ ಶ್ರೀಹರಿಪಾದಪಂಕಜ ಭಜನೆ ಪರನಾದ//೪//


ಪದಸುಳಾದಿಗಳಿಂದ ಹರಿಗುಣ

ಮುದದಿ ಪೇಳುತ ಮುದ್ರಿಕಿಲ್ಲದೆ

ಹೃದಯದಲಿ ತಾ ಚಿಂತಿಗೈತಿರಲಾಗ ಮುನಿರಾಯಾ

ಒದಗಿ ಪೇಳಿದ ಕೃಷ್ಣ ಸ್ವಪ್ನದಿ

ಬದಲುಯಾವದು ನಿನಗೆಯಿಲ್ಲವೊ

ಯದುವರ ಶ್ರೀಕೃಷ್ಣನಾಮವೆ ನಿನಗೆ ಮುದ್ರಿಕೆಯೋ//೫//


ಒಂದು ದಿನದಲಿ ವಿಪ್ರನೋರ್ವನು

ಬಂದು ವ್ಯಾಸರ ಪದಕಮಲಕೆ

ವಂದಿಸೀ ಕೈಮುಗಿದು ಬೇಡಿದ ಎನಗೆ ಉಪದೇಶ

ಇಂದು ಮಾಡಿರಿ ಎನಗೆ ಪರಗತಿ

ಪೊಂದೋ ಮಾರ್ಗವ ತೋರಿ ಸಲಹಿರಿ

ಮಂದಮತಿ ನಾನಯ್ಯ ಗುರುವರ ಕರುಣಾಸಾಗರನೆ//೬//


ಕ್ಷೋಣಿತಳದಲಿ ತನ್ನ ಮಹಿಮೆಯ

ಕಾಣಗೊಳಿಸುವೆನೆಂದು ಚಾರಗೆ

ಕೋಣನೆಂಬುವ ನಾಮಮಂತ್ರವ ಪೇಳಿ ಕಳುಹಿದನು

ಮಾಣದಲೇ ತಾನಿತ್ಯ ಜಲಧರ

ಕೋಣ ಕೋಣವು ಎಂದು ಜಪಿಸಿದ

ವಾಣಿ ಸಿದ್ಧಿಯಯೆಯ್ದು ಕಾಲನ ಕೋಣ ಕಂಗೊಳಿಸೆ//೭//


ಕೆತ್ತಕತ್ತಲುಮೊತ್ತವೋ ಬಲ-

ವತ್ತರಾಂಜನರಾಶಿಯೋ ನಗ-

ಕುತ್ತುಮೋತ್ತಮ ನೀಲಪರ್ವತವೇನೋ ಪೇಳ್ವರ್ಗೆ

ಚಿತ್ತತೋಚದ ತೆರದಿ ಕಾಲನ

ಮತ್ತವಾಗಿಹ ಕೋಣ ಶೀಘ್ರದಿ

ಅತ್ತಲಿಂದಲಿ ಬಂದು ದೂತನ ಮುಂದೆ ಕಣ್ಗೆಸೆಯೆ//೮//


ದಂಡಧರನಾ ಕೋಣ ಕಣ್ಣಿಲಿ

ಕಂಡು ಪಾರ್ವನು ಮನದಿ ಭೀತಿಯ

ಗೊಂಡು ಗಡಗಡ ನಡುಗುತೀಪರಿ ಶ್ರಮವನೈದಿದನು

ಚಂಡಕೋಪವ ತಾಳಿ ಮಹಿಷವು

ಪುಂಡ ಎನ್ನನು ಕರೆದ ಕಾರಣ

ಖಂಡಿತೀಗಲೆ ಪೇಳೋ ನಿನಮನೋಬಯಕೆ ಪೂರ್ತಿಸುವೆ//೯//


ದ್ವಿಜ ಲುಲಾಯದ ವಚನಲಾಲಿಸಿ

ತ್ಯಜಿಸಿ ತಪವನು ತ್ವರದಿ ಬಂದೂ

ನಿಜಗುರೂತ್ತಮರಾದ ವ್ಯಾಸರ ನಮಿಸಿ ತಾ ನುಡಿದ

ದ್ವಿಜನೆ ಪೇಳೆಲೋ ಮಹಿಷಪತಿಗೆ

ದ್ವಿಜವರೂಢನ ಪಾದಪಂಕಜ

ಭಜನೆಗನುಕೂಲವಾದ ಕಾರ್ಯವ ಮಾಡು ನೀಯೆಂದೂ//೧೦//


ಕೆರೆಯ ಒಳಗಿಹದೊಂದು ಉರುಶಿಲೆ

ನರರಿಗಸದಳವೆನಿಸುತಿರ್ಪುದು

ಕರೆದು ಕೋಣಕೆ ಪೇಳಿ ಶಿಲೆಯನು ತೆಗಿಸು ತ್ವರದಿಂದ

ಗುರುಗಳಾಡಿದ ವಚನ ಶಿರದಲಿ

ಧರಿಸಿ ದ್ವಿಜ ತಾ ಬಂದು ಕೋಣಕೆ

ಅರಿಕೆ ಮಾಡಿದ ಗುರುಗಳೋಕ್ತಿಯ ನೀನೆ ಮಾಡೆಂದಾ//೧೧//


ಪೇಳಿದಾ ದ್ವಿಜವರನ ವಚನವ

ಕೇಳಿದಾಕ್ಷಣ ಶಿಲೆಯ ತಾನೂ

ಸೀಳಿ ಬಿಸುಟಿತು ಸುಲಭದಿಂದಲಿ ಏನು ಅಚ್ಚರವೋ

ಕೇಳು ದ್ವಿಜವರ ಮತ್ತೆ ಕಾರ್ಯವ

ಪೇಳು ಮಾಡುವೆ ನೀನೆ ಕರೆಯಲು

ವ್ಯಾಳ್ಯದಲಿ ನಾ ಬಂದು ಮಾಡುವೆನೆಂದು ತಾ ನುಡಿದು//೧೨//


ನಡಿಯಲಾ ಯಮರಾಯ ಕೋಣವು

ಬಡವ ದ್ವಿಜನಿಗೆ ಮುನಿಯ ಒಲಿದೂ

ಮಡದಿ ಮಕ್ಕಳು ವೃತ್ತಿ ಕ್ಷೇತ್ರವು ಕನಕ ಮನಿಧನವು

ದೃಢ ಸುಭಕುತಿ ಜ್ಞಾನವಿತ್ತೂ

ಪೊಡವಿತಳದಲಿ ಪೊರೆದು ಹರಿಪದ-

ಜಡಜಯುಗದಲಿ ಮನವನಿತ್ತೂ ಗತಿಯ ಪಾಲಿಸಿದಾ//೧೩//


ಏನು ಮಹಿಮೆಯೋ ವ್ಯಾಸರಾಯರ

ಏನು ಪುಣ್ಯದ ಪ್ರಭವೊ ಲೋಕದಿ

ಏನು ಪೂಜ್ಯನೋ ಆವದೇವ ಸ್ವಭಾವಸಂಭವನೋ

ಏನು ಪೂರ್ವದ ತಾಪದ ಫಲವೋ

ಏನು ಹರಿಪದ ಪೂಜ ಫಲವೋ

ಏನು ದೈವವೋ ಇವರ ಕರುಣದಿ ಜಗಕೆ ಅಖಿಳಾರ್ಥ//೧೪//


ಇಂದ್ರ ತಾನೈಶ್ಚರ್ಯದಿಂದಲಿ

ಚಂದ್ರ ತಾ ಕಳೆಪೂರ್ತಿಯಿಂದ

ದಿನೇಂದ್ರ ತಾ ನಿರ್ದೊಷತನದಲಿ ಮೆರೆವ ನೀ ತೆರದಿ

ಮಂದ್ರಗಿರಿಧರ ಹರಿಯ ಕರಣವು

ಸಾಂದ್ರವಾದುದರಿಂದ ತಾನೇ ಯತೀಂದ್ರ

ಮಹಿಮೆಯಗಾಧವಾಗಿಹುದೆಂದು ಜನಹೊಗಳೆ//೧೫//


ವ್ಯಾಸಸಾಗರವೆಂಬ ವಿಮಲ

ಜಲಾಶಯವ ತಾ ಮಾಡಿ ದಿನದಿನ

ಕೀಶನಾಥನ ಸೇವೆ ಮಾಡುತ ದೇಶದಲಿ ಮೆರೆವಾ

ಶೇಷಗಿರಿಯನು ಸಾರ್ದು ವೇಂಕಟ

ಈಶ ಮೂರ್ತಿಯ ಪೂಜಿ ಸಂತತ

ಆಶೆಯಿಲ್ಲದೆ ಗೈದು ದ್ವಾದಶವರುಷ ಬಿಡದಂತೆ//೧೬//


ಇಳಿದು ಗಿರಿಯನು ಧರಣಿತಳದಲಿ

ಮಲವು ಮೂತ್ರವು ಮಾಡಿ ಮತ್ತೂ

ಜಲದಿ ಸ್ನಾನವಗೈದು ಪಾಠವ ಪೇಳಿ ಹರಿಪೂಜಾ

ಇಳೆಯ ಸುರವರಸಂಘ ಮಧ್ಯದಿ

ಬೆಳಗುತಿಪ್ಪನು ವ್ಯಾಸಮುನಿಯೂ

ಕಳೆಗಳಿಂದಲಿ ಪೂರ್ಣಚಂದಿರ ನಭದಿ ತೋರ್ಪಂತೆ//೧೭//


ತಿರುಪತೀಶನ ಕರುಣಪಡದೀ

ಧರೆಯಮಂಡಲ ಸುತ್ತುತಾಗಲೆ

ಧುರದಿ ಮೆರೆವಾ ಕೃಷ್ಣರಾಯನ ಸಲಹಿ ಮುದವಿತ್ತ

ಧರೆಗೆ ದಕ್ಷಿಣಕಾಶಿಯೆನಿಸುವ

ಪರಮಪಾವನ ಪಂಪಕ್ಷೇತ್ರಕೆ

ಸುರವರೇಶನ ದಿಗ್ವಿಭಾಗದಲಿರುವ ಗಿರತಟದಿ//೧೮//


ಮೆರೆವ ಚಕ್ರಸುತೀರ್ಥ ತೀರದಿ

ಇರುವ ರಘುಕುಲರಾಮದೇವನು

ಪರಮಸುಂದರ ಸೂರ್ಯಮಂಡಲವರ್ತಿ ಎನಿಸಿಪ್ಪ

ತರುಣನಾರಾಯಣನ ಮೂರುತಿ

ಗಿರಿಯೊಳಿಪ್ಪನು ರಘುನಾಥನು

ವರಹದೇವನು ಪೂರ್ವಭಾಗದಿ ಇರುವನಾಸ್ಥಳದಿ//೧೯//


ಹರಿಯುಯಿಲ್ಲದ ಸ್ಥಳದಲಿರುತಿಹ

ಹರಿಯು ಪೂಜೆಗೆ ಅರ್ಹನಲ್ಲವೊ

ಹರಿಯ ಸ್ಥಾಪನ ಮುಖ್ಯಮಾಳ್ಪುದು ಎನುತ ಯತಿನಾಥ

ಗಿರಿಯ ಮಧ್ಯದಿ ಮರುತರೂಪವನಿರಿಸಿ

ಪೂಜೆಯಮಾಡಿ ಪರಿಪರಿ

ಸುರಸ ಪಕ್ವ ಸುಭಕ್ಷ್ಯಭೋಜನ ಕನಕ ದಕ್ಷಿಣವಾ//೨೦//


ಧರಣಿಸುರಗಣಕಿತ್ತು ಗುರುವರ

ಸ್ಮರಣೆ ಮಾಡುತ ನಿದ್ರೆ ಮಾಡಲು

ಬರುತ ಮರುದಿನ ನೋಡೆ ಕಪಿವರಮೂರ್ತಿ ಕಾಣದಲೆ

ಭರದಿ ಅಚ್ಚರಿಗೊಂಡು ಸಂಯಮಿವರನು

ಮನದಲಿ ಯೋಚಿಸೀಪರಿ

ಮರಳಿ ಪ್ರಾಣನ ಸ್ಥಾಪಿಸೀತರ ಯಂತ್ರಬಂಧಿಸಿದ//೨೧//


ಕೋಣಷಟ್ಕದ ಮಧ್ಯ ಮುಖ್ಯ-

ಪ್ರಾಣದೇವನ ನಿಲಿಸಿ ವಲಯದಿ

ಮಾಣದಲೇ ಕಪಿಕಟಕ ಬಂಧಿಸಿ ಬೀಜವರಣಗಳ

ಜಾಣತನದಲಿ ಬರೆದು ತ್ರಿಜಗ-

ತ್ರಾಣದಲ್ಲೇ ನಿಲಿಸಿ ಪೂಜಿಸಿ

ಕ್ಷೋಣಿತಳದಲಿ ಕರೆದ ಯಂತ್ರೋದ್ಧಾರ ನಾಮದಲಿ//೨೨/


ದಿನದಿ ಚಕ್ರಸುತೀರ್ಥ ಸ್ನಾನವ

ಇವನ ಉದಯದಿ ಮಾಡಿ ಆಹ್ನಿಕ

ಮನದಿ ಬಿಂಬನ ಪೂಜೆಗೋಸುಗ ಪಿರಿಯ ಗುಂಡೇರಿ

ಪ್ರಣವಪೂರ್ವಕ ಆಸನೋಪರಿ

ಮನಸುಪೂರ್ವಕ ಕುಳಿತು ಹರಿಪದವನಜ

ಭಜಿಸುತ ದಿನದಿ ಸಾಧನ ಘನವು ಮಾಡಿದನು//೨೩//


ಈ ತೆರದಿ ಶ್ರೀವ್ಯಾಸಮುನಿಯೂ

ವಾತದೇವನ ಭಜಿಸುತಿರಲಾ

ಭೂತಕಾಲದಲಿಂದ ಚಕ್ರಸುತೀರ್ಥದೊಳಗಿಪ್ಪ

ನೀತ ಸಿರಿ ಗುರುಮಧ್ವರಾಯನ

ಈತ ಮೇಲಕೆ ತಂದು ಪೂಜಿಸಿದಾತ

ಗುರುಜಗನ್ನಾಥವಿಠಲನ ಪ್ರೀತಿಗೊಳಗಾದ//೨೪//


//ಇತಿ ಶ್ರೀ ರಾಘವೇಂದ್ರ ವಿಜಯ ಪಂಚಮ ಸಂಧಿ ಸಮಾಪ್ತಂ//

No comments:

Post a Comment