Tuesday, March 5, 2013

ರಾಘವೇಂದ್ರ ವಿಜಯ - ದ್ವಿತೀಯ ಸಂಧಿ

ದ್ವಿತೀಯ ಸಂಧಿ

ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//


ಆದಿಯುಗದಲಿ ಧರಣಿ ಮಾನಿನಿ

ಆದಿ ದೈತ್ಯರ ಬಾಧೆ ತಾಳದೆ

ವೇದನಂಘ್ರಿಯ ಸಾರ್ದು ತನ್ನಯ ವ್ಯಸನ ಪೇಳಿದಳು

ಆದಿಕವಿ ಚತುರಾಸ್ಯನೀಪರಿ

ಮೇದಿನೀ ಶ್ರಮವಚನ ಲಾಲಿಸಿ

ಬಾಧೆ ಪರಿಹರ ಮಾಳ್ಪೆನೆಂದೂ ನುಡಿದು ತಾ ನಡೆದ//೧//


ಶ್ವೇತದಿವಿಯನು ಸಾರ್ದು ಲಕುಮಿ

ಸಮೇತ ಹರಿಯನು ತುತಿಸಿ ಭೂಮಿಯ

ಭೀತಿ ತಾ ಪರಿಹರಿಸೋಗೋಸುಗ ಹರಿಯ ಬೆಸಗೊಂಡನಾಥ

ದಿತಜರ ಭಾರವತಿಶಯ

ಘಾತಿಪರು ತಾವಾರೋ ತಿಳಿಯೆನುತಾತ

ನೀ ಪರಿಹಾರ ಮಾಡೀ ಭೀತಿ ಬಿಡಿಸುವುದು//೨//


ಪುರುಟಲೋಚನ ಸ್ವರ್ಣಕಶಿಪು

ಉರುಟು ದೈತ್ಯರು ಸರ್ವಜನರನ

ಚರಟ ಹಾರಿಸಿ ಸಕಲಲೋಕಕೆ ದುಃಖ ಕೊಡುತಿಹರು

ಉರುಟು ಮಾತುಗಳಲ್ಲ ಶಿರದಲಿ

ಕರದ ಸಂಪುಟ ಮಾಡಿ ಬೇಡುವೆ

ಜರಠ ದೈತ್ಯರ ತರಿದು ಭೂಮಿಗೆ ಸುಖವ ನೀಡೆoದೆ//೩//


ಚತುರವದನನ ವಚನ ಕೇಳೀ

ಚತುರಭುಜ ತಾನಾದ ಹರಿಯೂ

ಚತುರತನದಲಿ ತಾನೆ ಸಂಹಾರಮಾಳ್ಪೆ ಚತುರಾಸ್ಯ

ಧೃತದಿ ನಡೆಯಲೋ ನಿನ್ನ ಸ್ಥಾನಕೆ

ಯತನ ಮಾಡುವೆ ಶೀಘ್ರವಾಗೀ

ಜತನ ಮಾಡೆಲೋ ಎನ್ನ ವಚನವು ಎಂದಿಘುಸಿಯಲ್ಲ//೪//


ತಾನೇ ಅವತಾರ ಮಾಡೋಗೋಸುಗ

ಏನು ನೆವನವ ಮಾಡಲೆಂದೂ

ನಾನ ಯೋಚನೆ ಮಾಡಿ ಯುಕುತಿಯ ತೆಗೆದ ಹರಿ ತಾನು

ಸಾನುರಾಗದಿ ಸೇವೆ ಮಾಡುತ

ಧೀನದೊಳಗಿರುತಿಪ್ಪ ವಿಷ್ವಕ್ಸೇನನಾಮಕ

ವಾಯುಪುತ್ರನು ಶೇಷನವತಾರ//೫//


ಎಂದಿಗಾದರು ನಿನ್ನೊಳಿಪ್ಪೆನು

ನಂದದಲೆ ನಾ ಪಂಚರೂಪದಿ

ಕುಂದದಲೆ ತಾ ಮಿನುಗುತಿಪ್ಪುದು ಪ್ರಾಣನಾವೇಶ

ಪೊಂದಿ ಶೋಭಿತನಾಗಿ ಈ ಪುರದಿಂದ

ಜಾಗ್ರತಿ ಭೂಮಿತಳಕೆ

ಇಂದು ನೀ ನಡಿಯೆಂದು ಶ್ರೀಹರಿ ನುಡಿದ ದೂತನಿಗೆ//೬//


ಸ್ವಾಮಿ ಲಾಲಿಸೋ ನಿನ್ನ ಶುಭತಾಮ-

ಧಾಮ ಶ್ರೀವೈಕುಂಠದಲಿ

ಆ ಮಹತ್ತರ ದುಃಖ ನೀಡುವ ಲೋಕ ನಾನೊಲ್ಲೆ

ಶ್ರೀ ಮನೋಹರ ದೂತನೊಚನವ

ಸೀಮವಿಲ್ಲದೆ ಎನಗೆ ನುಡಿದತಿ

ತಾಮಸಾತ್ಮಕ ದೈತ್ಯಕುಲದಲಿ ಜನಿಸು ಪೋಗೆಂದ//೭//


ಎನ್ನ ಶಾಪದಲಿಂದ ನೀ ತ್ವರಮುನ್ನ

ಪುಟ್ಟೆಲೊ ದೈತ್ಯರಾಗ್ರಣಿ

ಸ್ವನ್ನಕಶಿಪುನ ಧರ್ಮಸತಿಯಳ ಜಠರ ಮಂದಿರದಿ

ನಿನ್ನಗೋಸುಗ ನಾನೇ ನರಮೃಗ

ಘನ್ನ ರೂಪವ ತಾಳಿ ಅಸುರನ

ಚನ್ನವಾಗೀ ಸದೆದು ಲೋಕದಿ ಕೀರ್ತಿ ನಿನಗಿಪ್ಪೆ//೮//


ಅಂದ ಶ್ರೀಹರಿ ನುಡಿಯ ಮನಕೇ

ತಂದು ವಿಷ್ವಕ್ಸೇನ ಮೊದಲೇ

ಬಂದು ಜನಿಸಿದನಸುರ ನಿಜಸತಿಯುದರದೇಶದಲಿ

ತಂದೆ ಸಂಭ್ರಮದಿಂದ ತನ್ನಯ

ಕಂದನನು ತಾ ಊರು ದೇಶದಿ

ತಂದು ಕೂಡಿಸಿ ಕೇಳ್ದಸುರರೊಳಗಾವನುತ್ತಮನು//೯//


ವಾರಿಜಾಸನ ವಿಷ್ಣು ಪಶುಪತಿ

ಮೂರು ಜನರೊಳಗಾವನುತ್ತಮನು

ಧೀರ ನೀ ಪೇಳೆನಗೆ ಎನುತಲಿ ತಾನೆ ಬೆಸಗೊಂಡ

ಸೂರಿ ತಾ ಪ್ರಹ್ಲಾದ ನುಡಿದನು

ನಾರಾಯಣನ ಉಳಿದು ಸುರರೊಳು

ಆರು ಉತ್ತಮರಿಲ್ಲವೆಂದಿಗು ಹರಿಯೇ ಉತ್ತಮನು//೧೦//


ಸರ್ವಗುಣಗಣಪೂರ್ಣ ಸರ್ವಗ

ಸರ್ವಪಾಲಕ ದೇವ ಸರ್ವಗ

ಸರ್ವಾಂತರ್ಯಾಮಿ ತಾನೇ ಸ್ವತಂತ್ರ ಪರಿಪೂರ್ಣ

ಶರ್ವಮೊದಲಾಧಾಮರರೆಲ್ಲರು

ಸರ್ವಕಾಲದಿ ಹರಿಯಧೀನರು

ಸರ್ವಲೋಕಕೆ ಸಾರ್ವಭೌಮನು ಲಕುಮಿ ವಲ್ಲಭನು//೧೧//


ಸುತನ ಮಾತನು ಕೇಳಿ ದೈತ್ಯರ

ಪತಿಯು ಕೋಪದಿ ತೋರಿಸೆನಲೂ

ವಿತತನಾ ಹರಿ ಸರ್ವದೇಶದಿ ಇರುವ ನೋಡೆಂದಾ

ಪತಿತದೈತ್ಯನು ಕಂಬ ತೋರೀ

ಯತನ ಪೂರ್ವಕ ಬಡಿಯಲಾಕ್ಷಣ

ಶ್ರೀತನ ವಚನವ ಸತ್ಯಮಾಡುವೆನೆಂದು ತಾ ಬಂದ//೧೨//


ನರಮೃಗಾಕೃತಿ ತಾಳಿ ದುರುಳನ

ಕರುಳು ಬಗಿದಾ ನಾರಸಿಂಹನು

ತರುಳ ನಿನ್ನನು ಪೊರೆದನಾಗಲೆ ಋಣವಾರಿಧಿಯು

ಸರಳ ಎನ್ನನು ಕಾಯೋ ಭವದೊಳು

ಮರುಳಮತಿ ನಾನಾಗಿ ಸಂತತ

ಇರುಳುಹಗಲೊಂದಾಗಿ ಪರಿಪರಿಮಾಳ್ಪೆ ದುಷ್ಕರ್ಮ//೧೩//


ಆ ಯುಗದಿ ಪ್ರಹ್ಲಾದನಾಮಕ

ರಾಯನೆನಿಸೀ ಹರಿಯ ಭಜಿಸೀ

ತೋಯನಿಧಿಪರಿವಸನಮಂಡಲವಾಳ್ದೆ ಹರಿ ಬಲದಿ

ರಾಯಕುಲದಲಿ ಸಾರ್ವಭೌಮನಜೇಯ

ಮಹಿಮನು ಸತತ ಜಗದಲಮೇಯ

ದಿಷಣನುಯೆಂದು ಸುರಮುನಿ ಮಾಡ್ದನುಪದೇಶ//೧೪//


ಗರ್ಭದಲೆ ಪರತತ್ತ್ವ ಪದ್ಧತಿ

ನಿರ್ಭಯದಿ ನೀ ತಿಳಿದು ಆ

ವೈದರ್ಭಿರಮಣನೆ ಸರ್ವರುತ್ತಮನೆಂದು ಸ್ಥಾಪಿಸಿದೆ

ದುರ್ಭಗಾಧಿಕವಾದವಗೆ

ಸಂದರ್ಭವಾಗೊದೆ ನಿನ್ನ ಸೇವಾ

ನಿರ್ಭರಾಗದು ನಿನ್ನ ಜನರಿಗೆ ಸುಲಭವಾಗಿಹದೋ//೧೫//


ದಿತಿಜ ಬಾಲರಿಗೆಲ್ಲ ತತ್ತ್ವದಿ

ಮತಿಯ ಪುಟ್ಟಿಸಿ ನಿತ್ಯದಲಿ

ಶ್ರೀಪತಿಯೆ ಸರ್ವೋತ್ತಮನುಯೆಂಬೀ ಜ್ಞಾನ ಬೋಧಿಸಿದೆ

ಇತರ ವಿಷಯ ವಿರಕ್ತಿ ಪುಟ್ಟಿತು

ಮತಿ ವಿಚಾರಾಸಕ್ತರಾದರು

ಸಿತನಸುತರೂ ಪೇಳ್ದುದೆಲ್ಲನು ಮನಕೆ ತರಲಿಲ್ಲ//೧೬//


ನಿನ್ನ ಮತವನುಸರಿಸಿ ಬಾಲರು

ಘನ್ನ ಬೋಧ ಸುಭಕ್ತಿ ಪಡೆದರು

ಧನ್ಯರಾದರು ಹರಿಯ ಭಕುತರು ಎನಿಸಿ ತಾವಂದು

ನಿನ್ನ ಮಹಿಮೆಗೆ ನಮನ ಮಾಡುವೆ

ಎನ್ನ ಪಾಲಿಸೊ ಭವದಿ ಪರಿಪರಿ

ಬನ್ನ ಬಡುವೆನೋ ದಾರಿಗಾಣದೆ ನಿನ್ನ ನಂಬಿದೆನೋ//೧೭//


ಪರಮಪಾವನರೂಪಿ ನೀನೂ

ಹರಿಯ ಶಾಪದಿ ಅಸುರಭಾವವ

ಧರಿಸಿ ದೈತ್ಯನು ಎಣಿಸಿಕೊಂಡೆಯೊ ಸುರವರೋತ್ತಮನು

ಹರಿಗೆ ಹಾಸಿಗೆಯಾದಕಾರಣ

ಹರಿವಿಭೂತಿಯ ಸನ್ನಿಧಾನವು

ನಿರುತ ನಿನ್ನಲಿ ಪೇರ್ಚಿ ಮೆರೆವದು ಮರುತನೊಡಗೂಡಿ//೧೮//


ಪ್ರಾಣನಿಹ ಪ್ರಹ್ಲಾದನೊಳಗೆ

ಅಪಾನನಿಹ ಸಹ್ಲಾದನೊಳು ತಾ

ವ್ಯಾನನಿಹ ಕಹ್ಲಾದನೊಳುದಾನ ನಿಂತಿಹನೂ

ದಾನವಾಗ್ರಣಿ ಹ್ಲಾದನೊಳು

ಸಮಾನ ತಾನನುಹ್ಲಾದನೊಳಗೆ

ಶ್ರೀನಿವಾಸನ ಪ್ರಾಣ ಭಜಿಸುವ ಪಂಚರೂಪದಲಿ//೧೯//


ಐವರೊಳು ಹರಿ ವಾಯು ಕರುಣವು

ಈ ವಿಧಾನದಿ ಪೇರ್ಚಿ ಇರುವುದು

ಆವ ಜನ್ಮದ ಪುಣ್ಯಫಲವೋ ಅರಿಗಳವಲ್ಲ

ದೇವದೇವನು ನಿನ್ನಧೀನನು

ಆವ ಕಾಲಕು ತೊಲಗನಾತನು

ಸೇವಕಾಗ್ರಣಿ ತೆರದಿ ನಿಮ್ಮನು ಕಾದುಕೊಂಡಿಹನು//೨೦//


ಲಕುಮಿ ನಿನ್ನನು ಎತ್ತಿತೋರಲು

ಸಕಲ ಸುರವರರೆಲ್ಲ ನೋಡಲು

ಭಕ್ತವತ್ಸಲನಾದ ನರಹರಿ ನಿನಗೆ ವಶನಾಗೆ

ವ್ಯಕ್ತವಾಯಿತು ನಿನ್ನ ಮಹಿಮೆಯು

ನಿಖಿಳ ಸುರವರರೆಲ್ಲ ಪೊಗಳಲು

ಭಕ್ತಿಪೂರ್ವಕ ಕರೆದರಾಗಲೇ ಕುಸುಮ ವೃಷ್ಟಿಯನು//೨೧//


ದೇವ ದುಂದುಭಿ ವಾದ್ಯನಭದಲಿ

ತೀವಿತಾಗಲೆ ದಿವಿಜರೆಲ್ಲರು

ಭಾವಿಸೀಪರಿ ಜಯತು ಜಯಜಯವೆನುತ ನಿಂತಿಹರು

ಈ ವಸೂಮತಿ ತಳಕೆ ನರವರ

ದೇವ ಪಟ್ಟವಗಟ್ಟಿ ರಾಜ್ಯವ

ಓವಿಸೂವದು ಎಂದು ಸುರಗುರು ಬೊಮ್ಮ ಪೇಳಿದನು//೨೨//


ರಾಯ ರಾಜ್ಯವ ಮಾಡುತಿರಲು

ನ್ಯಾಯವಿಲ್ಲದೆ ಸರ್ವಜನರೂ

ನ್ಯಾಯಮಾರ್ಗದಿ ನಡೆದರಾಗಲೇ ರಾಜನಾಜ್ಞದಲಿ

ಮಾಯ ಠಕ್ಕೂ ಠವಳಿ ಮಸಿಗಳ

ರಾಯ ಮೊದಲಾಗಿಪ್ಪ ದೋಷವು

ರಾಯಜಾತನ ಉರುಬು ಜನರಲಿ ಜನಿಸಿದಾ ಪುರದಿ//೨೩//


ರಾಜಕಾರ್ಯವ ಭರದಿ ಮಾಡುತ

ವಾಜಿಮೇಧದ ಶತಕ ಪೂರ್ತಿಸಿ

ರಾಜರಾಜರ ತೇಜೋನಿಧಿ ತಾನೆನಿಸಿ ರಾಜಿಸಿದ

ಮಾಜದಲೆ ಶ್ರೀಹರಿಯ ಪದಯುಗ

ಪೂಜೆ ಮಾಡಿದ ಪುಣ್ಯಬಲದಿ

ವಿರಾಜಮಾನ ಮಹಾನುಭಾವನು ಲೋಕಮೂರರಲಿ//೨೪//


ಸಾಧು ಜನತತಿಪೋಷ ಶುಭತಮವಾದ

ಧೃತನಿಜವೇಷ ಸಂತತ

ಮೋದಮಯ ಸತ್ಯಾಯ ನಿರ್ಜಿತದೋಷ ಗುಣಭೂಷಾ

ಪಾದ ಭಜಿಸಲು ಇಚ್ಛೆ ಪೂರ್ತಿಪನಾದಿ

ಕಾಲದಲಿಂದ ಜನಕೆ ಬೋಧಸುಖ

ಮೊದಲಾದ ವಿಧವಿಧ ಪೂರ್ಣಫಲ ನೀಡ್ದ//೨೫//


ದಿತಿಜರೆಲ್ಲರು ನಿನ್ನ ಗೋವಿನ

ಸುತನ ಮಾಡೀ ಸರ್ವರಸಗಳ

ಮಿತಿಯುಯಿಲ್ಲದೆ ಧರೆಯ ಗೋವಿನ ಮಾಡಿ ಕರೆಸಿದರು

ರತುನ ಹೇಮ ಸುಮೌಕ್ತಿಕಾವಳಿತತಿಯ

ಸಂತತಯೈಯ್ದಿ ಭೋಗದಿ

ವಿತತರಾದರು ನಿನ್ನ ಕರುಣವಯೆಂತು ವರ್ಣಿಸಲಿ//೨೬//


ನಿನ್ನ ನಂಬಿದ ಜನಕೆ ನ್ಯೂನತಿ

ಇನ್ನು ದಾವಿಧದಿಂದ ಬಾರದು

ಉನ್ನತಾಗೊದು ನಿಖಿಳ ಭಾಗ್ಯವು ಮಿತಿಯುಯಿಲ್ಲದಲೆ

ಘನ್ನ ನಿನ್ನಯ ಪಾದಯುಗಳವ

ಮನ್ನದಲೆ ನಾ ಭಜಿಪೆ ಸರ್ವದ

ಎನ್ನ ಪಾಲಿಸುಯೆಂದು ಪ್ರಾರ್ಥನೆ ಮಾಡಿ ಬೇಡುವೆನು//೨೭//


ಗೋವು ಪಂಕದಿ ಮಗ್ನವಾಗಿರೆ

ಕಾವನರನನ್ನು ಕಾಣದೀಪರಿ

ಧಾವಿಶ್ಯಾಗಲೆ ಬಪ್ಪ ನರನಿಗೆ ಉಸರಲದನವನು

ಭಾವಿಶ್ಯಾಕ್ಷಣ ವ್ಯಸನ ಕಳೆಯದೆ

ತೀವಿ ಕೊಂಡದರಲ್ಲಿ ಮುಳುಗಿಸೆ

ಗೋವು ಮಾಡುವುದೇನು ದೇವನೆ ನೀನೆ ಪಾಲಕನು//೨೮//


ಸ್ವಾತಿವೃಷ್ಟಿಗೆ ಬಾಯಿ ತೆರೆದಿಹ

ಚಾತಕಾಸ್ಯದೊಳಗ್ನಿಕಣ ಜೀಮೂತನಾಥನು

ಗೆರೆಯಲಾಕ್ಷಣ ಅದರ ತಪ್ಪೇನೋ

ನೀತ ಗುರುವರ ನೀನೆ ಎನ್ನನು

ಪ್ರೀತಿಪೂರ್ವಕ ಪಾಲಿಸೆಂದೆಡೆ

ಮಾತು ಲಾಲಿಸದಿರಲು ಎನ್ನಯ ಯತನವೇನಿದಕೆ//೨೯//


ಜನನಿ ತನಯಗೆ ವಿಷವ ನೀಡಲು

ಜನಕ ತನಯರ ಮಾರಿಕೊಳ್ಳಲು

ಜನಪ ವೃತ್ತಿ ಕ್ಷೇತ್ರ ಕಳೆದರೆ ಅರಿಗುಸರುವದೂ

ಘನ ಶಿರೋಮಣಿ ನೀನೆ ಎನ್ನನು

ಮನಕೆ ತಾರದೆ ದೂರ ನೋಡಲು

ಇನತೆ ಶ್ರಮವನು ಕಳೆದು ಪಾಲಿಪರಾರೋ ಪೇಳೆನಗೆ//೩೦//


ನಿನಗೆ ತಪ್ಪದು ಎನ್ನ ಕಾಯ್ವದು

ಎನಗೆ ತಪ್ಪದು ನಿನ್ನ ಭಜಿಸೋದು

ಜನುಮ ಜನುಮಕೆ ಸಿದ್ಧವೆಂದಿಗು ಪುಸಿಯ ಮಾತಲ್ಲ

ಕನಸಿಲಾದರು ಅನ್ಯದೇವರ

ನೆನಿಸನೆಂದಿಗು ನಿನ್ನ ಪದಯುಗ

ವನಜವಲ್ಲದೆ ಪೆರತೆ ಎನಗೇನು೦ಟೋ ಸರ್ವಜ್ಞ//೩೧//


ಭೀತಿಗೊಳಿಸುವ ಭವದ ತಾಪಕೆ

ಭೀತನಾದೆನೋ ಎನ್ನ ಪಾಲಿಸೊ

ಭೂತನಾಥನು ಭವದಿ ತೊಳಲುವ ಎನ್ನ ಪಾಡೇನು

ಭೂತದಯಪರನಾದ ಕಾರಣ

ಭೂತಿ ನೀ ಎನಗಿತ್ತು ಭವಭಯ

ಭೀತಿಪರಿಹರ ಮಾಡೋ ಗುರುಜಗನ್ನಾಥವಿಠಲನೆ//೩೨//


//ಇತಿ ಶ್ರೀ ರಾಘವೇಂದ್ರ ವಿಜಯ ದ್ವಿತೀಯ ಸಂಧಿ ಸಮಾಪ್ತಂ//

No comments:

Post a Comment