//ಶ್ರೀ ಫಲಶ್ರುತಿ ಸಂಧಿ//
ಶ್ರೀ ಜಗನ್ನಾಥ ದಾಸಾರ್ಯರ ಪರಮ ಮುಖ್ಯ
ಶಿಷ್ಯರಾದ ಶ್ರೀ ಶ್ರೀದವಿಠಲರು (ಕರ್ಜಿಗಿ ದಾಸರಾಯರು) ರಚಿಸಿದ
ಶ್ರೀಮದ್ ಹರಿಕಥಾಮೃತಸಾರದ ಫಲಸ್ತುತಿ ಸಂಧಿ
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//
ಹರಿಕಥಾಮೃತಸಾರ ಶ್ರೀಮದ್ಗುರುವರ
ಜಗನ್ನಾಥ ದಾಸರ ಕರತಲಾಮಲಕವನೆ
ಪೇಳಿದ ಸಕಲ ಸಂಧಿಗಳ
ಪರಮ ಪಂಡಿತ ಮಾನಿಗಳು
ಮತ್ಸರಿಸಲೆದೆಗಿಚ್ಚಾಗಿ ತೋರುವುದರಿಸಕರಿಗಿದು
ತೋರಿ ಪೇಳುವದಲ್ಲ ಧರೆಯೊಳಗೆ//1//
ಭಾಮಿನೀ ಷಟ್ಪದಿಯ ರೂಪದಲೀ
ಮಹಾದ್ಭುತ ಕಾವ್ಯದಾದಿಯೊಳಾ
ಮನೋಹರ ತರತರಾತ್ಮಕ ನಾಂದಿ ಪದ್ಯಗಳ
ಯಾಮಯಾಮಕೆ ಪಠಿಸುವವರ
ಸುಧಾಮಸ ಕೈಪಿಡಿಯಲೋಸುಗ
ಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯಕೇನೆಂಬೆ//2//
ಸಾರವೆಂದರೆ ಹರಿಕಥಾಮೃತ
ಸಾರವೆಂಬುದೆಮ್ಮ ಗುರುವರ
ಸಾರಿದಲ್ಲದೆ ತಿಳಿಯದೆನುತ ಮಹೇಂದ್ರ ನಂದನನ
ಸಾರಥಿಯ ಬಲಗೊಂಡು ಸಾರಾ
ಸಾರಗಳ ನಿರ್ಣೈಸಿ ಪೇಳ್ದನು
ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೋ//3//
ದಾಸವರ್ಯರ ಮುಖದಿ ನಿಂದು
ರಮೇಶನನು ಕೀರ್ತಿಸುವ ಮನದಭಿಲಾಷೆಯಲಿ
ವರ್ಣಾಭಿಮಾನಿಗಳೊಲಿದು ಪೇಳಿಸಿದ
ಈ ಸುಲಕ್ಷಣ ಕಾವ್ಯದೊಳಗ್ಯತಿ
ಪ್ರಾಸಗಳಿಗೆ ಪ್ರಯತ್ನವಿಲ್ಲದೆ
ಲೇಸುಲೇಸನೆ ಶ್ರಾವ್ಯ ಮಾಡುದೆ ಕುರುಹು ಕವಿಗಳಿಗೆ//4//
ಪ್ರಾಕೃತೋಕ್ತಿಗಳೆಂದು ಬರಿದೆ
ಮಹಾಕೃತಘ್ನರು ಜರಿವರಲ್ಲದೆ
ಸ್ವೀಕೃತವ ಮಾಡದಲೆ ಬಿಡುವರೇ ಸುಜನರಾದವರು
ಶ್ರೀಕೃತೀಪತಿ ಅಮಲ ಗುಣಗಳು
ಈ ಕೃತಿಯೊಳುoಟಾದ ಬಳಿಕ
ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಜನರಿಗೆ//5//
ಶ್ರುತಿಗೆ ಶೋಭನಮಾಗದಡೆ
ಜಡಮತಿಗೆ ಮಂಗಳವೀಯದಡೆ
ಶ್ರುತಿಸ್ಮ್ರುತಿಗೆ ಸಮ್ಮತವಾಗದಿದ್ದಡೆ ನಮ್ಮ ಗುರುರಾಯ
ಮಥಿಸಿ ಮಧ್ವಾಗಮ ಪಯೋಬ್ಧಿಯ
ಕ್ಷಿತಿಗೆ ತೋರಿದ ಬ್ರಹ್ಮ ವಿದ್ಯಾ
ರತರಿಗೀಪ್ಸಿತ ಹರಿಕಥಾಮೃತಸಾರವೆನಿಸುವುದು//6//
ಭಕ್ತಿವಾದದಿ ಪೇಳ್ದನೆಂಬ
ಪ್ರಸಕ್ತಿ ಸಲ್ಲದು ಕಾವ್ಯದೊಳು ಪುನರುಕ್ತಿ
ಶುಷ್ಕ ಸಮಾನ ಪದ ವ್ಯತ್ಯಾಸ ಮೊದಲಾದ
ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ
ವಿಭಕ್ತಿ ವಿಷಮಗಳಿರಲು
ಜೀವನ್ಮುಕ್ತ ಭೋಗ್ಯವಿದೆಂದು ಸಿರಿಮದನಂದ ಮೆಚ್ಚುವನೆ?//7//
ಆಶುಕವಿಕುಲ ಕಲ್ಪತರು
ದಿಗ್ದೇಶವರಿಯಲು ರಂಗನೊಲುಮೆಯ
ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬೆನು
ಈ ಸುಲಕ್ಷಣ ಹರಿಕಥಾಮೃತ
ಮೀಸಲರಿಯದೆ ಸಾರದೀರ್ಘ
ದ್ವೇಷಿಗಳಿಗೆರೆಯದಲೆ ಸಲಿಸುವದೆನ್ನ ಬಿನ್ನಪವ//8//
ಪ್ರಾಸಗಳ ಪೊಂದಿಸದೆ ಶಬ್ದ
ಶ್ಲೇಷಗಳ ಶೋಧಿಸದೆ ದೀರ್ಘ
ಹ್ರಾಸಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ
ದೂಷಕರು ದಿನದಿನದಿ ಮಾಡುವ
ದೂಷಣೆಯೆ ಭೂಷಣಗಳೆಂದುಪ
ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ//9//
ಅಶ್ರುತಾಗಮ ಇದರ ಭಾವ
ಪರಿಶ್ರಮವು ಬಲ್ಲವರಿಗಾನಂದಾಶ್ರುಗಳ
ಮಳೆಗರೆಸಿ ಮರೆಸುವ ಚಮತ್ಕ್ರುತಿಯ
ಮಿಶ್ರರಿಗೆ ಮರೆ ಮಾಡಿ ದಿವಿಜರ
ಜಸ್ರದಲಿ ಕಾಯ್ದಿಪ್ಪರಿದರೊಳು
ಪಃಶ್ರುತಿಗಳೈತಪ್ಪವೇ ನಿಜ ಭಕ್ತಿ ಉಳ್ಳವರಿಗೆ//10//
ನಿಚ್ಚ ನಿಜಜನ ನೆಚ್ಚ ನೆಲೆಗೊಂಡಚ್ಚ
ಭಾಗ್ಯವು ಪೆಚ್ಚ ಪೇರ್ಮೆಯು
ಕೆಚ್ಚ ಕೇಳ್ವನು ಮೆಚ್ಚ ಮಲಮರ ಮುಚ್ಚಲೆಂದೆನುತ
ಉಚ್ಚವಿಗಳಿಗೆ ಪೊಚ್ಚ ಪೊಸೆದನ
ಲುಚ್ಚರಿಸದೀ ಸಚ್ಚರಿತ್ರೆಯನುಚ್ಚರಿಸೆ
ಸಿರಿವತ್ಸ ಲಾಂಛನ ಮೆಚ್ಚಲೇನರಿದು//11//
ಸಾಧು ಸಭೆಯೊಳು ಮೆರೆಯೆ ತತ್ವ
ಸುಬೋಧ ವೃಷ್ಟಿಯಗರೆಯೆ ಕಾಮಕ್ರೋಧ
ಬೀಜವು ಹುರಿಯೆ ಖಳರದೆ ಬಿರಿಯೆ ಕರಕರಿಯ
ವಾದಿಗಳ ಪಲ್ಮುರಿಯೆ ಪರಮ
ವಿನೋದಿಗಳ ಮೈಮರೆಯಲೋಸುಗ
ಹಾದಿತೋರಿದ ಹಿರಿಯ ಬಹುಚಾತುರ್ಯ ಹೊಸಪರಿಯ//12//
ವ್ಯಾಸತೀರ್ಥರೊಲವೆಯೊ ವಿಠಲೋಪಾಸಕ
ಪ್ರಭುವರ್ಯ ಪುರಂದರದಾಸರಾಯರ
ದಯವೋ ತಿಳಿಯದು ಓದಿ ಕೇಳದಲೆ
ಕೇಶವನ ಗುಣಮಣಿಗಳನು
ಪ್ರಾಣೇಶಗರ್ಪಿಸಿ ವಾದಿರಾಜರ
ಕೋಶಕೊಪ್ಪುವ ಹರಿಕಥಾಮೃತಸಾರ ಪೇಳಿದರು//13//
ಹರಿಕಥಾಮೃತಸಾರ ನವರಸಭರಿತ
ಬಹು ಗಂಭೀರ ರತ್ನಾಕರ
ರುಚಿರ ಶೃಂಗಾರ ಸಾಲಂಕಾರ ವಿಸ್ತಾರ
ಸರಸ ನರ ಕಂಠೀರವಾಖ್ಯಾರ್ಯರ
ಜನಿತ ಸುಕುಮಾರ ಸಾತ್ವೀಕರಿಗೆ
ಪರಮೋದಾರ ಮಾಡಿದ ಮರೆಯದುಪಕಾರ//14//
ಅವನಿಯೊಳು ಜ್ಯೋತಿಷ್ಮತೀ ತೈಲವನು
ಪಾಮರನುಂಡು ಜೀರ್ಣಿಸಲವನೆ
ಪಂಡಿತನೋಕರಿಪವಿವೇಕಿಯಪ್ಪಂತೆ
ಶ್ರವಣ ಮಂಗಳ ಹರಿಕಥಾಮೃತ
ಸವಿದು ನಿರ್ಗುಣಸಾರ ಮಕ್ಕಿಸಲವ
ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು//15//
ಅಕ್ಕರದೊಳೀ ಕಾವ್ಯದೊಳೊಂದಕ್ಕರವ
ಬರೆದೋದಿದವ ದೇವರ್ಕಳಿಂ
ದುಸ್ತಜ್ಯನೆನಿಸಿ ಧರ್ಮಾರ್ಥಕಾಮಗಳ
ಲೆಕ್ಕಿಸದೆ ಲೋಕೈಕನಾಥನ
ಭಕ್ತಿ ಭಾಗ್ಯವ ಪಡೆವ ಜೀವನ್ಮುಕ್ತಗಲ್ಲದೆ
ಹರಿಕಥಾಮೃತಸಾರ ಸೊಗಸುವದೆ//16//
ವತ್ತಿಬಹ ವಿಘ್ನಗಳ ತಡೆದಪ
ಮೃತ್ಯುವಿಗೆ ಮರೆಮಾಡಿ ಕಾಲನ
ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲ ಸಿದ್ಧಿಗಳ
ಎತ್ತಿಗೊಳ್ಳಿಸಿ ವನರುಹೇಕ್ಷಣ
ನ್ರುತ್ಯಮಾಡುವವನ ಮನೆಯೊಳು
ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ//17//
ಆಯುರಾರೋಗ್ಯೈಶ್ವರ್ಯ ಮಾಹಾಯಶೋ
ಧೈರ್ಯ ಬಲ ಸಮ ಸಹಾಯ
ಶೌರ್ಯೋದಾರ್ಯ ಗುಣಗಾಂಭೀರ್ಯ ಮೊದಲಾದ
ಆಯುತಗಳುಂಟಾಗಲೊಂದಧ್ಯಾಯ
ಪಠಿಸಿದ ಮಾತ್ರದಿಂ ಶ್ರವಣೀಯವಲ್ಲದೆ
ಹರಿಕಥಾಮೃತಸಾರ ಸುಜನರಿಗೆ//18//
ಕುರುಡ ಕಂಗಳ ಪಡೆವ ಬಧಿರನಿಗೆರೆಡು
ಕಿವಿ ಕೇಳ್ಬಹವು ಬೆಳೆಯದ
ಮುರುಡ ಮದನಾಕೃತಿಯ ತಾಳ್ವನು ಕೇಳ್ದ ಮಾತ್ರದಲಿ
ಬರಡು ಹೈನಾಗುವದು ಪೇಳ್ದರೆ
ಕೊರಡು ಪಲ್ಲೈಸುವದು ಪ್ರತಿದಿನ
ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ//19//
ನಿರ್ಜರ ತರಂಗಿಣಿಯೊಳನುದಿನ
ಮಜ್ಜನಾದಿ ಸಮಸ್ತ ಕರ್ಮ
ವಿವರ್ಜಿತಾಶಾಪಾಶದಿಂದಲಿ ಮಾಡಿದಧಿಕ ಫಲ
ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ
ಸಜ್ಜನರು ಶಿರತೂಗುವಂದದಿ
ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ//20//
ಸತಿಯರಿಗೆ ಪತಿಭಕುತಿ ಪತ್ನೀವ್ರತ
ಪುರುಷರಿಗೆ ಹರುಷ ನೆಲೆಗೊಂಡತಿ
ಮನೋಹರರಾಗಿ ಗುರು ಹಿರಿಯರಿಗೆ ಜಗದೊಳಗೆ
ಸತತ ಮಂಗಳವೀವ ಬಹು
ಸುಕೃತಿಗಳೆನಿಸುತ ಸುಲಭದಿಂ ಸದ್ಗತಿಯ
ಪಡೆವರು ಹರಿಕಥಾಮೃತಸಾರವನು ಪಠಿಸೆ//21//
ಎಂತು ಬಣ್ಣಿಸಲೆನ್ನಳವೆ
ಭಗವಂತನಮಲ ಗುಣಾನುವಾದಗಳೆಂತು
ಪರಿಯಲಿ ಪೂರ್ಣಬೋಧರ ಮತವ ಪೊಂದಿದರ
ಚಿಂತನಗೆ ಬಪ್ಪಂತೆ ಬಹು ದೃಷ್ಟಾಂತ
ಪೂರ್ವಕವಾಗಿ ಪೇಳ್ದ ಮಹಂತರಿಗೆ
ನರರೆಂದು ಬಗೆವರೆ ನಿರಯ ಭಾಗಿಗಳು//22//
ಮಣಿಖಚಿತ ಹರಿವಾಣದೊಳು ವಾರಣ
ಸುಭೋಜ್ಯ ಪದಾರ್ಥ ಕೃಷ್ಣಾರ್ಪಣವೆನುತ
ಪಸಿದವರಿಗೋಸುಗ ನೀಡುವಂದದಲಿ
ಪ್ರಣತರಿಗೆ ಪೊಂಗನಡ ವರ
ವಾನ್ಗ್ಮಣಿಗಳಿಂ ವಿರಚಿಸಿದ ಕೃತಿಯೊಳುಣಿಸಿ
ನೋಡುವ ಹರಿಕಥಾಮೃತಸಾರ ವನುದಾರ//23//
ದುಷ್ಟರೆನ್ನದೆ ದುರ್ವಿಷಯದಿಂ
ಪುಷ್ಟರೆನ್ನದೆ ಪೂತಕರ್ಮ
ಭ್ರಷ್ಟರೆನ್ನದೆ ಶ್ರೀದವಿಠಲ ವೇಣುಗೋಪಾಲ
ಕೃಷ್ಣ ಕೈಪಿಡಿವನು ಸುಸತ್ಯ
ವಿಶಿಷ್ಟ ದಾಸತ್ವವನು ಪಾಲಿಸಿ
ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ//24//
//ಇತಿ ಶ್ರೀ ಕರ್ಜಿಗಿ ದಸರಾಯ ವಿರಚಿತ ಫಲಶ್ರುತಿ ಸಂಧಿ ಸಂಪೂರ್ಣಂ//
//ಇತಿ ಶ್ರೀ ಕೃಷ್ಣಾರ್ಪಣಮಸ್ತು//
No comments:
Post a Comment