Tuesday, January 15, 2013

ಶ್ರೀ ಹರಿಕಥಾಮೃತಸಾರ - 10

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಸರ್ವಪ್ರತೀಕ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಆವ ಪರಬೊಮ್ಮನ ಅತಿವಿಮಲ ಅಂಗಾವ ಬದ್ಧರು ಎಂದೆನಿಪ

ರಾಜೀವಭವ ಮೊದಲಾದ ಅಮರರು ಅನುದಿನದಿ ಹರಿಪದವ ಸೇವಿಪರಿಗೆ

ಅನುಕೂಲರಲ್ಲದೆ ತಾವು ಇವರನು ಕೆಡಿಸಬಲ್ಲರೆ

ಶ್ರೀವಿಲಾಸಾಸ್ಪದನ ದಾಸರಿಗೆ ಉಂಟೆ ಅಪಜಯವು//1//


ಶ್ರೀದನ ಅಂಘ್ರಿ ಸರೋಜಯುಗಳ ಏಕಾದಶ ಸ್ಥಾನ ಆತ್ಮದೊಳಗಿಟ್ಟು

ಆದರದಿ ಸಂತುತಿಸಿ ಹಿಗ್ಗುವರಿಗೆ ಈ ನವಗ್ರಹವು

ಆದಿತೇಯರು ಸಂತತಾಧಿ ವ್ಯಾಧಿಗಳ ಪರಿಹರಿಸುತ ಅವರನ

ಕಾದುಕೊಂಡಿಹರು ಎಲ್ಲರೊಂದಾಗಿ ಈಶನ ಆಜ್ಞೆಯಲಿ//2//


ಮೇದಿನಿಯ ಮೇಲುಳ್ಳ ಗೋಷ್ಪಾದ ಉದಕಗಳು ಎಲ್ಲ ಆಮಲ ತೀರ್ಥವು

ಪಾದಪಾದ್ರಿ ಧರಾತಳವೆ ಸುಕ್ಷೇತ್ರ ಜೀವಗಣ ಶ್ರೀದನ ಪ್ರತಿಮೆಗಳು

ಅವರುಂಬ ಓದನವೇ ನೈವೇದ್ಯ

ನಿತ್ಯದಿ ಹಾದಿ ನಡೆವುದೇ ನರ್ತನಗಳು ಎಂದರಿತವನೆ ಯೋಗಿ//3//


ಸರ್ವ ದೇಶವು ಪುಣ್ಯ ದೇಶವು ಸರ್ವ ಕಾಲವು ಪರ್ವ ಕಾಲವು

ಸರ್ವ ಜೀವರು ದಾನ ಪಾತ್ರರು ಮೂರು ಲೋಕದೊಳು

ಸರ್ವ ಮಾತುಗಳು ಎಲ್ಲ ಮಂತ್ರವು ಸರ್ವ ಕೆಲಸಗಳು ಎಲ್ಲ ಪೂಜೆಯು

ಶರ್ವ ವಂದ್ಯನ ವಿಮಲ ಮೂರ್ತಿ ಧ್ಯಾನವುಳ್ಳವಗೆ//4//

 
ದೇವಖಾತ ತಟಾಕವಾಪಿ ಸರೋವರಗಳ ಅಭಿಮಾನಿ ಸುರರು

ಕಳೇವರದೊಳಗಿಹ ರೋಮ ಕೂಪಗಳೊಳಗೆ ತುಂಬಿಹರು

ಆ ವಿಯತ್ಗಂಗಾದಿ ನದಿಗಳು ಭಾವಿಸುವುದು ಎಪ್ಪತ್ತೆರಡೆನಿಪ ಸಾವಿರ

ಸುನಾಡಿಗಳೊಳಗೆ ಪ್ರವಹಿಸುತಲಿಹವು ಎಂದು//5//


ಮೂರು ಕೋಟಿಯ ಮೇಲೆ ಶೋಭಿಪ ಈರು ಅಧಿಕ ಎಪ್ಪತ್ತು ಸಾವಿರ

ಮಾರುತ ಅಂತರ್ಯಾಮಿ ಮಾಧವ ಪ್ರತಿ ದಿವಸದಲ್ಲಿ ತಾ ರಮಿಸುತಿಹನೆಂದು

ತಿಳಿದಿಹ ಸೂರಿಗಳು ದೇವತೆಗಳು

ಅವರ ಶರೀರವೇ ಸುಕ್ಷೇತ್ರ ಅವರ ಅರ್ಚನೆಯೇ ಹರಿಪೂಜೆ//6//


ಶ್ರೀವರನಿಗೆ ಅಭಿಷೇಕವೆಂದರಿದು ಈ ವಸುಂಧರೆಯೊಳಗೆ ಬಲ್ಲವರು

ಆವ ಜಲದಲಿ ಮಿಂದರೆಯು ಗಂಗಾದಿ ತೀರ್ಥಗಳು ತಾ ಒಲಿದು ಬಂದಲ್ಲಿ

ನೆಲೆಗೊಂಡು ಈವರು ಅಖಿಳಾರ್ಥಗಳನು

ಅರಿಯದ ಜೀವರು ಅಮರ ತರಂಗಿಣಿಯನು ಐದಿದರು ಫಲವೇನು//7//


ನದನದಿಗಳು ಇಳೆಯೊಳಗೆ ಪರಿವವು ಉದಧಿ ಪರಿಯಂತರದಿ

ತರುವಾಯದಲಿ ರಮಿಸುವವು ಅಲ್ಲಿ ತನ್ಮಯವಾಗಿ ತೋರದಲೆ

ವಿಧಿ ನಿಷೇಧಗಳು ಆಚರಿಸುವರು ಬುಧರು

ಭಗವದ್ರೂಪ ಸರ್ವತ್ರದಲಿ ಚಿಂತನೆ ಬರಲು ತ್ಯಜಿಸುವರು ಅಖಿಳ ಕರ್ಮಗಳ//8//


ಕಲಿಯೆ ಮೊದಲಾದ ಅಖಿಳ ದಾನವರೊಳಗೆ

ಬ್ರಹ್ಮ ಭವಾದಿ ದೇವರ್ಕಳು ನಿಯಾಮಕರಾಗಿ ಹರಿಯಾಜ್ಞೆಯಲಿ

ಅವರವರ ಕಲುಷ ಕರ್ಮವ ಮಾಡಿ ಮಾಡಿಸಿ

ಜಲರುಹೇಕ್ಷಣಗೆ ಅರ್ಪಿಸುತ ನಿಶ್ಚಲ ಸುಭಕ್ತಿ ಜ್ಞಾನ ಪೂರ್ಣರು ಸುಖಿಪರು ಅವರೊಳಗೆ//9//


ಆವ ಜೀವರೊಳಿದ್ದರೇನು? ಇನ್ನಾವ ಕರ್ಮವ ಮಾಡಲೇನು?

ಇನ್ನಾವ ಗುಣ ರೂಪಗಳ ಉಪಾಸನೆ ಮಾಡಲೇನವರು?

ಕಾವನಯ್ಯನ ಪರಮ ಕಾರುಣ್ಯ ಅವಲೋಕನ ಬಲದಿ ಚರಿಸುವ

ದೇವತೆಗಳನು ಮುಟ್ಟಲು ಆಪವೆ ಪಾಪ ಕರ್ಮಗಳು//10//


ಪತಿಯೊಡನೆ ಮನಬಂದ ತೆರದಲಿ ಪ್ರತಿ ದಿವಸದಲಿ ರಮಿಸಿ ಮೋದಿಸಿ

ಸುತರ ಪಡೆದು ಇಳೆಯೊಳು ಜಿತ ಇಂದ್ರಿಯಳು ಎಂದು ಕರೆಸುವಳು

ಕೃತಿ ಪತಿ ಕಥಾಮೃತ ಸುಭೋಜನ ರತ ಮಹಾತ್ಮರಿಗೆ

ಇತರ ದೋಷ ಪ್ರತತಿಗಳು ಸಂಬಂಧಿಸುವವೇನು ಅಚ್ಯುತನ ದಾಸರಿಗೆ//11//


ಸೂಸಿಬಹ ನದಿಯೊಳಗೆ ತನ್ನ ಸಹಾಸ ತೋರುವೆನೆನುತ

ಜಲಕೆದುರು ಈಸಿದರೆ ಕೈಸೋತು ಮುಳುಗುವ

ಹರಿಯ ಬಿಟ್ಟವನು ಕ್ಲೇಶವೈದುವ ಅನಾದಿಯಲಿ ಸಾರ್ವೇಶ ಕ್ಲುಪ್ತಿಯ ಮಾಡಿದುದ ಬಿಟ್ಟು

ಆಶೆಯಿಂದಲಿ ಅನ್ಯರ ಆರಾಧಿಸುವ ಮಾನವನು//12//


ನಾನು ನನ್ನದು ಎಂಬ ಜಡಮತಿ ಮಾನವನು ದಿನದಿನದಿ ಮಾಡುವ

ಸ್ನಾನ ಜಪ ದೇವಾರ್ಚನೆಯೇ ಮೊದಲಾದ ಕರ್ಮಗಳ

ದಾನವರು ಸೆಳೆದೊಯ್ವರಲ್ಲದೆ ಶ್ರೀನಿವಾಸನು ಸ್ವೀಕರಿಸ

ಮದ್ದಾನೆ ಪಕ್ವ ಕಪಿತ್ಥ ಫಲ ಭಕ್ಷಿಸಿದ ವೋಲಹುದು//13//


ಧಾತ್ರಿಯೊಳಗುಳ್ಳ ಅಖಿಳ ತೀರ್ಥಕ್ಷೇತ್ರ ಚರಿಸಿದರೇನು

ಪಾತ್ರಾಪಾತ್ರವರಿತು ಅನ್ನಾದಿ ದಾನವ ಮಾಡಿ ಫಲವೇನು

ಗಾತ್ರ ನಿರ್ಮಲನಾಗಿ ಮಂತ್ರ ಸ್ತೋತ್ರ ಪಠಿಸಿದರು ಏನು

ಹರಿ ಸರ್ವತ್ರಗತನು ಎಂದರಿಯದೆ ತಾ ಕರ್ತೃ ಎಂಬುವನು//14//


ಕಂಡ ನೀರೊಳು ಮುಳುಗಿ ದೇಹವ ದಂಡಿಸಿದ ಫಲವೇನು

ದಂಡ ಕಮಂಡಲoಗಳ ಧರಿಸಿ ಯತಿಯೆಂದೆನಿಸಿ ಫಲವೇನು

ಅಂಡಜಾಧಿಪನು ಅಂಸಗನ ಪದ ಪುಂಡರೀಕದಿ ಮನವಹರ್ನಿಶಿ

ಬಂಡುಣಿಯವೋಲ್ ಇರಿಸಿ ಸುಖಪಡದೆ ಇಪ್ಪ ಮಾನವನು//15//


ವೇದ ಶಾಸ್ತ್ರ ಪುರಾಣ ಕಥೆಗಳ ಓದಿ ಪೇಳಿದರೇನು

ಸಕಲ ನಿಷೇಧ ಕರ್ಮಗಳ ತೊರೆದು ಸತ್ಕರ್ಮಗಳ ಮಾಡಿ ಏನು

ಓದನಂಗಳ ಜರಿದು ಶ್ವಾಸ ನಿರೋಧಗೈಸಿದರೇನು

ಕಾಮ ಕ್ರೋಧವ ಅಳಿಯದೆ ನಾನು ನನ್ನದೆಂಬ ಮಾನವನು//16//


ಏನು ಕೇಳಿದರೇನು ನೋಡಿದರೇನು ಓದಿದರೇನು

ಪೇಳಿದರೇನು ಪಾಡಿದರೇನು ಮಾಡಿದರೇನು ದಿನದಿನದಿ

ಶ್ರೀನಿವಾಸನ ಜನ್ಮ ಕರ್ಮ ಸದಾ ಅನುರಾಗದಿ ನೆನೆದು

ತತ್ತತ್ ಸ್ಥಾನದಲಿ ತದ್ರೂಪ ತನ್ನಾಮಕನ ಸ್ಮರಿಸದವ//17//


ಬುದ್ಧಿ ವಿದ್ಯಾಬಲದಿ ಪೇಳಿದ ಅಶುದ್ಧ ಕಾವ್ಯವು ಇದಲ್ಲ

ತತ್ವ ಸುಪದ್ಧತಿಗಳನು ತಿಳಿದ ಮಾನವನು ಅಲ್ಲ ಬುಧರಿಂದ

ಮಧ್ವ ವಲ್ಲಭ ತಾನೇ ಹೃದಯದೊಳು ಇದ್ದು ನುಡಿದಂದದಲಿ ನುಡಿದೆನು

ಅಪದ್ಧಗಳ ನೋಡದಲೆ ಕಿವಿಗೊಟ್ಟು ಆಲಿಪುದು ಬುಧರು//18//


ಕಬ್ಬಿನೊಳಗಿಹ ರಸ ವಿದಂತಿಗೆ ಅಬ್ಬು ಬಲ್ಲುದೆ

ಭಾಗ್ಯ ಯೌವನ ಮಬ್ಬಿನಲಿ ಮೈ ಮರೆದವಗೆ ಹರಿ ಸುಚರಿತಾಮೃತವು ಲಭ್ಯವಾಗದು

ಹರಿಪದಾಬ್ಜದಿ ಹಬ್ಬಿದ ಅತಿ ಸದ್ಭಕ್ತಿ ರಸ

ಉಂಡು ಉಬ್ಬಿ ಕೊಬ್ಬಿ ಸುಖಾಬ್ಧಿಯೊಳಗೆ ಆಡುವವಗೆ ಅಲ್ಲದಲೆ//19//


ಖಗವರಧ್ವಜನ ಅಂಘ್ರಿ ಭಕುತಿಯ ಬಗೆಯನು ಅರಿಯದ ಮಾನವರಿಗಿದು

ಒಗಟಿನಂದದಿ ತೋರುತಿಪ್ಪದು ಎಲ್ಲ ಕಾಲದಲಿ

ತ್ರಿಗುಣ ವರ್ಜಿತನ ಅಮಲ ಗುಣಗಳ ಪೊಗಳಿ ಹಿಗ್ಗುವ ಭಾಗವತರಿಗೆ

ಮಿಗೆ ಭಕುತಿ ವಿಜ್ಞಾನ ಸುಖವಿತ್ತು ಅವರ ರಕ್ಷಿಪುದು//20//


ಪರಮ ತತ್ವ ರಹಸ್ಯವು ಇದು ಭೂಸುರರು ಕೇಳುವುದು ಸಾದರದಿ

ನಿಷ್ಠುರಿಗಳಿಗೆ ಮೂಢರಿಗೆ ಪಂಡಿತ ಮಾನಿ ಪಿಶುನರಿಗೆ

ಅರಸಿಕರಿಗೆ ಇದು ಪೇಳ್ವುದಲ್ಲ ಅನವರತ ಭಗವತ್ಪಾದ

ಯುಗಳ ಅಂಬುರುಹ ಮಧುಕರನು ಎನಿಸುವವರಿಗೆ ಇದನು ಅರುಪು ಮೋದದಲಿ//21//


ಲೋಕವಾರ್ತೆಯು ಇದಲ್ಲ ಪರ ಲೋಕೈಕನಾಥನ ವಾರ್ತೆ ಕೇಳ್ವರೆ

ಕಾಕುಮನುಜರಿಗೆ ಪರಿಮಳವು ಷಟ್ಪದ ಸ್ವೀಕರಿಸುವಂದದಲಿ

ಜಲಚರ ಭೇಕ ಬಲ್ಲುದೆ? ಇದರ ರಸ ಹರಿ ಭಕುತಗಲ್ಲದಲೆ//22//


ಸ್ವಪ್ರಯೋಜನರಹಿತ ಸಕಲೇಷ್ಟ ಪ್ರದಾಯಕ ಸರ್ವಗುಣ ಪೂರ್ಣ ಪ್ರಮೇಯ

ಜರಾಮರಣ ವರ್ಜಿತ ವಿಗತ ಕ್ಲೇಶ ವಿಪ್ರತಮ ವಿಶ್ವಾತ್ಮ

ಘ್ರುಣಿ ಸೂರ್ಯ ಪ್ರಕಾಶ ಅನಂತ ಮಹಿಮ

ಘೃತ ಪ್ರತೀಕ ಆರಾಧಿತ ಅಂಘ್ರಿ ಸರೋಜ ಸುರರಾಜ//23//


ವನಚರ ಅದ್ರಿ ಧರಾ ಧರನೆ ಜಯ ಮನುಜ ಮೃಗವರ ವೇಷ ಜಯ

ವಾಮನ ತ್ರಿವಿಕ್ರಮ ದೇವ ಜಯ ಭೃಗು ರಾಮ ಭೂಮ ಜಯ

ಜನಕಜಾ ವಲ್ಲಭನೆ ಜಯ ರುಗ್ಮಿಣಿ ಮನೋರಥ ಸಿದ್ಧಿದಾಯಕ

ಜಿನ ವಿಮೋಹಕ ಕಲಿವಿದಾರಣ ಜಯ ಜಯಾರಮಣ//24//


ಸಚ್ಚಿದಾನಂದಾತ್ಮ ಬ್ರಹ್ಮ ಕರಾರ್ಚಿತ ಅಂಘ್ರಿ ಸರೋಜ

ಸುಮನಸ ಪ್ರೋಚ್ಚ ಸನ್ಮಂಗಳದ ಮಧ್ವ ಅಂತಃಕರಣರೂಢ

ಅಚ್ಯುತ ಜಗನ್ನಾಥ ವಿಠಲ ನಿಚ್ಚ ನೆಚ್ಚಿದ ಜನರ ಬಿಡ

ಕಾಡ್ಗಿಚ್ಚನು ಉಂಡು ಅರಣ್ಯದೊಳು ಗೋ ಗೋಪರನು ಕಾಯ್ದ//25//


//ಇತಿ ಶ್ರೀ ಸರ್ವಪ್ರತೀಕ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment