Thursday, January 17, 2013

ಶ್ರೀ ಹರಿಕಥಾಮೃತಸಾರ - 14

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಪಿತೃಗಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಕೃತಿರಮಣ ಪ್ರದ್ಯುಮ್ನ ವಸುದೇವತೆಗಳು ಅಹಂಕಾರ ತ್ರಯದೊಳು

ಚತುರವಿಂಶತಿ ರೂಪದಿಂದಲಿ ಭೋಜ್ಯನೆನಿಸುವನು

ಹುತವಹಾಕ್ಷ ಅಂತರ್ಗತ ಜಯಾಪತಿಯು ತಾನೇ ಮೂರಧಿಕ ತ್ರಿಂಶತಿ ಸುರೂಪದಿ

ಭೋಕ್ತ್ರು ಎನಿಸುವ ಭೋಕ್ತ್ರುಗಳೊಳಿದ್ದು//1//


ಆರಧಿಕ ಮೂವತ್ತು ರೂಪದಿ ವಾರಿಜಾಪ್ತನೊಳು ಇರುತಿಹನು

ಮಾಯಾರಮಣ ಶ್ರೀ ವಾಸುದೇವನು ಕಾಲನಾಮದಲಿ

ಮೂರುವಿಧ ಪಿತೃಗಳೊಳು ವಸು ತ್ರಿಪುರಾರಿ ಆದಿತ್ಯಗ ಅನಿರುದ್ಧನು

ತೋರಿಕೊಳ್ಳದೆ ಕರ್ತೃ ಕರ್ಮ ಕ್ರಿಯನು ಎನಿಸಿಕೊಂಬ//2//


ಸ್ವವಶ ನಾರಾಯಣನು ತಾ ಷಣ್ಣವತಿ ನಾಮದಿ ಕರೆಸುತಲಿ

ವಸು ಶಿವ ದಿವಾಕರ ಕರ್ತೃ ಕರ್ಮ ಕ್ರಿಯೆಗಳೊಳಗಿದ್ದು

ನೆವನವಿಲ್ಲದೆ ನಿತ್ಯದಲಿ ತನ್ನವರು ಮಾಡುವ ಸೇವೆ ಕೈಕೊಂಡು

ಅವರ ಪಿತೃಗಳಿಗೀವ ಅನಂತಾನಂತ ಸುಖಗಳನು//3//


ತಂತು ಪಟದಂದದಲಿ ಲಕ್ಷ್ಮೀಕಾಂತ ಪಂಚಾತ್ಮಕನು ಎನಿಸಿ

ವಸು ಕಂತು ಹರ ರವಿ ಕರ್ತೃಗಳೊಳಿದ್ದು

ಅನವರತ ತನ್ನ ಚಿಂತಿಸುತ ಸಂತರನು ಗುರು ಮಧ್ವಾಂತರಾತ್ಮಕ ಸಂತೈಸುವನು

ಸಂತತ ಅಖಿಳಾರ್ಥಗಳ ಪಾಲಿಸಿ ಇಹ ಪರಂಗಳಲಿ//4//


ತಂದೆ ತಾಯ್ಗಳ ಪ್ರೀತಿಗೋಸುಗ ನಿಂದ್ಯ ಕರ್ಮವ ತೊರೆದು

ವಿಹಿತಗಳು ಒಂದು ಮೀರದೆ ಸಾಂಗ ಕರ್ಮಗಳನು ಆಚರಿಸುವವರು

ವಂದನೀಯರಾಗಿ ಇಳೆಯೊಳಗೆ ದೈನಂದಿನದಿ ದೈಶಿಕ ದೈಹಿಕ ಸುಖದಿಂದ ಬಾಳ್ವರು

ಬಹು ದಿವಸದಲಿ ಕೀರ್ತಿಯುತರಾಗಿ//5//


ಅಂಶಿ ಅಂಶ ಅಂತರ್ಗತತ್ರಯ ಹಂಸವಾಹನ ಮುಖ್ಯ ದಿವಿಜರ ಅಸಂಶಯದಿ ತಿಳಿದು

ಅಂತರಾತ್ಮಕ ಶ್ರೀ ಜನಾರ್ಧನನ ಸಂಸ್ಮರಣೆ ಪೂರ್ವಕದಿ

ಷಡಾಧಿಕ ತ್ರಿಂಶತಿತ್ರಯ ರೂಪವರಿತು

ವಿಪಾಂಸಗನ ಪೂಜಿಸುವರು ಅವರೇ ಕೃತಾರ್ಥರು ಎನಿಸುವರು//6//


ಮೂರುವರೆ ಸಾವಿರದ ಮೇಲೆ ಅರೆ ನೂರೈದು ರೂಪದಿ ಜನಾರ್ಧನ

ಸೂರಿಗಳು ಮಾಡುವ ಸಮಾರಾಧನೆಗೆ ವಿಘ್ನಗಳು ಬಾರದಂತೆ

ಬಹುಪ್ರಕಾರ ಖರಾರಿ ಕಾಪಾಡುವನು ಸರ್ವ ಶರೀರಗಳೊಳಿದ್ದು

ಅವರವರ ಪೆಸರಿಂದ ಕರೆಸುತಲಿ//7//


ಜಯ ಜಯ ಜಯಾಕಾಂತ ದತ್ತಾತ್ರಯ ಕಪಿಲ ಮಹಿದಾಸ ಭಕ್ತಪ್ರಿಯ

ಪುರಾತನ ಪುರುಷ ಪೂರ್ಣಾನಂದ ಮಾನಘನ

ಹಯವದನ ಹರಿ ಹಂಸ ಲೋಕತ್ರಯ ವಿಲಕ್ಷಣ

ನಿಖಿಳ ಜಗದಾಶ್ರಯ ನಿರಾಮಯ ದಯದಿ ಸಂತೈಸೆಂದು ಪ್ರಾರ್ಥಿಸುವನು//8//


ಷಣ್ಣವತಿಯೆಂಬ ಅಕ್ಷರ ಈಡ್ಯನು ಷಣ್ಣವತಿ ನಾಮದಲಿ ಕರೆಸುತ

ತನ್ನವರು ಸದ್ಭಕ್ತಿ ಪೂರ್ವಕದಿಂದ ಮಾಡುತಿಹ ಪುಣ್ಯ ಕರ್ಮವ ಸ್ವೀಕರಿಸಿ

ಕಾರುಣ್ಯ ಸಾಗರ ಸಲಹುವನು

ಬ್ರಹ್ಮಣ್ಯದೇವ ಭವಾಬ್ಧಿಪೋತ ಬಹು ಪ್ರಕಾರದಲಿ//9//


ದೇಹಗಳ ಕೊಡುವವನು ಅವರವರ ಅಹರಗಳ ಕೊಡದಿಹನೆ

ಸುಮನಸ ಮಹಿತ ಮಂಗಳ ಚರಿತ ಸದ್ಗುಣ ಭರಿತನು

ಅನವರತ ಅಹಿಕ ಪಾರತ್ರಿಕ ಸುಖಪ್ರದ ವಹಿಸಿ ಬೆನ್ನಿಲಿ ಬೆಟ್ಟವ

ಅಮೃತವ ದ್ರುಹಿಣ ಮೊದಲಾದವರಿಗೆ ಉಣಿಸಿದ ಮುರಿದ ನಹಿತರನ//10//


ದ್ರುಹಿಣ ಮೊದಲಾದ ಅಮರರಿಗೆ ಸನ್ಮಹಿತ ಮಾಯಾರಮಣ

ತಾನೇ ಸ್ವಹನೆನಿಸಿ ಸಂತೃಪ್ತಿಪಡಿಸುವ ಸರ್ವಕಾಲದಲಿ

ಪ್ರಹಿತ ಸಂಕರುಷಣನು ಪಿತೃಗಳಿಗೆ ಅಹರನೆನಿಪ ಸ್ವಧಾಖ್ಯರೂಪದಿ

ಮಹಿಜ ಫಲ ತೃಣ ಪೆಸರಿನಲಿ ಪ್ರದ್ಯುಮ್ನ ಅನಿರುದ್ಧ//11//


ಅನ್ನನೆನಿಸುವ ನೃಪಶುಗಳಿಗೆ ಹಿರಣ್ಯ ಗರ್ಭಾಂಡದೊಳು

ಸಂತತ ತನ್ನನ ಈಪರಿಯಿಂದ ಉಪಾಸನೆಗೈವ ಭಕ್ತರನ ಬನ್ನಬಡಿಸದೆ

ಭವ ಸಮುದ್ರ ಮಹ ಉನ್ನತಿಯ ದಾಟಿಸಿ

ಚತುರ್ವಿಧ ಅನ್ನಮಯನು ಆತ್ಮ ಪ್ರದರ್ಶನ ಸುಖವನೀವ ಹರಿ//12//


ಮನವಚನ ಕಾಯಗಳ ದೆಶೆಯಿಂದ ಅನುದಿನದಿ ಬಿಡದೆ ಆಚರಿಸುತಿಪ್ಪ

ಅನುಚಿತೋಚಿತ ಕರ್ಮಗಳ ಸದ್ಭಕ್ತಿ ಪೂರ್ವಕದಿ ಅನಿಳ ದೇವನೊಳಿಪ್ಪ

ನಾರಾಯಣಗೆ ಇದು ಅನ್ನವೆಂದು ಕೃಷ್ಣಾರ್ಪಣವೆನುತ ಕೊಡು

ಸ್ವೀಕರಿಸಿ ಸಂತೈಪ ಕರುಣಾಳು//13//


ಏಳು ವಿಧ ಅನ್ನ ಪ್ರಕರಣವ ಕೇಳಿ ಕೋವಿದರ ಆಸ್ಯದಿಂದಲಿ

ಆಲಸವ ಮಾಡದಲೆ ಅನಿರುದ್ಧಾದಿ ರೂಪಗಳ

ಕಾಲಕಾಲದಿ ನೆನೆದು ಪೂಜಿಸು ಸ್ಥೂಲ ಮತಿಗಳಿಗೆ ಇದನು ಪೇಳದೆ

ಶ್ರೀ ಲಕುಮಿ ವಲ್ಲಭನೆ ಅನ್ನಾದನ್ನಾದನು//14//


ಎಂದರಿದು ಸಪ್ತಾನ್ನಗಳ ದೈನಂದಿನದಿ ಮರೆಯದೆ

ಸದಾ ಗೋವಿಂದಗೆ ಅರ್ಪಿಸು ನಿರ್ಭಯದಿ ಮಹಾಯಜ್ಞವು ಇದೆಂದು

ಇಂದಿರೇಶನು ಸ್ವೀಕರಿಸಿ ದಯದಿಂದ ಬೇಡಿಸಿಕೊಳದೆ

ತವಕದಿ ತಂದು ಕೊಡುವನು ಪರಮ ಮಂಗಳ ತನ್ನ ದಾಸರಿಗೆ//15//


ಸೂಜಿ ಕರದಲಿ ಪಿಡಿದು ಸಮರವ ನಾ ಜಯಿಸುವೆನು ಎಂಬ ನರನಂತೆ

ಈ ಜಗತ್ತಿನೊಳು ಉಳ್ಳ ಅಜ್ಞಾನಿಗಳು ನಿತ್ಯದಲಿ

ಶ್ರೀ ಜಗತ್ಪತಿ ಚರಣ ಯುಗಳ ಸರೋಜ ಭಕ್ತಿ ಜ್ಞಾನ ಪೂರ್ವಕ ಪೂಜಿಸದೆ

ಧರ್ಮಾರ್ಥ ಕಾಮವ ಬಯಸಿ ಬಳಲುವರು//16//


ಶಕಟ ಭಂಜನ ಸಕಲ ಜೀವರ ನಿಕಟಗನು ತಾನಾಗಿ

ಲೋಕಕೆ ಪ್ರಕಟನಾಗದೆ ಸಕಲ ಕರ್ಮವ ಮಾಡಿ ಮಾಡಿಸುತ

ಅಕುಟಿಲಾತ್ಮಕ ಭಕುತ ಜನರಿಗೆ ಸುಖದನೆನಿಸುವ ಸರ್ವಕಾಲದಿ

ಅಕಟಕಟ ಈತನ ಮಹಾ ಮಹಿಮೆಗಳಿಗೆ ಏನೆಂಬೆ//17//


ಶ್ರೀ ಲಕುಮಿವಲ್ಲಭನು ವೈಕುಂಠ ಆಲಯದಿ ಪ್ರಣವ ಪ್ರಕೃತಿ

ಕೀಲಾಲಜಾಸನ ಮುಖ್ಯ ಚೇತನರೊಳಗೆ ನೆಲೆಸಿದ್ದು

ಮೂಲ ಕಾರಣಾoಶಿ ನಾಮದಿ ಲೀಲೆಗೈಸುತ ತೋರಿ ಕೊಳ್ಳದೆ

ಪಾಲಿನೊಳು ಘೃತವಿದ್ದ ತೆರದಂತೆ ಇಪ್ಪ ತ್ರಿಸ್ಥಳದಿ//18//


ಮೂರು ಯುಗದಲಿ ಮೂಲ ರೂಪನು ಸೂರಿಗಳ ಸಂತೈಸಿ

ದಿತಿಜ ಕುಮಾರಕರ ಸಂಹರಿಸಿ ಧರ್ಮವನು ಉಳುಹಬೇಕೆಂದು

ಕಾರುಣಿಕ ಭೂಮಿಯೊಳು ನಿಜ ಪರಿವಾರ ಸಹಿತ ಅವತರಿಸಿ

ಬಹು ವಿಧ ತೋರಿದನು ನರವತ್ ಪ್ರವೃತ್ತಿಯ ಸಕಲ ಚೇತನಕೆ//19//


ಕಾರಣಾಹ್ವಯ ಪ್ರಕೃತಿಯೊಳಗಿದ್ದು ಆರಧಿಕ ಹದಿನೆಂಟು ತತ್ತ್ವವ

ತಾ ರಚಿಸಿ ತದ್ರೂಪ ತನ್ನಾಮಗಳನೆ ಧರಿಸಿ

ನೀರಜ ಭವಾಂಡವನು ನಿರ್ಮಿಸಿ ಕಾರುಣಿಕ ಕಾರ್ಯಾಖ್ಯ ರೂಪದಿ ತೋರುವನು

ಸಹಜಾಹಿತಾಚಲಗಳಲಿ ಪ್ರತಿದಿನದಿ//20//


ಜೀವರಂತರ್ಯಾಮಿ ಅಂಶಿ ಕಳೇವರಗಳೊಳಗೆ ಇಂದ್ರಿಯಗಳಲಿ

ತಾ ವಿಹಾರವ ಗೈಯುತ ಅನುದಿನ ಅಂಶ ನಾಮದಲಿ

ಈ ವಿಷಯಗಳನುಂಡು ಸುಖಮಯವೀವ ಸುಖ ಸಂಸಾರ ದುಃಖವ

ದೇವ ಮಾನವ ದಾನವರಿಗೆ ಅವಿರತ ಸುಧಾಮ ಸಖ//21//


ದೇಶ ದೇಶವ ಸುತ್ತಿ ದೇಹಾಯಾಸಗೊಳಿಸದೆ ಕಾಮ್ಯ ಕರ್ಮ ದುರಾಶೆಗೊಳಗಾಗದಲೆ

ಬ್ರಹ್ಮಾದಿ ಅಖಿಳ ಚೇತನರು

ಭೂ ಸಲಿಲ ಪಾವಕ ಸಮೀರ ಆಕಾಶ ಮೊದಲಾದ ಅಖಿಳ ತತ್ತ್ವ

ಪರೇಶಗೆ ಇವು ಅಧಿಷ್ಠಾನವು ಎಂದರಿತು ಅರ್ಚಿಸು ಅನವರತ//22//


ಎರಡು ವಿಧದಲಿ ಲೋಕದೊಳು ಜೀವರುಗಳು ಇಪ್ಪರು ಸಂತತ

ಕ್ಷರಾಕ್ಷರ ವಿಲಿಂಗ ಸಲಿಂಗ ಸೃಜ್ಯ ಅಸೃಜ್ಯ ಭೇದದಲಿ ಕರೆಸುವದು

ಜಡ ಪ್ರಕೃತಿ ಪ್ರಣವಾಕ್ಷರ ಮಹದಣು ಕಾಲ ನಾಮದಿ

ಹರಿ ಸಹಿತ ಭೇದಗಳ ಪಂಚಕ ಸ್ಮರಿಸು ಸರ್ವತ್ರ//23//


ಜೀವ ಜೀವರ ಭೇದ ಜಡ ಜಡ ಜೀವ ಜಡಗಳ ಭೇದ

ಪರಮನು ಜೀವ ಜಡ ಸುವಿಲಕ್ಷಣನು ಎಂದರಿದು ನಿತ್ಯದಲಿ

ಈ ವಿರಿಂಚಿ ಅಂಡದೊಳು ಎಲ್ಲ ಟಾವಿನಲಿ ತಿಳಿದೈದು ಭೇದ

ಕಳೇವರದೊಳರಿತು ಅಚ್ಯುತನ ಪದವೈದು ಶೀಘ್ರದಲಿ//24//


ಆದಿಯಲ್ಲಿ ಕ್ಷರಾಕ್ಷರಾಖ್ಯ ದ್ವೇಧ ಅಕ್ಷರದೊಳು ರಮಾ ಮಧುಸೂದನರು

ಕ್ಷರಗಳೊಳು ಪ್ರಕೃತಿ ಪ್ರಣವ ಕಾಲಗಳು ವೇದ ಮುಖ್ಯ ತೃಣಾoತ ಜೀವರ

ಭೇದಗಳನರಿತು ಈ ರಹಸ್ಯವ ಭೋದಿಸದೇ ಮಂದರಿಗೆ

ಸರ್ವತ್ರದಲಿ ಚಿಂತಿಪುದು//25//


ದೀಪದಿಂ ದೀಪಗಳು ಪೊರಮಟ್ಟು ಆಪಣ ಆಲಯಗಳ ತಿಮಿರಗಳ ತಾ ಪರಿಹರಗೈಸಿ

ತದ್ಗತ ಪದಾರ್ಥ ತೋರ್ಪಂತೆ

ಸೌಪರಣಿ ವರವಹನು ತಾ ಬಹು ರೂಪ ನಾಮದಿ ಎಲ್ಲ ಕಡೆಯಲಿ ವ್ಯಾಪಿಸಿದ್ದು

ಯಥೇಷ್ಟ ಮಹಿಮೆಯ ತೋರ್ಪ ತಿಳಿಸದಲೆ//26//


ನಳಿನ ಮಿತ್ರಗೆ ಇಂದ್ರಧನು ಪ್ರತಿ ಫಲಿಸುವಂತೆ

ಜಗತ್ರಯವು ಕಂಗೊಳಿಪುದು ಅಣು ಉಪಾಧಿಯಲಿ ಪ್ರತಿಬಿಂಬ ಅಹ್ವಯದಿ ಹರಿಗೆ

ತಿಳಿಯೆ ತ್ರಿಕಕುದ್ಧಾಮನ ಅತಿ ಮಂಗಳ ಸುರೂಪವ

ಸರ್ವ ಟಾವಿಲಿ ಪೊಳೆವ ಹೃದಯಕೆ ಪ್ರತಿದಿವಸ ಪ್ರಹ್ಲಾದ ಪೋಷಕನು//27//


ರಸ ವಿಶೇಷದೊಳು ಅತಿ ವಿಮಲಾ ಸಿತವಸನ ತೋಯಿಸಿ ಅಗ್ನಿಯೊಳಗಿಡೆ

ಪಸರಿಸುವುದು ಪ್ರಕಾಶ ನಸಗುಂದದಲೆ ಸರ್ವತ್ರ

ತ್ರಿಶಿರ ದೂಷಣ ವೈರಿ ಭಕ್ತಿ ಸುರಸದಿ ತೋಯ್ದ ಮಹಾತ್ಮರನು

ಬಾಧಿಸವು ಭವದೊಳಗೆ ಇದ್ದರೆಯು ಸರಿ ದುರಿತ ರಾಶಿಗಳು//28//


ವಾರಿನಿಧಿಯೊಳಗುಳ್ಳ ಅಖಿಳ ನದಿಗಳು ಬೇರೆ ಬೇರೆ ನಿರಂತರದಿ ವಿಹಾರಗೈಯುತ

ಪರಮ ಮೋದದಲಿಪ್ಪ ತೆರದಂತೆ

ಮೂರು ಗುಣಗಳ ಮಾನಿನಿಯೆನಿಸುವ ಶ್ರೀ ರಮಾ ರೂಪಗಳು ಹರಿಯಲಿ ತೋರಿತಿಪ್ಪವು

ಸರ್ವ ಕಾಲದಿ ಸಮರಹಿತವೆನಿಸಿ//29//


ಕೋಕನದ ಸಖನ ಉದಯ ಘೋಕಾಲೋಕನಕೆ ಸೊಗಸದಿರೆ

ಭಾಸ್ಕರ ತಾ ಕಳಂಕನೆ? ಈ ಕೃತೀಪತಿ ಜಗನ್ನಾಥನಿರೆ

ಸ್ವೀಕರಿಸಿ ಸುಖಪಡಲು ಅರಿಯದ ಅವಿವೇಕಿಗಳು ನಿಂದಿಸಿದರೆ ಏನಹುದು

ಈ ಕವಿತ್ವವ ಕೇಳಿ ಸುಖಪಡದಿಹರೆ ಕೋವಿದರು//30//


ಚೇತನಾಚೇತನಗಳಲಿ ಗುರು ಮಾತರಿಶ್ವಾಂತರ್ಗತ ಜಗನ್ನಾಥ ವಿಠಲ

ನಿರಂತರದಿ ವ್ಯಾಪಿಸಿ ತಿಳಿಸಿ ಕೊಳ್ಳದಲೇ

ಕಾತರವ ಪುಟ್ಟಿಸಿ ವಿಷಯದಲಿ ಧಾನರ ಮೋಹಿಸುವ

ನಿರ್ಭೀತ ನಿತ್ಯಾನಂದಮಯ ನಿರ್ದೋಷ ನಿರವದ್ಯ//31//


//ಇತಿ ಶ್ರೀ ಪಿತೃಗಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment