//ಶ್ರೀ ಗುರುಭ್ಯೋ ನಮಃ//
//ಪರಮ ಗುರುಭ್ಯೋ ನಮಃ//
//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//
ಶ್ರೀ ಜಗನ್ನಾಥದಾಸ ವಿರಚಿತ
ಶ್ರೀ ಹರಿಕಥಾಮೃತಸಾರ
//ವಿಭೂತಿ ಸಂಧಿ//
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//
ಶ್ರೀ ತರುಣಿ ವಲ್ಲಭನ ಪರಮ ವಿಭೂತಿ ರೂಪ ಕಂಡ ಕಂಡಲ್ಲಿ
ಈ ತೆರದಿ ಚಿಂತಿಸುತ ನೋಡು ಸಂಭ್ರಮದಿ
ನೀತ ಸಾಧಾರಣ ವಿಶೇಷ ಸಜಾತಿ ನೈಜ ಅಹಿತವು ವಿಜಾತಿ ಖಂಡಾಖಂಡ
ಬಗೆಗಳನು ಅರಿತು ಬುಧರಿಂದ//1//
ಜಲಧರಾಗಸದೊಳಗೆ ಚರಿಸುವ ಹಲವು ಜೀವರ ನಿರ್ಮಿಸಿಹನು
ಅದರೊಳು ಸಜಾತಿ ವಿಜಾತಿ ಸಧಾರಣ ವಿಶೇಷಗಳ ತಿಳಿದು
ತತ್ತತ್ ಸ್ಥಾನದಲಿ ವೆಗ್ಗಳಿಸಿ
ಹಬ್ಬಿದ ಮನದಿ ಪೂಜಿಸುತಲಿ ಅವನ ವ್ಯಾಪ್ತ ರೂಪಗಳ ನೋಡುತಲಿ ಹಿಗ್ಗುವುದು//2//
ಪ್ರತಿಮೆ ಶಾಲಗ್ರಾಮ ಗೋ ಅಭ್ಯಾಗತನು ಅತಿಥಿ ಶ್ರೀತುಳಸಿ ಪಿಪ್ಪಲ ಯತಿವನಸ್ಥ
ಗೃಹಸ್ಥ ವಟು ಯಜಮಾನ ಸ್ವಪರ ಜನ
ಪೃಥಿವಿ ಜಲ ಶಿಖಿ ಪವನ ತಾರಾಪಥ ನವಗ್ರಹ ಓಗ ಕರಣ ಭತಿಥಿ
ಸಿತ ಅಸಿತ ಪಕ್ಷ ಸಂಕ್ರಮಣ ಅವನ ಅಧಿಷ್ಠಾನ//3//
ಕಾದ ಕಾಂಚನದೊಳಗೆ ಶೋಭಿಪ ಆದಿತೇಯಾಸ್ಯನ ತೆರದಿ
ಲಕ್ಷ್ಮೀ ಧವನು ಪ್ರತಿದಿನದಿ ಶಾಲಗ್ರಾಮದೊಳಗೆ ಇಪ್ಪ
ಐದು ಸಾವಿರ ಮೇಲೆ ಮೂವತ್ತು ಐದಧಿಕ ಐನೂರು ರೂಪದಿ
ಭೂಧರಗಳಾಭಿಮಾನಿ ದಿವಿಜರೊಳು ಇಪ್ಪನು ಅನವರತ//4//
ಶ್ರೀರಮಣ ಪ್ರತಿಮೆಗಳೊಳಗೆ ಹದಿಮೂರಧಿಕವಾಗಿಪ್ಪ ಮೇಲೆ
ಐನೂರು ರೂಪವ ಧರಿಸಿ ಇಪ್ಪನು ಆಹಿತ ಅಚಲದಿ
ದಾರುಮಥನವ ಗೈಯೈ ಪಾವಕ ತೋರುವಂತೆ
ಪ್ರತೀಕ ಸುರರೊಳು ತೋರುತಿಪ್ಪನು ತತ್ತದಾ ಕಾಲದಲಿ ನೋಳ್ಪರಿಗೆ//5//
ಕರಣ ನಿಯಾಮಕನು ತಾನು ಉಪಕರಣದೊಳಗೆ ಐವತ್ತೆರಡು ಸಾವಿರದ
ಹದಿನಾಲ್ಕು ಅಧಿಕ ಶತ ರೂಪಗಳನು ಧರಿಸಿ
ಇರುತಿಹನು ತದ್ರೂಪ ನಾಮಗಳ ಅರಿತು ಪೂಜಿಸುತಿಹರ ಪೂಜೆಯ ನಿರುತ ಕೈಕೊಂಬ
ತೃಷಾರ್ತನು ಜಲವ ಕೊಂಬಂತೆ//6//
ಬಿಂಬರೂಪನು ಈ ತೆರದಿ ಜಡಪೊಂಬಸಿರ ಮೊದಲಾದ ಸುರರೊಳಗೆ ಇಂಬುಗೊಂಡಿಹನೆಂದು
ಅರಿದು ಧರ್ಮಾರ್ಥ ಕಾಮಗಳ ಹಂಬಲಿಸದೆ ಅನುದಿನದಿ
ವಿಶ್ವಕುಟುಂಬಿ ಕೊಟ್ಟ ಕಣ ಅನ್ನಕುತ್ಸಿತ ಕಂಬಳಿಯೇ
ಸೌಭಾಗ್ಯವೆಂದು ಅವನ ಅಂಘ್ರಿಗಳ ಭಜಿಸು//7//
ವಾರಿಯೊಳಗಿಪ್ಪತ್ತು ನಾಲ್ಕು ಮೂರೆರೆಡು ಸಾವಿರದ ಮೇಲೆ ಮುನ್ನೂರು ಹದಿನೇಳು ಎನಿಪ
ರೂಪವು ಶ್ರೀತುಳಸಿದಳದಿ
ನೂರು ಅರವತ್ತೊಂದು ಪುಷ್ಪದಿ ಮೂರಧಿಕ ದಶ ದೀಪದೊಳು
ನಾನೂರು ಮೂರು ಸುಮೂರ್ತಿಗಳು ಗಂಧದೊಳಗೆ ಇರುತಿಹವು//8//
ಅಷ್ಟದಳ ಸದ್ಹೃದಯ ಕಮಲ ಅಧಿಷ್ಠಿತನು ತಾನಾಗಿ ಸರ್ವ ಉತ್ಕ್ರುಷ್ಟಮಹಿಮನು
ದಳಗಳಲಿ ಸಂಚರಿಸುತ ಒಳಗಿದ್ದು
ದುಷ್ಟರಿಗೆ ದುರ್ಬುದ್ಧಿ ಕರ್ಮ ವಿಶಿಷ್ಟರಿಗೆ ಸುಜ್ಞಾನ ಧರ್ಮ
ಸುಪುಷ್ಟಿಗೈಸುತ ಸಂತೈಪ ನಿರ್ದುಷ್ಟ ಸುಖಪೂರ್ಣ//9//
ವಿತ್ತದೇಹಾಗಾರ ದಾರಾಪತ್ಯ ಮಿತ್ರಾದಿಗಳೊಳಗೆ
ಗುಣಚಿತ್ತಬುದ್ಧಿ ಆದಿ ಇಂದ್ರಿಯಗಳೊಳು ಜ್ಞಾನ ಕರ್ಮದೊಳು
ತತ್ತದಾಹ್ವಯನಾಗಿ ಕರೆಸುತ ಸಂಕಲ್ಪ ಅನುಸಾರದಿ
ನಿತ್ಯದಲಿ ತಾ ಮಾಡಿ ಮಾಡಿಪನು ಎಂದು ಸ್ಮರಿಸುತಿರು//10//
ಭಾವದ್ರವ್ಯಕ್ರಿಯೆಗಳು ಎನಿಸುವ ಈ ವಿಧ ಅದ್ವೈತ ತ್ರಯಂಗಳ
ಭಾವಿಸುತ ಸದ್ಭಕ್ತಿಯಲಿ ಸರ್ವತ್ರ ಮರೆಯದಲೆ
ತಾವಕನು ತಾನೆಂದು ಪ್ರತಿದಿನ ಸೇವಿಸುವ ಭಕ್ತರಿಗೆ
ತನ್ನನೀವ ಕಾವ ಕೃಪಾಳು ಕರಿವರಗೊಲಿದ ತೆರದಂತೆ//11//
ಬಾಂದಳವೆ ಮೊದಲಾದುದರೊಳು ಒಂದೊಂದರಲಿ ಪೂಜಾ ಸುಸಾಧನವೆಂದೆನಿಸುವ
ಪದಾರ್ಥಗಳು ಬಗೆಬಗೆಯ ನೂತನದಿ ಸಂದಣಿಸಿ ಕೊಂಡಿಹವು
ಧ್ಯಾನಕೆ ತಂದಿನಿತು ಚಿಂತಿಸಿ ಸದಾ ಗೋವಿಂದನ ಅರ್ಚಿಸಿ
ನೋಡು ನಲಿನಲಿದಾಡು ಕೊಂಡಾಡು//12//
ಜಲಜನಾಭನ ಮೂರ್ತಿ ಮನದಲಿ ನೆಲೆಗೊಳಿಸಿ ನಿಶ್ಚಲ ಭಕುತಿಯಲಿ
ಚಳಿ ಬಿಸಿಲು ಮಳೆ ಗಾಳಿಗಳ ನಿಂದಿಸದೆ ನಿತ್ಯದಲಿ
ನೆಲೆದೊಳಿಹ ಗಂಧವೇ ಸುಗಂಧವು ಜಲವೆ ರಸ ರೂಪವೆ ಸುದೀಪವು
ಎಲರು ಚಾಮರ ಶಭ್ಧ ವಾದ್ಯಗಳು ಅರ್ಪಿಸಲು ಒಲಿವ//13//
ಗೋಳಕಗಳು ರಮಾ ರಮಣನ ನಿಜ ಆಲಯಗಳು
ಅನುದಿನದಿ ಸಂಪ್ರಕ್ಷಾಲನೆಯೆ ಸಮ್ಮಾರ್ಜನವು ಕರುಣಗಳೆ ದೀಪಗಳು
ಸಾಲು ತತ್ತತ್ ವಿಷಯಗಳ ಸಮ್ಮೇಳನವೇ ಪರಿಯಂಕ
ತತ್ಸುಖದ ಏಳಿಗೆಯೆ ಸುಪ್ಪತ್ತಿಗೆ ಆತ್ಮನಿವೇದನೆ ವಸನ//14//
ಪಾಪಕರ್ಮವು ಪಾದುಕೆಗಳ ಅನುಲೇಪನವು ಸತ್ಪುಣ್ಯ ಶಾಸ್ತ್ರ ಆಲಾಪನವೆ ಶ್ರೀತುಳಸಿ
ಸುಮನೋವೃತ್ತಿಗಳೆ ಸುಮನ
ಕೋಪಧೂಪವು ಭಕ್ತಿ ಭೂಷಣ
ವ್ಯಾಪಿಸಿದ ಸದ್ಬುದ್ಧಿ ಛತ್ರವು ದೀಪವೇ ಸುಜ್ಞಾನ ಆರಾರ್ತಿಗಳೆ ಗುಣಕಥನ//15//
ಮನ ವಚನ ಕಾಯಿಕ ಪ್ರದಕ್ಷಿಣೆ ಅನುದಿನದಿ ಸರ್ವತ್ರ ವ್ಯಾಪಕ ವನರುಹೇಕ್ಷಣಗೆ
ಅರ್ಪಿಸುತ ಮೋದಿಸುತಲಿರು ಸತತ
ಅನುಭವಕೆ ತಂದುಕೋ ಸಕಲ ಸಾಧನಗಳೊಳಗೆ ಇದೆ ಮುಖ್ಯ
ಪಾಮರ ಮನುಜರಿಗೆ ಪೇಳಿದರೆ ತಿಳಿಯದು ಬುಧರಿಗೆ ಅಲ್ಲದಲೆ//16//
ಚತುರ ವಿಧ ಪುರುಷಾರ್ಥ ಪಡೆವರೆ ಚತುರದಶಲೋಕಗಳ ಮಧ್ಯದೊಳು
ಇತರ ಉಪಾಯಗಳು ನೋಡಲು ಸಕಲ ಶಾಸ್ತ್ರದಲಿ
ಸತತ ವಿಷಯ ಇಂದ್ರಿಯಗಳಲಿ ಪ್ರವಿತತನೆನಿಸಿ ರಾಜಿಸುವ ಲಕ್ಷ್ಮೀಪತಿಗೆ
ಸರ್ವ ಸಮರ್ಪಣೆಯೇ ಮಹಾಪೂಜೆ ಸದುಪಾಯ//17//
ಗೋಳಕವೇ ಕುಂಡ ಅಗ್ನಿ ಕರಣವು ಮೇಲೊದಗಿ ಬಹುವಿಷಯ ಸಮಿಧೆಯು
ಗಾಳಿ ಯತ್ನವು ಕಾಮ ಧೂಪವು ಸನ್ನಿಧಾನ ಅರ್ಚಿ
ಮೇಳನವೇ ಪ್ರಜ್ವಾಲೆ ಕಿಡಿಗಳು ತೂಳಿದ ಆನಂದಗಳು
ತತ್ತತ್ಕಾಲ ಮಾತುಗಳು ಎಲ್ಲ ಮಂತ್ರ ಅಧ್ಯಾತ್ಮ ಯಜ್ಞವಿದು//18//
ಮಧು ವಿರೋಧಿಯ ಪಟ್ಟಣಕೆ ಪೂರ್ವದ ಕವಾಟಗಳು ಅಕ್ಷಿನಾಸಿಕವದನ
ಶ್ರೋತೃಗಳು ಎರಡು ದಕ್ಷಿಣ ಉತ್ತರದ್ವಾರ
ಗುದೋಪಸ್ಥಗಳು ಎರಡು ಪಶ್ಚಿಮ ಕದಗಳು ಎನಿಪವು
ಷಟ್ ಸರೋಜವೆ ಸದನ ಹೃದಯವೇ ಮಂಟಪ ತ್ರಿಗುಣoಗಳೆ ಕಲಶ//19//
ಧಾತುಗಳೇ ಸಪ್ತ ಆವರಣ ಉಪವೀಧಿಗಳೇ ನಾಡಿಗಳು ಮದಗಳು ಯೂಥಪಗಳು
ಸುಷುಮ್ನನಾಡಿಯೇ ರಾಜಪಂಥಾನ
ಈ ತನೂರುಹಗಳೇ ವನಂಗಳು ಮಾತರಿಶ್ವನು ಪಂಚರೂಪದಿ
ಪಾತಕಿಗಳೆಂಬ ಅರಿಗಳನು ಸಂಹರಿಪ ತಳವಾರ//20//
ಇನ ಶಶಾಂಕಾದಿಗಳು ಲಕ್ಷ್ಮೀವನಿತೆ ಅರಸನ ದ್ವಾರ ಪಾಲಕರೆನಿಸುತ ಇಪ್ಪರು
ಮನದ ವೃತ್ತಿಗಳೇ ಪದಾತಿಗಳು
ಅನುಭವಿಪ ವಿಷಯoಗಳೇ ಪಟ್ಟಣಕೆ ಬಪ್ಪ ಪಸಾರಗಳು
ಜೀವನೇ ಸುವರ್ತಕ ಕಷ್ಟಗಳ ಕೈಕೊಂಬ ಹರಿ ತಾನು//21//
ಉರುಪರಾಕ್ರಮನ ಅರಮನಿಗೆ ದಶಕರಣಗಳೆ ಕನ್ನಡಿಯ ಸಾಲುಗಳು
ಅರವಿದೂರನ ಸದ್ವಿಹಾರಕೆ ಚಿತ್ತ ಮಂಟಪವು
ಮರಳಿ ಬೀಸುವ ಶ್ವಾಸಗಳು ಚಾಮರ ವಿಲಾಸಿನಿ ಬುದ್ಧಿ
ದಾಮೋದರಗೆ ಸಾಷ್ಟಾಂಗ ಪ್ರಣಾಮಗಳೇ ಸುಶಯನಗಳು//22//
ಮಾರಮಣನ ಅರಮನೆಗೆ ಸುಮಹಾ ದ್ವಾರವೆನಿಸುವ ವದನಕೆ
ಒಪ್ಪುವ ತೋರಣ ಸ್ಮಶ್ರುಗಳು ಕೇಶಗಳೇ ಪತಾಕೆಗಳು
ಊರಿ ನಡೆವ ಅಂಘ್ರಿಗಳು ಜಂಘೆಗಳು ಊರು ಮಧ್ಯ ಉದರ ಶಿರಗಳು
ಆಗಾರದ ಉಪ್ಪರಿಗೆಗಳು ಕೋಶಗಳು ಐದು ಕೋಣೆಗಳು//23//
ಈ ಶರೀರವೇ ರಥ ಪಟಾಕ ಸುವಾಸಗಳು ಪುಂಡ್ರಗಳು ಧ್ವಜ
ಸಿಂಹಾಸನವು ಚಿತ್ತವು ಸುಬುದ್ಧಿಯು ಕಲಶ ಸನ್ಮನವು ಪಾಶ
ಗುಣ ದಂಡತ್ರಯಗಳು ಶುಭಾಶುಭದ್ವಯ ಕರ್ಮ ಚಕ್ರ
ಮಹಾಸಮರ್ಥ ಅಶ್ವಗಳು ದಶಕರಣoಗಳು ಎನಿಸುವುವು//24//
ಮಾತರಿಶ್ವನು ದೇಹರಥದೊಳು ಸೂತನಾಗಿಹ ಸರ್ವಕಾಲದಿ
ಶ್ರೀತರುಣಿ ವಲ್ಲಭ ರಥಿಕನು ಎಂದರಿದು ನಿತ್ಯದಲಿ
ಪ್ರೀತಿಯಿಂದಲಿ ಪೋಷಿಸುತ ವಾತಾತಪ ಆದಿಗಳಿಂದ ಅವಿರತ
ಈ ತನುವಿನೊಳು ಮಮತೆ ಬಿಟ್ಟವನೇ ಮಹಾಯೋಗಿ//25//
ಭವವೆನಿಪ ವನಧಿಯೊಳು ಕರ್ಮ ಪ್ರವಹದೊಳು ಸಂಚರಿಸುತಿಹ
ದೇಹವೆ ಸುನಾವೆಯ ಮಾಡಿ ತನ್ನವರಿಂದ ಒಡಗೂಡಿ
ದಿವಸ ದಿವಸಗಳಲ್ಲಿ ಲಕ್ಷ್ಮೀಧವನು ಕ್ರೀಡಿಪನು ಎಂದು ಚಿಂತಿಸೆ
ಪವನನಯ್ಯ ಭವಾಬ್ಧಿ ದಾಟಿಸಿ ಪರಮಸುಖವ ಈವ//26//
ಆಪಣಾಲಯಗಳ ಪದಾರ್ಥವು ಸ್ತ್ರೀಪುರುಷರ ಇಂದ್ರಿಯಗಳಲಿ
ದೀಪ ಪಾವಕರೊಳಗೆ ಇದುವ ತೈಲಾದಿ ದ್ರವ್ಯಗಳ
ಆ ಪರಮಗೆ ಅವದಾನವು ಎಂದು ಪದೇಪದೇ ಮರೆಯದಲೆ ಸ್ಮರಿಸುತ
ಭೂಪನಂದದಿ ಸಂಚರಿಸು ನಿರ್ಭಯದಿ ಸರ್ವತ್ರ//27//
ವಾರಿಜ ಭವಾಂಡವೆ ಸುಮಂಟಪ ಮೇರುಗಿರಿ ಸಿಂಹಾಸನವು ಭಾಗೀರಥಿಯೇ ಮಜ್ಜನವು
ದಿಕ್ವಸ್ತ್ರಗಳು ನುಡಿ ಮಂತ್ರ
ಭೂರುಹಜ ಫಲಪುಷ್ಪ ಗಂಧ ಸಮೀರ ಶಶಿ ರವಿ ದೀಪ
ಭೂಷಣ ತಾರಕಗಳು ಎಂದು ಅರ್ಪಿಸಲು ಕೈಕೊಂಡು ಮನ್ನಿಸುವ//28//
ಭೂಸುರರೊಳು ಇಪ್ಪ ಅಬ್ಜಭವನನೊಳು ವಾಸುದೇವನು
ವಾಯುಖಗಪ ಸದಾಶಿವ ಅಹಿಪ ಇಂದ್ರನು ವಿವಸ್ವಾನ್ ನಾಮಕ ಸೂರ್ಯ
ಭೇಶಕಾಮ ಅಮರಾಸ್ಯ ವರುಣಾದಿ ಸುರರು ಕ್ಷತ್ರಿಯರೊಳು ಇಪ್ಪರು
ವಾಸವಾಗಿಹ ಸಂಕರುಷಣನ ನೋಡಿ ಮೋದಿಪರು//29//
ಮೀನ ಕೇತನ ತನಯ ಪ್ರಾಣಾಪಾನ ವ್ಯಾನೋದಾನ ಮುಖ್ಯ ಏಕ ಊನ ಪಂಚಾಶತ್
ಮರುದ್ಗಣ ರುದ್ರ ವಸುಗಣರು
ಮೇನಕಾತ್ಮಜ ಕುವರ ವಿಶ್ವಕ್ಸೇನ ಧನಪಾದಿ ಅನಿಮಿಷರನು
ಸದಾನುರಾಗದಿ ಧೇನಿಪುದು ವೈಶ್ಯರೊಳು ಪ್ರದ್ಯುಮ್ನ//30//
ಇರುತಿಹರು ನಾಸತ್ಯ ದಸ್ರರು ನಿರಋತಿಯು ಯಮಧರ್ಮ ಕಿಂಕರರು ಮೇದಿನಿ
ಕಾಲಮೃತ್ಯು ಶನೈಶ್ಚರಾದಿಗಳು
ಕರೆಸಿಕೊಂಬರು ಶೂದ್ರರೆಂದು ಅನವರತ
ಶೂದ್ರರೊಳಿಪ್ಪರು ಇವರೊಳಗೆ ಅರವಿದೂರ ಅನಿರುದ್ಧನು ಇಹನೆಂದರಿದು ಮನ್ನಿಪುದು//31//
ವೀತಭಯ ನಾರಾಯಣ ಚತುಷ್ಪಾತು ತಾನು ಎಂದೆನಿಸಿ
ತತ್ತತ್ ಜಾತಿ ಧರ್ಮ ಸುಕರ್ಮಗಳ ತಾ ಮಾಡಿ ಮಾಡಿಸುತ
ಚೇತನರ ಒಳಹೊರಗೆ ಓತಪ್ರೋತನಾಗಿದ್ದು ಎಲ್ಲರಿಗೆ
ಸಂಪ್ರೀತಿಯಲಿ ಧರ್ಮಾರ್ಥ ಕಾಮಾದಿಗಳ ಕೊಡುತಿಹನು//32//
ನಿಧನ ಧನದ ವಿಧಾತ ವಿಗತಾಭ್ಯಧಿಕ ಸಮಸಮವರ್ತಿ ಸಾಮಗ
ತ್ರಿದಶ ಗಣಸಂಪೂಜ್ಯ ತ್ರಿಕಕುತ್ ಧಾಮ ಶುಭನಾಮ
ಮಧುಮಥನ ಭೃಗುರಾಮ ಘೋಟಕ ವದನ
ಸರ್ವ ಪದಾರ್ಥದೊಳು ತುದಿ ಮೊದಲು ತುಂಬಿಹನು ಎಂದು ಚಿಂತಿಸು ಬಿಂಬರೂಪದಲಿ//33//
ಕನ್ನಡಿಯ ಕೈವಿಡಿದು ನೋಡಲು ತನ್ನ ಇರವು ಸವ್ಯಾಪಸವ್ಯದಿ ಕಣ್ಣಿಗೆ ಒಪ್ಪುವ ತೆರದಿ
ಅನಿರುದ್ಧನಿಗೆ ಈ ಜಗವು ಭಿನ್ನ ಭಿನ್ನವೆ ತೋರುತಿಪ್ಪುದು
ಜನ್ಯವಾದುದರಿಂದ ಪ್ರತಿಬಿಂಬನ್ನ
ಮಯಗಾನು ಎಂದರಿದು ಪೂಜಿಸಲು ಕೈಕೊಂಬ//34//
ಬಿಂಬರೆನಿಪರು ಸ್ವೋತ್ತಮರು ಪ್ರತಿಬಿಂಬರೆನಿಪರು ಸ್ವ ಅವರರು
ಪ್ರತಿಬಿಂಬ ಬಿಂಬಗಳೊಳಗೆ ಕೇವಲ ಬಿಂಬ ಹರಿಯೆಂದು
ಸಂಭ್ರಮದಿ ಪಾಡುತಲಿ ನೋಡುತ ಉಂಬುದು ಉಡುವುದು ಇಡುವುದು ಕೊಡುವುದು ಎಲ್ಲ
ಅಂಬುಜಾoಬುಕನ ಅಂಘ್ರಿ ಪೂಜೆಗಳು ಎಂದು ನಲಿದಾಡು//35//
ನದಿಯ ಜಲ ನದಿಗೆ ಎರೆವ ತೆರೆದಂದದಲಿ
ಭಗವತ್ ದತ್ತ ಧರ್ಮಗಳು ಉದಧಿಶಯನನಿಗೆ ಅರ್ಪಿಸುತ ವ್ಯಾವೃತ್ತ ನೀನಾಗಿ
ವಿಧಿ ನಿಷೇಧಾದಿಗಳಿಗೆ ಒಳಗಾಗದಲೆ ನೋಡುತ
ದರ್ವಿಯಂದದಿ ಪದುಮನಾಭನ ಸಕಲ ಕರ್ಮಗಳಲಿ ನೆನೆವುತಿರು//36//
ಅರಿಯದಿರ್ದರು ಎಮ್ಮೊಳಿದ್ದು ಅನವರತ ವಿಷಯಗಳ ಉಂಬ
ಜ್ಞಾನ ಉತ್ತರದಿ ತನಗರ್ಪಿಸಲು ಚಿತ್ಸುಖವಿತ್ತು ಸಂತೈಪ
ಸರಿತು ಕಾಲಪ್ರವಹಗಳು ಕಂಡರೆಯು ಸರಿ ಕಾಣದಿರೆ ಪರಿವವು
ಮರಳಿ ಮಜ್ಜನ ಪಾನ ಕರ್ಮಗಳಿಂದ ಸುಖವಿಹವು//37//
ಏನು ಮಾಡುವ ಕರ್ಮಗಳು ಲಕ್ಷ್ಮೀ ನಿವಾಸನಿಗೆ ಅರ್ಪಿಸು
ಅನುಸಂಧಾನ ಪೂರ್ವಕದಿಂದ ಸಂದೇಹಿಸದೆ ದಿನದಿನದಿ
ಮಾನನಿಧಿ ಕೈಕೊಂಡು ಸುಖವಿತ್ತು ಅನತರ ಸಂತೈಪ
ತೃಣ ಜಲ ಧೇನು ತಾನುಂಡು ಅನವರತ ಪಾಲ್ಗರೆವ ತೆರದಂತೆ//38//
ಪೂರ್ವ ದಕ್ಷಿಣ ಪಶ್ಚಿಮ ಉತ್ತರ ಪಾರ್ವತೀಪತಿ ಅಗ್ನಿವಾಯು ಸುಶಾರ್ವರೀಚರ
ದಿಗ್ವಲಯದೊಳು ಹಂಸನಾಮಕನು
ಸರ್ವಕಾಲದಿ ಸರ್ವರೊಳು ಸುರ ಸಾರ್ವಭೌಮನು ಸ್ವೇಚ್ಛೆಯಲಿ
ಮತ್ತೋರ್ವರಿಗೆ ಗೋಚರಿಸದ ಅವ್ಯಕ್ತ ಆತ್ಮನು ಎಂದೆನಿಪ//39//
ಪರಿ ಇಡಾವತ್ಸರನು ಸಂವತ್ಸರದೊಳು ಅನಿರುದ್ಧಾದಿ ರೂಪವ ಧರಿಸಿ
ಬಾರ್ಹಸ್ಪತ್ಯ ಸೌರಭ ಚಾಂದ್ರಮನು ಎನಿಸಿ
ಇರುತಿಹ ಜಗನ್ನಾಥ ವಿಠಲ ಸ್ಮರಿಸುವವರನು ಸಂತೈಪನು ಎಂದು
ಉರುಪರಾಕ್ರಮ ಉಚಿತಸಾಧನ ಯೋಗ್ಯತೆಯನರಿತು//40//
//ಇತಿ ಶ್ರೀ ವಿಭೂತಿ ಸಂಧಿ ಸಂಪೂರ್ಣಂ//
ಶ್ರೀ ಕೃಷ್ಣಾರ್ಪಣಮಸ್ತು
No comments:
Post a Comment