//ಶ್ರೀ ಗುರುಭ್ಯೋ ನಮಃ//
//ಪರಮ ಗುರುಭ್ಯೋ ನಮಃ//
//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//
ಶ್ರೀ ಜಗನ್ನಾಥದಾಸ ವಿರಚಿತ
ಶ್ರೀ ಹರಿಕಥಾಮೃತಸಾರ
//ಭೋಜನ ಸಂಧಿ//
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//
ವನಜಾಂಡದೊಳು ಉಳ್ಳ ಅಖಿಳ ಚೇತನರು ಭುಂಜಿಪ
ಚತುರವಿಧ ಭೋಜನಪದಾರ್ಥದಿ ಚತುರವಿಧ ರಸರೂಪ ತಾನಾಗಿ
ಮನಕೆ ಬಂದಂತೆ ಉಂಡು ಉಣಿಸಿ ಸಂಹನನಕೆ ಉಪಚಯ
ಕರುಣಕೆ ಆನಂದ ಅನಿಮಿಷರಿಗೆ ಆತ್ಮ ಪ್ರದರ್ಶನ ಸುಖವನೀವ ಹರಿ//1//
ನೀಡದಂದದಲೆ ಇಪ್ಪ ಲಿಂಗಕೆ ಷೋಡಶ ಆತ್ಮಕ ರಸ ವಿಭಾಗವ ಮಾಡಿ
ಷೋಡಶ ಕಲೆಗಳಿಗೆ ಉಪಚಯಗಳನೆ ಕೊಡುತ
ಕ್ರೋಡ ಎಪ್ಪತ್ತೆರಡು ಸಾವಿರ ನಾಡಿಗತ ದೇವತೆಗಳೊಳಗೆ ಇದ್ದಾಡುತ ಆನಂದಾತ್ಮ
ಚರಿಸುವ ಲೋಕದೊಳು ತಾನು//2//
ವಾರಿವಾಚ್ಯನು ವಾರಿಯೊಳಗಿದ್ದು ಆರು ರಸವೆಂದೆನಿಸಿ
ಮೂವತ್ತಾರು ಸಾವಿರ ಸ್ತ್ರೀ ಪುರುಷನಾಡಿಯಲಿ ತದ್ರೂಪ ಧಾರಕನು ತಾನಾಗಿ
ಸರ್ವ ಶರೀರಗಳಲಿ ಅಹಶ್ಚರಾತ್ರಿ ವಿಹಾರ ಮಾಳ್ಪನು
ಬೃಹತಿಯೆಂಬ ಸುನಾಮದಿಂ ಕರೆಸಿ//3//
ಆರುರಸ ಸತ್ವಾದಿ ಭೇದದಿ ಆರು ಮೂರಾಗಿ ಇಹವು
ಸಾರಾಸಾರನೀತ ಪ್ರಚುರ ಖಂಡಾಖಂಡ ಚಿತ್ಪ್ರಚುರ
ಈರು ಅಧಿಕ ಎಪ್ಪತ್ತು ಸಾವಿರ ಮಾರಮಣನ ರಸಾಖ್ಯರೂಪ
ಶರೀರದೊಳು ಭೋಜ್ಯ ಸುಪದಾರ್ಥದಿ ತಿಳಿದು ಭುಂಜಿಪುದು//4//
ಕ್ಷೀರಗತ ರಸ ರೂಪಗಳು ಮುನ್ನೂರು ಮೇಲೆ ಐವತ್ತು ನಾಲ್ಕು
ಚಾರು ಘೃತಗತ ರೂಪಗಳು ಇಪ್ಪತ್ತರ ಒಂಭತ್ತು
ಸಾರ ಗುಡದೊಳಗೆ ಐದು ಸಾವಿರ ನೂರಾವೊಂದು
ಸುರೂಪ ದ್ವಿಸಹಸ್ರ ಆರೆರಡು ಶತ ಪಂಚ ವಿಂಶತಿ ರೂಪ ಫಲಗಳಲಿ//5//
ವಿಶದ ಸ್ಥಿರತೀಕ್ಷಣವು ನಿರ್ಹರ ರಸಗಳೊಳು
ಮೂರೈದುಸಾವಿರ ತ್ರಿಶತ ನವರೂಪಗಳ ಚಿಂತಿಸಿ ಭುಂಜಿಪುದು ವಿಷಯ
ಶ್ವಸನ ತತ್ತ್ವೇಶರೊಳಗಿದ್ದು ಈ ಪೆಸರಿನಿಂದಲಿ ಕರೆಸುವನು
ಧೇನಿಸಿದರೀ ಪರಿ ಮನಕೆ ಪೊಳೆವನು ಬಲ್ಲ ವಿಬುಧರಿಗೆ//6//
ಕಪಿಲ ನರಹರಿ ಭಾರ್ಗವತ್ರಯ ವಪುಷ ನೇತ್ರದಿ ನಾಸಿಕಾಸ್ಯದಿ
ಶಫರನಾಮಕ ಜಿಹ್ವೆಯಲಿ ದಂತದಲಿ ಹಂಸಾಖ್ಯ
ತ್ರಿಪದಿಪಾದ್ಯ ಹಯಾಸ್ಯ ವಾಚ್ಯದೊಳು ಅಪರಿಮಿತ ಸುಖಪೂರ್ಣ ಸಂತತ ಕೃಪಣರೊಳಗಿದ್ದು
ಅವರವರ ರಸ ಸ್ವೀಕರಿಸಿ ಕೊಡುವ//7//
ನಿರುಪಮಾನಂದಾತ್ಮ ಹರಿ ಸಂಕರುಷಣ ಪ್ರದ್ಯುಮ್ನರೂಪದಿ ಇರುತಿಹನು ಭೋಕ್ತ್ರುಗಳೊಳಗೆ
ತತ್ಶಕ್ತಿದನುಯೆನಿಸಿ ಕರೆಸುವನು
ನಾರಾಯಣ ಅನಿರುದ್ಧ ಎರಡುನಾಮದಿ ಭೋಜ್ಯವಸ್ತುಗನಿರುತ
ತರ್ಪಕನಾಗಿ ತೃಪ್ತಿಯನೀವ ಚೇತನಕೆ//8//
ವಾಸುದೇವನು ಒಳ ಹೊರಗೆ ಅವಕಾಶ ಕೊಡುವ ನಭಸ್ಥನಾಗಿ
ರಮಾಸಮೇತ ವಿಹಾರ ಮಾಳ್ಪನು ಪಂಚರೂಪದಲಿ
ಆ ಸರೋರುಹ ಸಂಭವಭವವಾಸವಾದಿ ಅಮರಾದಿ ಚೇತನ ರಾಶಿಯೊಳಗೆ
ಇಹನು ಎಂದರಿತವನು ಅವನೇ ಕೋವಿದನು//9//
ವಾಸುದೇವನು ಅನ್ನದೊಳು ನಾನಾ ಸುಭಕ್ಷ್ಯದಿ ಸಂಕರುಷಣ
ಕೃತೀಶ ಪರಮಾನ್ನದೊಳು ಘೃತದೊಳಗೆ ಇಪ್ಪ ಅನಿರುದ್ಧ
ಆ ಸುಪರ್ಣ ಅಂಸಗನು ಸೂಪದಿ ವಾಸವ ಅನುಜ ಶಾಕದೊಳು
ಮೂಲೇಶ ನಾರಾಯಣನು ಸರ್ವತ್ರದಲಿ ನೆಲೆಸಿಹನು//10//
ಅಗಣಿತ ಆತ್ಮ ಸುಭೋಜನ ಪದಾರ್ಥಗಳ ಒಳಗೆ
ಅಖಂಡ ವಾದ ಒಂದು ಅಗಳಿನೊಳು ಅನಂತ ಅಂಶದಲಿ ಖಂಡನೆಂದೆನಿಸಿ
ಜಗದಿ ಜೀವರ ತೃಪ್ತಿ ಪಡಿಸುವ ಸ್ವಗತ ಭೇದ ವಿವರ್ಜಿತನ
ಈರ್ಬಗೆಯ ರೂಪವನರಿತು ಭುಂಜಿಸಿ ಅರ್ಪಿಸು ಅವನಡಿಗೆ//11//
ಈ ಪರಿಯಲಿ ಅರಿತು ಉಂಬ ನರ ನಿತ್ಯ ಉಪವಾಸಿ ನಿರಾಮಯನು ನಿಷ್ಪಾಪಿ
ನಿತ್ಯ ಮಹಾ ಸುಯಜ್ಞಗಳು ಆಚರಿಸಿದವನು
ಪೋಪದು ಇಪ್ಪದು ಬಪ್ಪುದು ಎಲ್ಲ ರಮಾಪತಿಗೆ ಅಧಿಷ್ಠಾನವೆನ್ನು
ಕೃಪಾಪಯೋನಿಧಿ ಮಾತಲಾಲಿಸುವನು ಜನನಿಯಂತೆ//12//
ಆರೆರೆಡು ಸಾವಿರದ ಮೇಲೆ ಇನ್ನೂರ ಐವತ್ತೊಂದು ರೂಪದಿ
ಸಾರಭೋಕ್ತ ಅನಿರುದ್ಧ ದೇವನು ಅನ್ನಮಯನೆನಿಪ
ಮೂರೆರೆಡುವರೆ ಸಾವಿರದ ಮೇಲೆ ಮೂರಧಿಕ ನಾಲ್ವತ್ತು ರೂಪದಿ
ತೋರುತಿಹ ಪ್ರದ್ಯುಮ್ನ ಜಗದೊಳು ಪ್ರಾಣಮಯನಾಗಿ//13//
ಎರಡು ಕೋಶಗಳ ಒಳ ಹೊರಗೆ ಸಂಕರುಷಣ ಇದು ಸುಲಕ್ಷದ ಅರವತ್ತೆರೆಡು ಸಾವಿರದ
ಏಳಧಿಕ ಶತ ರೂಪಗಳ ಧರಿಸಿ ಕರೆಸಿಕೊಂಬ ಮನೋಮಯ ಎಂದು
ಅರವಿದೂರನು ಈರೆರೆಡು ಸಾವಿರದ ಮುನ್ನೂರು
ಅದ ಮೇಲೆ ನಾಲ್ಕಧಿಕ ಎಪ್ಪತ್ತು//14//
ಹದಿನಾಲ್ಕು ಮತ್ತು ಹದಿನೈದನೆ ಪದ್ಯವನ್ನು ಒಟ್ಟಿಗೆ ಓದುವುದು.
ರೂಪದಿಂ ವಿಜ್ಞಾನಮಯನು ಎಂಬೀ ಪೆಸರಿನಿಂ ವಾಸುದೇವನು
ವ್ಯಾಪಿಸಿಹ ಮಹದಾದಿ ತತ್ತ್ವದಿ ತತ್ಪತಿಗಳೊಳಗೆ
ಈ ಪುರುಷ ನಾಮಕನ ಶುಭ ಸ್ವೇದಾಪಳು ಎನಿಸಿದ ರಮಾಂಬ
ತಾ ಬ್ರಹ್ಮಾಪರೋಕ್ಷಿಗಳು ಆದವರ ಲಿಂಗಾಂಗ ಕೆಡಿಸುವಳು//15//
ಐದು ಸಾವಿರ ನೂರಿಪ್ಪತ್ತೈದು ನಾರಾಯಣ ರೂಪವ ತಾ ಧರಿಸಿಕೊಂಡು
ಅನುದಿನದಿ ಆನಂದಮಯನೆನಿಪ
ಐದು ಲಕ್ಷದ ಮೇಲೆ ಎಂಭತ್ತೈದುಸಾವಿರ ನಾಲ್ಕು ಶತಗಳ
ಐದು ಕೋಶಾತ್ಮಕ ವಿರಿಂಚಾಡದೊಳು ತುಂಬಿಹನು//16//
ನೂರಾವೊಂದು ಸುರೂಪದಿಂ ಶಾಂತೀರಮಣ ತಾನು ಅನ್ನನೆನಿಪ
ಐನೂರ ಮೇಲೆ ಮೂರಧಿಕ ದಶ ಪ್ರಾಣಾಖ್ಯ ಪ್ರದ್ಯುಮ್ನ
ತೋರುತಿಹನು ಐವತ್ತೈದುಸಾವಿರ ವಿಕಾರ ಮನದೊಳು ಸಂಕರುಷಣ
ಐನೂರ ಚತುರಾಶೀತಿ ವಿಜ್ಞಾನಾತ್ಮ ವಿಶ್ವಾಖ್ಯ//17//
ಮೂರು ಸಾವಿರದ ಅರ್ಧಶತ ಮೇಲೆ ಈರು ಅಧಿಕ ರೂಪಗಳ ಧರಿಸಿ
ಶರೀರದೊಳಗೆ ಆನಂದಮಯ ನಾಯಾಯಣಾಹ್ವಯನು
ಈರೆರೆಡು ಸಾವಿರದ ಮೇಲೆ ಮುನ್ನೂರ ಐದು ಸುರೂಪದಿಂದಲಿ
ಭಾರತೀಶನೊಳು ಇಪ್ಪ ನವನೀತಸ್ಥ ಘೃತದಂತೆ//18//
ಮೂರಧಿಕ ಐವತ್ತು ಪ್ರಾಣ ಶರೀರದೊಳಗೆ ಅನಿರುದ್ಧನು ಇಪ್ಪ
ಐನೂರು ಹನ್ನೊಂದು ಅಧಿಕ ಅಪಾನನೊಳು ಇಪ್ಪ ಪ್ರದ್ಯುಮ್ನ
ಮೂರನೇ ವ್ಯಾನನೊಳಗೆ ಐದರೆ ನೂರು ರೂಪದಿ ಸಂಕರುಷಣ
ಐನೂರ ಮೂವತ್ತೈದು ಉದಾನನೊಳು ಇಪ್ಪ ಮಾಯೇಶ//19//
ಮೂಲ ನಾರಾಯಣನು ಐವತ್ತೇಳಧಿಕ ಐನೂರು ರೂಪವ ತಾಳಿ
ಸರ್ವತ್ರದಿ ಸಮಾನನೊಳಿಪ್ಪ ಸರ್ವಜ್ಞ
ಲೀಲೆಗೈವನು ಸಾವಿರದ ಮೇಲೆ ಏಳು ನೂರು ಹನ್ನೊಂದು ರೂಪವ ತಾಳಿ
ಪಂಚಪ್ರಾಣರೊಳು ಲೋಕಗಳ ಸಲಹುವನು//20//
ತ್ರಿನವತಿ ಸುರೂಪಾತ್ಮಕ ಅನಿರುದ್ಧನು ಸದಾ ಯಜಮಾನನಾಗಿದ್ದು
ಅನಲ ಯಮ ಸೋಮಾದಿ ಪಿತೃದೇವತೆಗಳಿಗೆ ಅನ್ನನು ಎನಿಪನು
ಆ ಪ್ರದ್ಯುಮ್ನ ಸಂಕರುಷಣ ವಿಭಾಗವ ಮಾಡಿಕೊಟ್ಟು ಉಂಡುಣಿಪ
ನಿತ್ಯಾನಂದ ಭೋಜನದಾಯಿ ತುರ್ಯಾಹ್ವ//21//
ಷಣ್ಣವತಿ ನಾಮಕನು ವಸು ಮೂಗಣ್ಣ ಭಾಸ್ಕರರ ಒಳಗೆ ನಿಂತು
ಪ್ರಾಪನ್ನರು ಅನುದಿನ ನಿಷ್ಕಪಟ ಸದ್ಭಕ್ತಿಯಲಿ ಮಾಳ್ಪ ಪುಣ್ಯ ಕರ್ಮವ ಸ್ವೀಕರಿಸಿ
ಕಾರುಣ್ಯ ಸಾಗರನು ಆ ಪಿತೃಗಳಿಗೆ
ಅಗಣ್ಯ ಸುಖವಿತ್ತು ಅವರ ಪೊರೆವನು ಎಲ್ಲ ಕಾಲದಲಿ//22//
ಸುತಪ ಏಕ ಉತ್ತರ ಸುಪಂಚಾಶತ ವರಣ ಕರಣದಿ ಚತುರ ವಿಂಶತಿ ಸುತತ್ವದಿ
ಧಾತುಗಳೊಳು ಇದ್ದು ಅವಿರತ ಅನಿರುದ್ಧ
ಜತನ ಮಾಳ್ಪನು ಜಗದಿ ಜೀವ ಪ್ರತತಿಗಳ
ಷಣ್ಣವತಿ ನಾಮಕ ಚತುರ ಮೂರ್ತಿಗಳ ಅರ್ಚಿಸುವರು ಅದರಿಂದ ಬಲ್ಲವರು//23//
ಅಬುಜಾಂಡ ಉದರನು ವಿಪಿನದಿ ಶಬರಿ ಯಂಜಲನುಂಡ ಗೋಕುಲದ ಅಬಲೆಯರನು
ಓಲಿಸಿದನು ಋಷಿಪತ್ನಿಯರು ಕೊಟ್ಟನ್ನ ಸುಭುಜ ತಾ ಭುಂಜಿಸಿದ
ಸ್ವರಮಣ ಕುಬುಜಗಂಧಕೊಲಿದ ಮುನಿಗಣ ವಿಬುಧ ಸೇವಿತ
ಬಿಡುವನೆ ನಾವು ಇತ್ತ ಕರ್ಮಫಲ//24//
ಗಣನೆಯಿಲ್ಲದ ಪರಮಸುಖ ಸುದ್ಗುಣ ಗಣಂಗಳ ಲೇಶ ಲೇಶಕೆ ಎಣೆಯೆನಿಸದು
ರಮಾಬ್ಜಭವ ಶಕ್ರಾದಿಗಳ ಸುಖವು
ಉಣುತ ಉಣುತ ಮೈಮರೆದು ಕೃಷ್ಣಾರ್ಪಣವೆನಲು
ಕೈಕೊಂಬನು ಅರ್ಭಕ ಜನನಿ ಭೋಜನ ಸಮಯದಲಿ ಕೈವಡ್ದು ವಂದದಲಿ//25//
ಜೀವಕೃತ ಕರ್ಮಗಳ ಬಿಡದೆ ರಮಾವರನು ಸ್ವೀಕರಿಸಿ
ಫಲಗಳನು ಈವನು ಅಧಿಕಾರಾನುಸಾರದಲಿ ಅವರಿಗೆ ಅನವರತ
ಪಾವಕನು ಸರ್ವಸ್ವ ಭುಂಜಿಸಿ ತಾ ವಿಕಾರವನು ಐದನು ಒಮ್ಮೆಗೆ
ಪಾವನಕೆ ಪಾವನನೆನಿಪ ಹರಿಯುಂಬುದು ಎನರಿದು//26//
ಕಳುಷಜಿಹ್ವೆಗೆ ಸುಷ್ಟುಭೋಜನ ಜಲ ಮೊದಲು ವಿಷತೋರುವುದು
ನಿಷ್ಕಲುಷ ಜಿಹ್ವೆಗೆ ಸುರಸ ತೋರುವುದು ಎಲ್ಲ ಕಾಲದಲಿ
ಸುಲಲಿತಾಂಗಗೆ ಸಕಲ ರಸ ಮಂಗಳವೆನಿಸುತಿಹುದು
ಅನ್ನಮಯ ಕೈಕೊಳದೆ ಬಿಡುವನೆ ಪೂತನಿಯ ವಿಷ ಮೊಲೆಯನು ಉಂಡವನು//27//
ಪೇಳಲಿ ಏನು ಸಮೀರ ದೇವನು ಕಾಳಕೂಟವನು ಉಂಡು ಲೋಕವ ಪಾಲಿಸಿದ
ತದ್ದಾಸನು ಓರ್ವನು ಅಮೃತನೆನಿಸಿದನು
ಶ್ರೀ ಲಕುಮಿವಲ್ಲಭ ಶುಭಾಶುಭ ಜಾಲ ಕರ್ಮಗಳ ಉಂಬನು
ಉಪಚಯದ ಏಳಿಗೆಗಳು ಇವಗಿಲ್ಲವೆಂದಿಗು ಸ್ವರಸಗಳ ಬಿಟ್ಟು//28//
ಈ ಪರಿಯಲಿ ಅಚ್ಯುತನ ತತ್ತದ್ರೂಪ ತನ್ನಾಮಗಳ ಸಲೆ
ನಾನಾ ಪದಾರ್ಥದಿ ನೆನೆನೆನೆದು ಭುಂಜಿಸುತಲಿ ಇರು ವಿಷಯ
ಪ್ರಾಪಕ ಸ್ಥಾಪಕ ನಿಯಾಮಕ ವ್ಯಾಪಕನು ಎಂದರಿದು
ನೀ ನಿರ್ಲೇಪನು ಆಗಿರು ಪುಣ್ಯ ಪಾಪಗಳ ಅರ್ಪಿಸು ಅವನ ಅಡಿಗೆ//29//
ಐದು ಲಕ್ಷ ಎಂಭತ್ತರ ಒಂಭತ್ತು ಆದ ಸಾವಿರದ ಏಳುನೂರರ ಐದು ರೂಪವ ಧರಿಸಿ
ಭೋಕ್ತ್ರುಗ ಭೋಜ್ಯನೆಂದೆನಿಸಿ
ಶ್ರೀಧರಾದುರ್ಗಾರಮಣ ಪಾದಾದಿ ಶಿರ ಪರ್ಯಂತ ವ್ಯಾಪಿಸಿ ಕಾದು ಕೊಂಡಿಹ
ಸಂತತ ಜಗನ್ನಾಥ ವಿಠಲನು//30//
//ಇತಿ ಶ್ರೀ ಭೋಜನ ಸಂಧಿ ಸಂಪೂರ್ಣಂ//
ಶ್ರೀ ಕೃಷ್ಣಾರ್ಪಣಮಸ್ತು
No comments:
Post a Comment