Wednesday, December 26, 2012

ಶ್ರೀ ಹರಿಕಥಾಮೃತಸಾರ - 3

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ವ್ಯಾಪ್ತಿ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಪುರುಷರೂಪತ್ರಯ ಪುರಾಣ ಪುರುಷ ಪುರುಷೋತ್ತಮ

ಕ್ಷರಾಕ್ಷರ ಪುರುಷ ಪೂಜಿತ ಪಾದ ಪೂರ್ಣಾನಂದ ಜ್ಞಾನಮಯ

ಪುರುಷಸೂಕ್ತ ಸುಮೇಯ ತತ್ತತ್ ಪುರುಷ ಹೃತ್ಪುಷ್ಕರ ನಿಲಯ

ಮಹಾಪುರುಷ ಅಜಾಂಡ ಅಂತರದಿ ಬಹಿರದಿ ವ್ಯಾಪ್ತ ನಿರ್ಲಿಪ್ತ//1//


ಸ್ತ್ರೀ ನಪುಂಸಕ ಪುರುಷ ಭೂ ಸಲಿಲ ಅನಲ ಗಗನ ಮನ ಶಶಿ

ಭಾನು ಕಾಲ ಗುಣ ಪ್ರಕೃತಿಯೊಳಗೆ ಒಂದು ತಾನಲ್ಲ

ಏನು ಇವನ ಮಹಾಮಹಿಮೆ ಕಡೆಗಾಣರು ಅಜಭವ ಶಕ್ರ ಮುಖರು

ನಿಧಾನಿಸಲು ಮಾನವರಿಗೆ ಅಳವಡುವುದೇ ವಿಚಾರಿಸಲು//2//


ಗಂಧ ರಸರೂಪ ಸ್ಪರ್ಶ ಶಬ್ದ ಒಂದು ತಾನಲ್ಲ

ಅದರದರ ಪೆಸರಿಂದ ಕರೆಸುತ ಜೀವರಿಗೆ ತರ್ಪಕನು ತಾನಾಗಿ

ಪೊಂದಿಕೊಂಡಿಹ ಪರಮ ಕರುಣಾಸಿಂಧು ಶಾಶ್ವತ

ಮನವೆ ಮೊದಲಾದ ಇಂದ್ರಿಯಗಳೊಳಗೆ ಇದ್ದು ಭೋಗಿಸುತಿಹನು ವಿಷಯಗಳ//3//


ಶ್ರವಣ ನಯನ ಘ್ರಾಣ ತ್ವಗ್ರಸನ ಇವುಗಳೊಳು

ವಾಕ್ಪಾಣಿ ಪಾದಾದಿ ಅವಯವಗಳೊಳು ತದ್ಗುಣಗಳೊಳು ತತ್ಪತಿಗಳೊಳಗೆ

ಪ್ರವಿತತನು ತಾನಾಗಿ ಕೃತಿಪತಿ ವಿವಿಧ ಕರ್ಮವ ಮಾಡಿ ಮಾಡಿಸಿ

ಭವಕೆ ಕಾರಣನಾಗಿ ತಿರುಗಿಸುತಿಹನು ತಿಳಿಸದಲೆ//4//


ಗುಣಿಗುಣಗಳೊಳಗೆ ಇದ್ದು ಗುಣಿಗುಣನು ಎನಿಸುವನು ಗುಣಬದ್ಧನಾಗದೆ

ಗುಣಜ ಪುಣ್ಯಾಪುಣ್ಯ ಫಲ ಬ್ರಹ್ಮಾದಿಚೇತನಕೆ ಉಣಿಸುತ ಅವರೊಳಗಿದ್ದು

ವೃಜಿನ ಅರ್ದನ ಚಿದಾನಂದೈಕ ದೇಹವನು

ಕೊನೆಗೆ ಸಚರಾಚಾರ ಜಗದ್ಭುಕುವೆನಿಪನು ಅವ್ಯಯನು//5//


ವಿದ್ಯೆ ತಾನೆನೆಸಿಕೊಂಬ ಅನಿರುದ್ಧದೇವನು

ಸರ್ವಜೀವರ ಬುದ್ಧಿಯಲಿ ತಾನಿದ್ದು ಕೃತಿಪತಿ ಬುದ್ಧಿಯೆನಿಸುವನು

ಸಿದ್ಧಿಯೆನಿಸುವ ಸಂಕರುಷನ ಪ್ರಸಿದ್ಧನಾಮಕ ವಾಸುದೇವ

ಅನವದ್ಯ ರೂಪ ಚತುಷ್ಟಯಗಳ ಅರಿತವನೆ ಪಂಡಿತನು//6//


ತನುಚತುಷ್ಟಯಗಳೊಳು ನಾರಾಯಣನು ಹೃತ್ಕಮಲಾಖ್ಯ ಸಿಂಹಾಸನದೊಳು

ಅನಿರುದ್ಧಾದಿ ರೂಪಗಳಿಂದ ಶೋಭಿಸುತ

ತನಗೆ ತಾನೇ ಸೇವ್ಯ ಸೇವಕನೆನೆಸಿ ಸೇವಾಸಕ್ತ ಸುರರೊಳಗೆ

ಅನವರತ ನೆಲೆಸಿದ್ದು ಸೇವೆಯ ಕೊಂಬನವರಂತೆ//7//


ಜಾಗರ ಸ್ವಪ್ನಂಗಳೊಳು ವರಭೋಗೀಶಯನನು ಬಹು ಪ್ರಕಾರ ವಿಭಾಗಗೈಸಿ

ನಿರಂಶಜೀವರ ಚಿತ್ಶರೀರವನು ಭೋಗವಿತ್ತು

ಸುಷುಪ್ತಿಕಾಲದಿ ಸಾಗರವ ನದಿ ಕೂಡುವಂತೆ

ವಿಯೋಗರಹಿತನು ಅಂಶಗಳನು ಏಕತ್ರವೈದಿಸುವ//8//


ಭಾರ್ಯರಿಂದೊಡಗೂಡಿ ಕಾರಣಕಾರ್ಯ ವಸ್ತುಗಳಲ್ಲಿ

ಪ್ರೆರಕಪ್ರೇರ್ಯ ರೂಪಗಳಿಂದ ಪಟತಂತುಗಳವೊಳಿದ್ದು

ಸೂರ್ಯ ಕಿರಣಗಳಂತೆ ತನ್ನಯ ವೀರ್ಯದಿಂದಲಿ ಕೊಡುತ ಕೊಳುತಿಹ

ಅನಾರ್ಯರಿಗೆ ಈತನ ವಿಹಾರವು ಗೋಚರಿಪುದೇನೋ//9//


ಜನಕ ತನ್ನ ಆತ್ಮಜಗೆ ವರ ಭೂಷಣದುಕೂಲವ ತೊಡಿಸಿ

ತಾ ವಂದನೆಯ ಕೈಕೊಳುತ ಹರಸುತ ಹರುಷಬಡುವಂತೆ

ವನರುಹೇಕ್ಷಣ ಪೂಜ್ಯ ಪೂಜಕನು ಎನಿಸಿ ಪೂಜಾಸಾಧನ

ಪದಾರ್ಥವನು ತನಗೆ ತಾನಾಗಿ ಫಲಗಳನೀವ ಭಜಕರಿಗೆ//10//


ತಂದೆ ಬಹು ಸಂಭ್ರಮದಿ ತನ್ನಯ ಬಂಧು ಬಳಗವ ನೆರಹಿ

ಮದುವೆಯ ನಂದನಗೆ ತಾ ಮಾಡಿ ಮನೆಯೊಳಗಿಡುವ ತೆರದಂತೆ

ಇಂದಿರಾಧವ ತನ್ನ ಇಚ್ಚಯಲಿಂದ ಗುಣಗಳ ಚೇತನಕೆ ಸಂಬಂಧಗೈಸಿ

ಸುಖಾಸುಖಾತ್ಮಕ ಸಂಸೃತಿಯೊಳು ಇಡುವ//11//


ತೃಣ ಕೃತ ಆಲಯದೊಳಗೆ ಪೋಗೆ ಸಂದಣಿಸಿ ಪ್ರತಿ ಛಿದ್ರದಲಿ ಪೊರಮಟ್ಟು

ಅನಳ ನಿರವನು ತೋರಿ ತೋರದಲಿಪ್ಪ ತೆರದಂತೆ

ವನಜಾಂಡದೊಳು ಅಖಿಳ ಜೀವರ ತನುವಿನ ಒಳ ಹೊರಗೆ ಇದ್ದು

ಕಾಣಿಸದೆ ಅನಿಮಿಶೇಷನು ಸಕಲ ಕರ್ಮವ ಮಾಳ್ಪನು ಅವರಂತೆ//12//


ಪಾದಪಗಳ ಅಡಿಗೆ ಎರೆಯೆ ಸಲಿಲವು ತೋದು ಕಂಬಿಗಳು ಉಬ್ಬಿ

ಪುಷ್ಪ ಸ್ವಾದು ಫಲವ ಈವಂದದಲಿ ಸರ್ವೇಶ್ವರನು

ಜನರ ಆರಾಧನೆಯ ಕೈಕೊಂಡು ಬ್ರಹ್ಮ ಭವಾದಿಗಳ ನಾಮದಲಿ ಫಲವಿತ್ತು

ಆದರಿಸುವನು ತನ್ನ ಮಹಿಮೆಯ ತೋರಗೊಡ ಜನಕೆ//13//


ಶೃತಿತತಿಗಳಿಗೆ ಗೋಚರಿಸದ ಅಪ್ರತಿಮ ಅಜಾನಂದಾತ್ಮನು ಅಚ್ಯುತ ವಿತತ

ವಿಶ್ವಾಧಾರ ವಿದ್ಯಾಧೀಶ ವಿಧಿ ಜನಕ

ಪ್ರತಿದಿವಸ ಚೇತನರೊಳಗೆ ಪ್ರಾಕೃತ ಪುರುಷನಂದದಲಿ ಸಂಚರಿಸುತ

ನಿಯಮ್ಯ ನಿಯಾಮಕನು ತಾನಾಗಿ ಸಂತೈಪ//14//


ಮನ ವಿಷಯದೊಳಗೆ ಇರಿಸಿ ವಿಷಯವ ಮನದೊಳಗೆ ನೆಲೆಗೊಳಿಸಿ

ಬಲು ನೂತನವು ಸುಸಮೀಚೀನವಿದು ಉಪಾದೇಯವೆಂದೆನಿಸಿ

ಕನಸಿಲಾದರು ತನ್ನ ಪಾದದ ನೆನೆವನು ಈಯದೆ

ಸರ್ವರೊಳಗಿದ್ದು ಅನುಭವಿಸುವನು ಸ್ಥೂಲ ವಿಷಯವ ವಿಶ್ವನೆಂದೆನಿಸಿ//15//


ತೋದಕನು ತಾನಾಗಿ ಮನ ಮೊದಲಾದ ಕರಣದೊಳು ಇದ್ದು ವಿಷಯವ ನೈದುವನು

ನಿಜಪೂರ್ಣ ಸುಖಮಯ ಗ್ರಾಹ್ಯ ಗ್ರಾಹಕನು

ವೇದ ವೇದ್ಯನು ತಿಳಿಯದವನೋಪಾದಿ ಭುಂಜಿಸುತ

ಎಲ್ಲರೊಳಗೆ ಆಹ್ಲಾದ ಪಡುವನು ಭಕ್ತವತ್ಸಲ ಭಾಗ್ಯಸಂಪನ್ನ//16//


ನಿತ್ಯನಿಗಮಾತೀತ ನಿರ್ಗುಣ ಭೃತ್ಯವತ್ಸಲ ಭಯವಿನಾಶನ

ಸತ್ಯಕಾಮ ಶರಣ್ಯ ಶ್ಯಾಮಲ ಕೋಮಲಾಂಗ ಸುಖಿ

ಮತ್ತನಂದದಿ ಮರ್ತ್ಯರ ಒಳ ಹೊರಗೆ ಎತ್ತ ನೋಡಲು ಸುತ್ತುತ ಇಪ್ಪನು

ಅತ್ಯಧಿಕ ಸಂತೃಪ್ತ ತ್ರಿಜಗದ್ವ್ಯಾಪ್ತ ಪರಮಾಪ್ತ//17//


ಪವಿ ಹರಿನ್ಮಣಿ ವಿದ್ರುಮದ ಸಚ್ಛವಿಗಳ ಅಂದದಿ

ರಾಜಿಸುತ ಮಾಧವ ನಿರಂತರ ಮಾನವ ದಾನವರೊಳು ಇದ್ದು

ತ್ರಿವಿಧ ಗುಣ ಕರ್ಮ ಸ್ವಭಾವವ ಪವನಮುಖ ದೇವಾಂತರಾತ್ಮಕ

ದಿವಸ ದಿವಸದಿ ವ್ಯಕ್ತಮಾಡುತಲಿ ಅವರೊಳಿದ್ದು ಉಣಿಪ//18//


ಅಣು ಮಹತ್ತಿನೊಳು ಇಪ್ಪ ಘನ ಪರಮಣುವಿನೊಳು ಅಡಗಿಸುವ

ಸೂಕ್ಷ್ಮವ ಮುಣುಗಿಸುವ ತೇಲಿಸುವ ಸ್ಥೂಲಗಳ ಅವನ ಮಾಯವಿದು

ದನುಜ ರಾಕ್ಷಸರು ಎಲ್ಲರು ಇವನೊಳು ಮುನಿದು ಮಾಡುವುದೇನು

ಉಲೂಖಲ ಒನಕೆಗಳು ಧಾನ್ಯಗಳ ಹಣಿವಂದದಲಿ ಸಂಹರಿಪ//19//


ದೇವ ಮಾನವ ದಾನವರು ಎಂದು ಈ ವಿಧದಲಿ ಆವಾಗಲಿ ಇಪ್ಪರು

ಮೂವರೊಳಗೆ ಇವಗೆ ಇಲ್ಲ ಸ್ನೇಹ ಉದಾಸೀನ ದ್ವೇಷ

ಜೀವರ ಅಧಿಕಾರ ಅನುಸಾರದಲಿ ಈವ ಸುಖ ಸಂಸಾರ ದುಃಖವ

ತಾ ಉಣದಲೆ ಅವರವರಿಗೆ ಉಣಿಸುವ ನಿರ್ಗತಾಶನನು//20//


ಎಲ್ಲಿ ಕೇಳಿದರೆ ಎಲ್ಲಿ ನೋಡಿದರೆ ಎಲ್ಲಿ ಬೇಡಿದರೆ ಎಲ್ಲಿ ನೀಡಿದರೆ

ಎಲ್ಲಿ ಓಡಿದರೆ ಎಲ್ಲಿ ಆಡಿದರೆ ಅಲ್ಲೇ ಇರುತಿಹನು

ಬಲ್ಲಿದರಿಗೆ ಅತಿ ಬಲ್ಲಿದನು ಸರಿಯಿಲ್ಲ ಇವಗೆ ಅಲ್ಲಿ ನೋಡಲು

ಖುಲ್ಲಮಾನವರೊಲ್ಲನು ಅಪ್ರತಿಮಲ್ಲ ಜಗಕೆಲ್ಲ//21//


ತಪ್ತ ಲೋಹವು ನೋಳ್ಪ ಜನರಿಗೆ ಸಪ್ತ ಜಿಹ್ವವ ತೆರದಿ ತೋರ್ಪದು

ಲುಪ್ತ ಪಾವಕ ಲೋಹ ಕಾಂಬುದು ಪೂರ್ವದೋಪಾದಿ

ಸಪ್ತವಾಹನ ನಿಖಿಳ ಜನರೊಳು ವ್ಯಾಪ್ತನು ಆದುದರಿಂದ

ಸರ್ವರೂ ಆಪ್ತರು ಆಗಿಹರು ಎಲ್ಲ ಕಾಲದಿ ಕೈಕೊಂಡು//22//


ವಾರಿದನು ಮಳೆಗರೆಯೆ ಬೆಳೆದಿಹ ಭೂರುಹಂಗಳು ಚಿತ್ರ ಫಲರಸ

ಬೇರೆ ಬೇರೆ ಇಪ್ಪಂತೆ ಬಹುವಿಧ ಜೀವರೊಳಗೆ ಇದ್ದು ಮಾರಮಣನು

ಅವರವರ ಯೋಗ್ಯತೆ ಮೀರದಲೆ ಗುಣಕರ್ಮಗಳ ಅನುಸಾರ ನಡೆಸುವ

ದೇವನಿಗೆ ವೈಷಮ್ಯವೆಲ್ಲಿಹುದೋ//23//


ವಾರಿಜಾಪ್ತನ ಕಿರಣ ಮಣಿಗಳ ಸೇರಿ ತತ್ತತ್ ವರ್ಣಗಳನು

ವಿಕಾರಗೈಸದೆ ನೋಳ್ಪರಿಗೆ ಕಂಗೊಳಿಸುವಂದದಲಿ

ಮಾರಮಣ ಲೋಕತ್ರಯದೊಳು ಇಹ ಮೂರುವಿಧ ಜೀವರೊಳಗೆ

ಇದ್ದು ವಿಹಾರಮಾಡುವನು ಅವರ ಯೋಗ್ಯತೆ ಕರ್ಮವ ಅನುಸರಿಸಿ//24//


ಜಲವನು ಅಪಹರಿಸುವ ಘಳಿಗೆ ಬಟ್ಟಲನು ಉಳಿದು

ಜಯಘಂಟೆ ಕೈಪಿಡಿದು ಎಳೆದು ಹೊಡೆವಂದದಲಿ

ಸಂತತ ಕರ್ತೃ ತಾನಾಗಿ ಹಲಧರಾನುಜ ಪುಣ್ಯ ಪಾಪದ ಫಲಗಳನು

ದೇವಾಸುರರ ಗಣದೊಳು ವಿಭಾಗವ ಮಾಡಿ ಉಣಿಸುತ ಸಾಕ್ಷಿಯಾಗಿಪ್ಪ//25//


ಪೊಂದಿಕೊಂಡಿಹ ಸರ್ವರೊಳು ಸಂಬಂಧವಾಗದೆ

ಸಕಲಕರ್ಮವ ಅರಂದದಲಿ ತಾ ಮಾಡಿಮಾಡಿಪ ತತ್ಫಲಗಳುಣದೆ

ಕುಂದದೆ ಅಣುಮಾಹತ್ತು ಎನಿಪ ಘಟಮಂದಿರದಿ ಸರ್ವತ್ರ ತುಂಬಿಹ

ಬಾಂದಳದ ತೆರೆದಂತೆ ಇರುತಿಪ್ಪನು ರಮಾರಮಣ//26//


ಕಾದ ಕಬ್ಬಿಣ ಹಿಡಿದು ಬಡಿಯಲು ವೇದನೆಯು ಲೋಹಗಳಿಗೆ ಅಲ್ಲವೆ

ಆದುದೇನೈ ಅನಳಗಾ ವ್ಯಥೆ ಏನು ಮಾಡಿದರು

ಆದಿದೇವನು ಸರ್ವ ಜೀವರ ಕಾದುಕೊಂಡಿಹನು ಒಳಹೊರಗೆ

ದುಃಖಾದಿಗಳು ಸಂಬಂಧವಾಗುವವೇನೋ ಚಿನ್ಮಯಗೆ//27//


ಮಳಲ ಮನೆಗಳ ಮಾಡಿ ಮಕ್ಕಳು ಕಾಲದಲಾಡಿ ಮೋದದಿ ತುಳಿದು ಕೆಡಿಸುವ ತೆರದಿ

ಲಕ್ಷ್ಮೀರಮಣ ಲೋಕಗಳ ಹಲವು ಬಗೆಯಲಿ ನಿರ್ಮಿಸುವ

ನಿಶ್ಚಲನು ತಾನಾಗಿದ್ದು ಸಲಹುವ

ಎಲರುಣಿಯವೋಳ್ ನುಂಗುವಗೆ ಎಲ್ಲಿಹುದೋ ಸುಖ ದುಃಖ//28//


ವೇಷಭಾಷೆಗಳಿಂದ ಜನರ ಪ್ರಮೋಷಗೈಸುವ ನಟಪುರುಷನೋಳ್

ದೋಷದೂರನು ಲೋಕದೊಳು ಬಹುರೂಪ ಮಾತಿನಲಿ ತೋಷಿಸುವನು

ಅವರವರ ಮನದ ಅಭಿಲಾಷೆಗಳ ಪೂರೈಸುತ ಅನುದಿನ ಪೋಷಿಸುವ

ಪೂತಾತ್ಮ ಪೂರ್ಣ ಆನಂದ ಜ್ಞಾನಮಯ//29//


ಅಧಮ ಮಾನವನು ಓರ್ವ ಮಂತ್ರೌಷಧಗಳನು ತಾನರಿತು

ಪಾವಕೋದಕಗಳ ಸಂಬಂಧವಿಲ್ಲದಲಿಪ್ಪನು ಅದರೊಳಗೆ

ಪದುಮಜ ಅಂಡ ಉದರನು ಸರ್ವರ ಹೃದಯದೊಳಗೆ ಇರೆ

ಕಾಲಗುಣಕರ್ಮದ ಕಲುಷ ಸಂಬಂಧವಾಗುವುದೇ ನಿರಂಜನಗೆ//30//


ಒಂದು ಗುಣದೊಳು ಅನಂತ ಗುಣಗಳು ಒಂದು ರೂಪದೊಳು ಇಹವು

ಲೋಕಗಳ ಒಂದೇ ರೂಪದಿ ಧರಿಸಿ ತದ್ಗತ ಪದಾರ್ಥದ ಒಳ ಹೊರಗೆ

ಬಾಂದಳದೊಳಿದ್ದು ಬಹು ಪೆಸರಿಂದ ಕರೆಸುತ

ಪೂರ್ಣ ಜ್ನಾನಾನಂದಮಯ ಪರಿಪರಿ ವಿಹಾರವ ಮಾಡಿ ಮಾಡಿಸುವ//31//


ಎಲ್ಲರೊಳು ತಾನಿಪ್ಪ ತನ್ನೊಳಗೆ ಎಲ್ಲರನು ಧರಿಸಿಹನು

ಅಪ್ರತಿಮಲ್ಲ ಮನ್ಮಥಜನಕ ಜಗದ ಆದಿ ಅಂತ ಮಧ್ಯಗಳ ಬಲ್ಲ

ಬಹುಗುಣ ಭರಿತ ದಾನವ ದಲ್ಲಣ ಜಗನ್ನಾಥ ವಿಠಲ

ಸೊಲ್ಲು ಲಾಲಿಸಿ ಸ್ತಂಭದಿಂದಲಿ ಬಂದ ಭಕುತನಿಗೆ//32//


 
//ಇತಿ ಶ್ರೀ ವ್ಯಾಪ್ತಿ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment