//ಶ್ರೀ ಗುರುಭ್ಯೋ ನಮಃ//
//ಪರಮ ಗುರುಭ್ಯೋ ನಮಃ//
//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//
ಶ್ರೀ ಜಗನ್ನಾಥದಾಸ ವಿರಚಿತ
ಶ್ರೀ ಹರಿಕಥಾಮೃತಸಾರ
//ಕರುಣಾ ಸಂಧಿ//
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//
ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದು
ವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದು
ಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯ
ಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು ಭೂಸುರರು ದಿನದಿನದಿ//1//
ಮಳೆಯ ನೀರು ಓಣಿಯೊಳು ಪರಿಯಲು, ಬಳಸರು ಊರೊಳಗೆ ಇದ್ದ ಜನರು
ಆ ಜಲವು ಹೆದ್ದೊರೆಗೂಡೆ ಮಜ್ಜನಪಾನ ಗೈದಪರು
ಕಲುಷ ವಚನಗಳ ಆದಡೆಯು, ಬಾಂಬೊಳೆಯ ಪೆತ್ತನ ಪಾದ ಮಹಿಮ
ಆ ಜಲದಿ ಪೊಕ್ಕದರಿಂದ ಮಾಣ್ದಪರೆ ಮಹೀಸುರರು//2//
ಶೃತಿತತಿಗಳ ಅಭಿಮಾನಿ ಲಕ್ಷ್ಮೀಸ್ತುತಿಗಳಿಗೆ ಗೋಚರಿಸದ
ಅಪ್ರತಿಹತ ಮಹೈಶ್ವರ್ಯಾದಿ ಅಖಿಲ ಸದ್ಗುಣ ಗಣಾಂಭೋಧಿ
ಪ್ರತಿದಿವಸ ತನ್ನಂಘ್ರಿ ಸೇವಾರತ ಮಹಾತ್ಮರು ಮಾಡುತಿಹ
ಸಂಸ್ತುತಿಗೆವಶನಾಗುವೆನು ಇವನ ಕಾರುಣ್ಯಕೆ ಏನೆಂಬೆ//3//
ಮನವಚನಕೆ ಅತಿದೂರ ನೆನೆವರನು ಅನುಸರಿಸಿ ತಿರುಗುವನು ಜಾಹ್ನವಿ ಜನಕ
ಜನರೊಳಗಿದ್ದು ಜನಿಸುವ ಜಗದುದರ ತಾನು
ಘನಮಹಿಮ ಗಾಂಗೇಯನುತ ಗಾಯನವ ಕೇಳುತ
ಗಗನಚರ ವಾಹನ ದಿವೌಕಸರೊಡನೆ ಚರಿಸುವ ಮನೆಮನೆಗಳಲ್ಲಿ//4//
ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ
ಕುಳಿತು ಪಾಡಲು ನಿಲುವ ನಿಂತರೆ ನಲಿವ ನಲಿದರೆ ಒಲಿವ ನಿಮಗೆಂಬ
ಸುಲಭನೋ ಹರಿ ತನ್ನವರನು ಅರಘಳಿಗೆ ಬಿಟ್ಟಗಲನು
ರಮಾಧವನ ಒಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ//5//
ಮನದೊಳಗೆ ತಾನಿದ್ದು ಮನವೆಂದು ಎನಿಸಿಕೊಂಬನು
ಮನದ ವೃತ್ತಿಗಳ ಅನುಸರಿಸಿ ಭೋಗಂಗಳೀವನು ತ್ರಿವಿಧ ಚೇತನಕೆ
ಮನವಿತ್ತರೆ ತನ್ನನೀವನು ತನುವ ದಂಡಿಸಿ ದಿನದಿನದಿ ಸಾಧನವ ಮಾಳ್ಪರಿಗೆ
ಇತ್ತಪನು ಸ್ವರ್ಗಾದಿ ಭೋಗಗಳ//6//
ಪರಮ ಸತ್ಪುರುಷಾರ್ಥರೂಪವನು ಹರಿಯು ಲೋಕಕೆ ಎಂದು
ಪರಮಾದರದಿ ಸದುಪಾಸನೆಯ ಗೈವರಿಗೆ ಇತ್ತಪನು ತನ್ನ
ಮರೆದು ಧರ್ಮಾರ್ಥಗಳ ಕಾಮಿಸುವರಿಗೆ ನಗುತ ಅತಿಶೀಘ್ರದಿಂದಲಿ
ಸುರಪತನಯ ಸುಯೋಧನರಿಗೆ ಇತ್ತಂತೆ ಕೊಡುತಿಪ್ಪ //7//
ಜಗವನೆಲ್ಲವ ನಿರ್ಮಿಸುವ ನಾಲ್ಮೊಗನೊಳಗೆ ತಾನಿದ್ದು ಸಲಹುವ
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ
ಸ್ವಗತಭೇದ ವಿವರ್ಜಿತನು ಸರ್ವಗ ಸದಾನಂದೈಕ ದೇಹನು
ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ//8//
ಒಬ್ಬನಲಿ ನಿಂದಾಡುವನು ಮತ್ತೊಬ್ಬನಲಿ ನೋಡುವನು
ಬೇಡುವನು ಒಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ
ಅಬ್ಬರದ ಹೆದ್ದೈವನು ಇವ ಮತ್ತೊಬ್ಬರನ ಲೆಕ್ಕಿಸನು
ಲೋಕದೊಳು ಒಬ್ಬನೇ ತಾ ಬಾಧ್ಯ ಬಾಧಕನಾಹ ನಿರ್ಭೀತ//9//
ಶರಣಜನ ಮಂದಾರ ಶಾಶ್ವತ ಕರುಣಿ ಕಮಲಾಕಾಂತ ಕಾಮದ
ಪರಮ ಪಾವನತರ ಸುಮಂಗಳ ಚರಿತ ಪಾರ್ಥಸಖ
ನಿರುಪಮಾನಂದಾತ್ಮ ನಿರ್ಗತ ದುರಿತ ದೇವವರೇಣ್ಯನೆಂದು
ಆದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ//10//
ಜನನಿಯನು ಕಾಣದಿಹ ಬಾಲಕ ನೆನೆನೆನದು ಹಲುಬುತಿರೆ
ಕತ್ತಲೆ ಮನೆಯೊಳು ಅಡಗಿದ್ದು ಅವನ ನೋಡುತ ನಗುತ ಹರುಷದಲಿ
ತನಯನಂ ಬಿಗಿದಪ್ಪಿ ರಂಬಿಸಿ ಕನಲಿಕೆಯ ಕಳೆವಂತೆ
ಮಧುಸೂದನನು ತನ್ನವರು ಇದ್ದೆಡೆಗೆ ಬಂದೊದಗಿ ಸಲಹುವನು//11//
ಇಟ್ಟಿಕಲ್ಲನು ಭಕುತಿಯಿಂದಲಿ ಕೊಟ್ಟ ಭಕುತಗೆ ಮೆಚ್ಚಿ ತಣ್ಣನೆ ಕೊಟ್ಟ
ಬಡಬ್ರಾಹ್ಮಣನ ಒಪ್ಪಿಡಿಯವಲಿಗೆ ಅಖಿಳಾರ್ಥ
ಕೆಟ್ಟ ಮಾತುಗಳೆಂದ ಚೈದ್ಯನ ಪೊಟ್ಟೆಯೊಳಗಿಂಬಿಟ್ಟ
ಬಾಣದಲಿಟ್ಟ ಭೀಷ್ಮನ ಅವಗುಣಗಳೆಣಿಸಿದನೆ ಕರುಣಾಳು//12//
ಧನವ ಸಂರಕ್ಷಿಸುವ ಫಣಿ ತಾನುಣದೆ ಮತ್ತೊಬ್ಬರಿಗೆ ಕೊಡದೆ
ಅನುದಿನದಿ ನೋಡುತ ಸುಖಿಸುವಂದದಿ
ಲಕುಮಿವಲ್ಲಭನು ಪ್ರಣತರನು ಕಾಯ್ದಿಹನು ನಿಷ್ಕಾಮನದಿ
ನಿತ್ಯಾನಂದಮಯ ದುರ್ಜನರ ಸೇವೆಯನು ಒಲ್ಲನು ಅಪ್ರತಿಮಲ್ಲ ಜಗಕೆಲ್ಲ//13//
ಬಾಲಕನ ಕಲಭಾಷೆ ಜನನಿ ಕೇಳಿ ಸುಖಪಡುವಂತೆ
ಲಕ್ಷ್ಮೀಲೋಲ ಭಕ್ತರು ಮಾಡುತಿಹ ಸಂಸ್ತುತಿಗೆ ಹಿಗ್ಗುವನು
ತಾಳ ತನ್ನವರಲ್ಲಿ ಮಾಡ್ವ ಅವಹೇಳನವ
ಹೆದ್ದೈವ ವಿದುರನ ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ//14//
ಸ್ಮರಿಸುವವರ ಅಪರಾಧಗಳ ತಾಸ್ಮರಿಸ ಸಕಲ ಇಷ್ಟ ಪ್ರದಾಯಕ
ಮರಳಿ ತನಗೆ ಅರ್ಪಿಸಲು ಕೊಟ್ಟುದ ಅನಂತಮಡಿ ಮಾಡಿ ಪರಿಪರಿಯಲಿಂದ ಉಣಿಸಿ
ಸುಖ ಸಾಗರದಿ ಲೋಲಾಡಿಸುವ ಮಂಗಳಚರಿತ
ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ//15//
ಏನು ಕರುಣನಿಧಿಯೋ ಹರಿ ಮತ್ತೇನು ಭಕ್ತಾಧೀನನೋ
ಇನ್ನೇನು ಈತನ ಲೀಲೆ ಇಚ್ಚಾಮಾತ್ರದಲಿ ಜಗವ ತಾನೇ ಸೃಜಿಸುವ ಪಾಲಿಸುವ
ನಿರ್ವಾಣ ಮೊದಲಾದ ಅಖಿಲ ಲೋಕಸ್ಥಾನದಲಿ
ಮತ್ತೆ ಅವರನು ಇಟ್ಟು ಆನಂದ ಬಡಿಸುವನು//16//
ಜನಪ ಮೆಚ್ಚಿದರೆ ಈವ ಧನವಾಹನ ವಿಭೂಷಣ ವಸನಭೂಮಿ
ತನುಮನಗಳ ಇತ್ತು ಆದರಿಪರು ಉಂಟೇನೋ ಲೋಕದೊಳು
ಅನವರತ ನೆನೆವವರ ಅನಂತಾಸನವೆ ಮೊದಲಾದ ಆಲಯದೊಳಿಟ್ಟು
ಅಣುಗನಂದದಲಿ ಅವರ ವಶನಾಗುವ ಮಹಾಮಹಿಮ//17//
ಭುವನ ಪಾವನ ಚರಿತ ಪುಣ್ಯಶ್ರವಣಕೀರ್ತನ ಪಾಪನಾಶನ
ಕವಿಭಿರೀಡಿತ ಕೈರವದಳಶ್ಯಾಮ ನಿಸ್ಸೀಮ
ಯುವತಿವೇಷದಿ ಹಿಂದೆ ಗೌರೀಧವನ ಮೋಹಿನಿ ಕೆಡಿಸಿ ಉಳಿಸಿದ
ಇವನ ಮಾಯವ ಗೆಲುವನಾವನು ಈ ಜಗತ್ರಯದಿ//18//
ಪಾಪಕರ್ಮವ ಸಹಿಸುವಡೆ ಲಕ್ಷ್ಮೀಪತಿಗೆ ಸಮರಾದ ದಿವಿಜರನು
ಈ ಪಯೋಜಭವಾಂಡದೊಳಗೆ ಆವಲ್ಲಿ ನಾ ಕಾಣೆ
ಗೊಪಗುರುವಿನ ಮಡದಿಭೃಗುನಗಚಾಪ ಮೊದಲಾದವರು ಮಾಡ್ದ
ಮಹಾಪರಾಧಗಳ ಎಣಿಸಿದನೆ ಕರುಣಾ ಸಮುದ್ರ ಹರಿ//19//
ಅಂಗುಟಾಗ್ರದಿ ಜನಿಸಿದ ಅಮರತರಂಗಿಣಿಯು ಲೋಕತ್ರಯಗಳ ಅಘಹಿಂಗಿಸುವಳು
ಅವ್ಯಾಕೃತಾಶಾಂತ ವ್ಯಾಪಿಸಿದ ಇಂಗಡಲ ಮಗಳ ಒಡೆಯನ
ಅಂಗೋಪಾಂಗಗಳಲಿ ಇಪ್ಪ
ಅಮಲಾನಂತ ಸುಮಂಗಳಪ್ರದ ನಾಮ ಪಾವನಮಾಳ್ಪದೇನರಿದು//20//
ಕಾಮಧೇನು ಸುಕಲ್ಪತರು ಚಿಂತಾಮಣಿಗಳು
ಅಮರೇಂದ್ರ ಲೋಕದಿ ಕಾಮಿತಾರ್ಥಗಳು ಈವವಲ್ಲದೆ ಸೇವೆ ಮಾಳ್ಪರಿಗೆ
ಶ್ರೀಮುಕುಂದನ ಪರಮ ಮಂಗಳನಾಮ ನರಕಸ್ಥರನು ಸಲಹಿತು
ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು//21//
ಮನದೊಳಗೆ ಸುಂದರ ಪದಾರ್ಥವ ನೆನೆದು ಕೊಡೆ ಕೈಕೊಂಡು
ಬಲು ನೂತನ ಸುಶೋಭಿತ ಗಂಧ ಸುರಸೋಪೇತ ಫಲರಾಶಿ
ದ್ಯುನದಿ ನಿವಹಗಳಂತೆ ಕೊಟ್ಟು ಅವರನು ಸದಾ ಸಂತೈಸುವನು
ಸದ್ಗುಣವ ಕದ್ದವರ ಅಘವ ಕದಿವನು ಅನಘನೆಂದೆನಿಸಿ//22//
ಚೇತನಾ ಚೇತನ ವಿಲಕ್ಷಣ ನೂತನ ಪದಾರ್ಥಗಳೊಳಗೆ ಬಲುನೂತನ
ಅತಿಸುಂದರಕೆ ಸುಂದರ ರಸಕೆ ರಸರೂಪ
ಜಾತರೂಪೋದರ ಭವ ಆದ್ಯರೊಳು ಆತತ ಪ್ರತಿಮ ಪ್ರಭಾವ
ಧರಾತಳದೊಳು ಎಮ್ಮೊಡನೆ ಆಡುತಲಿಪ್ಪ ನಮ್ಮಪ್ಪ//23//
ತಂದೆ ತಾಯ್ಗಳು ತಮ್ಮ ಶಿಶುವಿಗೆ ಬಂದ ಭಯಗಳ ಪರಿಹರಿಸಿ
ನಿಜ ಮಂದಿರದಿ ಬೇಡಿದುದನು ಇತ್ತು ಆದರಿಸುವಂದದಲಿ
ಹಿಂದೆ ಮುಂದೆ ಎಡಬಲದಿ ಒಳಹೊರಗೆ ಇಂದಿರೇಶನು ತನ್ನವರನು
ಎಂದೆಂದು ಸಲಹುವನು ಆಗಸದೊಳ್ ಎತ್ತ ನೋಡಿದರು//24//
ಒಡಲ ನೆಳಲಂದದಲಿ ಹರಿ ನಮ್ಮೊಡನೆ ತಿರುಗುವನು
ಒಂದರೆಕ್ಷಣ ಬಿಡದೆ ಬೆಂಬಲವಾಗಿ ಭಕ್ತಾದೀನನೆಂದೆನಿಸಿ
ತಡೆವ ದುರಿತೌಘಗಳ ಕಾಮದ ಕೊಡುವ ಸಕಲೇಷ್ಟಗಳ
ಸಂತತ ನಡೆವ ನಮ್ಮಂದದಲಿ ನವಿಸು ವಿಶೇಷ ಸನ್ಮಹಿಮ//25//
ಬಿಟ್ಟವರ ಭವಪಾಶದಿಂದಲಿ ಕಟ್ಟುವನು ಬಹುಕಠಿಣನಿವ
ಶಿಷ್ಟೇಷ್ಟನೆಂದರಿದು ಅನವರತ ಸದ್ಭಕ್ತಿ ಪಾಶದಲಿ ಕಟ್ಟುವರ
ಭವಕಟ್ಟು ಬಿಡಿಸುವ ಸಿಟ್ಟಿನವನು ಇವನಲ್ಲ
ಕಾಮದ ಕೊಟ್ಟುಕಾವನು ಸಕಲ ಸೌಖ್ಯವನು ಇಹಪರಂಗಗಳಲಿ //26//
ಕಣ್ಣಿಗೆ ಎವೆಯಂದದಲಿ ಕೈ ಮೈ ತಿಣ್ಣಿಗೊದಗುವ ತೆರದಿ
ಪಲ್ಗಳು ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ
ಪುಣ್ಯ ಫಲವ ಈವಂದದಲಿ ನುಡಿವೆಣ್ಣಿ ನಾಣ್ಮಾoಡದೊಳು
ಲಕ್ಷ್ಮಣನ ಅಣ್ಣನು ಒದಗುವ ಭಕ್ತರ ಅವಸರಕೆ ಅಮರಗಣ ಸಹಿತ//27//
ಕೊಟ್ಟದನು ಕೈಕೊಂಬ ಅರೆಕ್ಷಣಬಿಟ್ಟಗಲ ತನ್ನವರ
ದುರಿತಗಳ ಅಟ್ಟುವನು ದೂರದಲಿ ದುರಿತಾರಣ್ಯ ಪಾವಕನು
ಬೆಟ್ಟ ಬೆನ್ನಿಲಿ ಹೊರಿಸಿದವರೊಳು ಸಿಟ್ಟು ಮಾಡಿದನೇನೋ ಹರಿ
ಕಂಗೆಟ್ಟ ಸುರರಿಗೆ ಸುಧೆಯನು ಉಣಿಸಿದ ಮುರಿದನಹಿತರನಾ//28//
ಖೇದ ಮೋದ ಜಯಾಪಾಜಯ ಮೊದಲಾದ ದೋಷಗಳಿಲ್ಲ ಚಿನ್ಮಯ ಸಾದರದಿ
ತನ್ನಂಘ್ರಿಕಮಲವ ನಂಬಿ ಸ್ತುತಿಸುವರ ಕಾದುಕೊಂಡಿಹ
ಪರಮಕರುಣ ಮಹೋದಧಿಯು ತನ್ನವರು ಮಾಡ್ದ
ಮಹಾಪರಾಧಗಳ ನೋಡದಲೆ ಸಲಹುವ ಸರ್ವಕಾಮದನು//29//
ಮೀನಕೂರ್ಮ ವರಾಹ ನರಪಂಚಾನನ ಅತುಳ ಶೌರ್ಯ
ವಾಮನ ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ
ಧೇನುಕಾಸುರಮಥನ ತ್ರಿಪುರವ ಹಾನಿಗೈನಿಸಿದ ನಿಪುಣ
ಕಲಿಮುಖ ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನಾ//30//
ಶ್ರೀ ಮನೋರಮ ಶಮಲ ವರ್ಜಿತ ಕಾಮಿತಪ್ರದ
ಕೈರವದಳ ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷ ಸಖ
ಸಾಮಸನ್ನುತ ಸಕಲ ಗುಣಗಣಧಾಮ
ಶ್ರೀ ಜಗನ್ನಾಥ ವಿಠಲನು ಈ ಮಹಿಯೊಳು ಅವತರಿಸಿ ಸಲಹಿದ ಸಕಲ ಸುಜನರನಾ//31//
//ಇತಿ ಶ್ರೀ ಕರುಣಾ ಸಂಧಿ ಸಂಪೂರ್ಣಂ//
ಶ್ರೀ ಕೃಷ್ಣಾರ್ಪಣಮಸ್ತು
No comments:
Post a Comment