Sunday, January 27, 2013

ಶ್ರೀ ಹರಿಕಥಾಮೃತಸಾರ - 30

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ನೈವೇದ್ಯಪ್ರಕರಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಲೆಕ್ಕಿಸದೆ ಲಕುಮಿಯನು ಬೊಮ್ಮನ ಪೊಕ್ಕಳಿಂದಲಿ ಪಡೆದ

ಪೊಸ ಪೊಂಬಕ್ಕಿದೇರನು ಪಡೆದ ಅವಯವಗಳಿಂದ ದಿವಿಜರನಾ

ಮಕ್ಕಳಂದದಿ ಪೊರೆವ ಸರ್ವದ ರಕ್ಕಸಾಂತಕ

ರಣದೊಳಗೆ ನಿರ್ದುಃಖ ಸುಖಮಯ ಕಾಯ್ದ ಪಾರ್ಥನ ಸೂತನೆಂದೆನಿಸಿ//1//


ದೋಷ ಗಂಧ ವಿದೂರ ನಾನಾ ವೇಷಧಾರಿ ವಿಚಿತ್ರ ಕರ್ಮ

ಮನೀಷಿ ಮಾಯಾ ರಮಣ ಮಧ್ವಾಂತಃಕರಣ ರೂಢ

ಶೇಷಸಾಯಿ ಶರಣ್ಯ ಕೌಸ್ತುಭ ಭೂಷಣ ಸುಕಂಧರ

ಸದಾ ಸಂತೋಷ ಬಲ ಸೌಂದರ್ಯ ಸಾರನ ಮಹಿಮೆಗೆ ಏನೆಂಬೆ//2//


ಸಾಶನಾನ ಶನೇ ಅಭೀಯೆಂಬ ಈ ಶ್ರುತಿ ಪ್ರತಿಪಾದ್ಯನೆನಿಸುವ

ಕೇಶವನ ರೂಪದ್ವಯವ ಚಿದ್ದೇಹದ ಒಳಹೊರಗೆ

ಬೇಸರದೆ ಸದ್ಭಕ್ತಿಯಿಂದ ಉಪಾಸನೆಯಗೈಯುತಲಿ ಬುಧರು

ಹುತಾಶನನಯೊಳಿಪ್ಪನೆಂದು ಅನವರತ ತುತಿಸುವರು//3//


ಸಕಲ ಸದ್ಗುಣ ಪೂರ್ಣ ಜನ್ಮಾದಿ ಅಖಿಳ ದೋಷ ವಿದೂರ

ಪ್ರಕಟಾಪ್ರಕಟ ಸದ್ವ್ಯಾಪಾರಿ ಗತ ಸಂಸಾರಿ ಕಂಸಾರಿ

ನಕುಲ ನಾನಾ ರೂಪ ನಿಯಾಮಕ ನಿಯಮ್ಯ ನಿರಾಮಯ

ರವಿ ಪ್ರಕರ ಸನ್ನಿಭ ಪ್ರಭು ಸದಾ ಮಾಂ ಪಾಹಿ ಪರಮಾತ್ಮ//4//


ಚೇತನಾಚೇತನ ಜಗತ್ತಿನೊಳು ಆತನನು ತಾನಾಗಿ

ಲಕ್ಷ್ಮೀನಾಥ ಸರ್ವರೊಳಿಪ್ಪ ತತ್ತದ್ರೂಪಗಳ ಧರಿಸಿ

ಜಾತಿಕಾರನ ತೆರದಿ ಎಲ್ಲರ ಮಾತಿನೊಳಗಿದ್ದು

ಅಖಿಳ ಕರ್ಮವ ತಾ ತಿಳಿಸಿ ಕೊಳ್ಳದಲೇ ಮಾಡಿಸಿ ನೋಡಿ ನಗುತಿಪ್ಪ//5//


ವೀತಭಯ ವಿಜ್ಞಾನ ದಾಯಕ ಭೂತ ಭವ್ಯ ಭವತ್ಪ್ರಭು

ಖಳಾರಾತಿ ಖಗ ವರ ವಹನ ಕಮಲಾಕಾಂತ ನಿಶ್ಚಿಂತ

ಮಾತರಿಶ್ವ ಪ್ರಿಯ ಪುರಾತನ ಪೂತನಾ ಪ್ರಾಣಾಪಹಾರಿ

ವಿಧಾತೃ ಜನಕ ವಿಪಶ್ಚಿತ ಜನಪ್ರಿಯ ಕವಿಗೇಯಾ//6//


ದುಷ್ಟ ಜನ ಸಂಹಾರಿ ಸರ್ವೋತ್ಕೃಷ್ಟ ಮಹಿಮ ಸಮೀರನುತ

ಸಕಲ ಇಷ್ಟದಾಯಕ ಸ್ವರತ ಸುಖಮಯ ಮಮ ಕುಲಸ್ವಾಮಿ

ಹೃಷ್ಟ ಪುಷ್ಟ ಕನಿಷ್ಠ ಸೃಷ್ಟಿ ಆದಿ ಅಷ್ಟಕರ್ತ ಕರೀಂದ್ರ ವರದ

ಯಥೇಷ್ಟ ತನು ಉನ್ನತ ಸುಕರ್ಮಾ ನಮಿಪೆನು ಅನವರತ//7//


ಪಾಕಶಾಸನ ಪೂಜ್ಯ ಚರಣ ಪಿನಾಕಿ ಸನ್ನುತ ಮಹಿಮ

ಸೀತಾ ಶೋಕ ನಾಶನ ಸುಲಭ ಸುಮುಖ ಸುವರ್ಣವರ್ಣ ಸುಖಿ

ಮಾಕಳತ್ರ ಮನೀಷಿ ಮಧುರಿಪು ಏಕಮೇವಾದ್ವಿತೀಯ ರೂಪ

ಪ್ರತೀಕ ದೇವಗಣಾಂತರಾತ್ಮಕ ಪಾಲಿಸುವುದೆಮ್ಮ//8//


ಅಪ್ರಮೇಯ ಅನಂತರೂಪ ಸದಾ ಪ್ರಸನ್ನ ಮುಖಾಬ್ಜ

ಮುಕ್ತಿ ಸುಖಪ್ರದಾಯಕ ಸುಮನಸ ಆರಾಧಿತ ಪದಾಂಭೋಜ

ಸ್ವಪ್ರಕಾಶ ಸ್ವತಂತ್ರ ಸರ್ವಗ ಕ್ಷಿಪ್ರ ಫಲದಾಯಕ ಕ್ಷಿತೀಶ

ಯದು ಪ್ರವೀರ ವಿತರ್ಕ್ಯ ವಿಶ್ವಸು ತೈಜಸ ಪ್ರಾಜ್ಞ//9//


ಗಾಳಿ ನಡೆವಂದದಲಿ ನೀಲ ಘನಾಳಿ ವರ್ತಿಸುವಂತೆ

ಬ್ರಹ್ಮ ತ್ರಿಶೂಲಧರ ಶಕ್ರಾರ್ಕ ಮೊದಲಾದ ಅಖಿಳ ದೇವಗಣ

ಕಾಲಕರ್ಮ ಗುಣಾಭಿಮಾನಿ ಮಹಾ ಲಕುಮಿ ಅನುಸರಿಸಿ ನಡೆವರು

ಮೂಲ ಕಾರಣ ಮುಕ್ತಿ ದಾಯಕನು ಶ್ರೀಹರಿಯೆನಿಸಿಕೊಂಬ//10//


ಮೋಡ ಕೈಬೀಸಣಿಕೆಯಿಂದಲಿ ಓಡಿಸುವೆನೆಂಬನ ಪ್ರಯತ್ನವು

ಕೂಡುವುದೆ ಕಲ್ಪಾಂತಕೆ ಆದರು ಲಕುಮಿವಲ್ಲಭನು ಜೋಡು ಕರ್ಮವ ಜೀವರೊಳು

ತಾ ಮಾಡಿ ಮಾಡಿಸಿ ಫಲಗಳುಣಿಸುವ

ಪ್ರೌಢರಾದವರು ಇವನ ಭಜಿಸಿ ಭವಾಬ್ಧಿ ದಾಟುವರು//11//


ಕ್ಷೇಶ ಮೋಹ ಅಜ್ಞಾನ ದೋಷ ವಿನಾಶಕ ವಿರಿಂಚಿ ಅಂಡದೊಳಗೆ

ಆಕಾಶದ ಉಪಾದಿಯಲಿ ತುಂಬಿಹ ಎಲ್ಲ ಕಾಲದಲಿ

ಘಾಸಿಗೊಳಿಸದೆ ತನ್ನವರ ಅನಾಯಾಸ ಸಂರಕ್ಷಿಸುವ

ಮಹಾ ಕರುಣಾ ಸಮುದ್ರ ಪ್ರಸನ್ನ ವದನಾಂಭೋಜ ಸುರರಾಜ ವಿರಾಜ//12//


ಕನ್ನಡಿಯ ಕೈವಿಡಿದು ನೋಳ್ಪನ ಕಣ್ಣುಗಳು ಕಂಡಲ್ಲಿಗೆರಗದೆ

ತನ್ನ ಪ್ರತಿಬಿಂಬವನೆ ಕಾಂಬುವ ದರ್ಪಣವ ಬಿಟ್ಟು

ಧನ್ಯರು ಇಳೆಯೊಳಗೆ ಎಲ್ಲ ಕಡೆಯಲಿ ನಿನ್ನ ರೂಪವ ನೋಡಿ ಸುಖಿಸುತ

ಸನ್ನುತಿಸುತ ಆನಂದ ವಾರಿಧಿಯೊಳಗೆ ಮುಳುಗಿಹರು//13//


ಅನ್ನ ಮಾನಿ ಶಶಾಂಕನೊಳು ಕಾರುಣ್ಯ ಸಾಗರ ಕೇಶವನು

ಪರಮಾನ್ನದೊಳು ಭಾರತಿಯು ನಾರಾಯಣನು

ಭಕ್ಷ್ಯದೊಳು ಸೊನ್ನಗದಿರನು ಮಾಧವನು

ಶ್ರುತಿ ಸನ್ನುತ ಶ್ರೀಲಕ್ಷ್ಮೀ ಘೃತದೊಳು ಮಾನ್ಯ ಗೋವಿಂದ ಅಭಿಧನು ಇರುತಿಪ್ಪ ಎಂದೆಂದು//14//


ಕ್ಷೀರಮಾನಿ ಸರಸ್ವತೀ ಜಗತ್ಸಾರ ವಿಷ್ಣುವ ಚಿಂತಿಸುವುದು

ಸರೋರುಹಾಸನ ಮಂಡಿಗೆಯೊಳು ಇರುತಿಪ್ಪ ಮಧು ವೈರಿ

ಮಾರುತನು ನವನೀತದೊಳು ಸಂಪ್ರೇರಕ ತ್ರಿವಿಕ್ರಮನು

ದಧಿಯೊಳು ವಾರಿನಿಧಿ ಚಂದ್ರಮರೊಳಗೆ ಇರುತಿಪ್ಪ ವಾಮನನು//15//


ಗರುಡ ಸೂಪಕೆ ಮಾನಿ ಶ್ರೀ ಶ್ರೀಧರನ ಮೂರುತಿ

ಪತ್ರಶಾಖಕೆ ವರನೆನಿಪ ಮಿತ್ರಾಖ್ಯ ಸೂರ್ಯನು ಹೃಶೀಕಪನ ಮೂರ್ತಿ

ಉರಗ ರಾಜನು ಫಲ ಸುಶಾಖಕೆ ವರನೆನಿಸುವನು

ಪದ್ಮನಾಭನ ಸ್ಮರಿಸಿ ಭುಂಜಿಸುತಿಹರು ಬಲ್ಲವರು ಎಲ್ಲ ಕಾಲದಲಿ//16//


ಗೌರಿ ಸರ್ವ ಆಮ್ಲಸ್ಥಳು ಎನಿಪಳು ಶೌರಿ ದಾಮೋದರನ ತಿಳಿವುದು

ಗೌರಿಪ ಅನಾಮ್ಲಸ್ಥ ಸಂಕರುಷಣನ ಚಿಂತಿಪುದು

ಸಾರಶರ್ಕರ ಗುಡದೊಳಗೆ ವೃತ್ರಾರಿ ಇರುತಿಹ

ವಾಸುದೇವನ ಸೂರಿಗಳು ಧೇನಿಪರು ಪರಮಾದರದಿ ಸರ್ವತ್ರ//17//


ಸ್ಮರಿಸು ವಾಚಸ್ಪತಿಯ ಸೂಪಸ್ಕರದೊಳಗೆ ಪ್ರದ್ಯುಮ್ನನು ಇಪ್ಪನು

ನಿರಯಪತಿ ಯಮಧರ್ಮ ಕಾಟು ದ್ರವ್ಯದೊಳಗೆ ಅನಿರುದ್ಧ

ಸರಷಪ ಶ್ರೀ ರಾಮಠ ಏಳದಿ ಸ್ಮರಣ ಶ್ರೀ ಪುರುಷೋತ್ತಮನ

ಕರ್ಪೂರದಿ ಚಿಂತಿಸಿ ಪೂಜಿಸುತಲಿರು ಪರಮ ಭಕುತಿಯಲಿ//18//


ನಾಲಿಗಿಂದಲಿ ಸ್ವೀಕರಿಪ ರಸಪಾಲು ಮೊದಲಾದ ಅದರೊಳಗೆ

ಘೃತ ತೈಲ ಪಕ್ವ ಪದಾರ್ಥದೊಳಗಿಹ ಚಂದ್ರನಂದನನ

ಪಾಲಿಸುವ ಅಧೋಕ್ಷಜನ ಚಿಂತಿಸು

ಸ್ಥೂಲ ಕೂಷ್ಮಾಂಡ ತಿಲ ಮಾಷಜ ಈ ಲಲಿತ ಭಕ್ಷ್ಯದೊಳು ದಕ್ಷನು ಲಕ್ಷ್ಮೀ ನರಸಿಂಹ//19//


ಮನವು ಮಾಷ ಸುಭಕ್ಷ್ಯದೊಳು ಚಿಂತನೆಯ ಮಾಡು ಅಚ್ಯುತನ

ನಿರ್ಋತಿ ಮನೆಯೆನಿಪ ಲವಣದೊಳು ಮರೆಯದೆ ಶ್ರೀ ಜನಾರ್ಧನನ

ನೆನೆವುತಿರು ಫಲ ರಸಗಳೊಳು ಪ್ರಾಣನ ಉಪೇಂದ್ರನ

ವೀಳ್ಯದೆಲೆಯೊಳು ದ್ಯುನದಿ ಹರಿ ರೂಪವನೇ ಕೊಂಡಾಡುತಲೆ ಸುಖಿಸುತಿರು//20//


ವೇದ ವಿನುತಗೆ ಬುಧನು ಸುಸ್ವಾದ ಉದಕ ಅಧಿಪನು ಎನಿಸಿಕೊಂಬನು

ಶ್ರೀದ ಕೃಷ್ಣನ ತಿಳಿದು ಪೂಜಿಸುತಿರು ನಿರಂತರದಿ

ಸಾಧು ಕರ್ಮವ ಪುಷ್ಕರನು ಸುನಿವೇದಿತ ಪದಾರ್ಥಗಳ

ಶುದ್ಧಿಯಗೈದ ಗೋಸುಗ ಹಂಸನಾಮಕಗೆ ಅರ್ಪಿಸುತಲಿಪ್ಪ//21//


ರತಿ ಸಕಲ ಸುಸ್ವಾದು ರಸಗಳ ಪತಿಯೆನಿಸುವಳು ಅಲ್ಲಿ ವಿಶ್ವನು

ಹುತವಹನ ಚೂಲಿಗಳೊಳಗೆ ಭಾರ್ಗವನ ಚಿಂತಿಪುದು

ಕ್ಷಿತಿಜ ಗೋಮಯಜ ಆದಿಯೊಳು ಸಂಸ್ಥಿತ ವಸಂತನ ಋಷಭ ದೇವನ

ತುತಿಸುತಿರು ಸಂತತ ಸದ್ಭಕ್ತಿ ಪೂರ್ವಕದಿ//22//


ಪಾಕ ಕರ್ತೃಗಳೊಳು ಚತುರ್ದಶ ಲೋಕಮಾತೆ ಮಹಾಲಕುಮಿ

ಗತಶೋಕ ವಿಶ್ವಂಭರನ ಚಿಂತಿಪುದು ಎಲ್ಲ ಕಾಲದಲಿ

ಚೌಕ ಶುದ್ಧ ಸುಮಂಡಲದಿ ಭೂ ಸೂಕರಾಹ್ವಯ

ಉಪರಿ ಚೈಲಪ ಏಕದಂತ ಸನತ್ಕುಮಾರನ ಧ್ಯಾನಿಪುದು ಬುಧರು//23//


ಶ್ರೀನಿವಾಸನ ಭೋಗ್ಯ ವಸ್ತುವ ಕಾಣಗೊಡದಂದದಲಿ

ವಿಶ್ವಕ್ಸೇನ ಪರಿಖಾ ರೂಪನಾಗಿಹನು ಅಲ್ಲಿ ಪುರುಷಾಖ್ಯ

ತಾನೇ ಪೂಜಕ ಪೂಜ್ಯನೆನಿಸಿ ನಿಜಾನುಗರ ಸಂತೈಪ

ಗುರು ಪವಮಾನ ವಂದಿತ ಸರ್ವ ಕಾಲಗಳಲ್ಲಿ ಸರ್ವತ್ರ//24//


ನೂತನ ಸಮೀಚೀನ ಸುರಸೋಪೇತ ಹೃದ್ಯ ಪದಾರ್ಥದೊಳು

ವಿಧಿಮಾತೆ ತತ್ತದ್ರಸಗಳೊಳು ರಸ ರೂಪ ತಾನಾಗಿ

ಪ್ರೀತಿ ಪಡಿಸುತ ನಿತ್ಯದಿ ಜಗನ್ನಾಥ ವಿಠಲನ ಕೂಡಿ

ತಾ ನಿರ್ಭೀತಳಾಗಿಹಳು ಎಂದರಿದು ನೀ ಭಜಿಸಿ ಸುಖಿಸುತಿರು//25//


//ಇತಿ ಶ್ರೀ ನೈವೇದ್ಯಪ್ರಕರಣ ಸಂಧಿ ಸಂಪೂರ್ಣಂ//

//ಶ್ರೀ ಕೃಷ್ಣಾರ್ಪಣಮಸ್ತು//

No comments:

Post a Comment