Monday, January 7, 2013

ಶ್ರೀ ಹರಿಕಥಾಮೃತಸಾರ - 7

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಪಂಚತನ್ಮಾತ್ರ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಭೂಸಲಿಲ ಶಿಖಿ ಪವನ ಭೂತ ಆಕಾಶದೊಳಗೆ ಐದೈದು ತನ್ಮಾತ್ರಾ ಸಹಿತ

ಒಂದಧಿಕ ಪಂಚಾಶತ್ ವರಣ ವೇದ್ಯ

ಈ ಶರೀರದಿ ವ್ಯಾಪಿಸಿದ್ದು ಸುರಾಸುರರಿಗೆ ನಿರಂತರದಲಿ

ಸುಖಾಸುಖಪ್ರದನಾಗಿ ಆಡುವ ದ್ವೇಷಿಪರ ಬಡಿವ//1//


ಪ್ರಣವ ಪ್ರತಿಪಾದ್ಯ ತ್ರಿನಾಮದಿ ತನುವಿನೊಳು ತ್ರಿಸ್ಥಾನಗ ಅನಿರುದ್ಧನು

ತ್ರಿಪಂಚಕ ಏಕ ವಿಂಶತಿ ಚತುರ ವಿಂಶತಿಗನು ಎನಿಸಿ

ಎಪ್ಪತ್ತೆರಡು ಸಾವಿರ ಇನಿತು ನಾಡಿಗಳೊಳು ನಿಯಾಮಿಸುತ ಇನ ಭಸ್ತಿಗ

ಲೋಕದೊಳು ಸರ್ವತ್ರ ಬೆಳಗುವನು//2//


ಜೀವಲಿಂಗಾನಿರುದ್ಧ ಸ್ಥೂಲ ಕಳೇವರಗಳಲಿ

ವಿಶ್ವತುರಗಗ್ರೀವ ಮೂಲೇಶ ಅಚ್ಯುತತ್ರಯ ಹಂಸ ಮೂರ್ತಿಗಳ

ಈ ವಿಧ ಚತು: ಸ್ಥಾನದಲಿ ಶಾಂತೀವರನ ಈರೆರಡು ರೂಪದಿ ಭಾವಿಸುವುದು

ಏಕ ಊನ ವಿಂಶತಿ ಮೂರ್ತಿ ಸರ್ವತ್ರ//3//


ಕಲುಷವಿಲ್ಲದ ದರ್ಪಣದಿ ಪ್ರತಿಫಲಿಸಿ ಸರ್ವ ಪದಾರ್ಥಗಳು ಕಂಗೊಳಿಸುವಂದದಲಿ

ಬಿಂಬ ಜಡ ಚೇತನಗಳೊಳಗಿದ್ದು

ಪೊಳೆವ ಬಹುರೂಪದಲಿ ಸಜ್ಜನರೊಳಗೆ ಮನದರ್ಪಣದಿ ತಾ

ನಿಶ್ಚಲ ನಿರಾಮಯ ನಿರ್ವಿಕಾರ ನಿರಾಶ್ರಯಾನಂತ//4//


ಈ ಶರೀರ ಚತುಷ್ಟಯಗಳು ಕೋಶ ಧಾತುಗ ಭಾರತಿಪ ಪ್ರಾಣೇಶನು

ಇಪ್ಪತ್ತೊಂದು ಸಾವಿರದ ಆರುನೂರೆನಿಪ ಶ್ವಾಸ ರೂಪಕ ಹಂಸ

ಭಾಸ್ಕರ ಭೇಶರೊಳಗಿದ್ದು ಅವರ ಕೈವಿಡಿದು

ಈ ಸರೋಜ ಭವಾಂಡದೊಳು ಸರ್ವತ್ರ ತುಂಬಿಹನು//5//


ಶಿರಗಳೈದು ಐದೆರೆಡು ಬಾಹುಗಳು ಎರಡು ಪಾದಗಳು

ಒಂದು ಮಧ್ಯ ಉದರದಿ ಶೋಭಿಪ ವಾಕ್ಮನೋಮಯನೆನಿಸಿ ನಿತ್ಯದಲಿ

ಕರಣ ಧಾತುಗಳಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಲಿ ಇಪ್ಪ

ಅರವಿದೂರನು ಭಾರತ ಪ್ರತಿಪಾದ್ಯನು ಎನಿಸಿ//6//


ಈರೆರೆಡು ದೇಹ ಊರ್ಮಿ ಭೂತಗಳಾರು ಅಧಿಕ ದಶ ಋಗ್ವಿನುತ

ಲಕ್ಷ್ಮೀರಮಣ ವಿಷ್ಣ್ವಾಖ್ಯ ರೂಪದಿ ಚತು ಷಷ್ಠಿ ಕಲಾಧಾರಕನು ತಾನಾಗಿ

ಬ್ರಹ್ಮಪುರಾರಿ ಮುಖ್ಯರೊಳಿದ್ದು ಸತತ ವಿಹಾರ ಮಾಳ್ಪನು

ಚತುಷ್ಪಾದ ಆಹ್ವಯದಿ ಲೋಕದೊಳು//7//


ತೃಣ ಮೊದಲು ಬ್ರಹ್ಮ ಅಂತ ಜೀವರ ತನುಗಳ ತ್ರಯಗಳಲಿ

ನಾರಾಯಣನ ಸಾವಿರದೈನೂರಿಪ್ಪತ್ತು ಮೇಲೆ ಆರು

ಗಣನೆ ಮಾಳ್ಪುದು ಬುಧರು ರೂಪವ

ಘ್ರುಣಿ ಸೂರ್ಯ ಆದಿತ್ಯ ನಾಮಗಳು ಅನುದಿನದಿ ಜಪಿಸುವರಿಗೆ ಈವ ಆರೋಗ್ಯ ಸಂಪದವ//8//


ಐದು ನೂರು ಎಪ್ಪತ್ತು ನಾಲ್ಕು ಅಧಿಭೌತಿಕದಲಿ ತಿಳಿವುದು

ಐದೆರೆಡು ಶತ ಏಕ ವಿಂಶತಿ ರೂಪವು ಆಧ್ಯಾತ್ಮ

ಭೇದಗಳು ಇನ್ನೂರು ಮೂವತ್ತಾದ ಮೇಲೆ ಒಂದಧಿಕ ಮೂರ್ತಿಗಳು

ಆದರದಲಿ ಅಧಿದೈವದೊಳು ಚಿಂತಿಪುದು ಭೂಸುರರು//9//


ಸುರುಚಿ ಶಾರ್ವರೀಕರನು ಎನಿಸಿ ಸಂಕರುಷಣ ಪ್ರದ್ಯುಮ್ನ

ಶಶಿ ಭಾಸ್ಕರರೊಳಗೆ ಅರವತ್ತಧಿಕ ಮುನ್ನೂರು ರೂಪದಲಿ ಕರೆಸಿಕೊಂಬನು

ಅಹಃ ಸಂವತ್ಸರನೆನಿಪನು ವಿಶಿಷ್ಟ ನಾಮದಲಿ ಅರಿತವರಿಗೆ

ಆರೋಗ್ಯ ಭಾಗ್ಯವನು ಈವ ಆನಂದಮಯ//10//


ಏಕ ಪಂಚಾಶತ್ ವರಣ ಗತ ಮಾಕಳತ್ರನು ಸರ್ವರೊಳಗ

ಅವ್ಯಾಕೃತ ಆಕಾಶಾಂತ ವ್ಯಾಪಿಸಿ ನಿಗಮತತಿಗಳು ವ್ಯಾಕರಣ ಭಾರತ

ಮುಖಾದಿ ಅನೇಕ ಶಾಸ್ತ್ರ ಪುರಾಣ ಭಾಷ್ಯ ಅನೀಕಗಳ ಕಲ್ಪಿಸಿ

ಮನೋ ವಾಙ್ಮಯನೆನಿಸಿಕೊಂಬ//11//


ಭಾರಭೃತ್ ನಾಮಕನ ಸಾವಿರದ ಆರುನೂರ ಇಪ್ಪತ್ತನಾಲ್ಕು ಮೂರುತಿಗಳು

ಚರಾಚರದಿ ಸರ್ವತ್ರ ತುಂಬಿಹವು

ಆರು ನಾಲ್ಕು ಜಡಗಳಲಿ ಹದಿನಾರು ಚೇತನಗಳಲಿ ಚಿಂತಿಸೆ

ತೋರಿಕೊಂಬನು ತನ್ನ ರೂಪವ ಸಕಲ ಟಾವಿನಲಿ//12//


ಮಿಸುಣಿ ಮೇಲಿಹ ಮಣಿಯವೊಳ್ ರಾಜಿಸುವ ಬ್ರಹ್ಮಾದಿಗಳ ಮನದಲಿ

ಬಿಸಿಜಜಾಂಡ ಅಧಾರಕನು ಅಧೇಯನೆಂದೆನಿಸಿ

ದ್ವಿಶತ ನಾಲ್ವತ್ತೆರಡು ರೂಪದಿ ಶಶಿಯೊಳು ಇಪ್ಪನು

ಶಶದೊಳಗೆ ಶೋಭಿಸುವ ನಾಲ್ವತ್ತೆರಡು ಅಧಿಕ ಶತ ರೂಪದಲಿ ಬಿಡದೆ//13//


ಎರಡು ಸಾವಿರದ ಎಂಟು ರೂಪವನರಿತು ಸರ್ವ ಪದಾರ್ಥದಲಿ

ಶ್ರೀ ವರನ ಪೂಜೆಯ ಮಾಡು ವಾರಗಳ ಬೇಡು ಕೊಂಡಾಡು

ಬರಿದೆ ಜಲದೊಳು ಮುಳುಗಿ ಬಿಸಿಲೊಳು ಬೆರಳನು ಎಣಿಸಿದರೇನು

ಸದ್ಗುರು ಹಿರಿಯರ ಅನುಸರಿಸಿ ಇದರ ಮರ್ಮವನ್ನು ಅರಿಯದಿಹ ನರನು//14//


ಮತ್ತೆ ಚಿತ್ದೇಹದೊಳಗೆ ಎಂಭತ್ತು ಸಾವಿರದ ಏಳು ನೂರ ಇಪ್ಪತ್ತೈದು

ನರಸಿಂಹ ರೂಪದಲಿದ್ದು

ಜೀವರಿಗೆ ನಿತ್ಯದಲಿ ಹಗಲು ಇರಲು ಬಪ್ಪ ಅಪಮೃತ್ಯುವಿಗೆ ತಾ ಮೃತ್ಯುವೆನಿಸುವ

ಭೃತ್ಯ ವಾತ್ಸಲ ಭಯವಿನಾಶನ ಭಾಗ್ಯ ಸಂಪನ್ನ//15//


ಜ್ವರನೊಳು ಇಪ್ಪತ್ತೇಳು ಹರನೊಳಗೆ ಇರುವನು ಇಪ್ಪತ್ತೆಂಟು ರೂಪದಿ

ಎರಡು ಸಾವಿರದ ಎಂಟು ನೂರಿಪ್ಪತ್ತೇಳು ಅಧಿಕ ಜ್ವರಹರ ಆಹ್ವಯ

ನಾರಸಿಂಹನ ಸ್ಮರಣೆಮಾತ್ರದಿ ದುರಿತ ರಾಶಿಗಳು ಇರದೇ ಪೋಪವು

ತರಣಿ ಬಿಂಬವ ಕಂಡ ಹಿಮದಂತೆ//16//


ಮಾಸ ಪರಿಯಂತರವು ಬಿಡದೆ ನೃಕೇಸರಿಯ ಶುಭನಾಮ ಮಂತ್ರ

ಜಿತಾಸನದಲಿ ಏಕಾಗ್ರ ಚಿತ್ತದಿ ನಿಷ್ಕಪಟದಿಂದ ಬೇಸರದೆ ಜಪಿಸಲು

ವೃಜಿನಗಳ ನಾಶಗೈಸಿ

ಮನೋರಥಗಳ ಪರೇಶ ಪಾರ್ಟಿಯ ಮಾಡಿ ಕೊಡುವನು ಕಡೆಗೆ ಪರಗತಿಯ//17//


ಚತುರ ಮೂರ್ತ್ಯಾತ್ಮಕ ಹರಿಯು ತ್ರಿಂಶತಿ ಸುರೂಪದಿ ಬ್ರಹ್ಮನೊಳು

ಮಾರುತನೊಳು ಇಪ್ಪತ್ತೇಳು ರೂಪದೊಳು ಇಪ್ಪ ಪ್ರದ್ಯುಮ್ನ

ಸುತರೊಳು ಇಪ್ಪತ್ತೈದು ಹದಿನೆಂಟು ಅತುಳ ರೂಪಗಳ ಅರಿತು

ವತ್ಸರ ಶತಗಳಲಿ ಪೂಜಿಸುತಲಿರು ಚತುರಾತ್ಮಕನ ಪದವ//18//


ನೂರು ವರುಷಕೆ ದಿವಸ ಮೂವತ್ತಾರು ಸಾವಿರ ವಹವು

ನಾಡಿ ಶರೀರದೊಳಗೆ ಇನಿತು ಇಹವು ಸ್ತ್ರೀಪುಂಭೇದದಲಿ

ಹರಿಯ ಈರಧಿಕ ಎಪ್ಪತ್ತು ಸಾವಿರ ಮೂರುತಿಗಳನೆ ನೆನೆದು

ಸರ್ವಾಧಾರಕನ ಸರ್ವತ್ರ ಪೂಜಿಸು ಪೂರ್ಣನೆಂದರಿದು//19//


ಕಾಲಕರ್ಮಗುಣ ಸ್ವಭಾವಗಳ ಆಲಯನು ತಾನಾಗಿ ಲಕ್ಷ್ಮೀಲೋಲ

ತತ್ತದ್ರೂಪ ನಾಮಡಿ ಕರೆಸುತ ಒಳಗಿದ್ದು

ಲೀಲೆಯಿಂದಲಿ ಸರ್ವಜೀವರ ಪಾಲಿಸುವ ಸಂಹರಿಪ ಸೃಷ್ಟಿಪ

ಮೂಲ ಕಾರಣ ಪ್ರಕೃತಿ ಗುಣ ಕಾರ್ಯಗಳ ಮನೆಮಾಡಿ//20//


ತಿಲಜವರ್ತಿಗಳ ಅನುಸರಿಸಿ ಪ್ರಜ್ವಲಿಸಿ ದೀಪಗಳು

ಆಲಯದ ಕತ್ತಲೆಯ ಭಂಗಿಸಿ ತದ್ಗತಾರ್ಥವ ತೋರುವಂದದಲಿ

ಜಲರುಹೇಕ್ಷಣ ತನ್ನವರ ಮನದೊಳಗೆ

ಭಕ್ತಿ ಜ್ಞಾನ ಕರ್ಮಕೆ ಒಲಿದು ಪೊಳೆವುತ ತೋರುವನು ಗುಣ ರೂಪ ಕ್ರಿಯೆಗಳನು//21//


ಆವ ದೇಹವ ಕೊಡಲಿ ಹರಿ ಮತ್ತಾವ ಲೋಕದೊಳು ಇಡಲಿ

ತಾ ಮತ್ತಾವ ದೇಶದೊಳು ಇಡಲಿ ಆವಾವಸ್ಥೆಗಳು ಬರಲಿ

ಈ ವಿಧದಿ ಜಡ ಚೇತನದೊಳು ಪರಾವರೇಶನ ರೂಪ ಗುಣಗಳ ಭಾವಿಸುತ

ಸುಜ್ಞಾನ ಭಕುತಿಯ ಬೇಡು ಕೊಂಡಾಡು//22//


ಒಂದರೊಳಗೊಂದು ಬೆರದಿಹವು ಇಂದಿರೇಶನ ರೂಪಗಳ ಮನಬಂದ ತೆರದಲಿ

ಚಿಂತಿಸಿದಕೆ ಅನುಮಾನವಿನಿತಿಲ್ಲ

ಸಿಂಧು ರಾಜನೊಳು ಅಂಬರ ಆಲಯ ಬಂಧಿಸಲು

ಪ್ರತಿ ತಂತುಗಳೊಳು ಉದಬಿಂದು ವ್ಯಾಪಿಸಿದಂತೆ ಇರುತಿಪ್ಪನು ಚರಾಚರದಿ//23//


ಒಂದು ರೂಪದೊಳು ಒಂದು ಅವಯವದೊಳು ಒಂದು ರೋಮದೊಳು ಒಂದು ದೇಶದಿ ಪೊಂದಿ ಇಪ್ಪವು

ಅಜಾಂಡ ಅನಂತಾನಂತ ಕೋಟಿಗಳು

ಹಿಂದೆ ಮಾರ್ಕಾಂಡೆಯ ಕಾಣನೆ ಒಂದು ರೂಪದಿ ಸೃಷ್ಟಿ ಪ್ರಳಯಗಳು

ಇಂದಿರೇಶನೊಳು ಏನಿದು ಅಚ್ಚರಿ ಅಪ್ರಮೇಯ ಸದಾ//24//


ಒಂದು ಅನಂತಾನಂತ ರೂಪಗಳು ಒಂದೇ ರೂಪದೊಳು ಇಹವು ಲೋಕಗಳು ಒಂದೇ ರೂಪದಿ

ಸೃಷ್ಟಿ ಸ್ಥಿತಿ ಮೊದಲಾದ ವ್ಯಾಪಾರ

ಒಂದೇ ಕಾಲಡಿ ಮಾಡಿ ತಿಳಿಸದೆ ಸಂದಣಿಸಿ ಕೊಂಡಿಪ್ಪ ಜಗದೊಳು

ನಂದ ನಂದನ ರಣದೊಳು ಇಂದ್ರ ಆತ್ಮಜಗೆ ತೋರಿಸನೆ//25//


ಶ್ರೀರಮೇಶನ ಮೂರ್ತಿಗಳು ನವ ನಾರಿ ಕುಂಜರದಂತೆ ಏಕಾಕಾರ ತೋರ್ಪವು

ಅವಯವಾಹ್ವಾಯ ಅವಯಗಳಲ್ಲಿ

ಬೇರೆಬೇರೆ ಕಂಗೊಳಿಸುವ ಶರೀರದೊಳು ನಾನಾ ಪ್ರಕಾರ

ವಿಕಾರಶೂನ್ಯ ವಿರಾಟನೆನಿಸುವ ಪದುಮಜಾಂಡದೊಳು//26//


ವಾರಿಜಭವಾಂಡದೊಳು ಲಕ್ಷ್ಮೀನಾರಸಿಂಹನ ರೂಪಗುಣಗಳು

ವಾರಿಧಿಯೊಳಿಹ ತೆರಗಳಂದದಿ ಸಂದಣಿಸಿ ಇಹವು

ಕಾರಣಾoಶಾವೇಶ ವ್ಯಾಪ್ತಾವತಾರ ಕಾರ್ಯಾವ್ಯಕ್ತವ್ಯಕ್ತವು

ಈರೈದು ವಿಭೂತಿ ಅಂತರ್ಯಾಮಿ ರೂಪಗಳು//27//


ಮಣಿಗಳೊಳಗಿಹ ಸೂತ್ರದಂದದಿ ಪ್ರಣವ ಪಾದ್ಯನು ಚೇತನಾಚೇತನ

ಜಗತ್ತಿನೊಳು ಅನುದಿನದಲು ಆಡುವನು ಸುಖಪೂರ್ಣ

ದಣಿವಿಕೆಯು ಇವಗಿಲ್ಲ ಬಹು ಕಾರುಣಿಕ ಅನಂತಾನಂತ ಜೀವರ ಗಣದೊಳು

ಏಕಾಂಶ ಅಂಶ ರೂಪದಿ ನಿಂತು ನೇಮಿಸುವ//28//


ಜೀವ ಜೀವರ ಭೇದ ಜಡ ಜಡ ಜೀವ ಜಡ

ಜಡ ಜೀವರಿಂದಲಿ ಶ್ರೀವರನು ಅತ್ಯಂತ ಭಿನ್ನ ವಿಲಕ್ಷಣನು

ಲಕ್ಷ್ಮೀ ಮೂವರಿಂದಲಿ ಪದ್ಮಜಾಂದದಿ ತಾ ವಿಲಕ್ಷಣಳು ಎನಿಸುತಿಪ್ಪಳು

ಸಾ ಅಧಿಕಸಮ ಶೂನ್ಯಳು ಎಂದರಿತು ಈರ್ವರನು ಭಜಿಸು//29//


ಆದಿತೇಯರು ತಿಳಿಯದಿಹ ಗುಣ ವೇದಮಾನಿಗಳು ಎಂದೆನಿಪ ವಾಣಿ ಆದಿಗಳು ಬಲ್ಲರು

ಅವರು ಅರಿಯದ ಗುಣಂಗಳನು ವೇಧ ಬಲ್ಲನು

ಬೊಮ್ಮನು ಅರಿಯದ ಅಗಾಧ ಗುಣಗಳು ಲಕುಮಿ ಬಲ್ಲಳು

ಶ್ರೀಧರ ಒಬ್ಬನು ಉಪಾಸ್ಯ ಸದ್ಗುಣಪೂರ್ಣ ಹರಿಯೆಂದು//30//


ಇಂತ ಅನಂತಾನಂತ ಗುಣಗಳ ಪ್ರಾಂತಗಾಣದೆ ಮಹಾಲಕುಮಿ

ಭಗವಂತಗೆ ಆಭರಣ ಆಯುಧ ಅಂಬರ ಆಲಯಗಳಾಗಿ

ಸ್ವಾಂತದಲಿ ನೆಲೆಗೊಳಿಸಿ ಪರಮ ದುರಂತ ಮಹಿಮನ ದೌತ್ಯಕರ್ಮ

ನಿರಂತರದಿ ಮಾಡುತಲಿ ತದಧೀನತ್ವಯೈದಿಹಳು//31//


ಪ್ರಳಯ ಜಲಧಿಯೊಳು ಉಳ್ಳ ನಾವೆಯು ಹೊಲಬುಗಾಣದೆ ಸುತ್ತುವಂದದಿ

ಜಲರುಹೇಕ್ಷಣನ ಅಮಲ ಗುಣರೂಪಗಳ ಚಿಂತಿಸುತ

ನೆಲೆಯಗಾಣದೆ ಮಹಾಲಕುಮಿ ಚಂಚಲವನು ಐದಿಹಳು

ಅಲ್ಪ ಜೀವರಿಗೆ ಅಳವಡುವದೇನು ಇವನ ಮಹಿಮೆಗಳು ಈ ಜಗತ್ರಯದಿ//32//


ಶ್ರೀನಿಕೇತನ ಸಾತ್ವತಾಂಪತಿ ಜ್ಞಾನ ಗಮ್ಯ ಗಯಾಸುರ ಅರ್ದನ ಮೌನಿಕುಲ ಸನ್ಮಾನ್ಯ

ಮಾನದ ಮಾತುಳ ದ್ವ್ಹಂಸಿ

ದೀನಜನ ಮಂದಾರ ಮಧುರಿಪು ಪ್ರಾಣದ ಜಗನ್ನಾಥ ವಿಠಲ

ತಾನೇ ಗತಿಯೆಂದು ಅನುದಿನದಿ ನಂಬಿದವರ ಪೊರೆವ//33//


//ಇತಿ ಶ್ರೀ ಪಂಚತನ್ಮಾತ್ರ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment