ನಾರಸಿಂಹನೆಂಬೊ ದೇವನು ನಾರಸಿಂಹನೆಂಬೊ ದೇವನು।
ನಂಬಿದಂಥ ನರರಿಗೆಲ್ಲ ವರವಕೊಡುವನು ।ಪ।
ಆದಿಯಲ್ಲಿ ಲಕ್ಷ್ಮೀಸಹಿತದಿ ಮಲಗಿರಲು
ಬಂದರಾಗ ಸನತ್ಕುಮಾರರು
ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದ
ಮೂರು ಜನ್ಮದಲ್ಲಿ ನೀವು ಅಸುರರಾಗಿ ಪುಟ್ಟಿರೆಂದರು ।। ನಾರಸಿಂಹ ।।
ದ್ವಿತೀಯ ಗರ್ಭದಲ್ಲಿ ಜನಿಸಿದ ಹಿರಣ್ಯಾಕ್ಷ
ಹಿರಣ್ಯಕಶಿಪುರೆಂಬ ಭ್ರಾತೃರು
ಪೃಥ್ವಿಯನ್ನು ಮುಳುಗಿಸಿದ ಕಾರಣಾದಿ ಶ್ರೀಹರಿಯು
ತೃತೀಯ ರೂಪದಿಂದ ಖಳನ ಕೊಂದು ಧರೆಯನುಳಿಹಿದನು ।। ನಾರಸಿಂಹ ।।
ಅನುಜನಾದ ಹಿರಣ್ಯಾಕ್ಷನ ಮರಣವನ್ನು
ಕೇಳಿ ಆಗ ನಡೆದ ತಪಸ್ಸಿಗೆ
ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ
ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ ।। ನಾರಸಿಂಹ ।।
ಇಂದ್ರಲೋಕ ಸೂರೆ ಮಾಡಿದ
ಮೂರು ಲೋಕಕೆ ಅಸುರ ತನ್ನ ಭಯವ ತೋರಿದ
ಗರ್ಭಿಣಿ ಕಯಾದುವನ್ನು ಬ್ರಹ್ಮಪುತ್ರ ಬಂದು ಆಗ
ದೈತ್ಯನಾದ ಹಿರಣ್ಯಕಶಿಪುವಿಗೆ ಒಪ್ಪಿಸಿದನು ।। ನಾರಸಿಂಹ ।।
ನವಮಾಸಗಳು ತುಂಬಲು ಕಯಾದು
ಆಗ ಪುತ್ರರತ್ನವನ್ನು ಪಡೆದಳು
ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ
ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು ಕರೆಸಿದನು ।। ನಾರಸಿಂಹ ।।
ಬಾಲಚಂದ್ರನಂತೆ ಹೊಳೆಯುತಾ ಇರುತಿರಲು
ಐದು ವರ್ಷ ತುಂಬಿತಾಗಲೆ
ಗುರುಗಳನ್ನು ಕರೆಸಿ ಬೇಗ ಸಕಲ ವಿದ್ಯೆ ಕಲಿಸಿರೆಂದು
ಗುರುಗಳಿಗೆ ಮಗನನ್ನು ಒಪ್ಪಿಸಿದ ದೈತ್ಯ ತಾನು ।। ನಾರಸಿಂಹ ।।
ಓಂ ನಮಃ ಶಿವಾಯ ಎನುತಲಿ
ಅಸುರ ತನ್ನ ಸುತನ ಬರೆದು ತೋರು ಎನಲು
ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು
ಎಡದ ತೊಡೆಯ ಮೇಲಿದ್ದ ಶಿಶುವ ಬಡಿದು ಧರೆಗೆ ನೂಕಿದನು ।। ನಾರಸಿಂಹ ।।
ಸುತ್ತ ಜನರ ಕರೆಸಿ ಬೇಗದಿ
ಅಸುರ ತನ್ನ ಸುತನ ಕೊಲ್ಲಿಸಬೇಕೆಂದಾಗ
ಅಟ್ಟ ಅಡವಿಯೊಳು ವಿಷವನಿಟ್ಟು ಭೋಜನಂಗಳ ಮಾಡಿ
ಹರಿಯ ಸ್ಮರಣೆ ಮಾತ್ರದಿಂದ ಭುಂಜಿ ತಿಳಿದ ಜಟ್ಟಿಹಾಂಗೆ ।। ನಾರಸಿಂಹ ।।
ಅಂಬುಧಿಯೊಳು ಮಗನ ಮಲಗಿಸಿ
ಮೇಲೆ ದೊಡ್ಡ ಬೆಟ್ಟವನಿಟ್ಟು ಬನ್ನಿರೋ
ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ
ಮರಣ ಇಲ್ಲದಹಾಂಗೆ ಮಾಡಿ ಮನೆಗೆ ಕೊಟ್ಟು ಕಳುಹಿದನು ।। ನಾರಸಿಂಹ ।।
ಬೆಟ್ಟದಿಂದ ಕಟ್ಟಿ ಉರುಳಿಸಿ ಅಸುರ
ತನ್ನ ಪಟ್ಟದಾನೆ ಕಾಲಲಿ ಮೆಟ್ಟಿಸಿ
ಹರಿವ ಒಲೆಯ ಮಾಡಿ ಸುಟ್ಟು ಹುಲಿಯ ಬೋನಿನಲ್ಲಿಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲು ಶಕ್ತನಲ್ಲದೆ ಪೋದನಂತೆ ।। ನಾರಸಿಂಹ ।।
ನಿನ್ನ ದೇವ ಇದ್ದ ಎಡೆಯನು ತೋರು
ಎನುತ ಪಿತನು ತನ್ನ ಸುತನ ಕೋರಲು
ಎನ್ನ ದೇವ ಇಲ್ಲದಂತ ಎಡೆಗಳುಂಟೆ ಲೋಕದಲ್ಲಿ
ಕಂಬದಲ್ಲೂ ಇರುವನೆಂದು ಕೈಯ ಮುಗಿದು ತೋರ್ದನಾಗೆ ।। ನಾರಸಿಂಹ ।।
ವರಕಂಬವನ್ನು ಒಡೆಯಲು ನರಹರಿಯು ಉಗ್ರಕೋಪವನ್ನು ತಾಳಿದ
ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ
ಪಿಡಿದು ಒತ್ತಿ ಕರುಳ ಬಗೆದು
ಮಾಲೆ ಹಾಕಿ ಕಂದ ಭಕ್ತನಪ್ಪಿಕೊಂಡ ।। ನಾರಸಿಂಹ ।।
ಅಂತರಿಕ್ಷದಲಿ ಅಮರರು ನೋಡಿ ಆಗ
ಪುಷ್ಪವೃಷ್ಟಿಯನ್ನೆ ಕರೆದರು
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತಿರಲು
ಅಮರಪತಿಯರೆಲ್ಲರ ನೋಡಿ ಅಂಜಬೇಡೆಂದಭಯವಿತ್ತ ।। ನಾರಸಿಂಹ ।।
ಲಕ್ಷ್ಮೀನಾರಸಿಂಹ ಚರಿತೆಯ
ಉದಯಕಾಲ ಪಠಿಸುವಂತ ನರರಿಗೆಲ್ಲ ಪುತ್ರಸಂತಾನಂಗಳಿತ್ತು
ಮತ್ತೆ ಬೇಡಿದಹಾಂಗೆ ಕೊಟ್ಟು
ಭಕ್ತವತ್ಸಲ ಮುಕ್ತಿಕೊಡುವ ಪುರಂದರವಿಠಲರಾಯ ।। ನಾರಸಿಂಹ ।।
No comments:
Post a Comment