ನಂಬಿದೆ ನಿನ್ನ ಪಾದ ನರಸಿಂಹ
ಎನ್ನ ಬೆಂಬಿಡದೆ ಸಲಹಯ್ಯ ನರಸಿಂಹ ।।೧।।
ಹಂಬಲಿಸುವೆನು ಬಲು ನರಸಿಂಹ
ಪಾದ ನಂಬಿದವರನು ಕಾಯೋ ನರಸಿಂಹ ।।೨।।
ತುಂಬುರು ನಾರದಪ್ರಿಯ ನರಸಿಂಹ
ಚೆಲ್ವ ಶಂಬರಾರಿಯ ಪಿತನೆ ನರಸಿಂಹ ।।೩।।
ಅಂಬರೀಷನ ಕಾಯ್ದ ನರಸಿಂಹ
ಜಗದಂಬಾರಮಣನೆ ಸಿರಿ ನರಸಿಂಹ ।।೪।।
ಬಾಲ ಕರೆದಲ್ಲಿ ಬಂದೆ ನರಸಿಂಹ
ಭಕ್ತಪಾಲಿಪ ದಯಾಳು ಸಿರಿ ನರಸಿಂಹ ।।೫।।
ಲೀಲೆಯಿಂದ ಹಿರಣ್ಯನ ನರಸಿಂಹ
ಕೊಂದ ಲೋಲ ಸಿರಿಯರಸನೆ ನರಸಿಂಹ ।।೬।।
ಅಚ್ಯುತಾನಂತ ಗೋವಿಂದ ನರಸಿಂಹ
ಸಿರಿಸಚ್ಚಿದಾನಂದ ಮುಕುಂದ ನರಸಿಂಹ ।।೭।।
ಕಿಚ್ಚಿನಂದದಿ ಬಂದೆ ನರಸಿಂಹ
ಭವ ವಿಚ್ಚೆಯಿಂದ ಬಿಡಿಸಯ್ಯ ನರಸಿಂಹ ।।೮।।
ಕರಿಮೊರೆಯನು ಕೇಳಿ ನರಸಿಂಹ
ಬಲು ಬರದಿಂದೊದಗಿ ಬಂದೆ ನರಸಿಂಹ ।।೯।।
ಗರುಡವಾಹನನಾಗಿ ನರಸಿಂಹ
ಉದ್ಧರಿಸಿ ಕಾಯ್ದೆನಲ್ಲೋ ನರಸಿಂಹ ।।೧೦।।
ದೇವರ ದೇವನು ನೀನು ನರಸಿಂಹ
ಬೇರೆ ಕಾವರನು ಕಾಣೆನಯ್ಯ ನರಸಿಂಹ ।।೧೧।।
ಭಾವಜನಯ್ಯನೆ ಸಿರಿ ನರಸಿಂಹ
ನಿನ್ನ ಸೇವೆಯ ಪಾಲಿಸಿ ಕಾಯೋ ನರಸಿಂಹ ।।೧೨।।
ತಂದೆ ತಾಯಿ ಗುರು ದೈವ ನರಸಿಂಹ
ಎನ್ನ ಬಂಧುಬಳಗವು ನೇನೆ ನರಸಿಂಹ ।।೧೩।।
ಕುಂದು ಹೆಚ್ಚು ನೋಡಬೇಡ ನರಸಿಂಹ
ಪುರಂದರವಿಠಲ ಕಾಯೋ ನರಸಿಂಹ ।।೧೪।।
No comments:
Post a Comment