ರಾಗ : ಕಾಂಬೋಧಿ
ತಾಳ : ಝಂಪೆತಾಳ
ಪ್ರಹ್ಲಾದವರದ ಭಯ ಗಜಕೆ ಸಿಂಹ ಪರಮ
ಆಹ್ಲಾದ ಪದವಿತ್ತು ಪೊರೆಯೋ ನರಸಿಂಹ ।ಪ।
ಹಿಂದೆ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದ
ನೊಂದವನ ಬಾಧೆಯಲಿ ಮರುಗಿ ಸೊರಗಿ
ಇಂದಿರೇಶ ಸಲಹೆನಲು ಗಾಢಸ್ತಂಭದಲೊದಗಿ
ಬಂದವನುದರ ಬಗೆದೆ ರುದಿರವನು ಸವಿದೆ ।।೧।।
ಅಸುರ ಕೆಡಲದಕಂಡು ಅತಿಹರುಷದಿಂದ
ತ್ರಿದಶಶಂಬರದಿ ಪೂಮಳೆಗರೆಯಲು
ಶಿಶುವೇಕ ಮಾನಸದಿ ಮೊರೆಹೊಕ್ಕು ಪೊಗಳುತಿರೆ
ಬಿಸಜಾಕ್ಷನ ಕರುಣದಿಂದ ಸಲಹಿದೆಯಾಗಿ ।।೨।।
ಹಲವು ಯೋನಿಗಳಲ್ಲಿ ತಿರುಗಿ ಬಳಲಿದೆನಯ್ಯ
ನಳಿನಾಕ್ಷ ನಿಮ್ಮ ಗುರುತವ ಕಾಣದೆ
ಇಳೆಯಲ್ಲಿ ದ್ವಿಜನಾಗಿ ಪುಟ್ಟಿ ತವ ಪದಪಿಡಿದೆ
ಗೆಲಿಸು ಭವದುರಿತ ಪ್ರಸನ್ವೆಂಕಟ ನೃಸಿಂಹ ।।೩।।
No comments:
Post a Comment