ರಾಗ : ನಾದನಾಮಕ್ರಿಯೆ
ತಾಳ : ಅಟತಾಳ
ಶ್ರೀಪಾದರಾಜರ ಕೃತಿ
ಮರುದಂಶರ ಮತ ಪಿಡಿಯದೆ ಇಹ
ಪರದಲ್ಲಿ ಸುಖವಿಲ್ಲವಂತೆ || ಪ ||
ಅರಿತು ವಿವೇಕದಿ ಮರೆಯದೆ ನಮ್ಮ
ಗುರುರಾಯರ ನಂಬಿ ಬದುಕಿರೋ || ಅ ಪ ||
ಕ್ಷೀರವ ಕರೆದಿಟ್ಟ ಮಾತ್ರದಿ
ಸಂಸ್ಕಾರವಿಲ್ಲದೆ ಘೃತವಾಗದಂತೆ
ಸೂರಿಜನರ ಸಂಗವಿಲ್ಲದೆ ಸಾರ
ವೈರಾಗ್ಯಭಾಗ್ಯ ಪುಟ್ಟದಂತೆ || ೧ ||
ಉಪದೇಶವಿಲ್ಲದ ಮಂತ್ರ ಏಸು
ಜಪಿಸಲು ಫಲಗಳ ಕೊಡದಂತೆ
ಉಪವಾಸ ವ್ರತಗಳಿಲ್ಲದೆ ಜೀವ
ತಪಸಿಯೆನಿಸಿಕೊಳ್ಳಲರಿಯನಂತೆ || ೨ ||
ಸಾರ ಮಧ್ವಶಾಸ್ತ್ರವೋದದೆ ಗುರು
ತಾರತಮ್ಯಜ್ಞಾನ ಪುಟ್ಟದಂತೆ
ಶ್ರೀರಂಗವಿಠಲನ ಭಜಿಸದೆ ಮುಂದೆ
ಪರಮಗತಿ ದೊರಕೊಲ್ಲದಂತೆ || ೩ ||
No comments:
Post a Comment