Sunday, November 3, 2013

ಬಲಿಪಾಡ್ಯಮಿ


ಇಂಧ್ರಸೇನಾ ಎಂಬ ಶ್ರೀಮಂತ ವ್ಯಾಪಾರಿಯೊಬ್ಬ ವ್ಯಾಪಾರಿ ವೃತ್ತಿಯೊಂದಿಗೆ ವೇಶ್ಯೆಯರ ಸಹವಾಸಕ್ಕೆ ಬಿದ್ದು ಎಲ್ಲಾ ಕರ್ತವ್ಯಗಳನ್ನು ಮರೆತಿರುತ್ತಾನೆ. ತನ್ನ ಜೀವಮಾನವನ್ನು ಮೊಜು ಮನರಂಜನೆಯೊಂದಿಗೆ ಸಮಯ ವ್ಯರ್ಥವಾಗಿ ಕಳೆದು ಬಹಳ ಪಾಪಕರ್ಮಗಳೊಂದಿಗೆ ಸಾಯುವ ಸ್ಥಿತಿಗೆ ತಲುಪುತ್ತಾನೆ. ಕೊನೆಗಾಲದಲ್ಲಿ ಒಳ್ಳೆ ಬುದ್ದಿ ಬಂದಹಾಗೆ ಸಾಯುವ ಮುನ್ನ ಕೊನೆ ಕ್ಷಣದಲ್ಲಿ ತಾನು ದುಡಿದಿದನ್ನು ಬ್ರಾಹ್ಮಣರಿಗೆ ದಾನ ಮಾಡಿ ಕೊನೆಯುಸಿರೆಳೆಯುತ್ತಾನೆ.

ಸತ್ತ ನಂತರ ಯಮಲೋಕಕ್ಕೆ ತೆರಳಿದ ಇಂಧ್ರಸೇನನ ಪಾಪ ಪುಣ್ಯಗಳ ಲೆಕ್ಕಾಚಾರ ನಡೆಯುತ್ತದೆ. ಆ ಪ್ರಕಾರ ಅವನ ಖಾತೆಯಲ್ಲಿ ಕೇವಲ ಪಾಪ ತುಂಬಿರುತ್ತದೆ. ಆದರೆ ಕೊನೆಯ ಕ್ಷಣದಲ್ಲಿ ಬ್ರಾಹ್ಮಣರಿಗೆ ದಾನ ಮಾಡಿದ ಅಲ್ಪ ಪುಣ್ಯ ಮಾತ್ರ ಕಂಡುಬರುತ್ತದೆ. ಯಮಧರ್ಮನು ಇಂಧ್ರಸೇನನಿಗೆ ಮೊದಲು ನಿನ್ನ ಪಾಪಫಲವನ್ನು ಅಥವಾ ನಿನ್ನ ಪುಣ್ಯಫಲವನ್ನು ಬಳಸಲು ಇಚ್ಚಿಸುತ್ತಿಯಾ ಎಂದು ವಿಚಾರಿಸುತ್ತಾನೆ. ಪುಣ್ಯಫಲದಿಂದಲೇ ಪ್ರಾರಂಭವಾಗಲಿ ಎಂದು ಇಂಧ್ರಸೇನಾ ಉತ್ತರಿಸುತ್ತಾನೆ. ಯಮಧರ್ಮನು ಮೂರು ಮೂಹುರ್ತಗಳಿಗೆ ಇಂಧ್ರನ ಸಿಂಹಾಸನವನ್ನು ಇಂಧ್ರನ ಒಪ್ಪಿಗೆಯನ್ನು ಪಡೆದು ನೀಡುತ್ತಾನೆ. ಇಂಧ್ರಸೇನನು ಇಂಧ್ರಲೋಕದ ಸಿಂಹಾಸನವೆರಿದ ಮೇಲೆ ಇಂಧ್ರಲೋಕದಲ್ಲಿದ್ದಂತಹ ಎಲ್ಲ ಐಶ್ವರ್ಯವನ್ನು ಮಹಾ ಬ್ರಾಹ್ಮಣರಾದ ವಶಿಷ್ಠ, ಕಶ್ಯಪ, ವಿಶ್ವಾಮಿತ್ರ ಹೀಗೆ ಹಲವರಿಗೆ ದಾನ ಮಾಡಿ ಬಿಡುತ್ತಾನೆ. ಆ ಎಲ್ಲಾ ದಾನಗಳಿಂದ ಅವನಿಗೆ ಅಂಟಿದ್ದ ಎಲ್ಲಾ ಪಾಪವು ನಾಶವಾಗಿ ಮತ್ತು ದಾನದ ಫಲವಾಗಿ ತನ್ನ ಎರಡನೆ ಮೂಹುರ್ತದಲ್ಲಿಯು ಮತ್ತೆ ಇಂಧ್ರನ ಸಿಂಹಾಸನ ಭೂಲೋಕದಲ್ಲಿ ದೊರೆಯುತ್ತದೆ. ಅದು ಪ್ರಚಂಡ ಅಸುರದೈತ್ಯ ದೊರೆ ಹಿರಣ್ಯ ಕಶ್ಯಪುವಿನ ಕುಲದಲ್ಲಿ!

ಹೀಗೆ ಹಿರಣ್ಯ ಕಶ್ಯಪುವಿನ ಕುಲದಲ್ಲಿ ಜನಿಸಿದ ಆ ವ್ಯಾಪಾರಿ ಬೇರ್ಯಾರು ಅಲ್ಲ, ಅವನೆ ಪ್ರಹ್ಲಾದ ಮಹಾರಾಜರ ಮೊಮ್ಮಗ, ವೀರೊಚನನ ಮಗ, ದೇವಾನುದೇವತೆಗಳನ್ನೆ ನಿಬ್ಬೆರಗಾಗಿಸಿದ ಮಹಾನ್ ದಾನಶೂರ ಅಸುರ ಅರಸ...

~ಬಲಿ ಚಕ್ರವರ್ತಿ~

ತನ್ನ ಮುತ್ತಾತ ಹಿರಣ್ಯ ಕಶ್ಯಪುವಿನಂತೆ ಯುದ್ದಾಶಕ್ತಿ ಬೆಳೆಸಿಕೊಂಡು 100 ಆಶ್ವಮೇದಯಾಗದ ಗುರಿಯೊಂದಿಗೆ ಸುತ್ತಮುತ್ತಲಿದ್ದ ರಾಜಮಹಾರಾಜರನ್ನು ಸೋಲಿಸಿ, ದೇವಲೋಕಕ್ಕೊ ಕಾಲಿರಿಸಿ ದೇವೆಂದ್ರನನ್ನು ಸೋಲಿಸಿ, ದೇವಾನುದೇವತೆಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ಇದರಿಂದ ದಿಕ್ಕು ತೋಚದಂತಾದ ಇಂಧ್ರನು ಮಹಾವಿಷ್ಣುವಿನ ಮೊರೆಹೋಗುತ್ತಾನೆ. ಆ ವೇಳೆಗೆ ಕಶ್ಯಪ ಮುನಿಯ ಮಡದಿ ಹಾಗೂ ದೇವತೆಗಳ ತಾಯಿಯಾಗಿದ್ದ ಅದಿತಿಯು ಕೂಡ ಮಹಾವಿಷ್ಣುವಿನ ಮೊರೆ ಹೋಗಿ ದೇವತೆಗಳನ್ನು ಬಲಿಯಿಂದ ಉಳಿಸುವಂತೆ ವಿನಂತಿಸಿಕೊಳ್ಳುತ್ತಾಳೆ. ಆಗ ಮಹಾವಿಷ್ಣು ತನ್ನ ಅವತಾರಗಳೊಂದಾದ ವಾಮನ ಅವತಾರದೊಂದಿಗೆ ಕಶ್ಯಪ ಅದಿತಿಯ ಮಗನಾಗಿ ಧರೆಗಿಳಿಯುತ್ತಾನೆ.

ದೈತ್ಯಾ ಗುರು ಶುಕ್ಲಾಚಾರ್ಯರ ಆರ್ಶಿವಾದದೊಂದಿಗೆ 99 ಆಶ್ವಮೇದಯಾಗವನ್ನು ಮುಗಿಸಿದ ಬಲಿಯು, 100ನೇ ಆಶ್ವಮೇಧಯಾಗದ ಸಿದ್ದತೆಗಳನ್ನು ಮಾಡಿಕೊಂಡಿರುತ್ತಾನೆ. ತನ್ನ ತಾತ ಪ್ರಹ್ಲಾದ ಮಹಾರಾಜರಂತೆ ನಾರಾಯಣನ ಆರಾಧಕನಾಗಿದ್ದ ಬಲಿಯು ತನ್ನ ಎಲ್ಲಾ ಆಶ್ವಮೇದಯಾಗದಲ್ಲೂ ಎಲ್ಲಾ ವರ್ಗದ ಜನರಿಗೆ ಅವರು ಬಯಸುತ್ತಾರೊ ಅದೆಲ್ಲವನ್ನು ಇಲ್ಲ ಎನ್ನದೇ ದಾನವಾಗಿ ನೀಡುತ್ತಾ ಬಂದಿರುತ್ತಾನೆ. ಅ ಸಮಯಕ್ಕೆ ವಾಮನ ರೂಪಿಯಾದ ಮಹಾವಿಷ್ಣುವಿನ ಆಗಮನವಾಗುತ್ತದೆ. ನೋಡಲು ಕುಬ್ಜನಾದರೂ ಆಕರ್ಷಣೀಯ ಬ್ರಾಹ್ಮಣನಾಗಿ ಕಂಡುಬಂದಿದ್ದರಿಂದ ಬಲಿಯು ವಾಮನನನ್ನು ಸ್ವಾಗತಿಸಿ ಪಾದ ಪೂಜೆ ಮಾಡುತ್ತಾನೆ. ನಂತರ ಆಚರಣೆಯಂತೆ ವಾಮನನಿಗೆ ಎನಾದರೂ ಕೇಳಿಕೊಳ್ಳಿ ಅದು ಐಶ್ವರ್ಯ, ಸಂಪತ್ತು, ರಾಜ್ಯ ಹೀಗೆ ಎನಾಗಿದ್ದರು ಸರಿಯೆ ನಾನು ನೀಡುತ್ತೆನೆ ಎಂದು ವಿನಂತಿಸುತ್ತಾನೆ. ಆದರೆ ವಾಮನನು ಕೇವಲ 3 ಹೆಜ್ಜೆಗಳನ್ನು ಇಡುವಷ್ಟು ಸ್ಥಳವನ್ನು ದಾನವಾಗಿ ಕೊಟ್ಟರೆ ಸಾಕು ಎನ್ನುತ್ತಾನೆ. ಆಗ ಅಲ್ಲಿದ್ದವರು ಆಶ್ಚರ್ಯ ಪಡುತ್ತಾರೆ, ಪುಟ್ಟ ಪುಟ್ಟ ಪಾದಗಳನ್ನು ಹೊಂದಿರುವ ಈ ಕುಬ್ಜ ಬ್ರಾಹ್ಮಣನಿಗೆ ಏತಕ್ಕೆ ಬೇಕು? ಏನು ಮಾಡುತ್ತಾನೆ 3 ಹೆಜ್ಜೆಗಳ ಜಾಗ ತೆಗೆದುಕೊಂಡು? ಎಂದು ಮೂದಲಿಸುತ್ತಾ ನಗುತ್ತಾರೆ. ಆದರೆ ಅಲ್ಲಿದ್ದ ದೈತ್ಯ ಗುರು ಶುಕ್ಲಾಚಾರ್ಯರು ಇದರ ಮರ್ಮವನ್ನು ಅರಿತು ಬಲಿ ಮಹಾರಾಜನಿಗೆ ಈ ಬೇಡಿಕೆಗೆ ಒಪ್ಪಿಗೆ ನೀಡಬಾರದು ಎಂದು ಅಜ್ಞಾಪಿಸುತ್ತಾರೆ. ಆದರೆ ಬಲಿಯು ತನ್ನ ಗುರುವಿನ ಆಜ್ಞೆಯನ್ನು ದಿಕ್ಕರಿಸಿ ದಾನ ನೀಡಲು ಮುಂದಾಗುತ್ತಾನೆ. ಆದರೆ ಶಕ್ಲಾಚಾರ್ಯರು ಕೋಪಗೊಂಡು ನಿನ್ನ ಸಾಮ್ಯಾಜ್ಯವನ್ನೆಲ್ಲವನ್ನು ಕಳೆದುಕೊ ಎಂದು ಬಲಿಗೆ ಶಪಿಸಿ ಹೋರಟು ಹೋಗುತ್ತಾರೆ. ವಾಮನನ ಬೇಡಿಕೆಗೆ ಸಮ್ಮತಿಸಿ ಬಲಿಯು 3 ಹೆಜ್ಜೆಗಳನ್ನು ಎಲ್ಲಿ ಹೂರುತ್ತಿರೊ ಅದು ನಿಮ್ಮದೆ ಎಂದು ವಾಮನನಿಗೆ ತಿಳಿಸುತ್ತಾನೆ. ಮುಗುಳ್ನಕ್ಕ ವಾಮನನು ತನ್ನ ದಾನವನ್ನು ಪಡೆಯಲು ಮುಂದಾಗುತ್ತಾನೆ.

ವಾಮನನು 3 ಹೆಜ್ಜೆಗಳ ಜಾಗವನ್ನು ಪಡೆಯಲು ಮುಂದಾಗಿ ಕುಬ್ಜನಾಗಿದ್ದ ವಾಮನನು ತ್ರಿವಿಕ್ರಮನಾಗಿ ಆಕಾಶದೆತ್ತರಕ್ಕೆ ಬೆಳೆಯುತ್ತಾನೆ. ಇದನ್ನು ಕಂಡವರೆಲ್ಲರು ಭಯಗೊಂಡು ವಾಮನ ತ್ರಿವಿಕ್ರಮನಿಗೆ ಶರಣಾಗುತ್ತಾರೆ. ತನ್ನ ಮೊದಲ ಹೆಜ್ಜೆಯನ್ನು ಅತಲ ವಿತಲ ಪಾತಾಳ ರಸಾತಲಲೋಕಗಳನ್ನು ಒಳಗೊಂಡಂತೆ ಭೂಲೋಕದ ಮೇಲೆ ಇಡುತ್ತಾನೆ. ನಂತರ ತನ್ನ ಎರಡನೇಯ ಹೆಜ್ಜೆಯನ್ನು ಎಲ್ಲಾ ಆಕಾಶಕಾಯಗಳನ್ನು ಒಳಗೊಂಡಂತೆ ಆಕಾಶದಲ್ಲಿ ಇಡುತ್ತಾನೆ. ಮೂರನೆ ಹೆಜ್ಜೆ ಇಡುವುದಕ್ಕೆ ಸ್ಧಳವಿಲ್ಲದಿದ್ದಾಗ ವಾಮನ ತ್ರಿವಿಕ್ರಮನು ವಾಲುತ್ತಾನೆ. ಆಗ ವಿಷ್ಣುವಿನ ವಾಹನ ಗರುಡನು ವಾಯುದೇವನ ಸಹಾಯದೊಂದಿಗೆ ಗಾಳಿಯ ಹಗ್ಗವನ್ನು ಮಾಡಿ ತಡೆದು ನಿಲ್ಲಿಸುತ್ತಾರೆ. ಮೂರನೇ ಹೆಜ್ಜೆ ಇಡಲು ವಾಮನನಿಗೆ ಜಾಗವೇ ಇಲ್ಲದಿದ್ದಾಗ ಬಲಿ ಚಕ್ರವರ್ತಿಯು ತನ್ನ ತಲೆಯ ಮೇಲೆ ಇಡಲು ಕೋರಿಕೊಳ್ಳುತ್ತಾನೆ. ಅದರಂತೆ ವಾಮನ ತ್ರಿವಿಕ್ರಮನು ಬಲಿಯ ತಲೆ ಮೇಲೆ ತನ್ನ 3 ನೇ ಹೆಜ್ಜೆ ಇಟ್ಟು ಪಾತಾಳಕ್ಕೆ ತುಳಿದು ಬಿಡುತ್ತಾನೆ. ಅಲ್ಲಿಗೆ ಬಲಿ ಚಕ್ರವರ್ತಿಯ ಎಲ್ಲಾ ಅಟ್ಟಹಾಸಗಳು ಮತ್ತು ದಾನಧರ್ಮಗಳು ಅಂತ್ಯವಾಗುತ್ತವೆ.

ವಾಮನನ ಅನುಗ್ರಹಕ್ಕೆ ಪಾತ್ರವಾದ ಇಂಧ್ರಸೇನಾ ಬಲಿ ಚಕ್ರವರ್ತಿಯು, ತನ್ನ ಮೂರನೆ ಮೂಹುರ್ತದಲ್ಲಿ ಮತ್ತು ಮುಂದಿನ ಸಾವರ್ಣಿ ಮನ್ವಂತರದಲ್ಲಿ ಮುಂದಿನ ಇಂಧ್ರನಾಗಿ ಕಾಣಿಸಿಕೋಳ್ಳಲಿದ್ದಾನೆ.

No comments:

Post a Comment