ರಾಗ : ಮೋಹನ
ತಾಳ : ಆಟತಾಳ
ಮಾಮಝ ಬಾಪುರೆ ಭಳಿರೆ ಹನುಮಂತ || ಪ ||
ರಾಮಪದ ಸೇವಿಪ ವೀರ ಹನುಮಂತ || ಅ ಪ ||
ಹುಟ್ಟುತಲೇ ಹೊನ್ನ ಕಚ್ಚುಟವ ಕುಂಡಲವೆರಿಸಿ
ನಿಷ್ಟೆಯಲಿ ರಘುಪತಿಯ ಪಾದವನೇ ಕಂಡು
ದಿಟ್ಟ ಹರಿದಾಡಿ ಮನಮುಟ್ಟಿ ಪೂಜಿಸಲಜನ
ಪಟ್ಟಕನುವಾದ ಸಿರಿವಂತ ಹನುಮಂತ || ೧ ||
ಅಂಬರಕೆ ಪುಟನೆಗೆದು ಅಂಬುಧಿಯ ನೆರೆದಾಟಿ
ಕುಂಭಿಣಿಯ ಮಗಳಿಗುಂಗುರವನಿತ್ತೆ
ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ
ಗಂಭೀರ ವೀರಾಧಿವೀರ ಹನುಮಂತ || ೨ ||
ಅತಿದುರುಳ ರಕ್ಕಸನು ರಥದ ಮೇಲಿರಲು
ರಘುಪತಿಯು ಪದಚರಿಯಾಗಿ ನಿಂತಿರಲು
ಪೃಥಿವಿ ಗಗನಕೆ ಬೆಳೆದು ರಥವಾದೆ ಒಡೆಯನಿಗೆ
ಅತಿ ಭಯಂಕರ ಸತ್ವವಂತ ಹನುಮಂತ || ೩ ||
ಒಡೆಯ ಉಣಕರೆಯಲಂದಡಿಗಡಿಗೆ ಕೈ ಮುಗಿದು
ದೃಢ ಭಕುತಿಯಿಂದ ಮೌನದಲಿ ಕುಳಿತು
ಎಡೆಯಕೊಡೆದ್ದೋಡಿ ಗಗನದಲಿ ಸುರರಿಗೆ
ಕೊಡುತ ಸವಿದುಂಡ ಗುಣವಂತ ಹನುಮಂತ || ೪ ||
ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮ
ತೃತೀಯದಲಿ ಗುರುಮಧ್ವಮುನಿಯು ಎನಿಸಿ
ಪ್ರತಿ ಇಲ್ಲದಲೆ ಮೆರೆದೆ ಪುರಂದರ ವಿಠಲ
ಭಕ್ತ ನಿನಗಾರು ಸರಿ ವಿಜಯ ಹನುಮಂತ || ೫ ||
No comments:
Post a Comment