Thursday, November 14, 2013

ಏಳೇಳು ಶರಧಿಯು ಏಕವಾಗಿದೆ ಕಂಡ್ಯ

ರಾಗ : ಸೌರಾಷ್ಟ್ರ
ತಾಳ : ಆಟತಾಳ
ಪುರಂದರದಾಸರ ಕೃತಿ

ಏಳೇಳು ಶರಧಿಯು ಏಕವಾಗಿದೆ ಕಂಡ್ಯ
ಹ್ಯಾಗೆ ಬಂದೆಯೋ ಹೇಳೋ ಕೋತಿ || ||

ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿಲಂಘಿಸಿ ಬಂದೆ ಭೂತ || ಅ ಪ ||

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹ್ಯಾಗೆ ಬಿಟ್ಟರು ಹೇಳು ಕೋತಿ
ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ
ಮಾತಾಡಿ ಬಂದನೋ ಭೂತ || ||

ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು
ಹ್ಯಾಗೆ ಬಿಟ್ಟಳು ಹೇಳೋ ಕೋತಿ
ಲಂಕಿಣಿಯನು ಕೊಂದು ಶಂಕೆ ಇಲ್ಲದೆ ನಾನು
ಬಿಂಕಾದಿಂದಲಿ ಬಂದೆ ಭೂತ || ||

ಕೊಂಬೆಕೊಂಬೆಗೆ ಕೋಟಿ ಮಂದಿ ರಾಕ್ಷಸರಿರೆ
ಹ್ಯಾಗೆ ಬಿಟ್ಟರು ಹೇಳೋ ಕೋತಿ
ಕೊಂಬೆಕೊಂಬೆಗೆ ಕೋಟಿ ಮಂದಿ ರಾಕ್ಷಸರನ್ನು
ಕೊಂದು ಹಾಕಿ ಬಂದೆನೋ ಭೂತ || ||

ಯಾವೂರೋ ಎಲೋ ನೀನು ಯಾವ ಭೂಮಿಯೋನಿಂದು
ಯಾಕೆ ಬಂದೆಯೋ ಹೇಳೋ ಕೋತಿ
ಯಾವ ವನದೊಳಗೆ ಜಾನಕಿದೇವಿ ಇದ್ದಳೋ
ಅವಳ ನೋಡ ಬಂದೆ ಭೂತ || ||

ದಕ್ಷಿಣಪುರಿ ಲಂಕಾ ದಾನವರಿಗಲ್ಲದೆ
ತ್ರಕ್ಷ್ಯಾದ್ಯರಿಗಳವಲ್ಲ ಕೋತಿ
ಪಕ್ಷಿಧ್ವಜ ರಾಮನ ಅಪ್ಪಣೆ ಎನಗಿಲ್ಲ
ಈ ಕ್ಷಣದಿ ತಪ್ಪಿಸಿಕೊಂಡೆ ಭೂತ || ||

ದೂತನಾಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪವಿನ್ಯಾತಕೋ ಕೋತಿ
ನಾ ತಾಳಿಕೊಂಡಿಹೆನು ಈ ಕ್ಷಣದಿ ಲಂಕೆ
ನಿರ್ಧೂಮವನು ಮಾಳ್ಪೆ ಭೂತ || ||

ನಿಮ್ಮಂಥ ದಾಸರು ನಿಮ್ಮರಸನ ಬಳಿ
ಎಷ್ಟು ಮಂದಿದ್ದಾರೋ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು
ಕೋಟ್ಯಾನು ಕೋಟಿಯೋ ಭೂತ || ||

ಎಲ್ಲಿಂದ ನೀ ಬಂದೆ ಏತಕೆಲ್ಲರ ಕೊಂದೆ
ಯಾವರಸನ ಬಂಟ ಕೋತಿ
ಚೆಲ್ವಯೋಧ್ಯಾಪುರದರಸು ಜಾನಕೀಪತಿ
ರಾಮಚಂದ್ರನ ಬಂಟ ಭೂತ || ||

ಸಿರಿ ರಾಮಚಂದ್ರನು ನಿನ್ನರಸನಾದರೆ
ಆತ ಮುನ್ನಾರು ಹೇಳೋ ಕೋತಿ
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ
ಶ್ರೀ ಪುರಂದರ ವಿಠಲನೋ ಭೂತ || ||

No comments:

Post a Comment