ಕಂಡೆ ನಾ ಉದ್ದಂಡ ನರಸಿಂಹನಾ
ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ
ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ।।ಪ।।
ಗುಡುಗುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸಿ ಸೆನುಡಿಯ ಡಗಲೊಡನೆ ಮುಡಿ ಪಿಡಿದು
ಘಡ ಘಡನೆ ನಡು ನಡುಗೆ ಗುಡುಗುಡಿಸಿ ಸಭೆ ಬೆದರೆ ।।೧।।
ಹಿಡಿ ಹಿಡಿದು ಹಿರಣ್ಯಕನ ತೊಡೆಯೊಳಿಡೆ ಕೆಡಹಿದನೆ
ಉರದೊಳಪ್ಪಳಿಸಿ ಅರಿಬಸಿರ ಸರಸ ಸೀಳಿ
ಪರಿಪರಿಯಲಿ ಚರ್ಮವೆಳೆದೆಳೆಯಲು
ನರ ನರತನೆ ನೆಗೆದು ನಿರ್ಗಳಿತ ಶೋಣಿತ ಸುರಿಯೆ ।।೨।।
ಹರಿ ಹರಿದು ಕರುಳ ಕೊರಳೊಳಿಟ್ಟವನ
ಪುರಜನರು ಹಾಯೆಂದು ಸುರರು ಹೂ ಮಳೆಗರೆಯೆ
ಹರಿ ಹರಿ ಶರಣೆಂದು ಸ್ತುತಿಸಿ ಶಿಶು ಮೆರೆಯೆ
ಕರುಣಾಳು ಕಾಗಿನೆಲೆ ಆದಿಕೇಶವನ ।।೩।।