ರಾಗ : ಹಂಸಧ್ವನಿ
ತಾಳ : ಆದಿತಾಳ
ನಾರಸಿಂಹ ಶ್ರೀ ನಾರಸಿಂಹ
ಪಾರುಗಾಣಿಸಿ ದುರಿತೌಘ ಹರಿಸಿ ಕಾಯೋ ।ಪ।
ನರಹರಿ ಜ್ವರಹರ ಘೋರವ್ಯಾಧಿಯ
ಪರಿಹಾರಗೈಸಿ ಪರಿಪಾಲಿಸಬೇಕಯ್ಯ ।ಅ ಪ।
ಘುಡುಘುಡಿಸುತ ಪಲ್ಕಡಿದು ಚೆಂಡಾಡುತ
ಮೃಡನೆ ಪರನೆಂದು ನುಡಿದು ಕಶಿಪುವಿನ
ಒಡನೆ ಕಂಬದಿ ಬಂದು ಒಡಲ ಬಗೆದು ನಿನ್ನ
ದೃಢಭಕುತಗೆ ಬಂದೆಡರ ಬಿಡಿಸಿದೆ ।।೧।।
ತುಷ್ಟಿ ಪಡಿಸೋ ಪರಮೇಷ್ಠಿಯಪಿತ ನಿನ್ನ
ದೃಷ್ಟಿಯಿಂದ ಅನಿಷ್ಟನಿವಾರಣ
ಅಷ್ಟಕರ್ತೃತ್ವದ ಪ್ರಭೋ ಕಷ್ಟ ಹರಿಸಿ ಭಕ್ತರಿಷ್ಟಪಾಲಿಪ
ಸರ್ವಸೃಷ್ಟಿಗೊಡೆಯ ದೇವ ।।೨।।
ಸಂಕಟ ಬಿಡಿಸೋ ಭವಸಂಕಟದಿಂದ
ಶ್ರೀವೆಂಕಟೇಶಾತ್ಮಕ ಭೀಕರರೂಪ
ಶಂಕರಾಂತರ್ಗತ ಸಂಕರುಷಣಮೂರ್ತೆ
ಮಂಕುಹರಿಸಿ ಪಾದಪಂಕಜ ತೋರಯ್ಯ ।।೩।।
No comments:
Post a Comment