ರಾಗ : ಸಾವೇರಿ
ತಾಳ : ಆದಿತಾಳ
ನಮೋ ನಮಸ್ತೇ ನರಸಿಂಹ ದೇವಾ - ಸ್ಮರಿಸುವವರ ಕಾವ
ಸುಮಹಾತ್ಮ ನಿನಗೆಣೆ ಲೋಕದೊಳಗಾವ ತ್ರಿಭುವನ ಸಂಜೀವಾ
ಉಮೆಯರಸ ಹೃತ್ಕಮಲದ್ಯುಮಣಿ
ಮಾ ರಮಣ ಕನಕ ಸಂಯಮಿವರವರದಾ । ಪ ।
ಕ್ಷೇತ್ರಜ್ಞ ಕ್ಷೇಮಧಾಮಭೂಮಾ ದಾನವಕುಲಭೀಮ
ಗಾತ್ರಸನ್ನುತ ಬ್ರಹ್ಮಾದಿ ಸೋಮ
ಸನ್ಮಂಗಳನಾಮ ಚಿತ್ರಮಹಿಮನಕ್ಷತ್ರನೇಮಿ
ಸರ್ವತ್ರ ಮಿತ್ರ ಸುಚರಿತ್ರ ಪವಿತ್ರ ।। ೧ ।।
ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕಶರಣ್ಯ
ಶಫರಕೇತುಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯಕ
ಶಿಪುತನಯನ ಕಾಯ್ದೆಪೆನೆನುತಲಿ
ನಿಷ್ಕಪಟ ಮನುಜಹರಿವಪುಷ ನೀನಾದೆ ।। ೨ ।।
ತಪನಕೋಟಿ ಪ್ರಭಾ ಶರೀರ - ದುರಿತೌಘವಿದೂರ
ಪ್ರಪಿತಾಮಹಮಂದಾರ - ಖಳವಿಪಿನಕುಠಾರ
ಕೃಪಣಬಂದು ತವ ನಿಪುಣತನಕೆ
ನಾನುಪಮೆಗಾಣೆ ಕಾಶ್ಯಪಿವರವಹನಾ ।। ೩ ।।
ವೇದವೇದಾಂಗವೇದ್ಯ - ಸಾಧ್ಯ ಅಸಾಧ್ಯ
ಶ್ರೀದ ಮುಕ್ತಾಮುಕ್ತಾರಾಧ್ಯ - ಅನುಪಮಅನವದ್ಯ
ಮೋದಮಯನೆ ಪ್ರಹ್ಲಾದವರದ
ನಿತ್ಯೊದಯ ಮಂಗಳ ಪಾದಕಮಲಕೆ ।। ೪ ।।
ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ
ನಿನಗೆ ಬಿನ್ನೈಪೆ ಎನ್ನಯ ಮಾತ ಲಾಲಿಸುವದು ತಾತ
ಗಣನೆಯಿಲ್ಲದವಗುಣವೆನಿಸಿದೆ ಪ್ರತಿಕ್ಷಣಕೆ
ಕಥಾಮೃತ ಉಣಿಸು ಕರುಣದಿ ।। ೫ ।।
No comments:
Post a Comment