Friday, September 26, 2014

ತಿರುಮಲ ತಿರುಪತಿ ಬ್ರಹ್ಮೋತ್ಸವ (ಧ್ವಜಾರೋಹಣ ಮತ್ತು ಪೆದ್ದಶೇಷವಾಹನ)



ಅಂಕುರಾರ್ಪಣವಾದ ಮರುದಿನ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಗುವುದು. ಕಾರ್ಯಕ್ರಮಕ್ಕೆ ಬ್ರಹ್ಮಾಂಡನಾಯಕನಾದ ಶ್ರೀನಿವಾಸನನ್ನು ಶ್ರೀದೇವಿ ಭೂದೇವಿ ಸಮೇತವಾಗಿ ಆಭರಣಗಳಿಂದ ಅಲಂಕರಿಸಿ, ಬಂಗಾರದ ಪಲ್ಲಕಿಯಲ್ಲಿ ತಿರುಮಲರಾಯನ ಆಸ್ಥಾನ ಮಂಟಪಕ್ಕೆ ಕರೆತರುತ್ತಾರೆ. ನಿಗದಿಯಾದ ಮಹೂರ್ತಕ್ಕೆ ಸರಿಯಾಗಿ ವೇದಘೋಷಗಳು, ಮಂತ್ರಘೋಷಗಳಿಂದ ಗರುಡ ಮೂರ್ತಿ ಇರುವ ಧ್ವಜವನ್ನು ಧ್ವಜಸ್ತಂಭಕ್ಕೆ ಆರೋಹಣ ಮಾಡುತ್ತಾರೆ. ಇದರಿಂದ ಒಂಭತ್ತು ದಿನಗಳ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆತಂತಾಗುತ್ತದೆ.

ನಂತರದಲ್ಲಿ ಅಷ್ಟದಿಕ್ಪಾಲಕರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಮುಂದುವರೆಸುತ್ತಾರೆ. ಅಂದಿನಿಂದ ಒಂಭತ್ತು ದಿನಗಳ ಕಾಲ ಭಗವಂತ ವಿವಿಧ ವಾಹನಗಳಲ್ಲಿ ಬೆಳಿಗ್ಗೆ ಮತ್ತು ರಾತ್ರಿ ತಿರುಮಲ ಮಾಡ ಬೀದಿಗಳಲ್ಲಿ ಮೆರವಣಿಗೆ ಬಂದು ಭಕ್ತರನ್ನು ಸಂತುಷ್ಟಿ ಗೊಳಿಸುತ್ತಾನೆ. ಪೆದ್ದಶೇಷವಾಹನ, ಚಿನ್ನ ಶೇಷ ವಾಹನ, ಹಂಸವಾಹನ, ಸಿಂಹವಾಹನ, ಮುತ್ತಿನ ಪಲ್ಲಕ್ಕಿ ವಾಹನ, ಕಲ್ಪವೃಕ್ಷ ವಾಹನ, ಸರ್ವಭೂಪಾಲ ವಾಹನ, ಮೋಹಿನಿ ಅವತಾರ, ಗರುಡ ವಾಹನ, ಹನುಮಂತ ವಾಹನ, ಸ್ವರ್ಣರಥ ಗಜವಾಹನ, ಸೂರ್ಯಪ್ರಭ ವಾಹನ,ಚಂದ್ರಪ್ರಭ ವಾಹನ, ಬ್ರಹ್ಮ ರಥೋತ್ಸವ, ಅಶ್ವ ವಾಹನ ಹೀಗೆ ವಿವಿಧ ವಾಹನಗಳಲ್ಲಿ ವಿರಾಜಮಾನನಾಗಿ ಕಡೆಯ ದಿನ ಚಕ್ರಸ್ನಾನ ಮುಗಿಸಿ ಧ್ವಜ ಅವರೋಹಣ ಮಾಡುವುದರೊಂದಿಗೆ ಬ್ರಹ್ಮೋತ್ಸವ ಕಾರ್ಯಕ್ರಮಕ್ಕೆ ತೆರೆ ಬೀಳುವುದು.

ಧ್ವಜಾರೋಹಣ ವಾದ ದಿನ ಸಂಜೆ ಭಗವಂತನು ಪೆದ್ದಶೇಷವಾಹನದಲ್ಲಿ ವಿರಾಜಮಾನನಾಗಿ ಭಕ್ತರನ್ನು ಅನುಗ್ರಹಿಸುವನು. ಸ್ವಾಮಿಯು ಆದಿಶೇಷನ ಮೇಲೆ ಪವಡಿಸಿರುವ ಸಂಕೇತವಾಗಿ ಏಳು ತಲೆಗಳುಳ್ಳ ಪೆದ್ದ(ದೊಡ್ಡ) ಶೇಷ ವಾಹನದಲ್ಲಿ ಮೆರವಣಿಗೆ ನಡೆಸುತ್ತಾರೆ. ಪೂರ್ವದಲ್ಲಿ ಒಂಭತ್ತನೇ ದಿನ ಬೆಳಿಗ್ಗೆ ನಡೆಯುತ್ತಿದ್ದ ಉತ್ಸವವನ್ನು ಈಗ ಮೊದಲನೇ ದಿನವೇ ನಡೆಸುತ್ತಾರೆ. ಸ್ವಾಮಿಯು ನೆಲೆಸಿರುವ ಬೆಟ್ಟವನ್ನು ಶೇಷಾಚಲ, ಶೇಷಾದ್ರಿ ಎಂದೂ ಕರೆಯುವುದು ಪ್ರತೀತಿ. ಏಳು ಬೆಟ್ಟಗಳು ಏಳು ತಲೆಯ ಹಾವಿನಂತೆ.

No comments:

Post a Comment