ಮಹದಾದಿ ದೇವ ನಮೋ ಮಹದಾದಿ ದೇವ ನಮೋ ।।ಪ।।
ಮಹಮಾಹಿಮನೆ ನಮೋ ಪ್ರಹ್ಲಾದವರದ ಅಹೋಬಲ ನಾರಸಿಂಹ ।।ಅ ಪ।।
ಧರಣಿಗುಬ್ಬಸವಾಗೆ ತಾರಾಪಥವು ನಡುಗೆ
ಸುರರು ಕಂಗೆಟ್ಟೋಡೆ ನಭವ ಬಿಟ್ಟು
ತರುಗಿರಿಗಳಲ್ಲಾಡೆ
ಶರಧಿಗಳು ಕುದಿದುಕ್ಕೆ
ಉರಿಯನುಗುಳುತ ಉದ್ಭವಿಸಿದೆ ನಾರಸಿಂಹ ।।೧।।
ಸಿಡಿಲಂತೆ ಘರ್ಜಿಸುತ ಕುಡಿಯನಾಲಗೆ ಚಾಚಿ
ಅಡಿಗಡಿಗೆ ಲಂಘಿಸುತ ಕಡುಕೋಪದಿಂದ
ಮುಡಿಪಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿ
ಕಡು ಉದರ ಬಗೆದೆ ಕಡುಗಲಿ ನಾರಸಿಂಹ ।।೨।।
ಸರಸಿಜೋದ್ಭವ ಹರ ಪುರಂದರಾದಿ ಸಮಸ್ತ
ಸುರರು ಅಂಬರದಿ ಹೂಮಳೆಯ ಕರೆಯೆ
ಸಿರಿಸಹಿತ ಗರುಡಾದ್ರಿಯಲಿ ನಿಂತು ಭಜಕರ
ಕರುಣಿಸಿದೆ ಪುರಂದರವಿಠಲ ನಾರಸಿಂಹ ।।೩।।
No comments:
Post a Comment