Thursday, September 19, 2013

ಆನಂದ ತೀರ್ಥರೆಂಬೋ

ರಾಗ : ಸೌರಾಷ್ಟ್ರ
ತಾಳ : ಆದಿತಾಳ

ಆನಂದ ತೀರ್ಥರೆಂಬೋ ಅರ್ಥಿಯ ಪೆಸರುಳ್ಳ ಗುರು ಮಧ್ವಮುನಿರಾಯ ||
ಏನೆಂಬೆ ನಾನಿಮ್ಮ ಕರುಣಕ್ಕೆ ಎಣೆಗಾಣೆ ಗುರು ಮಧ್ವಮುನಿರಾಯ | ಅ ಪ |

ಬೇಸರದೆ ಸರ್ವರೊಳು ಶ್ವಾಸಜಪಂಗಳ ಮಾಡಿ ಗುರು ಮಧ್ವಮುನಿರಾಯ |
ಶ್ರೀಶಗರ್ಪಿಸುತ ನಿನ್ನ ದಾಸರನು ಸಲಹಿದಿ ಗುರು ಮಧ್ವಮುನಿರಾಯ | |

ಅಂದು ಹನುಮಂತನಾಗಿ ಬಂದು ಸುಗ್ರೀವಗೆ ಗುರು ಮಧ್ವಮುನಿರಾಯ |
ಅಂದವಾದ ಪದವಿತ್ತಾನಂದದಿಂದದ ಪೊರೆದೆಯೊ ಗುರು ಮಧ್ವಮುನಿರಾಯ | |

ಕುಂತಿಯ ಕುಮಾರನಾಗಿ ಹೊಂತ ಕೌರವರ ಕೊಂದೆ ಗುರು ಮಧ್ವಮುನಿರಾಯ |
ಅನ್ನತ ಪುಣ್ಯವ ಗಳಿಸಿ ಶ್ರೀಕಾಂತನಿಗರ್ಪಿಸಿದೆ ಗುರು ಮಧ್ವಮುನಿರಾಯ | |

ಅದ್ವೈತರನು ಕಾದು ಗೆದ್ದು ನಿನ್ನ ಭಕ್ತರಿಗೆ ಗುರು ಮಧ್ವಮುನಿರಾಯ |
ಶುದ್ಧ ತಾತ್ಪರ್ಯ ವಾಕ್ಯ ಪದ್ಧತಿಯ ತಿಳಿಸಿದೆ ಗುರು ಮಧ್ವಮುನಿರಾಯ | |

ಗುರುಪ್ರಾಣೇಶವಿಠಲ ಪರನೆಂದು ಡಂಗುರವ ಗುರು ಮಧ್ವಮುನಿರಾಯ |
ಸಾರಿ ಸಜ್ಜನರಿಗೆ ಹರಿಯ ಲೋಕ ತೋರಿಸಿದಿ ಗುರು ಮಧ್ವಮುನಿರಾಯ । ೫ ।

Wednesday, September 18, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೨೧


ಮಾರುತಿ ನಿನ್ನ ನಿರುತಡಿ ಭಜಿಪೆ
ತ್ವರಿತದಿ ಹರಿ ಸರ್ವೋತ್ತಮನೆಂಬೋ
ಸರಸವಿಜ್ಞಾನವ ಸರಿ ಇಲ್ಲದೆ ಇತ್ತು
ಪರಿಪಾಲಿಸು ಎಂದು ಶಿರಸದಿ ನಮಿಪೆ
ಸರಿಯಾರಯ್ಯ ನಿನಗೆ ಸರಸಿಜಾಂಡದೊಳು
ಅರಸಿ ನೋಡಲು ಆರಾರು ಇಲ್ಲವೋ
ಕಾರುಣ್ಯಸಾಗರ ಕರುಣಿಸಿ ನೀ ಎನ್ನ
ಹರಿ ತಾ ಕರುಣಿಪೆನೆಂದು ಅರಿತು ನಿನ್ನಯ ದಿವ್ಯಚರಣ
ಸೇರಿದೆನಯ್ಯ ಸರಿ ಬಂದದ್ದು ಮಾಡೋ
ಹರಿ ಕುಲವರಿಯನೆ ಪರಿಪರಿ ಜನರನ್ನ ಪಾಲಿಸಿ ಎನ್ನನು
ದೂರದಿ ಇಟ್ಟರೆ ದೊರೆತನವೇನಯ್ಯ
ಸಾರುವೆ ಸಾರುವೆ ಸರಸಿಜನಾಭನ ಸುತನೆ
ಆರು ಮೂರೆರೆಡೊ೦ದು ಸಾವಿರ
ಮೂರೆರೆಡು ಶತ ಶ್ವಾಸ ಜಪಗಳನು
ಮೂರು ಜೀವರಲ್ಲಿ ನೀರಜ್ಜಕಲ್ಪ
ಪರಿಯಂತರ ಮಾಡಿ ಅವರವರ ಗತಿಯ
ಮರೆಯದೆ ನೀಡುವೆ ಗಿರಿಶತನುಪಾದ
ಗುರು ಜಗನ್ನಾಥವಿಠಲನ್ನ ಅರಿವಂತೆ ಮಾಡೋ ಧೀರ॥

Sunday, September 15, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೨೦


ದುಷ್ಟದೈತ್ಯರು ಬಹಳ ಸಿಟ್ಟಿನಿಂದ ಬಂದು
ಘಟ್ಟಬೆಟ್ಟಗಳಲ್ಲಿ ಶ್ರೇಷ್ಠಸುರನಿಗೆ ಹೊಡೆಯ
ಬೆಟ್ಟಕ್ಕೆ ಬಿಗಿದರೆ ಲೋಷದ ತೆರದಂತೆ
ಮುಷ್ಠಿಯಿಂದಲಿ ಭೀಮ ಪೆಟ್ಟು ಹೊಡೆಯಲಾಗಿ
ನಷ್ಟರಾಗಿ ಖಳರು ದಶದಿಶಿಗೆ ಓಡಿದರು
ಹೃಷ್ಟಮನದಲಿ ಸುರರು ಜಯದುಂದುಭಿಯ ಹೊಡೆಯೆ
ತುಷ್ಟರಾಗಿ ಅವರ ಇಷ್ಟವನು ಸಲಿಸಿ
ಶ್ರೇಷ್ಠ ಗುರು ತಂದೆ ಗೋಪಾಲವಿಠಲನ ಮನ
ಮುಟ್ಟಿ ಭಜಿಸುವ ಪ್ರಾಣನೆ ಸಲಹೊ॥

Thursday, September 12, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೯


ಹರಿಯು ತುಷ್ಟನಾಗಿ ಪರಮೇಷ್ಠಿಗೆ ಪೇಳ್ದ
ಪರಮೇಷ್ಠಿ ಒಲಿದು ಸೂರ್ಯಂಗೆ ಪೇಳ್ದ
ಕರುಣಿಸಿ ಸೂರ್ಯ ಯಾಜ್ಞವಲ್ಕ್ಯರಿಗೆ ಪೇಳ್ದೆನೊ
ಅರಿವುದು ಉದ್ಗೀಥ ಬ್ರಾಹ್ಮಣ ಇದೇ
ಆರು ಈ ವಿದ್ಯೆವನು ಪೆಲಿ ಕೇಳ್ದವರಿಗೆ
ದಾರಿದ್ರ್ಯ ಭವರೋಗ ದುಃಖ ಕಳೆದೂ
ಬಾರಿಬಾರಿಗೆ ಬೇಡಿದಿಷ್ಟಾರ್ಥಗಳ ಕೊಟ್ಟು
ಧೀರ ಗುರು ತಂದೆ ಗೋಪಾಲವಿಠಲ ದೂತ
ಕಾರುಣ್ಯದಿಂದ ಸಲಹೊ ಪ್ರಾಣ ॥