Monday, August 17, 2015

ನಾಗರ ಪಂಚಮೀ ವ್ರತ


ಇಂದು ನಾಗರ ಚೌತಿ, ನಾಳೆ ನಾಗರ ಪಂಚಮೀ. ಮಕ್ಕಳಾಗದವರು ವಿಶೇಷವಾಗಿ ಮತ್ತು ಮಕ್ಕಳಿಗೆ ಯಾವ ವಿಧವಾದ ಆಪತ್ತು ಬರಬಾರದು ಎನ್ನುವವರು ಮಾಡಬೇಕಾದ ವ್ರತಗಳು.
ಪರಮಾತ್ಮ ಶೇಷದೇವರನ್ನು ಪಂಚಮೀತಿಥಿಗೆ ನಿಯಾಮಕರನ್ನಾಗಿ ಮಾಡಿದ್ದಾನೆ —
ಪ್ರಾದಾಂ ತೃತೀಯಾಂ ಪಾರ್ವತ್ಯೈ ಗಣೇಶಾಯ ಚತುರ್ಥಿಕಾಮ್ ।
ಪಂಚಮೀ ಸರ್ವನಾಗಾನಾಂ ಶೇಷಾಣಾಂ ಪತಯೇ ತತಃ ।।
ಎಂದು ವರಾಹಪುರಾಣದಲ್ಲಿದೆ. ತೃತೀಯಾತಿಥಗೆ ಪಾರ್ವತಿಯನ್ನು ನಿಯಾಮಕಳನ್ನಾಗಿಯೂ, ಚತುರ್ಥೀತಿಥಿಗೆ ಗಣಪತಿಯನ್ನು ನಿಯಾಮಕನನ್ನಾಗಿಯೂ ಹಾಗೂ ಪಂಚಮೀತಿಥಿಗೆ ಶೇಷದೇವರನ್ನು ನಿಯಾಮಕರನ್ನಾಗಿಯೂ ಪರಮಾತ್ಮ ಮಾಡುತ್ತಾನೆ.
ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮೀ ನಾಗರ ಪಂಚಮೀ. ಈ ದಿವಸ ವಿಶೇಷವಾಗಿ ಹಾವುಗಳನ್ನು ಹಾವುಗಳ ಅಧಿಪತಿಯಾದ ಶೇಷದೇವರನ್ನು ಆರಾಧಿಸಬೇಕು.
ಇದು ಎರಡು ದಿವಸಗಳ ವ್ರತ. ಅದಕ್ಕಾಗಿಯೇ ಎರಡೂ ದಿವಸಗಳನ್ನು ಶೇಷದೇವರ ಹೆಸರಿನಿಂದಲೇ ಗುರುತಿಸಲಾಗುತ್ತದೆ. ನಾಗರ ಚೌತಿ ಮತ್ತು ನಾಗರ ಪಂಚಮಿ ಎಂದು.
ಯುಗಂ ಮಧ್ಯಂದಿನೇ ಯತ್ರ ತತ್ರೋಪೋಷ್ಯ ಫಣೀಶ್ವರಾನ್ ।
ಕ್ಷೀರೇಣಾಪ್ಯಾಯ್ಯ ಪಂಚಮ್ಯಾಂ ಪಾರಯೇತ್ ಪ್ರಯತೋ ನರಃ ।
ವಿಷಾಣಿ ತಸ್ಯ ನಶ್ಯಂತಿ ನ ತಂ ಹಿಂಸಂತಿ ಪನ್ನಗಾಃ ।।
ನಾಗರ ಚೌತಿಯಂದು ಪೂರ್ಣ ಉಪವಾಸವನ್ನು ಮಾಡಬೇಕು. ಆ ದಿವಸ ಮಧ್ಯಾಹ್ನ ದೇವರ ಪೂಜೆಯಾದ ಬಳಿಕ ಶೇಷದೇವರ ಪ್ರತಿಮೆಗೆ ಹಾಲಿನ ಅಭಿಷೇಕದೊಂದಿಗೆ ಷೋಡಶೋಪಚಾರ ಪೂಜೆಯನ್ನು ಸಮರ್ಪಿಸಬೇಕು. ಮಾರನೆಯ ದಿವಸ ಪ್ರಾತಃಕಾಲದಲ್ಲಿ ಮತ್ತೆ ಹಾಲಿನ ಅಭಿಷೇಕವನ್ನು ಮಾಡಿ, ಹದಿನಾರು ಉಪಚಾರಗಳನ್ನು ಶೇಷದೇವರಿಗೆ ಸಮರ್ಪಿಸಿ ಜ್ಞಾನಿಗಳನ್ನು ಕರೆದು ಅವರಿಗೆ ಭೋಜನವನ್ನು ನೀಡಿ ತಾನು ಪಾರಣೆಯನ್ನು ಮಾಡಬೇಕು.
ಮನೆಯ ಬಾಗಿಲಿನ ಎರಡೂ ಭಾಗಗಳಲ್ಲಿ ಶೇಷದೇವರ ಚಿತ್ರವನ್ನು ಬರೆದು ಪೂಜಿಸಬೇಕು ಎಂದು ಭವಿಷ್ಯಪುರಾಣದಲ್ಲಿ ತಿಳಿಸಿದ್ದಾರೆ —
ಶ್ರಾವಣೇ ಮಾಸಿ ಪಂಚಮ್ಯಾಂ ಶುಕ್ಲಪಕ್ಷೇ ನರಾಧಿಪ
ದ್ವಾರಸ್ಯೋಭಯತೋ ಲೇಖ್ಯಾ ಗೋಮಯೇನ ವಿಷೋಲ್ಬಣಾಃ
ಪೂಜಯೇದ್ ವಿಧಿವದ್ ವೀರ ದಧಿದೂರ್ವಾಂಕುರೈಃ ಕುಶೈಃ
ಗಂಧಪುಷ್ಪೋಪಹಾರೈಶ್ಚ ಬ್ರಾಹ್ಮಣಾನಾಂ ಚ ತರ್ಪಣೈಃ
ಯೇ ತಸ್ಯಾಂ ಪೂಜಯಂತೀಹ ನಾಗಾನ್ ಭಕ್ತಿಪುರಃಸರಾಃ
ನ ತೇಷಾಂ ಸರ್ಪತೋ ವೀರ ಭಯಂ ಭವತಿ ಕುತ್ರಚಿತ್
ಬಾಗಿಲಿನ ಎರಡೂ ಕಡೆಯಲ್ಲಿ ಹಾವುಗಳ ಚಿತ್ರವನ್ನು ಬರೆದು, ಅಲ್ಲಿ ಶೇಷದೇವರ, ವಾಸುಕಿಯ ಸನ್ನಿಧಾನವನ್ನು ಚಿಂತಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅದಕ್ಕೆ ಗೆಜ್ಜೆವಸ್ತ್ರವನ್ನು ಸಮರ್ಪಿಸಬೇಕು.
ಆ ಬಳಿಕ ಮನೆಯ ಒಳಗೆ ಶೇಷದೇವರ ಪ್ರತಿಮೆ, ಹಾಲು, ಮೊಸರು ಮುಂತಾದವುಗಳಿಂದ ಅಭಿಷೇಕ ಮಾಡಿ, ಆ ನಂತರ ಗರಿಕೆ, ದರ್ಭೆಗಳಿಂದ ಷೋಡಶೋಪಚಾರ ಪೂಜೆಯನ್ನು ಮಾಡಿ, ಪರಮಾತ್ಮನಲ್ಲಿ ಭಕ್ತಿ ಇರುವ ಬ್ರಾಹ್ಮಣರನ್ನು ಆದರಿಸಿ, ಅವರ ಭೋಜನವಾದ ನಂತರ ಭೋಜನ ಮಾಡಬೇಕು.
ಪೂಜೆ ಮಾಡುವ ಸಂದರ್ಭದಲ್ಲಿ, ಹಾಲೆರೆಯುವ ಸಂದರ್ಭದಲ್ಲಿ ಕೆಳಗಿನ ಶ್ಲೋಕವನ್ನು ಭಕ್ತಿಯಿಂದ ಪಠಿಸಿ ಪ್ರಾರ್ಥನೆ ಮಾಡಿಕೊಳ್ಳಬೇಕು.
ಅನಂತಶಯನಂ ದೇವಂ ಸರ್ವಶೋಕವಿನಾಶನಮ್ ।
ಲೋಕಾಧಾರಂ ವಾರುಣೀಶಂ ನಾಗೇಂದ್ರಂ ಸನ್ನಮಾಮ್ಯಹಮ್ ।।
ಅನಂತಶಯನಂ — ದೇಶ ಕಾಲಗಳನ್ನು ಮೀರಿದ ಪರಮಾತ್ಮನಿಗೆ ಶಯನನಾದ
ಸರ್ವಶೋಕವಿನಾಶನಂ — ಸಕಲ ದುಃಖಗಳನ್ನೂ ಪರಿಹರಿಸುವ
ಲೋಕಾಧಾರಂ — ಇಡಿಯ ಜಗತ್ತನ್ನು ತಲೆಯ ಮೇಲೆ ಹೊತ್ತು ರಕ್ಷಣೆ ಮಾಡುತ್ತಿರುವ
ವಾರುಣೀಶಂ — ವಾರುಣೀಪತಿಯಾದ
ದೇವಂ — ದೇವೋತ್ತಮನಾದ
ನಾಗೇಂದ್ರಂ — ಶೇಷದೇವರನ್ನು
ಅಹಂ — ನಾನು
ಸನ್ನಮಾಮಿ — ಭಕ್ತಿ ಶ್ರದ್ಧೆಗಳಿಂದ ನಮಸ್ಕರಿಸುತ್ತೇನೆ.
ಹಾಗೆಯೇ ಶೇಷದೇವರ ಮಾಹಾತ್ಮ್ಯ, ಅವರು, ನರನಾಗಿ, ಲಕ್ಷ್ಮಣನಾಗಿ, ಬಲರಾಮನಾಗಿ ಅವತಾರ ಮಾಡಿ ಪರಮಾತ್ಮನನ್ನು ಸೇವಿಸಿದ ರೀತಿ ಮುಂತಾದವನ್ನು ಭಕ್ತಿಯಿಂದ ಸ್ಮರಣೆ ಮಾಡಬೇಕು.
ಹಾಗೆಯೇ ಮತ್ತೊಂದು ತತ್ವ. ಹಾವಿನ ರೂಪದಲ್ಲಿ ಪೂಜೆಯಾಗುವ ಮೂರು ದೇವತೆಗಳಿದ್ದಾರೆ. ಮೊದಲನೆಯದು ಶೇಷದೇವರು. ಇವರು ಇಂದ್ರನಿಗಿಂತಲೂ ಉತ್ತಮರಾದ, ರುದ್ರದೇವರಿಗೆ ಸಮಾನರಾದ ದೇವತೆ. ಇವರೇ ಪರಮಾತ್ಮ ಹಾಸಿಗೆ.
ಎರಡನೆಯದು ಸುಬ್ರಹ್ಮಣ್ಯದೇವರು. ಇವರು ಇಂದ್ರನಿಗೆ ಸಮಾನನಾದ ದೇವತೆ. ದೇವತೆಗಳ ಸೇನಾನಿ ಸ್ಕಂದನಿಗೇ ಸುಬ್ರಹ್ಮಣ್ಯ ಎನ್ನುವ ಹೆಸರು. ಇವರಿಗೆ ಸುಬ್ರಹ್ಮಣ್ಯರೂಪದಲ್ಲಿ ಮಾತ್ರ ಹಾವಿನರೂಪ.
ಮೂರನೆಯದು ವಾಸುಕಿ. ಮೇಲಿನ ಇಬ್ಬರಿಗಿಂತಲೂ ಸಣ್ಣವರಾದ ದೇವತೆ. ಪಾತಾಳದಲ್ಲಿ ಎಲ್ಲ ನಾಗರಿಗೂ ಅಧಿಪತಿಯಾದ ನಾಗರಾಜ ಈ ವಾಸುಕಿಯೇ. ಶೇಷದೇವರ ತಮ್ಮ.
ನಾಗರ ಚೌತಿ-ಪಂಚಮಿಗಳಂದು ಈ ಮೂರೂ ದೇವತೆಗಳನ್ನು ಪೂಜಿಸುವ ಸಂಪ್ರದಾಯವಿದೆ. ವಿಶೇಷವಾಗಿ ಶೇಷದೇವರನ್ನು.
ಈ ದಿವಸಗಳಲ್ಲಿ ಈ ವ್ರತವನ್ನು ಕೇವಲ ಹೆಣ್ಣುಮಕ್ಕಳು ಮಾತ್ರ ಮಾಡುತ್ತಾರೆ. (ಈ ವ್ರತವೇನು, ನಮ್ಮಲ್ಲಿ ಅನೇಕ ಧರ್ಮಗಳು ಉಳಿದಿರುವದೇ ಕೇವಲ ನಿಷ್ಠಾವಂತ ಹೆಣ್ಣುಮಕ್ಕಳಿಂದ.) ಆದರೆ, ಈ ವ್ರತವನ್ನು ಬಾಲಕ ಬಾಲಕಿಯರೂ ಮಾಡಬೇಕು. ಗಂಡ ಹೆಂಡತಿಯರೂ ಕೂಡಿ ಮಾಡಬೇಕು.
ಗಂಡಹೆಂಡಿರ ಮಧ್ಯದಲ್ಲಿ ನಿಶ್ಚಲವಾದ ಪ್ರೇಮವನ್ನುಂಟುಮಾಡುವ ವ್ರತ ಈ ನಾಗರವ್ರತ.
ಮಕ್ಕಳಾದವರಿಗೆ ಮಕ್ಕಳನ್ನು ದಯಪಾಲಿಸುವ ವ್ರತ ಈ ನಾಗರವ್ರತ.
ಮಕ್ಕಳನ್ನು ಎಲ್ಲ ಆಪತ್ತುಗಳಿಂದ ದೂರ ಮಾಡುವ ವ್ರತ ಈ ನಾಗರವ್ರತ.
ಮಕ್ಕಳಿಗೆ, ನಮಗೆ ವಿಷದ ಭಯವನ್ನು ನೀಗಿಸುವ ವ್ರತ ಈ ನಾಗರವ್ರತ.
ಅಣ್ಣತಮ್ಮಂದಿರಿಗೆ ಸೌಭಾಗ್ಯವನ್ನುಂಟು ಮಾಡುವ ವ್ರತ ಈ ನಾಗರವ್ರತ
ಕೃಪೆ : ವಿಷ್ಣುದಾಸ ನಾಗೇಂದ್ರಾಚಾರ್ಯ - ಫೇಸ್ಬುಕ್ 

No comments:

Post a Comment