Friday, August 14, 2015

ಭೀಮನ ಅಮಾವಾಸ್ಯೆ



ಶ್ರಾವಣ ಮಾಸದ ಮೊದಲ ಹಬ್ಬವಾಗಿ ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುವುದು. ನವವಿವಾಹಿತ ಮಹಿಳೆಯರು ೯ ವರ್ಷ ಈ ಪೂಜೆಯನ್ನು ಮಾಡುತ್ತಾರೆ. ಈ ವ್ರತವನ್ನು ತಮ್ಮ ಪತಿಯ, ಅಣ್ಣ ತಮ್ಮಂದಿರ ಒಳಿತಿಗಾಗಿ ಮಹಿಳೆಯರು ಆಚರಿಸುತ್ತಾರೆ. ಈ ವ್ರತವನ್ನು ಮನೋನಿಯಾಮಕ ರುದ್ರದೇವರು ಮತ್ತು ಪಾರ್ವತಿದೇವಿಯರಿಗೆ ಸಮರ್ಪಿಸಲಾಗುತ್ತದೆ.

ಈ ವ್ರತದಂದು ಕೆಮ್ಮಣ್ಣಿನಿಂದ ಮಾಡಿದ ರುದ್ರದೇವರು ಮತ್ತು ಪಾರ್ವತಿದೇವಿಯರನ್ನು ಪೂಜಿಸಲಾಗುವುದು ಮತ್ತು ತಂಬಿಟ್ಟಿನ ದೀಪವನ್ನು ಹಚ್ಚಲಾಗುವುದು. ಇದರ ಸಂಕೇತ ದೀಪವನ್ನು ಬೆಳಗುವುದರಿಂದ ಮನೆಯಲ್ಲಿನ ಕರ್ಮಗಳು ಕಳೆದು ಮನೆ ಶುಭ್ರವಾಗುವುದೆಂದು. ಈ ದಿನದಂದು ಕಡುಬು, ಗೋಧಿ ಉಂಡೆ ಮಾಡುವುದು ವಿಶೇಷ. ಕಡುಬು ಮತ್ತು ಉಂಡೆಯಲ್ಲಿ ನಾಣ್ಯವನ್ನು ಇಟ್ಟು ಅದನ್ನು ಅಣ್ಣ ತಮ್ಮಂದಿರ ಕೈಯಲ್ಲಿ ಹೊಡೆಸುವುದು ವಾಡಿಕೆ. ಅಣ್ಣ ತಮ್ಮಂದಿರು ಮನೆಯ ಹೊಸ್ತಿಲಿನ ಬಳಿ ಎರಡು ಬದಿ ಒಂದೊಂದು ಕಾಲನ್ನು ಇಟ್ಟು ಹೊಸಿಲಿನ ಮೇಲಿಟ್ಟಿರುವ ಕಡುಬು/ಉಂಡೆಯನ್ನು ಬಾಗಿ ತಮ್ಮ ಮೊಣಕೈನಿಂದ ಹೊಡೆಯಬೇಕು. ಆ ಸಂದರ್ಭದಲ್ಲಿ ಅಕ್ಕ ತಂಗಿಯರು ತಮ್ಮ ಮೊಣಕೈನಿಂದ ಬಾಗಿದ ಅಣ್ಣ/ತಮ್ಮನ ಮೇಲೆ ಹೊಡೆಯುವುದು. ಈ ವಾಡಿಕೆಗೆ "ಭಂಡಾರ ಹೊಡೆಯುವುದು"  ಕರೆಯುತ್ತಾರೆ.

ಹಿನ್ನಲೆ:
ಸ್ಕಂದ ಪುರಾಣದಲ್ಲಿ ಈ ವ್ರತದ ಹಿನ್ನಲೆ ಉಂಟು. ಹಿಂದೊಮ್ಮೆ ರಾಜನು ತನ್ನ ಮಗನಿಗೆ ಅದ್ದೂರಿಯಾಗಿ ಮದುವೆ ಮಾಡಬೇಕೆಂದು ನಿರ್ಧರಿಸಿದ್ದನು. ಆದರೆ ರಾಜನ ಮಗ ಅಕಾಲಿಕ ಸಾವಿಗೆ ಈಡಾದನು. ಆದರೂ ರಾಜ ತನ್ನ ಸತ್ತ ಮಗನಿಗೇ ಮದುವೆ ಮಾಡಲು ನಿರ್ಧರಿಸಿ ಘೋಷಣೆ ಹೊರಡಿಸಿದನು. ಯಾರು ತನ್ನ ಮಗನನ್ನು ಮದುವೆ ಮಾಡಿಕೊಳ್ಳುತ್ತಾರೋ ಅವರಿಗೆ ಅಪಾರ ಧನ ಸಂಪತ್ತನ್ನು ಕೊಡುವುದಾಗಿ ಘೋಷಿಸಿದನು.

ಒಬ್ಬ ಬಡ ಬ್ರಾಹ್ಮಣನು ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ಮುಂದೆ ಬಂದು, ಮದುವೆ ವಿಜೃಂಭಣೆಯಿಂದ ನೆರವೇರಿತು. ಆ ದಿನ ಅಮಾವಾಸ್ಯೆ. ಮದುವೆಯ ಸಮಾರಂಭ ಮುಗಿದ ಮೇಲೆ ರಾಜನ ಮಗನ ದೇಹವನ್ನು ಸುಡಲು ಭಾಗೀರಥಿ ನದಿ ತೀರಕ್ಕೆ ತೆಗೆದುಕೊಂಡು ಬಂದು ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದಾಗ ಗುಡುಗು ಸಿಡಿಲಿನ ಸಹಿತ ಕುಂಭದ್ರೋಣ ಮಳೆ ಶುರುವಾಯಿತು. ನೆರೆದಿದ್ದ ಜನರು ಹೆದರಿಕೊಂಡು ಆ ದೇಹವನ್ನು ಮತ್ತು ಆ ಅಮಾಯಕ ಹುಡುಗಿಯನ್ನು ಬಿಟ್ಟು ಓಡಿ ಹೋದರು.

ಆಗ ಆ ಹುಡುಗಿಗೆ ಅಂದು ಜ್ಯೋತಿರ್ಭೀಮೇಶ್ವರಿ ವ್ರತದ ದಿನ ಎಂದು, ತನ್ನ ತಾಯಿಯು ವರ್ಷ ವರ್ಷ ಆ ವ್ರತವನ್ನು ಆಚರಿಸುವುದು ನೆನಪಾಗಿ ಕೂಡಲೇ ನದಿಯಲ್ಲಿ ಸ್ನಾನ ಮಾಡಿ ಎರಡು ಮಣ್ಣಿನ ಹಣತೆಯನ್ನು ಮಾಡಿ ಅಲ್ಲೇ ಇದ್ದ ಮರದ ಬೇರಿನಿಂದ ಬತ್ತಿಯನ್ನು ಮಾಡಿ ಅದಕ್ಕೆ ನೀರನ್ನು ಹಾಕಿ, ಮಣ್ಣಿನಿಂದ ಭಂಡಾರವನ್ನು ಮಾಡಿ ಅದರಿಂದಲೇ ಪೂಜೆಯನ್ನು ಮಾಡಿದಳು. ಅವಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷರಾದ ಪಾರ್ವತಿ ಸಮೇತ ರುದ್ರದೇವರು ಭಂಡಾರವನ್ನು ಹೊಡೆದು ನಿನಗೆ ಏನು ವರ ಬೇಕು ಎಂದಾಗ ಸತ್ತ ತನ್ನ ಪತಿಯನ್ನು ಬದುಕಿಸಿಕೊಡು ಎಂದು ಬೇಡಿದಳು. ಕೂಡಲೇ ಅದಕ್ಕೆ ಸಮ್ಮತಿಸಿ ಅವಳ ಪತಿಯನ್ನು ಬದುಕಿಸಿದರು.

ಈ ಘಟನೆಯ ನಂತರ ಈ ವ್ರತ ಪ್ರಸಿದ್ಧಿಯಾಯಿತು. ಮನೋನಿಯಾಮಕ ರುದ್ರದೇವರ  ಮತ್ತೊಂದು ಹೆಸರು ಭೀಮ ಎಂಬುದರಿಂದ ಈ ವ್ರತವನ್ನು ಭೀಮನ ಅಮಾವಾಸ್ಯೆಯಂದು ಕರೆಯುತ್ತಾರೆ. 

No comments:

Post a Comment