Thursday, August 13, 2015

ಶ್ರೀ ವರಮಹಾಲಕ್ಷ್ಮೀ ವ್ರತ

ಶ್ರೀ ಮಂಗಳಗೌರಿ ವ್ರತವನ್ನು ಶ್ರಾವಣ ಮಾಸದಲ್ಲಿ ಮದುವೆಯಾದ ಮಹಿಳೆಯರು ೪/೫ ಮಂಗಳವಾರ ಪೂಜೆ ಮಾಡುತ್ತಾರೆ. ಮದುವೆಯ ನಂತರ ೫ ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಈ ಸಂದರ್ಭದಲ್ಲಿ ಮಂಗಳ ಸ್ನಾನ ಮಾಡಿ ಪೂಜಾಗೃಹವನ್ನು ಸ್ವಚ್ಛಮಾಡಿ ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು ಅದರ ಮೇಲೆ ರವಿಕೆ ಬಟ್ಟೆ ಹಾಸಿ ಅದರ ಮೇಲೊಂದು ತಟ್ಟೆಯಲ್ಲಿ ದೇವರನ್ನು ಇಡಬೇಕು. ಗಣಪತಿ , ಗೌರಿ ವಿಗ್ರಹ, ಅರಿಶಿನಕ್ಕೆ ಸ್ವಲ್ಪ ಹಾಲು ಸೇರಿಸಿ ಕಲಿಸಿ ಗೋಪುರದ ಆಕಾರ ಮಾಡಬೇಕು. ಕನ್ನಡಿ, ಕಲಶ, ಇವುಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು. ೩ ರವಿಕೆ ಬಟ್ಟೆಯನ್ನು ತ್ರಿಕೋನಾಕಾರದಲ್ಲಿ ಮಡಿಸಿ ಹಿಂದೆ ಇಡಬೇಕು.

ಒಂದು ಸಣ್ಣ ತಂಬಿಗೆಯ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ ಹಾಕಿ ಅದರ ಮೇಲೆ ರವಿಕೆ ಬಟ್ಟೆ ಇತ್ತು ಒಂದು ಕೊಬ್ಬರಿ ಗಿಟುಕನ್ನು ಇಡಬೇಕು. ಅದಕ್ಕೆ ಕಪ್ಪಿನಿಂದ ಕಣ್ಣು, ಮೂಗು, ಬರೆದು ಅಲಂಕರಿಸಬೇಕು. ಇದನ್ನೇ ಮಂಗಳಗೌರಿಯಂದು ಪೂಜೆ ಮಾಡಬೇಕು. ಇದರ ಜೊತೆ ನಿಮ್ಮ ಇಷ್ಟದಂತೆ ಅಲಂಕಾರಗಳನ್ನು ಮಾಡಬಹುದು.
ಸಾಮಾನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಮರದ ಜೊತೆ ಬಾಗಿನ, ಹತ್ತಿ ಎಳೆ, ಬಳೆ, ಬಿಚ್ಚೋಲೆ, ತಂಬಿಟ್ಟಿನ ಆರತಿ ಸಹ ಸಿದ್ಧವಿಟ್ಟುಕೊಳ್ಳಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ಗೌರಿಗೆ ೧೬ ಹಿಡಿ ೧೬ ಎಳೆಗಳ ಹತ್ತಿ ಹಾರ ಹಾಕಬೇಕು. ನೈವೇದ್ಯಕ್ಕೆ ಸಾಮಾನ್ಯವಾಗಿ ಹೆಸರುಬೇಳೆ ಪಾಯಸ ಅಥವಾ ಹುಗ್ಗಿ ಮಾಡುತ್ತಾರೆ. ಕೊನೆಯಲ್ಲಿ ತಂಬಿಟ್ಟಿನಲ್ಲಿ ೧೬ ದೀಪದ ಆರತಿ ಮಾಡಬೇಕು. ಈ ದೀಪದಲ್ಲಿ ವೀಳ್ಯದ ಎಲೆಯನ್ನು ಹಿಡಿದು ಕಾಡಿಗೆಯನ್ನು ತೆಗೆಯಬೇಕು. ಇದನ್ನು ಮಂಗಳಗೌರಿಗೆ ಹಚ್ಚಿ ನಂತರ ಕಣ್ಣಿಗೆ ಹಚ್ಚಿಕೊಳ್ಳಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆಯ ನಂತರ ಕೊಬ್ಬರಿಯಲ್ಲಿ ಮಾಡಿದ ದೇವಿಯನ್ನು ಹಾಗೆ ಇಟ್ಟುಕೊಂಡು ಅದೇ ಕೊಬ್ಬರಿಗೆ ನಾಲ್ಕು ವಾರವೂ ಪೂಜೆ ಮಾಡಿ ಕೊನೆಯ ವಾರದಲ್ಲಿ ಬಾಗಿನದ ಜೊತೆ ಇಟ್ಟು  ಕೊಡಬೇಕು.

ಪ್ರತಿ ವರ್ಷ ಕೊನೆಯ ವಾರದ ಪೂಜೆಗೆ ಮರದ ಜೊತೆ ಬಾಗಿನ ಇಟ್ಟುಕೊಳ್ಳಬೇಕು. ಮರದ ಒಳಗೆ ೪ ವಿಧವಾದ ಬೇಳೆಗಳು, ಅಕ್ಕಿ, ಉಪ್ಪು, ರವೆ, ಬೆಲ್ಲ,ತೆಂಗಿನಕಾಯಿ ಜೊತೆ ಪೂಜೆ ಮಾಡಿದ ಕೊಬ್ಬರಿ ಗಿಟುಕು, ೧೬ ಎಳೆ ಹತ್ತಿ ಹಾರವನ್ನು ಇಡಬೇಕು. ಇದನ್ನು ತಾಯಿಗೆ ಬಾಗಿನ ಕೊಡಬೇಕು. ಹೀಗೆ ೫ ವರ್ಷ ವ್ರತಿ ಮಾಡಿ ಐದನೇ ವರ್ಷ ಉದ್ಯಾಪನೆ ಮಾಡಿ ಪೂಜೆಗೆ ಉಪಯೋಗಿಸಿದ ಕಳಶದ ಪಾತ್ರೆಯನ್ನು ಮರದ ಬಾಗಿನದ ಜೊತೆ ತಾಯಿಗೆ ಕೊಡಬೇಕು.

ಮರದ ಬಾಗಿನದ ಸಾಮಾನುಗಳು:
೧ ಜೊತೆ ಮೊರ
ಮೊರಕ್ಕೆ ಅರಿಶಿನ ಕುಂಕುಮ ಹಚ್ಚಿರಬೇಕು
ಅಕ್ಕಿ, ಕಡಲೇಬೇಳೆ, ತೊಗರಿಬೇಳೆ, ಹೆಸರುಬೇಳೆ,ಉದ್ದಿನಬೇಳೆ
ರವೆ, ಬೆಲ್ಲದಚ್ಚು, ಉಪ್ಪು ತೆಂಗಿನಕಾಯಿ, ಹಣ್ಣು,
ಬಳೆ, ಬಿಚ್ಚೋಲೆ, ಕನ್ನಡಿ, ಕಾಡಿಗೆ, ಬಾಚಣಿಗೆ,
ವೀಳ್ಯದೆಲೆ, ಅಡಿಕೆ, ದಕ್ಷಿಣೆ, ಅರಿಶಿನ, ಕುಂಕುಮ ಮತ್ತು ರವಿಕೆ ಬಟ್ಟೆ.

ಮಾಹಿತಿ: ಸಂಗ್ರಹ

No comments:

Post a Comment