Monday, June 3, 2013

ವೆಂಕಟೇಶ ಬೇಡಿಕೊಂಬೆ


ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ
ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ||

ನಷ್ಟ ಮೊದಲಾದಂಥ ಕಷ್ಟ ಬಿಡಿಸೊ
ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ
ಇಷ್ಟ ಭಕ್ತಜನರೊಳು ಎನ್ನ ಸೇರಿಸೊ
ಸೃಷ್ಟಿಯೊಳು ನಿನ್ನ ದಾಸಾನು ದಾಸನೆನಿಸೊ ||

ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ
ಪೊಂಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ
ಗಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ
ಮುಂದೆ ಹುಟ್ಟಿ ಇಹ ಜನ್ಮಂಗಳ ಎನಗೆ ಬಿಡಿಸೊ ||

ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ
ಉತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ
ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ ಸ್ವಾಮಿ
ದಿಟ್ಟ ಪುರಂದರ ವಿಠಲನೆ ದಯದಿ ಪಾಲಿಸೊ ||

No comments:

Post a Comment