Tuesday, June 25, 2013

ಶ್ರೀಪಾದರಾಜರ ಆರಾಧನೆ - ೨೦೧೩





























ಕೃಪೆ: sripadarajamutt.org
http://www.sripadarajamutt.org/gallery/index.php/Sri-Sripadarajaraja-Aradhane-2013

Monday, June 10, 2013

ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ


ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ ||
ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ ಸಾರ್ವಭೌಮನ
ಕಾಮಿತಾರ್ಥಗಳೀವ ದೇವನ ಕರುಣಾನಿಧಿ ಎಂದೆನಿಸಿ ಮೆರೆವನ ||

ಕೋಟಿಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನು
ನೋಟಕಾಶ್ಚರ್ಯವಾದ ನಗೆಮುಖನೊಸಲಿನಲಿ ತಿರುಮಣಿಯ ಕಂಡೆನು
ಸಾಟಿಯಿಲ್ಲದೆ ಚತುರ ಹಸ್ತದಿ ಶಂಖಚಕ್ರಗದಾಬ್ಜ ಕಂಡೆನು
ಬೂಟಕದ ಮಾತಲ್ಲ ಕೇಳಿರೋ ಭೂರಿದೈವರ ಗಂಡನಂಘ್ರಿಯ||

ತಪ್ಪುಕಾಣಿಕೆ ಕಪ್ಪವನು ಸಮಸ್ತದ್ವೀಪಗಳಿಂದಲಿ ತರಿಸುವ
ಉಪ್ಪು ಓಗರಗಳನೆ ಮಾರಿಸಿ ಉಚಿತದಿಂದಲಿ ಹಣವ ಗಳಿಸುವ
ಇಪ್ಪತ್ತು ದುಡ್ಡಿಗೆ ಸೇರು ತೀರ್ಥ ಒಪ್ಪದಲಿ ಕ್ರಯ ಮಾಡಿ ಕೊಡಿಸುವ
ಸರ್ಪಶಯನ ಸಾರ್ವಭೌಮನ ಅಪ್ಪ ವೆಂಕಟರಮಣನಂಘ್ರಿಯ ||

ಉರದಿ ಶ್ರೀ ದೇವಿಯಳ ಕಂಡೆನು ಉನ್ನತದ ಕೌಸ್ತುಭವ ಕಂಡೆನು
ಗರುಡ ಕಿನ್ನರನಾರದಾದಿ ಗಂಧರ್ವರ ಎಡಬಲದಲಿ ಕಂಡೆನು
ತರತರದಿ ಭಕ್ತರಿಗೆ ವರಗಳ ಕರೆದು ಕೊಡುವುದ ನಿರತ ಕಂಡೆನು
ಶರಧಿಶಯನನ ಶೇಷಗಿರಿಯ ವರದ ಪುರಂದರವಿಠಲನಂಘ್ರಿಯ ||

Thursday, June 6, 2013

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ


ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೀ ದೇಹದೊಳಗೊ ನಿನ್ನೊಳು ದೇಹವೊ||

ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ ||

ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ ||

ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಆಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ ||

ನರಸಿಂಹನ ಪಾದ ಭಜನೆಯ ಮಾಡೋ



ನರಸಿಂಹನ ಪಾದ ಭಜನೆಯ ಮಾಡೋ || ||
ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||||

ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ವರ ಕಂಭದಿಂ ಬಂದ ಸಿರಿ ನರಹರಿ ನಮ್ಮ ||

ತರಳನ ಮೊರೆ ಕೇಳಿ ತ್ವರಿತದಲಿ ಬಂದು
ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ ||

ಹರಿ ವಿರಿಂಚಾರಾದ್ಯರು ಕರವೆತ್ತಿ ಮುಗಿಯಲು
ಪರಮ ಶಾಂತನಾದ ಪುರಂದರವಿಠಲ ||

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ


ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ
ಪಾಮರ ಜನರಿಗೆ ಸಾಮಾನ್ಯವಲ್ಲ
ಸಾಮಜ ವರದನ ಪ್ರೇಮದಿ ನೆನೆವುದು
ತಾಮಸ ಬುದ್ಧಿಯ ತಾ ತಗ್ಗಿಸದೆ||

ಅಂತರ ಮಲಿನವು ಅಳಿಯಬೇಕು
ಶ್ರೀಕಾಂತನ ಚರಿತ ಕೇಳಲು ಬೇಕು
ಸಂತತವಿರಬೇಕು ಸಂತ ಜನರ ಗುಣ
ನಿರಂತರದಲಿ ತಾ ಚಿಂತಿಸ ಬೇಕು ||

ಸರ್ವಾಂತರ್ಯಾಮಿ ಶ್ರೀ ಹರಿಯೆಂದು
ಸರ್ವೇಶ್ವರನೆಂದು ಸ್ವರಮಣನೆಂದು
ಸರ್ವಾನುಗ್ರಹನೆಂದು ಪುರಂದರ ವಿಠಲನ
ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು ||

Monday, June 3, 2013

ಇನ್ನೂ ದಯ ಬಾರದೇ ದಾಸನ ಮೇಲೆ


ಇನ್ನೂ ದಯ ಬಾರದೇ ದಾಸನ ಮೇಲೆ
ಪನ್ನಗ ಶಯನ ಶ್ರೀ ಪರಮ ಪುರುಷ

ನಾನಾ ದೇಶಗಳಲ್ಲಿ ನಾನಾ ಕಲಗಳಲ್ಲಿ
ನಾನಾ ಯೋನಿಗಳಲ್ಲಿ ನೆಲಿದು ಹುಟ್ಟಿ
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೆ ಗತಿ ಎಂದು ನಂಬಿದ ದಾಸನ ಮೇಲೆ

ಮನೋವ ಕಾಯದಿಂದ ಮಾಡಿದ ಕರ್ಮಗಳೆಲ್ಲ
ದಾನವಾಂತಕ ನಿನಗೆ ದಾನವಿತ್ತೆ
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ
ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ

ವೆಂಕಟೇಶ ಬೇಡಿಕೊಂಬೆ


ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ
ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ||

ನಷ್ಟ ಮೊದಲಾದಂಥ ಕಷ್ಟ ಬಿಡಿಸೊ
ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ
ಇಷ್ಟ ಭಕ್ತಜನರೊಳು ಎನ್ನ ಸೇರಿಸೊ
ಸೃಷ್ಟಿಯೊಳು ನಿನ್ನ ದಾಸಾನು ದಾಸನೆನಿಸೊ ||

ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ
ಪೊಂಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ
ಗಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ
ಮುಂದೆ ಹುಟ್ಟಿ ಇಹ ಜನ್ಮಂಗಳ ಎನಗೆ ಬಿಡಿಸೊ ||

ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ
ಉತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ
ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ ಸ್ವಾಮಿ
ದಿಟ್ಟ ಪುರಂದರ ವಿಠಲನೆ ದಯದಿ ಪಾಲಿಸೊ ||

ಸದಾ ಎನ್ನ ಹೃದಯದಲ್ಲಿ


ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ
ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ

ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ
ವೇಣುಗಾನ ಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ

ಭಕ್ತಿರಸವೆಂಬೋ ಮುತ್ತು ಮಾಣಿಕ್ಯದಾ ಹರಿವಾಣದೀ
ಮುಕ್ತನಾಗಬೇಕು ಎಂದುಮುತ್ತಿನ ಆರತಿ ಎತ್ತುವೇನೋ

ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ
ಘನ ಮಹಿಮ ವಿಜಯ ವಿಠಲ ನಿನ್ನ ಭಕುತರ ಕೇಳೋ ಸೊಲ್ಲ