ಹಿಂದೂ ಧರ್ಮದಲ್ಲಿ ಪ್ರತಿ ಹಬ್ಬಗಳಿಗೆ ಅವುಗಳದೇ ಆದ ವಿಶೇಷತೆ ಇದೆ. ಇದರಲ್ಲಿ ಮಕರ ಸಂಕ್ರಾಂತಿ ಹಿಂದೂ ಪಂಚಾಂಗದ ಪ್ರಕಾರ ವರ್ಷದ ಕೊನೆಯಲ್ಲಿ ಬರುವ ಹಬ್ಬ ಆದರೆ ಅದರ ಮಹತ್ವ ಹೆಚ್ಚು. ಹಾಗೆ ನೋಡಿದರೆ ವರ್ಷದಲ್ಲಿ 12 ಸಂಕ್ರಾಂತಿಗಳು ಬರುತ್ತವೆ. ಆದರೂ ವರ್ಷದ ಕೊನೆಯಲ್ಲಿ ಬರುವ ಮಕರ ಸಂಕ್ರಾಂತಿಗೇಕೆ ವಿಶೇಷ ಮಹತ್ವ? ಇದರ ಬಗ್ಗೆ ಇಲ್ಲಿದೆ ಒಂದು ಪುಟ್ಟ ಮಾಹಿತಿ.
ಮಕರ ಸಂಕ್ರಾಂತಿ ಎಂದರೆ ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುವುದು. ವರ್ಷದಲ್ಲಿ ಮುಖ್ಯವಾಗಿ ೨ ಆಯನಗಳು.
೧)ದಕ್ಷಿಣಾಯನ
೨)ಉತ್ತರಾಯಣ
ಇವೆರಡರಲ್ಲೂ ಶುಭಕಾರ್ಯಗಳಿಗೆ ಯೋಗ್ಯವಾದ ಕಾಲವೆಂದರೆ ಉತ್ತರಾಯಣಕಾಲ. ಆಯನ ಎಂದರೆ ಗಮನ ಎಂದರ್ಥ. ಸೂರ್ಯನು ಮಕರರಾಶಿಯನ್ನು ಪ್ರವೇಶಿಸಿ ಉತ್ತರಕ್ಕೆ ಚಲಿಸುತ್ತಾನೆ. ಆದ್ದರಿಂದ ಉತ್ತರಾಯಣ ಮಂಗಳಕರವಾಗಿದೆ. ಮದುವೆ ಉಪನಯನ ಇತ್ಯಾದಿ ಮಂಗಳಕಾರ್ಯ ಮಾಡಬಯಸುವವರು ಉತ್ತರಾಯಣ ಬರುವವರೆಗೂ ಕಾದು ನಂತರ ನಡೆಸುತ್ತಾರೆ. ಇದು ಶಾಸ್ತ್ರವಿಹಿತವೂ ಆಗಿದೆ. ಶುಭಕಾರ್ಯಗಳಿಗೆ ಆಶ್ರಯವಾದ ಈ ಉತ್ತರಾಯಣವು ಮಕರಸಂಕ್ರಾಂತಿಯಿಂದಲೇ ಆರಂಭವಾಗುವುದರಿಂದ ಇದಕ್ಕೆ ವಿಶೇಷ ಪ್ರಾಮುಖ್ಯತೆ ಕೊಡಲಾಗಿದೆ.
ಈ ಸಂಕ್ರಾಂತಿಯು ನಾನಾ ರೀತಿಯ ಸಂದೇಶವನ್ನು ನೀಡುತ್ತಿದೆ. ಹಳೆಯ ನೋವಿನ, ದುಷ್ಟವಿಚಾರಗಳನ್ನು ಮರೆಯುವ ದ್ಯೋತಕವಾಗಿ ಭೋಗಿ ಹಬ್ಬದ ದಿನ ಮನೆಯಲ್ಲಿನ ಹಳೇವಸ್ತುಗಳನ್ನು ಭೋಗಿಕೆಂಡದಲ್ಲಿ ಸುಡುವ ಪದ್ಧತಿ ಕೆಲವು ಪ್ರಾಂತ್ಯಗಳಲ್ಲಿದೆ. ಇನ್ನು ಕೆಲವು ಕಡೆ ರೈತರು ಸಮೃದ್ಧಿಯಾಗಿ ಬೆಳೆದ ಧಾನ್ಯಗಳನ್ನು ಸಂಕ್ರಾಂತಿ ದಿನ ಕಟಾವ್ ಮಾಡಿ ಮನೆಗೆ ತಂದು ಪೊಂಗಲ್ ಮೊದಲಾದ ಹಬ್ಬದಡಿಗೆಗಳನ್ನು ಮಾಡಿ ದೇವರಿಗೆ ಸಮರ್ಪಿಸಿ ತಾವೂ ಕುಟುಂಬದೊಡನೆ ಊಟ ಮಾಡಿ ಸಂತಸದಿಂದಿರುತ್ತಾರೆ. ದಾವಣಗೆರೆ, ಹಾವೇರಿ, ರಾಣೆಬೆನ್ನೂರಿನ ಜನರು ಸಂಕ್ರಾಂತಿ ದಿನದಂದು ತಮ್ಮ ಹೊಲಗಳಲ್ಲಿ ಬೆಳೆದ ಧಾನ್ಯಗಳಿಂದ ಮಾಡಿದ ಅಡುಗೆಯನ್ನು ಕಟ್ಟಿಕೊಂಡು ತಂದು ಹರಿಹರದ ತುಂಗಭದ್ರಾ ನದಿಯ ದಡದುದ್ದಕ್ಕೂ ತಮ್ಮ ಕುಟುಂಬ, ಸ್ನೇಹಿತರೊಂದಿಗೆ ಕುಳಿತುಕೊಂಡು ಆನಂದದಿಂದ ಸವಿಯುವ ದೃಶ್ಯ ನೋಡಲು ಚಂದ. ಈ ಎಲ್ಲದರ ಆಂತರ್ಯ ಒಂದೇ. ಹಳೆಯ ನಡೆದು ಹೋದ ಸಂಗತಿಗಳನ್ನು ಮರೆತು ಸಂತೋಷದ ಹೊಸ ಸಂಗತಿಗಳತ್ತ ಗಮನ ಹರಿಸುವುದು ಎಲ್ಲರೊಡನೆ ಬೆರೆಯುವುದು. ಅದೇ ರೀತಿ ಅಸುರೀಗುಣಗಳನ್ನು ಬಿಟ್ಟು ದೈವೀಗುಣಗಳನ್ನು ಅಬಿವೃದ್ಧಿಗೊಳಿಸಿಕೊಳ್ಳುವುದೂ ಆಗಿದೆ. ಇನ್ನೊಂದು ವಿಶೇಷವೆಂದರೆ ಈ ದಿನ ಹಗಲು ರಾತ್ರಿಗಳು ಸಮವಾಗಿರುತ್ತವೆ. ಇದರಿಂದ ನಮ್ಮಲ್ಲಿರುವ ಸೂರ್ಯ ಚಂದ್ರ ನಾಡಿಗಳು ಸಮವಾಗಿ ಕೆಲಸ ಮಾಡಿದಲ್ಲಿ ಆಧ್ಯಾತ್ಮಿಕನಾಡಿಯಾದ ಸುಷುಮ್ನಾನಾಡಿಯು ಜಾಗೃತವಾಗುತ್ತದೆ ಎಂದು ತಿಳಿದುಬರುತ್ತದೆ.
ವ್ಯವಸಾಯ ಮಾಡುವಲ್ಲಿ ಪಶುಗಳು ಸಹಾಯ ಮಾಡಿದ ಕೃತಜ್ಞತೆಗಾಗಿ ಅವುಗಳನ್ನು ಈ ದಿನ ಅಲಂಕರಿಸಿ ಪೂಜಿಸುವ ಪದ್ಧತಿಯೂ ಇದೆ, ಸಂಕ್ರಾಂತಿ ಎಂದೊಡನೆ ಎಲ್ಲರಿಗೂ ಮೊದಲು ನೆನಪಾಗುವುದೇ ಎಳ್ಳು-ಬೆಲ್ಲ ಸಂಕ್ರಾಂತಿಯಂದು ಎಲ್ಲರೂ ಪರಸ್ಪರ ಎಳ್ಳು-ಬೆಲ್ಲವನ್ನು ಹಂಚಿ ಒಬ್ಬರಿಗೊಬ್ಬರು ಶುಭಾಶಯವನ್ನು ಹಾರೈಸುತ್ತಾರೆ. ಎಳ್ಳು-ಬೆಲ್ಲದಲ್ಲಿರುವ ಉಷ್ಣಾಂಶವು ಶರೀರದ ಆಲಸ್ಯತ್ವವನನ್ನು ಹೋಗಲಾಡಿಸಿ ಉತ್ಸಾಹದಿಂದಿರುವಂತೆ ಮಾಡುತ್ತದೆ. ಗುಜರಾತ್ ಮತ್ತು ಮುಂಬೈನ ಕೆಲ ಪ್ರಾಂತ್ಯಗಳಲ್ಲಿ ಸಂಕ್ರಾಂತಿ ಎಂದರೆ ಗಾಳಿಪಟ ಹಾರಿಸುವ ಹಬ್ಬ. ಹೌದು, ಇಲ್ಲಿ ಮುಖ್ಯಮಂತ್ರಿಗಳೇ ಸ್ವತಃ ಗಾಳಿಪಟ ಹರಿಸುತ್ತಾ ನಿಲ್ಲುವುದೂ ಉಂಟು. ಅಷ್ಟೇ ಏಕೆ? ಈ ದಿನ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸ್ಪರ್ಧೆ ನಡೆಸುತ್ತಾರೆ. ಅತೀ ಚಿಕ್ಕ ಗಾಳೀಪಟದಿಂದ ಹಿಡಿದು ಲಾರಿಯ ಗಾತ್ರದವರೆಗೂ ಗಾಳಿಪಟಗಳು ಆಗಸದಲ್ಲಿ ಹಾರಾಡುತ್ತಿರುವದನ್ನು ನೋಡಿ ಪಕ್ಷಿಗಳೇ ನಾಚಿ ದೂರ ಹೋಗುತ್ತವೇನೋ ಎಂಬಷ್ಟರ ಮಟ್ಟಿಗೆ ಆಗಸ ತುಂಬಿ ಹೋಗಿರುತ್ತದೆ.
ಸಂಕ್ರಾಂತಿ ಧರ್ಮಗಳು
ಸೂರ್ಯ ದಿಕ್ಕು ಬದಲಾಯಿಸುವ ಈ ಕಾಲವು ಪರ್ವಕಾಲವೆಂದೇ ಪರಿಗಣಿಸಲ್ಪಡುತ್ತದೆ. ಹೀಗಾಗಿ ಮಕರ ಸಂಕ್ರಾಂತಿಯಂದು ಸಮುದ್ರ ಸ್ನಾನ ಅತ್ಯಂತ ಫಲದಾಯಕ.
ಇಲ್ಲದಿದ್ದರೆ ನದಿ,ಕೆರೆ ಅಥವಾ ಭಾವಿಗಳಲ್ಲಿಯಾದರೂ ಸ್ನಾನಮಾಡಬೇಕು. ಮಹಿಳೆಯರು ಗಂಗಾಪೂಜೆಯನ್ನು ಮಾಡಬೇಕು. ಅಧಿಕಾರವುಳ್ಳ ಗಂಡಸರು ಸಮಸ್ತ ಪಿತೃಗಳನ್ನುದ್ದೇಶಿಸಿ ತಿಲತರ್ಪಣವನ್ನು ಕೊಡಬೇಕು.
ಪರ್ವಕಾಲದಲ್ಲಿ ಮಾಡುವ ನದಿ ಸ್ನಾನ, ಜಪಾನುಷ್ಠಾನಗಳು ಅನಂತಫಲ ಕೊಡುತ್ತವೆ, ಹಾಗೂ ಈ ದಿನ ಪುಣ್ಯಕ್ಷೇತ್ರಗಳಲ್ಲಿ ನದಿಸ್ನಾನವನ್ನು ಮಾಡಿ ಮಾಡುವ ಜಪ-ಮಂತ್ರಗಳ ಪಾರಾಯಣ ಸಿಧ್ದಿಯಾಗುತ್ತದೆ.
ಈ ದಿನ ಷಟ್ತಿಲ ಕರ್ಮ ಆಚರಿಸುವುದು ವಿಶೇಷ ಫಲದಾಯಕ. ಷಟ್ತಿಲ ಕರ್ಮಗಳು ಹೀಗಿವೆ.
೧)ತಿಲಸ್ನಾನ
೨)ತಿಲದೀಪ
೩)ತಿಲಹೋಮ
೪)ತಿಲತರ್ಪಣ (ಅಧಿಕಾರವಿದ್ದವರು ಮಾತ್ರ)
೫)ತಿಲಭಕ್ಷಣ
೬)ತಿಲದಾನ
ಹೀಗೆ ಷಟ್ಕರ್ಮಗಳನ್ನು ಮಾಡಿದರೆ ಜನ್ಮ ಜನ್ಮಗಳಲ್ಲಿಯೂ ಮನುಷ್ಯ ಸುಖಿಯಾಗಿರುತ್ತಾನೆ.
||ಸಂಕ್ರಾಂತೌ ಯದಿ ದತ್ತಾನಿ ಹವ್ಯಕವ್ಯಾನಿ ದಾತೃಭಿಃ|
ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ||
ಹೀಗೆ ಪುರಾಣಗಳಲ್ಲಿ ಉಲ್ಲೇಖವಾಗಿರುವ ಸಂಕ್ರಾಂತಿಯಂದು ನಾವೂ ಸಹ ಎಳ್ಳು-ಬೆಲ್ಲವನ್ನು ತಿಂದು ಒಳ್ಳೆಯ ಚಿಂತನೆಗಳನ್ನು ಮಾಡುತ್ತಾ ಸದ್ಗತಿಯ ಪಥದತ್ತ ಚಲಿಸೋಣ.
ಸರ್ವರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.
ಲೇಖನ ಮಾಹಿತಿ
ಚಿಲಕಲಡೋಣ ಕರಣಂ ವೆಂಕಟೇಶಾಚಾರ್ಯ
ಗುರುಸಾರ್ವಬೌಮ ಸಂಸ್ಕೃತ ವಿದ್ಯಾಪೀಠ
ಮಂತ್ರಾಲಯ
Source : http://raghavendramutt.org/articles/makara-sankranti-some-informations

No comments:
Post a Comment