
ಕಶ್ಯಪ ಮುನಿಗಳ ಮುಂದಾಳತ್ವದಲ್ಲಿ ಋಷಿಗಳೆಲ್ಲ ಸೇರಿ ಗಂಗಾ ನದಿ ದಡದಲ್ಲಿ ಯಾಗ ನಡೆಸುತ್ತಿದ್ದರು. ಅಲ್ಲಿಗೆ ಆಗಮಿಸಿದ ನಾರದ ಮುನಿಗಳು ಯಾರನ್ನು ಮೆಚ್ಚಿಸುವುದಕ್ಕಾಗಿ ಈ ಯಾಗ ಎಂದು ಕೇಳಿದಾಗ ಮುನಿಗಳು ನಿರುತ್ತರರಾದರು. ಮುನಿಗಳೆಲ್ಲರು ಭ್ರುಗುಮುನಿಯ ಮುಂದೆ ನಾರದ ಮಹರ್ಷಿಯ ಪ್ರಶ್ನೆಯನ್ನಿಟ್ಟರು. ನಾರದ ಮಹರ್ಷಿಯ ಪ್ರಶ್ನೆಗೆ ಉತ್ತರ ಹುಡುಕುವ ಸಲುವಾಗಿ ಭೃಗು ಮುನಿಯು ಮೊದಲು ಬ್ರಹ್ಮ ದೇವರ ವಾಸಸ್ಥಾನವಾದ ಸತ್ಯಲೋಕಕ್ಕೆ ತೆರಳಿದರು. ಅಲ್ಲಿ ಬ್ರಹ್ಮದೇವರು ಸರಸ್ವತಿ ಒಡಗೂಡಿ ವೇದಗಳನ್ನು ಪಟಿಸುತ್ತಿದ್ದರು. ಭ್ರುಗುಮುನಿಯ ಆಗಮನವನ್ನು ಗಮನಿಸದ ಬ್ರಹ್ಮದೇವರು ತಮ್ಮ ಪಾಡಿಗೆ ತಾವು ವೇದಗಳ ಪಟನೆಯಲ್ಲಿ ಮಗ್ನರಾಗಿದ್ದರು. ತನ್ನ ಆಗಮನ ಲೆಕ್ಕಿಸ್ದದ ಬ್ರಹ್ಮದೇವರ ಮೇಲೆ ಕುಪಿತಗೊಂಡ ಭ್ರುಗುಮುನಿಯು ಬ್ರಹ್ಮದೇವರಿಗೆ ನಿನಗೆ ಭೂಲೋಕದಲ್ಲಿ ಪೂಜೆ ಇಲ್ಲದಂತಾಗಲಿ ಎಂದು ಶಾಪವ ನೀಡಿ ಅಲ್ಲಿಂದ ಕೈಲಾಸದೆಡೆಗೆ ತೆರಳಿದರು.
ಕೈಲಾಸದಲ್ಲಿ ಶಿವನು ಪಾರ್ವತಿಯೊಂದಿಗೆ ಮಗ್ನನಾಗಿ ಭ್ರುಗುಮುನಿಯ ಆಗಮನವನ್ನು ಲೆಕ್ಕಿಸಲಿಲ್ಲ. ಇದರಿಂದ ಕುಪಿತಗೊಂಡ ಬ್ರುಗುಮುನಿಯು ಶಿವನಿಗೆ ಭೂಲೋಕದಲ್ಲಿ ಬರೀ ಲಿಂಗಪೂಜೆಯಷ್ಟೇ ನಿನಗೆ ಎಂದು ಶಾಪವನಿತ್ತು ವೈಕುಂಟದೆಡೆಗೆ ಪ್ರಯಾಣ ಬೆಳೆಸಿದರು. ವೈಕುಂಟದಲ್ಲಿ ಶ್ರೀಮನ್ನಾರಾಯಣನು ಆದಿಶೇಷನ ಮೇಲೆ ಪವಡಿಸಿದ್ದರೆ ಲಕ್ಷ್ಮಿದೇವಿಯು ನಾರಾಯಣನ ಕಾಲ ಬಳಿ ಸೇವೆಯಲ್ಲಿ ನಿರತಳಾಗಿದ್ದಳು. ಭ್ರುಗುಮುನಿಯ ಆಗಮನವನ್ನು ನೋಡಿದರು ನೋಡದ ಹಾಗೆ ಶ್ರೀಮನ್ನಾರಾಯಣನು ಸುಮ್ಮನಿರಲು ಕುಪಿತಗೊಂಡ ಭ್ರುಗುಮುನಿ ನೇರವಾಗಿ ಬಂದು ಲಕ್ಷ್ಮೀದೇವಿಯ ನಿವಾಸವಾದ ಶ್ರೀಮನ್ನಾರಾಯಣ ವಕ್ಷಸ್ಥಳಕ್ಕೆ ಕಾಲಿಂದ ಒದ್ದರು. ನಾರಾಯಣನು ಭ್ರುಗುಮುನಿಯನ್ನು ತನ್ನನ್ನು ಕ್ಷಮಿಸು ಎಂದು ಮುನಿಯ ಕಾಲನ್ನು ಹಿಡಿಯುವ ನೆಪದಲ್ಲಿ ಭ್ರುಗುಮುನಿಯ ಪಾದದಲ್ಲಿ ಇದ್ದ ಅಹಂಕಾರದ ಕಣ್ಣನ್ನು ಒತ್ತಿಬಿಟ್ಟರು. ತನ್ನ ತಪ್ಪಿನ ಅರಿವಾದ ಭ್ರುಗುಮುನಿಯು ಶ್ರೀಮನ್ನಾರಾಯಣನೆ ಈ ಯಾಗದ ಫಲ ಸ್ವೀಕರಿಸಲು ಸೂಕ್ತವಾದ ವ್ಯಕ್ತಿಯೆಂದು ನಿರ್ಧರಿಸಿ ಅದನ್ನೇ ಮುನಿಗಳಿಗೆ ತಿಳಿಸಿದರು. ತನ್ನ ಪತಿಯು ಬ್ರುಗುಮುನಿಯನ್ನು ಕ್ಷಮೆ ಕೇಳಿದ್ದನ್ನು ಸಹಿಸಲಾಗದ ಲಕ್ಷ್ಮಿದೇವಿಯು ನಾರಾಯಣನ ಮೇಲೆ ಕೋಪಮಾಡಿಕೊಂಡು ವೈಕುಂಟವನ್ನು ತೊರೆದು ಹೊರತು ಹೋದಳು.
ಲಕ್ಷ್ಮೀದೇವಿಯ ಅಗಲಿಕೆಯನ್ನು ತಡೆಯಲಾಗದೆ ನಾರಾಯಣನು ಲಕ್ಷ್ಮೀದೇವಿಯನ್ನು ಹುಡುಕಿಕೊಂಡು ವೆಂಕಟಾದ್ರಿ ಬೆಟ್ಟದ ತಪ್ಪಲಿನಲ್ಲಿದ್ದ ಹುಣಸೇಮರದ ಬುಡಕ್ಕೆ ಬಂದು ಕುಳಿತನು. ಅಲ್ಲಿ ಬಿಸಿಲು ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗಿದ್ದ ಹುತ್ತವೊಂದರಲ್ಲಿ ಆಶ್ರಯ ಪಡೆದನು. ಅಲ್ಲಿ ನಾರಾಯಣ ಹಸಿವೆಯನ್ನು ನೀಗಿಸುವ ಸಲುವಾಗಿ ಬ್ರಹ್ಮದೇವರು ಹಾಗು ಈಶ್ವರನು ಹಸು ಹಾಗೂ ಕರುವಿನ ರೂಪ ಪಡೆದರೆ, ಸೂರ್ಯದೇವನು ಈ ವಿಷಯವನ್ನು ಮಹಾಲಕ್ಷ್ಮಿಗೆ ತಿಳಿಸಿ ಆ ಗೋವು ಮತ್ತು ಕರುವನ್ನು ಕರೆದುಕೊಂಡು ಹೋಗುವ ಹೆಂಗಸಾಗಿ ಅವತರಿಸಿ ಆ ಗೋವು ಹಾಗೂ ಕರುವನ್ನು ಚೋಳರಾಜನಿಗೆ ಮಾರಬೇಕಾಗಿ ಕೋರಿಕೊಂಡಾಗ ಆಗಲೆಂದು ಲಕ್ಷ್ಮಿದೇವಿಯು ಒಪ್ಪಿಕೊಂಡರು. ಚೋಳರಾಜನು ಆ ಗೋವು ಹಾಗೂ ಕರುವನ್ನು ಕೊಂಡುಕೊಂಡನು. ಗೋಪಾಲಕನು ಎಲ್ಲ ಗೋವುಗಳ ಜೊತೆಯಲ್ಲಿ ಈ ಗೋವು ಹಾಗೂ ಕರುವನ್ನು ಮೇಯಿಸಲು ವೆಂಕಟಾದ್ರಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಅವುಗಳನ್ನು ಮೇಯಲು ಬಿಟ್ಟು ತಾನು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದನು.
ಇತ್ತ ಹುತ್ತದಲ್ಲಿ ಹಸಿವಿನಿಂದ ಬಳಲುತ್ತಿದ್ದ ನಾರಾಯಣನ ಹಸಿವನ್ನು ನೀಗಿಸಲು ದೇವಸ್ವರೂಪಿಯಾದ ಆ ಗೋವು ಹುತ್ತದ ಬಳಿ ಬಂದು ತನ್ನ ಕೆಚ್ಚಲಿನಿಂದ ಹಾಲನ್ನು ಹುತ್ತದೊಳಗೆ ಬಿಡತೊಡಗಿತು. ಸಂಜೆಯ ವೇಳೆಗೆ ಗೋಪಾಲಕನು ಎಲ್ಲ ಗೋವುಗಳನ್ನು ಕರೆದುಕೊಂಡು ಅರಮನೆಗೆ ಮರಳಿ ಹಾಲು ಕರೆಯಲು ಮುಂದಾದಾಗ ಈ ಗೋವೊಂದನ್ನು ಬಿಟ್ಟು ಉಳಿದೆಲ್ಲ ಗೋವುಗಳು ಹಾಲನ್ನು ಕೊಟ್ಟವು. ಮೊದಲ ದಿನ ಗೋಪಾಲಕನಿಗೆ ಏನೂ ವಿಚಿತ್ರವೆನಿಸಲಿಲ್ಲ. ಆದರೆ ಮುಂದಿನ ಕೆಲದಿನಗಳೂ ಇದೆ ರೀತಿ ಮುಂದುವರೆದಾಗ ರಾಣಿಯು ಗೋಪಾಲಕನನ್ನು ಕರೆದು ಚೆನ್ನಾಗಿ ಬೈದಳು. ಇದರಿಂದ ಕುಪಿತಗೊಂಡ ಗೋಪಾಲಕನು ಇಂದು ಮೇಯಲು ಹೋದಾಗ ಇದನ್ನು ಪರೀಕ್ಷಿಸಬೇಕೆಂದು ನಿರ್ಧರಿಸಿದನು. ಅಂದು ಗೋವುಗಳನ್ನು ಮೇಯಲು ಕರೆದುಕೊಂಡು ಹೋದಾಗ ಆ ಗೊವನ್ನೇ ಹಿಂಬಾಲಿಸಿಕೊಂಡು ಹೋಗಿ ಒಂದು ಪೊದೆಯ ಹಿಂದೆ ಅವಿತು ಕುಳಿತನು. ಯಥಾಪ್ರಕಾರ ಆ ಗೋವು ಹುತ್ತದ ಬಳಿ ಹೋಗಿ ತನ್ನ ಹಾಲನ್ನೆಲ್ಲ ಹುತ್ತದ ಒಳಗೆ ಬಿಡುವುದನ್ನು ಕಂಡ ಗೋಪಾಲಕನು ದಿಗ್ಭ್ರಮೆಗೊಂಡನು. ಆ ದೃಶ್ಯವನ್ನು ಕಂಡು ಕುಪಿತಗೊಂಡ ಗೋಪಾಲಕನು ತನ್ನ ಬಳಿಯಿದ್ದ ಕೊಡಲಿಯಿಂದ ಆ ಗೋವನ್ನು ಹೊಡೆಯಲು ಮುಂದಾದಾಗ ಹುತ್ತದಲ್ಲಿದ್ದ ನಾರಾಯಣನು ಮೇಲೆದ್ದು ಬಂದಾಗ ಆ ಕೊಡಲಿ ಏಟು ನಾರಾಯಣನಿಗೆ ತಗುಲಿತು. ಆ ಅನಿರೀಕ್ಷಿತ ಘಟನೆಯಿಂದ ಆ ಗೋಪಾಲಕನು ಮೂರ್ಚೆ ತಪ್ಪಿದ್ ಬಿದ್ದು ಅಲ್ಲೇ ಮೃತ ಹೊಂದಿದನು. ಆ ಗೋವು ರಕ್ತದ ಕಲೆಯಿಂದ ಹಾಗೆಯೇ ಅರಮನೆಗೆ ಬಂದಾಗ ಭಯಗೊಂಡ ರಾಜನು ಅದನ್ನು ಹಿಂಬಾಲಿಸಿ ಹುತ್ತದ ಬಳಿ ಬಂದನು. ಅಲ್ಲಿ ಬಂದು ಗೋಪಾಲಕನ ದೇಹವನ್ನು ಕಂಡು ಹೇಗಾಯಿತೆಂದು ಯೋಚಿಸುತ್ತಿರುವಾಗ ಹುತ್ತದಿಂದ ಬಂದ ನಾರಾಯಣನು ನಿನ್ನ ಸೇವಕನು ಮಾಡಿದ ತಪ್ಪಿಗೆ ನಿನಗೆ ಶಾಪ ವಿಧಿಸುವುದಾಗಿ ತಿಳಿಸಿ ಆ ರಾಜನನ್ನು ಅಸುರನನ್ನಾಗಿ ಮಾಡಿಬಿಟ್ಟನು. ರಾಜನು ತನ್ನ ತಪ್ಪಿನ ಅರಿವಾಗಿ ಇದಕ್ಕೆ ಶಾಪವಿಮೋಚನೆ ಎಂದು ಕೇಳಿದಾಗ, ನನಗೆ ಆಕಾಶರಾಜನ ಮಗಳಾದ ಪದ್ಮಾವತಿಯ ಜೊತೆ ವಿವಾಹವಾದ ಸಮಯದಲ್ಲಿ ರಾಜನು ಕಿರೀಟವನ್ನು ಸಮರ್ಪಿಸುತ್ತಾನೆ ಆಗ ನಿನಗೆ ಶಾಪವಿಮೋಚನೆ ಎಂದು ಹೇಳಿದನು.
ನಾರಾಯಣನು ಭೂಲೋಕವನ್ನು ರಕ್ಷಿಸಿದ ವರಾಹದೇವರನ್ನು ತನಗೆ ವಾಸಿಸಲು ಜಾಗ ಬೇಕೆಂದು ಕೇಳಿದಾಗ ವರಾಹ ದೇವರು ಕೂಡಲೇ ವರಾಹ ಕ್ಷೇತ್ರವನ್ನು ನೀಡಿದರು. ನಾರಾಯಣನು ಇದಕ್ಕೆ ಸಮ್ಮತಿಸಿ ಮುಂದೆ ನಾನು ಶಿಲಾರೂಪ ಧರಿಸಿದಾಗ ನನ್ನಲ್ಲಿಗೆ ಬರುವ ಭಕ್ತರು ಮೊದಲಿಗೆ ನಿನ್ನನ್ನು ದರ್ಶಿಸಿ ನಂತರ ನನ್ನನ್ನು ದರ್ಶಿಸಬೇಕು ಎಂದರು. ಹಾಗೆಯೇ ಮೊದಲು ನಿನಗೆ ಪೂಜೆ ಹಾಗೂ ನೈವೇದ್ಯ ಸಮರ್ಪಣೆ ಆದ ನಂತರವೇ ನನಗೆ ಆಗುವುದು ಎಂದರು.
ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನನ್ನು ಸಾಕಿ ಸಲಹಿದ ಯಶೋದ ದೇವಿಗೆ ಕೃಷ್ಣನು ರುಕ್ಮಿಣಿಯ ಜೊತೆ ವಿವಾಹವನ್ನು ನೋಡುವ ಸೌಭಾಗ್ಯ ಇರಲಿಲ್ಲ. ಆಗ ಶ್ರೀ ಕೃಷ್ಣನು ಮುಂದಿನ ಜನ್ಮದಲ್ಲಿ ನಾನು ಶ್ರೀನಿವಾಸನ ಅವತಾರದಲ್ಲಿ ಪದ್ಮಾವತಿಯನ್ನು ವಿವಾಹವಾಗುವುದನ್ನು ನೀನು ನೋಡಬಹುದು ಎಂದು ವರ ನೀಡುತ್ತಾರೆ. ಆ ಯಶೋದ ದೇವಿಯೇ ಪ್ರಸ್ತುತ ಜನ್ಮದಲ್ಲಿ ವಕುಳಾ ದೇವಿಯ ಜನ್ಮವೆತ್ತಿರುತ್ತಾಳೆ. ಈ ಜನ್ಮದಲ್ಲಿ ಶ್ರೀನಿವಾಸನ ಆಗಮನವನ್ನು ಎದುರು ನೋಡುತ್ತಿರುತ್ತಾಳೆ.
ಹೀಗಿರಲು ತೊಂಡಮಂಡಲಂ ರಾಜ್ಯದ ರಾಜ ಆಕಾಶರಾಜನಿಗೆ ಸಂತಾನ ಭಾಗ್ಯವಿಲ್ಲದೆ ಕರುಬುತ್ತಿದ್ದಾಗ ಮುನಿಗಳ ಆದೇಶದ ಮೇರೆಗೆ ಒಂದು ಯಾಗವನ್ನು ನಡೆಸಲು ನಿರ್ಧರಿಸುತ್ತಾನೆ. ಆ ಯಾಗದ ಒಂದು ಭಾಗವಾಗಿ ಹೊಲವನ್ನು ಉಳುವ ಸಮಯದಲ್ಲಿ ನೇಗಿಲು ಇದ್ದಕ್ಕಿದ್ದ ಹಾಗೆ ನಿಂತುಬಿಡುತ್ತದೆ. ಏನೆಂದು ಪರೀಕ್ಷಿಸಿದಾಗ ಅಲ್ಲೊಂದು ಕಮಲದ ಹೂವು ನೇಗಿಲನ್ನು ನಿಲ್ಲಿಸಿರುತ್ತದೆ. ಆ ಹೂವನ್ನು ತೆರೆದು ನೋಡಲು ಅದರಲ್ಲಿ ಒಂದು ಮುದ್ದಾದ ಹೆಣ್ಣುಮಗು ಇರುತ್ತದೆ. ಹೂವಿನಲ್ಲಿ ಸಿಕ್ಕಿದ ಆ ಮಗುವಿಗೆ ಪದ್ಮಾವತಿ ಎಂದು ನಾಮಕರಣ ಮಾಡುತ್ತಾರೆ. ಪದ್ಮಾವತಿಯು ಬೆಳೆದು ದೊಡ್ಡವಳಾಗಿ ಗೆಳತಿಯರೊಡನೆ ಉದ್ಯಾನದಲ್ಲಿದ್ದಾಗ ಅಲ್ಲಿಗೆ ಬಂದ ನಾರದ ಮುನಿಗಳು ಪದ್ಮಾವತಿಗೆ ನಾನು ನಿನ್ನ ಹಿತೈಷಿ ಎಂದು ನಿನ್ನ ಕೈಯನ್ನು ತೋರಿಸು ಎಂದು ಅದನ್ನು ನೋಡಿ ನೀನು ಸಾಕ್ಷಾತ್ ಶ್ರೀ ವಿಷ್ಣುವನ್ನು ವರಿಸುತ್ತೀಯ ಎಂದು ನುಡಿದರು.
ನಾರಾಯಣನು ಹಾಗೆ ಸಂಚರಿಸುತ್ತ ನೇರ ವಕುಳಾದೇವಿಯ ಆಶ್ರಮಕ್ಕೆ ಬರುತ್ತಾನೆ. ಅಲ್ಲಿ ಆತನನ್ನು ಕಂಡ ವಕುಳಾದೇವಿ ಶ್ರೀನಿವಾಸ, ಶ್ರೀನಿವಾಸ ಎಂದು ಆದರಿಸುತ್ತಾಳೆ. ಶ್ರೀನಿವಾಸ ಅಲ್ಲಿಯೇ ತಂಗಿರಲು ಒಂದು ದಿನ ಅಲ್ಲೆಲ್ಲೋ ಆನೆಗಳು ಘೀಳಿಡುವುದನ್ನು ಕೇಳಿ ಅದನ್ನು ಹಿಂಬಾಲಿಸಿಕೊಂಡು ಬಂದ ಶ್ರೀನಿವಾಸನಿಗೆ ಉದ್ಯಾನದಲ್ಲಿ ಗೆಳತಿಯರೊಡನೆ ಹೂ ಸಂಗ್ರಹಿಸಲು ಬಂದ ಪದ್ಮಾವತಿಯ ಭೇಟಿ ಆಗುತ್ತದೆ. ಶ್ರೀನಿವಾಸನು ತನ್ನ ಪೂರ್ವಾಪರಗಳನ್ನು ತಿಳಿಸಿ, ಪದ್ಮಾವತಿಯ ವಿಷಯವನ್ನು ತಿಳಿದುಕೊಂಡು ಅಲ್ಲಿಂದ ಆಶ್ರಮಕ್ಕೆ ಮರಳಿ ಬಂದುಬಿಡುತ್ತಾನೆ.
ಆಶ್ರಮದಲ್ಲಿ ಚಿಂತಾಕ್ರಾಂತನಾಗಿದ್ದ ಶ್ರೀನಿವಾಸನನ್ನು ವಕುಳಾ ದೇವಿ ಕಾರಣ ಏನೆಂದು ಕೇಳಲು ತನ್ನ ಹಿಂದಿನ ಜನ್ಮದಲ್ಲಿ ತಾನು ಪದ್ಮಾವತಿಗೆ ನೀಡಿದ ಮಾತನ್ನು ನೆನಪಿಸಿಕೊಳ್ಳುತ್ತಾನೆ. ಹಿಂದೆ ಲಕ್ಷ್ಮಿದೇವಿಯು ವೇದವತಿಯ ಅವತಾರ ತಾಳಿದ್ದಾಗ ಒಂದು ದಿನ ಆಶ್ರಮದಲ್ಲಿದ್ದಾಗ ಅಲ್ಲಿಗೆ ಬಂದ ರಾವಣ ಆಕೆಯನ್ನು ಉತ್ತೇಜಿಸಲು ಪ್ರಯತ್ನಿಸಿದಾಗ ವೇದವತಿಯು ರಾವಣನಿಗೆ ನಾನು ನಿನಗೆ ಮರಣವನ್ನು ತರುತ್ತೇನೆ ಎಂದು ಶಪಿಸುತ್ತಾಳೆ. ಹಾಗೆ ಶಪಿಸಿ ತಾನು ಅಗ್ನಿ ಪ್ರವೇಶ ಮಾಡಿದಾಗ ಅಗ್ನಿದೇವರು ಆಕೆಯನ್ನು ಕಾಪಾಡಿ ತನ್ನ ಹೆಂಡತಿಯ ಬಳಿ ಬಿಡುತ್ತಾರೆ. ಮುಂದೆ ರಾವಣನು ಪಂಚವಟಿಯಲ್ಲಿ ಸೀತಾಮಾತೆಯನ್ನು ಅಪಹರಿಸಲು ಯತ್ನಿಸಿದಾಗ ಅಗ್ನಿದವರು ತಮ್ಮ ಬಳಿಯಿದ್ದ ವೇದವತಿಯನ್ನು ಸೀತಮಾತೆಯಾಗಿ ಹೋಗಲು ಆದೇಶಿಸುತ್ತಾರೆ. ರಾವಣನು ವೇದವತಿಯನ್ನೇ ಸೀತಾಮಾತೆಯೆಂದು ತಿಳಿದು ಮೋಸ ಹೋಗುತ್ತಾನೆ. ರಾವಣನು ವೇದವತಿಯನ್ನು ಕರೆದೊಯ್ಯಲು ಅಗ್ನಿದೇವರು ಸೀತಾಮಾತೆಯನ್ನು ತನ್ನ ಹೆಂಡತಿಯಾದ ಸ್ವಾಹಾದೇವಿಯ ಬಳಿ ಬಿಡುತ್ತಾರೆ. ರಾವಣನ ಸಂಹಾರದ ನಂತರ ರಾಮನು ವೇದವತಿಯನ್ನು ಸ್ವೀಕರಿಸಲು ನಿರಾಕರಿಸಿದಾಗ ವೇದವತಿಯು ಅಗ್ನಿಗೆ ಆಹುತಿಯಾಗುತ್ತಾಳೆ. ನಂತರ ಅಗ್ನಿದೇವರು ತನ್ನ ಮನೆಯಲ್ಲಿದ್ದ ಸೀತಾಮಾತೆಯನ್ನು ರಾಮನಿಗೆ ಒಪ್ಪಿಸಿದಾಗ ರಾಮನು ಆ ಇನ್ನೊಂದು ಹೆಣ್ಣು ಯಾರೆಂದು ಕೇಳುತ್ತಾನೆ. ಆಗ ಸೀತಾಮಾತೆಯು ನನಗಾಗಿ ವೇದವತಿಯು ಹತ್ತು ತಿಂಗಳುಗಳ ಕಾಲ ಆ ರಾವಣನ ಕಷ್ಟವನ್ನು ಸಹಿಸಿ ಅಗ್ನಿಗೆ ಆಹುತಿಯಾದಳು. ಅದಕ್ಕಾಗಿ ಆಕೆಯನ್ನು ವರಿಸಬೇಕೆಂದು ಕೇಳಿದಾಗ ರಾಮನು ಈ ಜನ್ಮದಲ್ಲಿ ನಾನು ಏಕಪತ್ನೀವ್ರತಸ್ಥ ಹಾಗಾಗಿ ಅದು ಸಾಧ್ಯವಿಲ್ಲ. ಮುಂದಿನ ಜನ್ಮದಲ್ಲಿ ನಾನು ಶ್ರೀನಿವಾಸನಾಗಿ ಇದೆ ವೇದವತಿಯು ಆಕಾಶರಾಜನ ಮಗಳಾಗಿ ಪದ್ಮಾವತಿಯನ್ನು ವಿವಾಹವಾಗುತ್ತೇನೆ ಎಂದು ಮಾತು ನೀಡಿದ್ದಾಗಿ ತನ್ನ ಹಿಂದಿನ ವೃತ್ತಾಂತವನ್ನು ವಕುಳಾ ದೇವಿಗೆ ತಿಳಿಸಿದನು.
ಶ್ರೀನಿವಾಸನ ವೃತ್ತಾಂತವನ್ನು ಕೇಳಿದ ವಕುಳಾ ದೇವಿ ಪದ್ಮಾವತಿಯನ್ನು ವಿವಾಹ ಮಾಡಿಕೊಡಲು ಆಕಾಶರಾಜನಲ್ಲಿಗೆ ತೆರಳಿದಳು. ದಾರಿಯಲ್ಲಿ ಪದ್ಮಾವತಿಯ ಗೆಳತಿಯರು ಈಶ್ವರನ ದೇವಸ್ಥಾನದಿಂದ ಮರಳಿ ಬರುತ್ತಿದ್ದರು ಅವರಿಂದ ಪದ್ಮಾವತಿಯೂ ಶ್ರೀನಿವಾಸನ ಮದುವೆಗೆ ಹಂಬಲಿಸುತ್ತಿದ್ದಾಳೆ ಎಂದು ತಿಳಿದು ಅವರೊಡಗೂಡಿ ವಕುಳಾ ದೇವಿ ಅರಮನೆಗೆ ತೆರಳಿದಳು. ಇತ್ತ ಆಕಾಶರಾಜ ಹಾಗೂ ಆತನ ಪತ್ನಿ ಧರಣಿ ದೇವಿ ಪದ್ಮಾವತಿಯ ಮನದಿಂಗಿತವನ್ನು ಅರಿತು ಬೃಹಸ್ಪತಿ ಮುನಿಗಳ ಬಳಿ ತೆರಳಿ ಈ ವಿಷಯವನ್ನು ಪ್ರಸ್ತಾಪಿಸಿದರು.
ಇತ್ತ ಶ್ರೀನಿವಾಸನು ವಕುಳಾ ದೇವಿ ಹೊರಟಾಗಿನಿಂದ ಏನಾಗುವುದೋ ಎಂದು ಕಳವಳ ಪಡುತ್ತಾ ತಾಳಲಾಗದೆ ತಾನೇ ಆಚೆ ಬಂದು ಕೊರವಂಜಿ ವೇಷ ಧರಿಸಿ ಅರಮನೆಯ ಬಳಿ ಬಂದನು. ಅಲ್ಲಿ ಪದ್ಮಾವತಿಯ ಗೆಳತಿಯರು ಆಕೆಯನ್ನು ಆಹ್ವಾನಿಸಿದರು. ಆದರೆ ಕೊರವಂಜಿ ವೇಷಧಾರಿ ಶ್ರೀನಿವಾಸನು ರಾಣಿಯ ಅಪ್ಪಣೆಯಿಲ್ಲದೆ ಪ್ರವೇಶಿಸುವುದಿಲ್ಲ ಎಂದನು. ಆ ಗೆಳತಿಯರು ಇದೆ ವಿಷಯವನ್ನು ರಾಣಿ ಧರಣಿದೇವಿಗೆ ತಿಳಿಸಿದರು. ಆಗ ಸ್ವತಹ ರಾಣಿಯೇ ಬಂದು ಕೊರವಂಜಿಯನ್ನು ಪದ್ಮಾವತಿ ಇದ್ದ ಕಡೆ ಕರೆದೊಯ್ದಳು. ಕೊರವಂಜಿಯು ಪದ್ಮಾವತಿಯ ಕೈಯನ್ನು ನೋಡಿ ಈಕೆ ಸಾಕ್ಷಾತ್ ಶ್ರೀಮನಾರಾಯಣನನ್ನು ವರಿಸುತ್ತಲೇ. ಅತೀ ಶೀಘ್ರದಲ್ಲಿ ಒಂದು ಹೆಂಗಸು ಈ ಕುರಿತು ಮಾತಾಡಲು ನಿಮ್ಮಲ್ಲಿಗೆ ಬರುತ್ತಾಳೆ ಎಂದು ತಿಳಿಸಿದಳು. ಈ ಕಡೆ ಕೊರವಂಜಿ ತೆರಳುತ್ತಿದ್ದಂತೆ ಆ ಕಡೆ ವಕುಳಾದೇವಿಯು ಅರಮನೆಗೆ ಬಂದು ಹೀಗೆ ಶ್ರೀನಿವಾಸನಿಗೆ ಪದ್ಮಾವತಿಯನ್ನು ಕೊಟ್ಟು ವಿವಾಹ ಮಾಡಬೇಕೆಂದು ಕೇಳಿದಳು. ಅತ್ತ ಬೃಹಸ್ಪತಿ ಮುನಿಗಳ ಒಪ್ಪಿಗೆ ಹಾಗೂ ಕೊರವಂಜಿಯ ಮಾತುಗಳನ್ನು ಕೇಳಿದ ಆಕಾಶರಾಜನು ಪದ್ಮಾವತಿಯನ್ನು ಶ್ರೀನಿವಾಸನಿಗೆ ಕೊಟ್ಟು ವಿವಾಹ ಮಾಡಲು ನಿರ್ಧರಿಸಿ ಪುರೋಹಿತರನ್ನು ಕರೆಸಿ ಒಳ್ಳೆಯ ಮುಹೂರ್ತ ಇಡಲು ತಿಳಿಸಿದನು. ಆಕಾಶರಾಜನು ಶುಕಮುನಿಯ ಮೂಲಕ ಶ್ರೀನಿವಾಸನಿಗೆ ಪದ್ಮಾವತಿಯನ್ನು ವಿವಾಹವಾಗಲು ಆಮಂತ್ರಣವನ್ನು ಕಳುಹಿಸಿದನು. ಶ್ರೀನಿವಾಸನು ಶುಕಮುನಿಯ ಮೂಲಕ ಪದ್ಮಾವತಿಗೆ ಹೂವಿನ ಹಾರವನ್ನು ಕಳುಹಿಸಿದನು.
ವಿವಾಹದ ಖರ್ಚಿಗಾಗಿ ಶ್ರೀನಿವಾಸನು ಕುಬೇರನ ಮೊರೆ ಹೋಗಲು ಕುಬೇರನು ಸಾಕಷ್ಟು ಹಣವನ್ನು ನೀಡಿದನು. ಶ್ರೀನಿವಾಸನು ಕುಬೇರನನ್ನು ಕುರಿತು ನೀನು ನೀಡಿದ ಸಾಲಕ್ಕೆ ಬಡ್ಡಿಯಾಗಿ ಕಲಿಯುಗಾಂತ್ಯದವರೆಗೂ ಭಕ್ತರು ಕಾಣಿಕೆಗಳನ್ನು ನೀಡುತ್ತಾರೆ. ಶ್ರೀನಿವಾಸನು ತನ್ನ ಸಹಚರರೊಂದಿಗೆ, ಬ್ರಹ್ಮ ಈಶ್ವರ ವಕುಳಾ ದೇವಿ ಸಮೇತವಾಗಿ ಗರುಡ ವಾಹನದ ಜೊತೆ ಆಕಾಶರಾಜನ ಅರಮನೆಗೆ ಪಯಣ ಬೆಳೆಸುತ್ತಾನೆ. ಅರಮನೆಯ ಮುಂಭಾಗಕ್ಕೆ ಬರುತ್ತಿದ್ದ ಹಾಗೆ ಶ್ರೀನಿವಾಸನನ್ನು ಆನೆಯ ಮೇಲೆ ಅಂಬಾರಿಯ ಒಳಗೆ ಕುಳ್ಳಿರಿಸಿ ಸ್ವಾಗತಿಸುತ್ತಾನೆ ಆಕಾಶರಾಜ. ವೈಶಾಖ ಶುದ್ಧ ದಶಮಿಯಂದು ಪುರೋಹಿತರು ನಿಗದಿಪಡಿಸಿದ್ದ ಮುಹೂರ್ತದಲ್ಲಿ ಮುಕ್ಕೋಟಿ ದೇವತೆಗಳ ಸಮ್ಮುಖದಲ್ಲಿ ಶ್ರೀನಿವಾಸನು ಪದ್ಮಾವತಿಯನ್ನು ವಿವಾಹವಾದನು
No comments:
Post a Comment