Wednesday, April 18, 2012

ಪೃಥೆ

ಶೂರಸೇನ ರಾಜ ತನಗೆ ಮಗಳಾಗಿ ಹುಟ್ಟಿದ ಪೃಥೆಯನ್ನು ಕುಂತಿಭೋಜರಾಜನಿಗೆ ಮಕ್ಕಳಿಲ್ಲದ ಕಾರಣ ಅವನಿಗೆ ಕೊಟ್ಟಿದ್ದ. ಕುಂತಿಭೋಜರಾಜ ಪೃಥೆಯನ್ನು ಯಾವುದೇ ಲೋಪವಿಲ್ಲದೆ ಚೆನ್ನಾಗಿ ಸಾಕುತ್ತಿದ್ದನು. ಪೃಥೆ ಬಹಳ ರೂಪವಂತೆ, ಗುಣವಂತೆ, ಶೀಲವಂತೆ ಆಗಿದ್ದಳು. ಬಾಲ್ಯದಿಂದ ಕುಂತಿಭೋಜರಾಜನ ಮನೆಯಲ್ಲಿ ಬೆಳೆದಿದ್ದರಿಂದ ಪೃಥೆಗೆ ಕುಂತಿ ಎಂಬ ಹೆಸರು ಬಂದಿತು.

ಒಮ್ಮೆ ಕುಂತಿಭೋಜರಾಜನ ಮನೆಗೆ ದೂರ್ವಾಸ ಮುನಿಗಳು ಆಗಮಿಸಿ ಸ್ವಲ್ಪ ದಿವಸ ರಾಜಾಶ್ರಯದಲ್ಲಿ ಇರುತ್ತೇವೆಂದು ತಿಳಿಸಿದರು. ಆಗ ಕುಂತಿಭೋಜರಾಜ ನನ್ನದೊಂದು ನಿರ್ಬಂಧ ಇದೆ ಅದಕ್ಕೆ ಒಪ್ಪುವುದಾದರೆ ನೀವು ಖಂಡಿತ ಇರಬಹುದು. ಅದೇನೆಂದರೆ ನೀವು ಇರುವಷ್ಟು ದಿವಸ ನಿಮ್ಮ ಸೇವೆಗೆ ನನ್ನ ಸಾಕು ಮಗಳಾದ ಕುಂತಿಯನ್ನು ಬಿಡುತ್ತೇನೆ. ಅವಳು ಇನ್ನು ಚಿಕ್ಕು ಹುಡುಗಿ. ನೀವು ಮೊದಲೇ ಕೋಪಿಷ್ಟರು. ತಿಳಿದೋ ತಿಳಿಯದೆಯೋ ಆಕೆಯಿಂದ ಏನಾದರೂ ತಪ್ಪಾದರೆ ನೀವು ಆಕೆಗೆ ಶಪಿಸಬಾರದು. ಈ ನಿರ್ಬಂಧಕ್ಕೆ ಒಪ್ಪಿಗೆ ಇದ್ದರೆ ನೀವು ಇಲ್ಲಿ ತಂಗಬಹುದು. ಅದಕ್ಕೆ ದೂರ್ವಾಸರು ಸಮ್ಮತಿ ಸೂಸಿ ಕುಂತಿಭೋಜರಾಜನ ಮನೆಯಲ್ಲಿ ವಾಸಿಸುತ್ತಿದ್ದರು.

ಹದಿಮೂರು ವರ್ಷಗಳ ಕಾಲ ಕುಂತಿಭೋಜರಾಜನ ಮನೆಯಲ್ಲಿ ತಂಗಿದ್ದ ದೂರ್ವಾಸರಿಗೆ ಕುಂತಿದೇವಿ ಕಾಯಾ ವಾಚಾ ಮನಸಾ ತನ್ನ ಸೇವೆಯನ್ನು ಸಲ್ಲಿಸಿದಳು. ಕುಂತಿದೆವಿಯ ಸೇವೆಯಿಂದ ಪ್ರೀತರಾದ ದೂರ್ವಾಸ ಮುನಿಗಳು ಅಲ್ಲಿಂದ ಹೊರಡುವಾಗ ಕುಂತಿ ನಿನಗೊಂದು ಅಪೂರ್ವವಾದ ಮಂತ್ರವನ್ನು ಉಪದೇಶಿಸುತ್ತೇನೆ. ನಿನಗೇನಾದರೂ ಸಹಾಯ ಬೇಕಿದ್ದಲ್ಲಿ ಈ ಮಂತ್ರವನ್ನು ಪಠಿಸಿ ಯಾವ ದೇವತೆಯನ್ನು ಕರೆದರೂ ಅವರು ಕೂಡಲೇ ಪ್ರತ್ಯಕ್ಷರಾಗುತ್ತಾರೆ. ನಿನಗೇನೂ ವರ ಬೇಕೋ ಬೇಡಿಕೊಳ್ಳಬಹುದು ಎಂದು ಅಲ್ಲಿಂದ ಹೊರಟರು.

ಒಮ್ಮೆ ಕುಂತಿದೇವಿ ಋತುಮತಿಯಾಗಿದ್ದಳು. ಆಗ ಋತು ಸ್ನಾನ ಮಾಡಿ ಆಚೆ ಬಂದಾಗ ಅಂತರಿಕ್ಷದಲ್ಲಿ ಸೂರ್ಯನನ್ನು ಕಂಡು ಕುಂತಿದೇವಿಗೆ ಒಂದು ದುರ್ಬುದ್ಧಿ ಬಂದಿತು. ಹೇಗಿದ್ದರೂ ದೂರ್ವಾಸರು ಮಂತ್ರ ಉಪದೇಶ ಮಾಡಿದ್ದರೆ. ಯಾಕೆ ಒಮ್ಮೆ ಆ ಮಂತ್ರವನ್ನು ಪರೀಕ್ಷಿಸಬಾರದು ಎಂಬ ದುರ್ಬುದ್ಧಿ ಬಂದಿದ್ದೆ ತಡ ಮಂತ್ರವನ್ನು ಪಠಿಸಿ ಸೂರ್ಯದೇವನನ್ನು ಆಹ್ವಾನಿಸಿ ಬಿಟ್ಟಳು. ತಟ್ಟನೆ ಸೂರ್ಯದೇವ ಪ್ರತ್ಯಕ್ಷ ಆಗಿಬಿಟ್ಟ. ಕುಂತಿದೇವಿಗೆ ಇದರಿಂದ ಆಘಾತವಾಗಿ ನಾನು ಸುಮ್ಮನೆ ಪರೀಕ್ಷಿಸಲು ಕರೆದಿದ್ದು ದಯವಿಟ್ಟು ಹೊರಟು ಹೋಗು ಎಂದು ಕಳಕಳಿಯಿಂದ ಬೇಡಿಕೊಂಡಳು. ಎಷ್ಟು ಬೇಡಿದರೂ ಸೂರ್ಯದೇವ ಸುಮ್ಮನೆ ಹಿಂದಿರುಗಲು ಸಮ್ಮತಿಸದೆ ಕುಂತಿದೇವಿಯೊಂದಿಗೆ ಸೇರಿ ಗರ್ಭಧಾರಣೆ ಮಾಡಿ ಹೋಗಿಬಿಟ್ಟ. ಹೋಗುವ ಮುನ್ನ ಸೂರ್ಯದೇವ ಕುಂತಿಯನ್ನು ಕುರಿತು ಹೇಳುತ್ತಾನೆ. ಕುಂತಿ ನೀನು ನನ್ನನ್ನು ಆಹ್ವಾನ ಮಾಡಿದ್ದರಿಂದಲೇ ನಾನು ಬಂದಿದ್ದು. ನಿನ್ನ ಸ್ಥಿತಿ ನನಗೆ ಅರ್ಥವಾಗುತ್ತದೆ. ನಿನಗೊಂದು ವರ ಕೊಡುತ್ತೇನೆ. ಮುಂದೆ ಮತ್ತೆ ನಿನಗೆ ಕನ್ಯತ್ವ ಬರುತ್ತದೆ. ಆಗ ನೀನು ಯಾರನ್ನು ಬೇಕಾದರೂ ಮದುವೆ ಆಗಬಹುದು ಎಂದು ಹೇಳಿ ಹೋಗುತ್ತಾನೆ.

ಈ ಅನಿರೀಕ್ಷಿತ ಸಂಘಟನೆಯಿಂದ ಕುಂತಿದೇವಿ ಕಂಗಾಲಾಗಿ ಬಿಟ್ಟಳು. ಇನ್ನೂ ಮದುವೆ ಆಗಿಲ್ಲ ಆಗಲೇ ಗರ್ಭಧಾರಣೆ ಆಗಿ ಹೋಗಿದೆ ಎಂದು ಚಿಂತಿಸುತ್ತಾ ಕನ್ಯಾಂತಃಪುರದಲ್ಲೇ ಇದ್ದುಬಿಟ್ಟಳು. ಯಾರಿಗೂ ವಿಷಯ ತಿಳಿಯದೆ ಗುಟ್ಟಾಗಿ ಇಟ್ಟಿದ್ದಳು. ಕೊನೆಗೆ ಮಗು ಜನಿಸಿತು. ಹುಟ್ಟಿದ ಮಗು ಹೇಗಿತ್ತೆಂದರೆ ದಿವ್ಯ ವರ್ಚಸ್ಸು, ಕವಚ ಕುಂಡಲಗಳೊಂದಿಗೆ ಹುಟ್ಟಿದೆ. ಹುಟ್ಟಿದ ಮಗುವಿನ ಕಿವಿ ಬಹಳ ಸುಂದರವಾಗಿ ಕುಂಡಲದಿಂದ ಕಂಗೊಳಿಸುತ್ತಿದ್ದನ್ನ್ನು ನೋಡಿ ಮಗುವಿಗೆ ಕರ್ಣ ಎಂದು ಹೆಸರಿಟ್ಟಳು. ಕನ್ಯಾವಸ್ಥೆಯಲ್ಲಿ ಮಗು ಹುಟ್ಟಿದೆ, ಮುಂದೆ ಸಮಾಜದಲ್ಲಿ ತನ್ನ ಪರಿಸ್ಥಿತಿ ಏನೆಂದು ಚಿಂತಿಸಿ ಆ ಮಗುವನ್ನು ಒಂದು ಪೆಟ್ಟಿಗೆಯಲ್ಲಿ ಮಲಗಿಸಿ, ಜೊತೆಯಲ್ಲಿ ಆ ಪೆಟ್ಟಿಗೆ ತುಂಬುವಷ್ಟು ರತ್ನ, ವಜ್ರ, ವೈಡೂರ್ಯಗಳನ್ನೂ ಇಟ್ಟು ಅಶ್ವ ನದಿಯಲ್ಲಿ ತೇಲಿಬಿಟ್ಟಳು. ಆ ಪೆಟ್ಟಿಗೆ ನದಿಯಲ್ಲಿ ತೇಲಿಕೊಂಡು ತೇಲಿಕೊಂಡು ಶರ್ಮಣ್ವತಿ ನದಿಗೆ ಬಂದು ಸೇರಿತು. ಅಲ್ಲಿಂದ ಯಮುನಾ ನದಿಗೆ ಬಂದು ಅಲ್ಲಿಂದ ಗಂಗಾ ನದಿಗೆ ಬಂದು ಸೇರಿತು. ಗಂಗಾ ನದಿಯಲ್ಲಿ ತೇಲಿಕೊಂಡು ಬರುತ್ತಿದ್ದಾಗ ಅಧಿರಥ ಎಂಬ ಸೂತಪುತ್ರ ಆ ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಅದರಲ್ಲಿದ್ದ ಮಗು ಹಾಗೂ ಜೊತೆಯಲ್ಲಿದ್ದ ಐಶ್ವರ್ಯ ವನ್ನು ಕಂಡು ಆಶ್ಚರ್ಯ ಚಕಿತನಾಗಿ ಮನೆಗೆ ತೆಗೆದುಕೊಂಡು ಹೋಗಿ ತನ್ನ ಪತ್ನಿಯಾದ ರಾಧೆಗೆ ಅದನ್ನು ಕೊಟ್ಟು ಮಗುವಿಗೆ ವಸುಶೇಣ ಎಂದು ನಾಮಕರಣ ಮಾಡಿ ಸಾಕುತ್ತಿದ್ದರು.

ನಂತರದಲ್ಲಿ ಕುಂತಿದೇವಿ ಪಾಂಡುರಾಜನನ್ನು ವಿವಾಹವಾಗಿ ಚಿರಕಾಲ ರಮಿಸುತ್ತಿದ್ದರು. ಕೆಲಕಾಲದ ನಂತರ ಪಾಂಡುರಾಜ ಮಾದ್ರಿ ಎಂಬ ಇನ್ನೊಬ್ಬಳನ್ನು ವಿವಾಹ ಮಾಡಿಕೊಂಡನು. ಒಮ್ಮೆ ಪಾಂಡು ರಾಜ ತನ್ನ ಇಬ್ಬರು ಪತ್ನಿಯರೊಡನೆ ಹಿಮಾಲಯದಲ್ಲಿರುವ ಬದರಿಕಾಶ್ರಮಕ್ಕೆ ಬಂದು ವಾಸ ಮಾಡುತ್ತಿದ್ದನು.

ಹೀಗೆ ಸಾಗಿರಲು ಒಮ್ಮೆ ಪಾಂಡುರಾಜ ಬೇಟೆ ಆಡಲು ಹೋಗಿದ್ದಾಗ ಒಂದು ಗಂಡು ಜಿಂಕೆ ಮತ್ತೊಂದು ಹೆಣ್ಣು ಜಿಂಕೆಯ ಜೊತೆ ಸರಸದಲ್ಲಿದ್ದಾಗ ಆ ಗಂಡು ಜಿಂಕೆಗೆ ಬಾಣ ಬಿಟ್ಟ. ಆದರೆ ಅದು ಬರೀ ಜಿಂಕೆ ಆಗಿರದೆ ಕಿಂದಮ ಎಂಬ ಋಷಿಗಳು ಆಗಿದ್ದರು. ಕ್ರೋಧಗೊಂಡ ಋಷಿಗಳು ನೀನು ಸಹ ನಿನ್ನ ಹೆಂಡತಿಯ ಜೊತೆ ಸಂಪರ್ಕ ಮಾಡಿದರೆ ಕೂಡಲೇ ನಿನಗೆ ಸಾವಾಗಲಿ ಎಂದು ಶಾಪ ಕೊಟ್ಟು ಬಿಟ್ಟರು. ಇದರಿಂದ ನೊಂದ ಪಾಂಡು ರಾಜ ಮಡದಿಯರೊಡನೆ ನಾನು ಇನ್ನು ಮುಂದೆ ಸನ್ಯಾಸಿ ಆಗಿಬಿಡುತ್ತೇನೆ ಎಂದಾಗ ಮಡದಿಯರು ಒಪ್ಪದೇ ನೀವು ಹೀಗೆ ಇಲ್ಲೇ ನಮ್ಮೊಡನೆ ಇರಬೇಕು ಎಂದು ಕೇಳಿಕೊಂಡಾಗ ಒಪ್ಪಿ ಅಲ್ಲೇ ಬದರಿಕಾಶ್ರಮದ ಸಮೀಪ ಇರುವ ಪಾಂಡು ಕೇಶ್ವರಕ್ಕೆ ಬಂದು ನೆಲೆಸಿದ್ದಾನೆ.

ಕಾಲ ಕಳೆದಂತೆ ಪಾಂಡು ರಾಜನಿಗೆ ಮಕ್ಕಳು ಬೇಕು ಅನಿಸಿತು. ಪಾಂಡು ರಾಜನೇ ಕುಂತಿಯನ್ನು ಕುರಿತು ನೀನು ನಿಯೋಗ ಪದ್ಧತಿಯಿಂದ ಸಂತಾನ ಪಡಿ ಎಂದು ಸಲಹೆ ಕೊಟ್ಟು ನನಗಿಂತ ಉತ್ತಮರಾದವರಿಂದ ನಿಯೋಗ ಪದ್ಧತಿಯಿಂದ ಸಂತಾನ ಪಡಿ ಎಂದನು. ಅದಕ್ಕೆ ಕುಂತಿ ದೇವಿ ನನಗೆ ಸಂತಾನ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಈ ರೀತಿಯಲ್ಲಿ ಮಾತ್ರ ನನಗೆ ಸಂತಾನ ಬೇಡ ಎಂದಳು. ಆದರೂ ಪಟ್ಟು ಬಿಡದ ಪಾಂಡು ರಾಜ ಇಲ್ಲ ಇದರಿಂದ ನನಗೇನೂ ಮನ ನೋಯುವುದಿಲ್ಲ ಎಂದಾಗ ಕುಂತಿ ತನ್ನ ವೃತ್ತಾಂತವನ್ನು ತಿಳಿಸುತ್ತಾಳೆ. ಹಿಂದೆ ದೂರ್ವಾಸ ಮುನಿಗಳು ತನಗೆ ಕೊಟ್ಟ ವರದ ಬಗ್ಗೆ ತಿಳಿಸಿದಾಗ ಪಾಂಡು ರಾಜ ಬಹಳ ಸಂತೋಷದಿಂದ ಹಾಗಿದ್ದರೆ ಈಗಲೇ ದೇವತೆಯನ್ನು ಕರೆ ಎಂದು ಹೇಳಿದ.

ಪತಿಯ ಮಾತನ್ನು ಮೀರಬಾರದೆಂದು ಕುಂತಿ ದೇವಿ ಯಾವ ದೇವರನ್ನು ಕರೆಯಲಿ ಎಂದು ಅವನನ್ನೇ ಕೇಳಿದಳು.ನಮ್ಮ ರಾಜ್ಯದ ರಕ್ಷಣೆ ಮಾಡಬೇಕು. ರಾಜ ಆಗಬೇಕೆಂದರೆ ಅವನು ಬಹಳ ಧರ್ಮಿಷ್ಠನಾಗಿರಬೇಕು. ಆದ್ದರಿಂದ ಯಮಧರ್ಮನನ್ನು ಆಹ್ವಾನ ಮಾಡು ಅವನಿಂದ ಒಳ್ಳೆ ಧರ್ಮಿಷ್ಠನಾದ ಮಗ ಹುಟ್ಟಲಿ ಎಂದ. ಕೂಡಲೇ ಕುಂತಿ ಮಂತ್ರವನ್ನು ಪಠಿಸಿ ಯಮದೇವನನ್ನು ಆಹ್ವಾನಿಸಿದಾಗ ಯಮಧರ್ಮರಾಯ ಬಂದು ತಾನೇ ಒಂದು ಅಂಶದಲ್ಲಿ ಇದ್ದ ಮಗುವನ್ನು ಕರುಣಿಸಿದನು. ಆ ಮಗುವಿಗೆ ಯುಧಿಷ್ಠಿರ ಎಂದು ನಾಮಕರಣ ಮಾಡಿದಳು.

ಕೆಲದಿನಗಳ ನಂತರ ಪಾಂಡುರಾಜನಿಗೆ ಇನ್ನೊಂದು ಮಗು ಬೇಕು ಎನಿಸಿ ಕುಂತಿಯ ಬಳಿ ತನ್ನ ಮನದಿಂಗಿತವನ್ನು ತಿಳಿಸಿದನು. ಈ ಬಾರಿ ಬಲಿಷ್ಟನಾದ ಮಗ ಒಬ್ಬ ಬೇಕು. ಬರೀ ಧರ್ಮದಿಂದ ರಾಷ್ಟ್ರ ರಕ್ಷಣೆ ಆಗುವುದಿಲ್ಲ. ಆದ್ದರಿಂದ ಜ್ಞಾನ ಬಲ ಹಾಗೂ ಬಾಹು ಬಲ ಎರಡೂ ಆದ ಒಬ್ಬ ಮಗ ಬೇಕು. ಆದ್ದರಿಂದ ವಾಯುದೇವರನ್ನು ಕರೆಯಿರಿ ಎಂದು ಹೇಳಿದ. ಕುಂತಿ ಅವನ ಆಜ್ಞೆಯಂತೆ ವಾಯುದೇವರನ್ನು ಆಹ್ವಾನ ಮಾಡಿದಳು. ಕೂಡಲೇ ವಾಯುದೇವರು ಪ್ರತ್ಯಕ್ಷವಾಗಿ ತಮ್ಮ ಅಂಶದಿಂದ ಕೂಡಿದ ಮಗುವನ್ನು ಕರುಣಿಸಿದರು. ಹಾಗೆ ಹುಟ್ಟಿದ ಮಗುವಿಗೆ ಭೀಮಸೇನ ಎಂದು ನಾಮಕರಣ ಮಾಡಿದರು. ಭೀಮಸೇನ ದೇವರು ಹುಟ್ಟಿದ ಕೂಡಲೇ ಅಸುರರೆಲ್ಲ ರಕ್ತವಾಂತಿ ಮಾಡಿಕೊಂಡು ಅಸುನೀಗಿದರು. ಹತ್ತು ದಿನದ ನಂತರ ಕುಂತಿದೇವಿ ಭೀಮಸೇನನನ್ನು ಎತ್ತಿಕೊಂಡು ಒಂದು ಪರ್ವತಕ್ಕೆ ಹೋಗಿದ್ದಾಗ ಹುಲಿಯೊಂದು ಘರ್ಜನೆ ಮಾಡಿತು. ಅದರಿಂದ ಭಯಭೀತಳಾದ ಕುಂತಿ ಕೈಯಿಂದ ಭೀಮನನ್ನು ಬಿಟ್ಟು ಬಿಟ್ಟಳು. ಭೀಮ ಬಿದ್ದ ರಭಸಕ್ಕೆ ಆ ಪರ್ವತವೆ ಪುಡಿ ಪುಡಿಯಾಗಿ ಹೋಯಿತು. ಆ ಪರ್ವತ ಶತಶ್ರುಂಗ (ನೂರು ಪರ್ವತಗಳ ಸಮೂಹ) ಪರ್ವತದ ಒಂದು ಪರ್ವತ.

ಮತ್ತೊಮ್ಮೆ ಪಾಂಡು ರಾಜ ಕುಂತಿಯ ಬಳಿ ಬಂದು ನನಗೆ ಇನ್ನೊಬ್ಬ ಮಗ ಬೇಕು ಆದ್ದರಿಂದ ಮತ್ತೊಬ್ಬ ದೇವತೆಯನ್ನು ಕರಿ ಎಂದ. ಧರ್ಮಿಷ್ಠ ಒಬ್ಬ ಪರಾಕ್ರಮಿ ಒಬ್ಬ ಹುಟ್ಟಿದ್ದಾನಲ್ಲ ಮತ್ತೆ ಯಾಕೆ ಎಂದು ಕೇಳಿದಾಗ ಒಬ್ಬ ಪರಾಕ್ರಮಿ ಆಚೆ ಶತ್ರುಗಳ ಜೊತೆ ಹೋರಾಡಲು ಹೋದಾಗ ಇಲ್ಲಿ ರಕ್ಷಣೆ ಮಾಡಲು ಇನ್ನೊಬ್ಬ ಇರಬೇಕು ಆದ್ದರಿಂದ ಇನ್ನೊಬ್ಬ ಪರಾಕ್ರಮಿಯನ್ನು ಪಡೆಯಬೇಕು ಎಂದು ಹೇಳಿದ್ದಕ್ಕೆ ಕುಂತಿ ಈ ಬಾರಿ ಇಂದ್ರ ದೇವರನ್ನು ಆಹ್ವಾನ ಮಾಡಿದಳು. ಇಂದ್ರನ ಅಂಶದಿಂದ ಹುಟ್ಟಿದ ಮಗನೆ ಅರ್ಜುನ.

ಇಷ್ಟಾದರೂ ಪಾಂಡು ರಾಜ ಸುಮ್ಮನಿರದೆ ಮತ್ತೊಮ್ಮೆ ಕುಂತಿಯನ್ನು ಕುರಿತು ಹೇಳುತ್ತಿದ್ದಾನೆ. ಕುಂತಿ ಒಬ್ಬ ಧರ್ಮಿಷ್ಠ ಹಾಗೂ ಇಬ್ಬರೂ ಪರಾಕ್ರಮಿಗಳು ಹುಟ್ಟಿದರು. ಈಗ ಒಬ್ಬ ಸ್ಫುರದ್ರೂಪಿ ಮಗ ಹುಟ್ಟಬೇಕು. ಮತ್ತೊಮ್ಮೆ ಇನ್ನೊಬ್ಬ ದೇವರನ್ನು ಕರೆ ಎಂದನು. ಆಗ ಕುಂತಿ ದೇವಿ ನಿರಾಕರಿಸಿದಳು. ರಾಜ್ಯ ರಕ್ಷಣೆಗೆ ಧರ್ಮಿಷ್ಠ, ಪರಾಕ್ರಮಿಗಳು ಹುಟ್ಟಿದ್ದಾರೆ. ಅಷ್ಟು ಸಾಕು ಆದರೆ ರಾಜ್ಯ ರಕ್ಷಣೆಗೆ ಸ್ಫುರದ್ರೂಪಿ ಯಾಕೆ ಬೇಕು. ಆದ್ದರಿಂದ ಈ ಬಾರಿ ನಾನು ಒಪ್ಪುವುದಿಲ್ಲ. ಮೂರು ಬಾರಿ ನಿಯೋಗ ಪದ್ಧತಿಯಲ್ಲಿ ಮಕ್ಕಳನ್ನು ಪಡೆದಿದ್ದೇನೆ. ಮತ್ತೆ ನಾನು ಆ ರೀತಿ ಮಾಡಿದರೆ ಅದು ಧರ್ಮ ಆಗುವುದಿಲ್ಲ ವ್ಯಭಿಚಾರ ಆಗುತ್ತದೆ. ಆದ್ದರಿಂದ ಇನ್ನು ಸಾಕು ಎಂದು ಹೇಳಿದಳು. ಕುಂತಿದೇವಿ ಹೇಳಿದ್ದು ಸರಿ ಎನಿಸಿ ಪಾಂಡು ರಾಜ ಸುಮ್ಮನಾದ.

ಇತ್ತ ಮಾದ್ರಿಗೂ ಮಕ್ಕಳು ಬೇಕು ಎನಿಸಿ ಪಾಂಡು ರಾಜನಲ್ಲಿ ತನ್ನ ಕೋರಿಕೆಯನ್ನು ತಿಳಿಸಿದಳು. ಕುಂತಿಗೆ ಮೂರು ಮಕ್ಕಳಾಗಿದ್ದಾರೆ ನನಗೆ ಒಬ್ಬರೂ ಬೇಡವೇ ಆದ್ದರಿಂದ ನೀವು ಕುಂತಿದೇವಿಯಲ್ಲಿ ಕೇಳಿ ಆ ಮಂತ್ರವನ್ನು ತನಗೆ ಉಪದೇಶ ಮಾಡಲು ಹೇಳಿ ನಾನು ನಿಯೋಗ ಪದ್ಧತಿಯಿಂದ ಮಕ್ಕಳನ್ನು ಪಡೆಯುತ್ತೇನೆ ಎಂದಳು. ಅದೇ ರೀತಿ ಪಾಂಡು ರಾಜ ಕುಂತಿದೇವಿಯಲ್ಲಿ ಬಂದು ವಿಷಯ ತಿಳಿಸಿದಾಗ ಕುಂತಿದೇವಿ ಅದಕ್ಕೆ ಸಮ್ಮತಿಸಿ ಮಾದ್ರಿಗೆ ಮಂತ್ರವನ್ನು ಉಪದೆಶಿಸುತ್ತೇನೆ. ಆದರೆ ಒಮ್ಮೆ ಮಾತ್ರ ಆ ಮಂತ್ರದಿಂದ ಫಲ ಪಡೆಯಬಹುದು ಅಷ್ಟೇ ಎಂದು ಹೇಳಿ ಮಾದ್ರಿಗೆ ಮಂತ್ರವನ್ನು ಉಪದೇಶಿಸುತ್ತಾಳೆ.

ಮಾದ್ರಿ ಯೋಚಿಸಲು ಶುರುಮಾಡಿದಳು, ಒಮ್ಮೆ ಮಾತ್ರ ಮಂತ್ರ ಪಠಿಸಲು ಸೂಚಿಸಿದ್ದಾಳೆ ಕುಂತಿ. ಮತ್ತೊಮ್ಮೆ ಮಂತ್ರದಿಂದ ಫಲವಾಗುವುದಿಲ್ಲ. ಆದರೆ ನನಗೆ ಎರಡು ಮಕ್ಕಳು ಬೇಕು ಎಂದು ದುರಾಲೋಚನೆ ಮಾಡಿ ಅಶ್ವಿನಿ ದೇವತೆಗಳಲ್ಲಿ ಅವಳಿ ದೇವತೆಗಳಿದ್ದಾರೆ. ಅವರಲ್ಲಿ ಯಾರೊಬ್ಬರನ್ನು ಕರೆದರೂ ಇಬ್ಬಿಬ್ಬರು ಬರುತ್ತಾರೆ ಆದ್ದರಿಂದ ಅವರನ್ನು ಕರೆಯೋಣ ಎಂದು ಅಶ್ವಿನಿ ದೇವತೆಗಳಲ್ಲಿ ಅವಳಿ ದೇವತೆಗಳಾದ ನಾಸತ್ಯ ಮತ್ತು ದಸ್ರ ಇಬ್ಬರಲ್ಲಿ ಒಬ್ಬರನ್ನು ಕರೆದಳು. ಕೂಡಲೇ ನಾಸತ್ಯ ಮತ್ತು ದಸ್ರ ಇಬ್ಬರೂ ಬಂದು ಫಲ ಕೊಟ್ಟರು. ಆಗ ಹುಟ್ಟಿದ ಅವಳಿ ಮಕ್ಕಳೇ ನಕುಲ ಸಹದೇವ

No comments:

Post a Comment