Saturday, November 19, 2011

ಸೋಂದಾ ಕ್ಷೇತ್ರಕ್ಕೆ ಒಮ್ಮೆ ಹೋಗೋಣ..

ಕ್ಷೇತ್ರಪರಿಚಯ
ಸೋಂದಾ ಕ್ಷೇತ್ರ ಬೆಂಗಳೂರಿನಿಂದ ಸುಮಾರು ನಾಲ್ಕುನೂರು ಕಿ.ಮೀ ದೂರದಲ್ಲಿ ನೆಲೆಸಿದೆ. ಶಿರಸಿ ಯಿಂದ ೩೫ ಕಿ.ಮೀ ದೂರ ಸಾಗಿದರೆ ಈ ಕ್ಷೇತ್ರ ಸಿಗುವುದು. ಸುತ್ತಲೂ ಹಸಿರು ಕಾಡು, ರಮ್ಯ ವಾತಾವರಣ ಸುಂದರವಾದ ಕೆರೆಯಿಂದ ಸದಾಕಾಲ ಭಕ್ತರನ್ನು ಆಕರ್ಷಿಸುತ್ತಿದೆ. ಈ ಕ್ಷೇತ್ರಕ್ಕೆ ಸೋಂದ, ಸೋದೆ, ಸ್ವಾದಿ ಎಂದು ಸಹ ಕರೆಯುತ್ತಾರೆ. ಹೆಚ್ಚಾಗಿ ಮಾಧ್ವ ಬ್ರಾಹ್ಮಣರು ಭೇಟಿ ಕೊಡುವ ಈ ಕ್ಷೇತ್ರದಲ್ಲಿ ವಾದಿರಾಜರ ಮೂಲ ಬೃಂದಾವನ, ರಮಾತ್ರಿವಿಕ್ರಮ ದೇವರ ಗುಡಿ, ಭೂತರಾಜರ ಸನ್ನಿಧಿ, ಧವಳ ಗಂಗಾ, ಮುಖ್ಯಪ್ರಾಣ ದೇವರು, ಗೋಪಾಲಕೃಷ್ಣ, ಸಂತಾನ ಗೋಪಾಲಕೃಷ್ಣ, ಅರಳಿಕಟ್ಟೆ, ನಾಗಬನ, ವೇದ ಮಂದಿರ, ಪಾಪ ವಿಮೋಚನಾ ತೀರ್ಥ, ಚಂದ್ರಮೌಳೇಶ್ವರ, ಹಾಗೂ ವೀಣೆಸಹಿತ ಹನುಮಂತ ದೇವರು ಇಲ್ಲಿ ನೆಲೆಸಿದ್ದಾರೆ.
ಆ ಜಾಗದಿಂದ ಸ್ವಲ್ಪ ದೂರ ಕಾಡಿನ ಹಾದಿಯಲ್ಲಿ ನಡೆದು ಸಾಗಿದರೆ ಶಾಲ್ಮಲಿ ನದಿ ಹರಿಯುವ ತಪೋವನ ಎಂಬ ಅದ್ಭುತವಾದ ಸ್ಥಳವಿದೆ. ಮುಂಚೆ ಈ ಜಾಗಕ್ಕೆ ನಡೆದೇ ಹೋಗಬೇಕಿತ್ತು. ಇತ್ತೀಚಿಗೆ ವಾಹನ ವ್ಯವಸ್ಥೆಯನ್ನು ಸಹ ಮಾಡಿದ್ದರೆ. ಸೋಂದಾ ಕ್ಷೇತ್ರಕ್ಕೆ ಬರುವ ಬಹುಪಾಲು ಜನ ತಪೋವನಕ್ಕೆ ಖಂಡಿತವಾಗಿ ಭೇಟಿ ಕೊಡುವರು . ಹಾಗೆಯೇ ಸೋಂದಾ ಕ್ಷೇತ್ರದ ಸುತ್ತ ಮುತ್ತ ನೋಡಬಹುದಾದ ಜಾಗಗಳೆಂದರೆ ಸ್ವರ್ಣವಲ್ಲಿ ಮಠ, ವೆಂಕಟರಮಣ ದೇವಸ್ಥಾನ ಸಹ ಉಂಟು.


ಮಳೆಗಾಲದಲ್ಲಂತೂ ಇಲ್ಲಿನ ಸೌಂದರ್ಯ ವರ್ಣಿಸಲು ಪದಗಳು ಸಾಲದು. ಮಳೆಗಾಲದಲ್ಲಿ ವಾರಾಂತ್ಯಗಳು ಬಿಟ್ಟರೆ ವಾರದ ದಿನಗಳಲ್ಲಿ ಹೆಚ್ಚು ಜನಸಂದಣಿ ಇರುವುದಿಲ್ಲ. ಪ್ರಶಾಂತವಾಗಿರುತ್ತದೆ ಸದಾಕಾಲ ಸುರಿಯುತ್ತಿರುವ ಆ ಮಳೆಯನ್ನೂ ನೋಡುವುದೇ ಕಣ್ಣಿಗೊಂದು ಹಬ್ಬ. ಆದರೆ ಒಂದೇ ಒಂದು ತೊಂದರೆ ಎಂದರೆ ಮಳೆಗಾಲದಲ್ಲಿ ತಪೋವನಕ್ಕೆ ಭೇಟಿ ಕೊಡಲು ಸಾಧ್ಯವಿಲ್ಲ. ಏಕೆಂದರೆ ಕಾಡಿನ ಹಾದಿಯಾದ್ದರಿಂದ ಜಿಗಣೆಗಳ ಕಾಟ ಹೆಚ್ಚಾಗಿ ಇರುತ್ತದೆ. ಇನ್ನು ಈ ಕ್ಷೇತ್ರದ ಊಟದ ರುಚಿಯ ಬಗ್ಗೆಯಂತೂ ಎರಡು ಮಾತಿಲ್ಲ. ಬೇಸಿಗೆಯಲ್ಲಿ ಇಲ್ಲಿನ ವಿಶೇಷ ಹಲಸಿನಕಾಯಿ ಹುಳಿ ಮಳೆಗಾಲದಲ್ಲಿ ಮಂಗಳೂರು ಸೌತೆಕಾಯಿ ಹುಳಿ. ಆಹಾ ಆ ರುಚಿಯನ್ನು ಅನುಭವಿಸಿಯೇ ತೀರಬೇಕು.

ಕ್ಷೇತ್ರ ಮಹಿಮೆ
ಇಲ್ಲಿನ ಮುಖ್ಯ ದೇವರು ಶ್ರೀ ರಮಾತ್ರಿವಿಕ್ರಮ ದೇವರು, ಶ್ರೀ ವಾದಿರಾಜರು ಮತ್ತು ಶ್ರೀ ಭೂತರಾಜರು. ಶ್ರೀ ವಾದಿರಾಜರು ಯತಿಗಳು. ಅವರ ಮೂಲ ಬೃಂದಾವನ ಇಲ್ಲಿಯೇ ಇರುವುದು. ಪ್ರತಿನಿತ್ಯ ಪ್ರಾತಹ ಕಾಲದಲ್ಲಿ ಮತ್ತು ಸಂಧ್ಯಾಕಾಲದಲ್ಲಿ ಇಲ್ಲಿ ಪೂಜೆಗಳು ನಡೆಯುತ್ತವೆ. ಇಲ್ಲಿನ ವಿಶೇಷ ಪೂಜೆ ಎಂದರೆ ಭೂತರಾಜರಿಗೆ ಅನ್ನದ ಬಳಿ ಪೂಜೆ. ಬೇಸಿಗೆ ಕಾಲದಲ್ಲಿ ರಮಾತ್ರಿವಿಕ್ರಮ ದೇವಸ್ಥಾನದ ಮುಂಭಾಗದಲ್ಲಿ ಇರುವ ವಿಶೇಷ ಪೀಠದಲ್ಲಿ ಈ ಪೂಜೆ ನೆರವೇರಿಸಲಾಗುವುದು. ಮಳೆಗಾಲದಲ್ಲಿ ಅಲ್ಲಿ ನಡೆಸಲು ಆಗದ ಕಾರಣ ಭೂತರಾಜರ ಗುಡಿಯ ಮುಂದೆಯೇ ಮಾಡುತ್ತಾರೆ. ಎರಡು ಅಡಿಯಷ್ಟು ಎತ್ತರಕ್ಕೆ ಅನ್ನದ ರಾಶಿ ಹಾಕಿ ಅದಕ್ಕೆ ಕುಂಕುಮದ ನೀರನ್ನು ಕಲಸಿ ಅನ್ನದ ರಾಶಿಗೆ ಆ ನೀರನ್ನು ಹಾಕಿ ಕೆಂಪನೆ ಬಣ್ಣದ ರಾಶಿ ಮಾಡಿ ಅದಕ್ಕೆ ಒಡೆದ ತೆಂಗಿನ ಕಾಯಿಯನ್ನು ಕಣ್ಣಿನಂತೆ ಇತ್ತು ಅದಕ್ಕೊಂದು ರೂಪ ಕೊಟ್ಟು ಅದರ ಮುಂದೆ ಕುಳಿತು ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರದಲ್ಲಿ ಒಂದು ಪಂಜನ್ನು ಸಿದ್ಧಮಾಡಿ ಅದರಿಂದಲೇ ಆರತಿ ಮಾಡಿ ನಂತರ ಕಲಸಿದ್ದ ಕುಂಕುಮದ ನೀರನ್ನು ಆ ಪಂಜಿನ ಮೂಲಕ ನೆರೆದಿದ್ದ ಭಕ್ತರ ಮೇಲೆ ಪ್ರೋಕ್ಷಣೆ ಮಾಡುತ್ತಾರೆ. ನಂತರ ಅದೇ ನೀರನ್ನು ತೀರ್ಥವನ್ನಾಗಿ ನೀಡುತ್ತಾರೆ. ಪ್ರತಿದಿನವೂ ಈ ಪೂಜೆ ನಡೆದರೂ ಹುಣ್ಣಿಮೆಯಂದು ಬಹಳ ವಿಶೇಷ ಈ ಪೂಜೆಗೆ.


ಶ್ರೀ ಭೂತರಾಜರು
ಒಮ್ಮೆ ವ್ಯಾಸರಾಜರು ಮಠಕ್ಕೆ ಭೇಟಿ ಕೊಟ್ಟರು. ಅಂದು ದ್ವಾದಶಿ. ವಾದಿರಾಜರು ಇನ್ನೇನು ಪೂಜೆಗೆ ಕೂಡಬೇಕು. ಅಷ್ಟರಲ್ಲಿ ಭೋಜನಕ್ಕೆ ಕುಳಿತ ವ್ಯಾಸರಾಜರು ವಾದಿರಾಜರನ್ನು ಕುರಿತು "ರಾಜರು ಬರದೆ ನಾವು ಹೇಗೆ ಭೋಜನ ಸ್ವೀಕರಿಸುವುದು ಅವರು ಬಂದು ಇಲ್ಲೇ ಪಕ್ಕದಲ್ಲೇ ಕುಳಿತುಕೊಳ್ಳಲಿ" ಎಂದರು. ಅದರಂತೆಯೇ ವಾದಿರಾಜರು ಬಂದು ವ್ಯಾಸರಾಜರ ಪಕ್ಕದಲ್ಲಿ ಕುಳಿತು ಭೋಜನ ಮುಗಿಸಿ ನಂತರ ತಮ್ಮ ಶಿಷ್ಯ ವೃಂದಕ್ಕೆ ಹೇಳಿದರು ನೀವೆಲ್ಲ ಇಲ್ಲೇ ಇರಿ ನಾನು ಈಗಲೇ ಬರುತ್ತೇನೆ ಎಂದು ಹೇಳಿ ಹೊರಟರು. ಅವರು ಸೀದಾ ಬಂದು ತಲುಪಿದ್ದು ಶಾಲ್ಮಲಿ ನದಿಯ ಬಳಿಗೆ. ನದಿಯ ಬಳಿಗೆ ಬಂದವರೇ ಒಂದು ದೊಡ್ಡ ಎಲೆಯನ್ನು ತಮ್ಮ ಮುಂದೆ ಇಟ್ಟುಕೊಂಡು ಕುಳಿತರು. ತಾವು ಮಠದಲ್ಲಿ ಮಾಡಿದ ಅಷ್ಟು ಊಟವನ್ನು ಮತ್ತೆ ಎಲೆ ಮೇಲೆ ತಂದರು. ಅದು ಬಡಿಸಿದಾಗ ಹೇಗಿತ್ತೋ ಹಾಗೆಯೇ ಇತ್ತು. ಒಂದು ಚೂರು ಜೀರ್ಣವಾಗಿರಲಿಲ್ಲ. ಇದೆಲ್ಲಾ ಅವರ ಯೋಗಶಕ್ತಿಯಿಂದ ಸಾಧ್ಯವಾಯಿತು. ನಂತರ ಮತ್ತೆ ಸ್ನಾನ ಮಾಡಿ ಪೂಜೆ ಮುಗಿಸಿ ನಂತರ ಬಂದು ಭೋಜನ ಮುಗಿಸಿದರು. ಇದೆಲ್ಲವನ್ನು ಅವರನ್ನೇ ಹಿಂಬಾಲಿಸಿಕೊಂಡು ಬಂದ ಅವರ ಶಿಷ್ಯ ನಾರಾಯಣ ಶರ್ಮ ದೂರದಿಂದ ಮರದ ಮೇಲೊಂದರ ಮೇಲೆ ಹತ್ತಿ ನೋಡುತ್ತಿದ್ದ. ವಾಪಸ್ ಮಠದ ಕಡೆ ಹೊರಟಿದ್ದ ವಾದಿರಾಜರಿಗೆ ಅಡ್ಡ ಬಂದ ನಾರಾಯಣ ಶರ್ಮ ಗುರುಗಳೇ ನೀವು ಮಾಡಿದ್ದೆಲ್ಲವನ್ನೂ ನಾನು ನೋಡಿದೆ ಎಂದಾಗ ಕುಪಿತಗೊಂಡ ವಾದಿರಾಜರು ಅವನನ್ನು ಶಪಿಸಿಬಿಟ್ಟರು. ಕೂಡಲೇ ಅವನು ರಾಕ್ಷಸರೂಪಿಯಾಗಿಬಿಟ್ಟ.
ತನ್ನ ತಪ್ಪಿನ ಅರಿವಾದ ನಾರಾಯಣ ಶರ್ಮ ಶಾಪದ ಪರಿಹಾರವೆನೆಂದು ಕೇಳಲು ವಾದಿರಾಜರು ಹೇಳಿದರು ನೀನು ಕಾಡುಗಳಲ್ಲಿ ತಿರುಗುತ್ತ ದಾರಿಹೋಕರಲ್ಲಿ "ಆ ಕಾ ಮಾ ವೈ ಕೋ ನಾ ಸ್ನಾತಹ" ಎಂದು ಕೇಳು ಯಾರು ನಿನಗೆ ಉತ್ತರ ನೀಡುತ್ತಾರೋ ಅಂದು ನಿನಗೆ ಶಾಪ ವಿಮೋಚನೆ ಎಂದು ಹೇಳಿದರು. ಅಂದಿನಿಂದ ನಾರಾಯಣ ಶರ್ಮನು ಕಾಡುಗಳಲ್ಲಿ ಅಲೆಯುತ್ತ ದಾರಿಹೋಕರಲ್ಲಿ ತನ್ನ ಪ್ರಶ್ನೆಯನ್ನು ಕೆಳುತ್ತಿದ್ದನು. ಆದರೆ ಯಾರಿಂದಲೂ ಉತ್ತರ ದೊರಕುತ್ತಿರಲಿಲ್ಲ. ಹಾಗೆಯೇ ತನ್ನ ರಾಕ್ಷಸ ಗುಣದಿಂದಾಗಿ ದಾರಿಹೋಕರನ್ನು ಕೊಂದು ತಿನ್ನುತ್ತಿದ್ದನು. ತನ್ನ ಶಿಷ್ಯನ ಗತಿ ಕೇಳಿ ವಾದಿರಾಜರು ಮರುಗಿ ತಾವೇ ಕಾಡಿಗೆ ಹೊರಟರು. ಆಗ ಆ ನಾರಾಯಣಭೂತ ರಾಜರನ್ನೇ ಆ ಪ್ರಶ್ನೆ ಕೇಳಿದಾಗ "ರಂಡ ಪುತ್ರ ತ್ವಮ ನ ಸ್ನಾತಹ" (ಅಂದರೆ ವ್ಯಭಿಚಾರಿಯ ಮಗನು ಅಥವಾ ನಿನ್ನಂಥ ಬ್ರಹ್ಮರಾಕ್ಷಸನು ಆಶ್ವಯುಜ, ಕಾರ್ತೀಕ, ಮಾಘ, ವೈಶಾಖ ಮಾಸಗಳಲ್ಲಿ ಸ್ನಾನ ಮಾಡುವುದಿಲ್ಲ) ಎಂದ ಕೂಡಲೇ ಆತನಿಗೆ ಶಾಪ ವಿಮೋಚನೆಯಾಯಿತು. ಈಗ ಅವನು ತನ್ನ ಪೂರ್ವ ಜನ್ಮದ ಪ್ರತಾಪ ರುದ್ರನ ಅವತಾರ ತಾಳಿದ್ದನು. ಶಾಪ ವಿಮೋಚನೆ ಯಿಂದ ಆತನ ದೇಹ ಪ್ರಖರವಾಗಿ ಹೊಳೆಯುತ್ತಿತ್ತು. ಕಣ್ಣುಗಳು ಬೆಂಕಿಯ ಜ್ವಾಲೆಯಂತೆ ಜ್ವಲಿಸುತ್ತಿತ್ತು. ಶಾಪ ವಿಮೋಚನೆ ಮಾಡಿದ ವಾದಿರಾಜರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಪ್ರತಾಪ ರುದ್ರನು ತಮಗೆ ನಾನು ಶಾಶ್ವತವಾಗಿ ಸೇವೆ ಮಾಡಬೇಕೆಂದು ಹಂಬಲವಾಗಿದೆ ಎಂದು ತಿಳಿಸಿದರು. ವಾದಿರಾಜರು ಅವರನ್ನು ಹರಸುತ್ತ ನೀನು ಭಾವೀರುದ್ರನಾಗಿ ಸೋದೆಯ ಕ್ಷೇತ್ರಪಾಲಕನಾಗಿ ಮುಂದೆ ಭೂತರಾಜರು ಎಂದು ಪ್ರಸಿದ್ಧಿ ಪಡೆಯುತ್ತೀಯ ಎಂದರು. ಅಂದಿನಿಂದ ಭೂತರಾಜರು ವಾದಿರಾಜರಿಗೆ ಸೇವೆ ಸಲ್ಲಿಸುತ್ತಲೇ ಇದ್ದಾರೆ. ಒಮ್ಮೆ ವಾದಿರಾಜರು ಭೂತರಾಜರಿಗೆ ಬದರಿಕಾಶ್ರಮದಲ್ಲಿ ಇರುವ ರಮಾತ್ರಿವಿಕ್ರಮ ದೇವರ ಉತ್ಸವ ಮೂರ್ತಿಯನ್ನು ಪೂಜೆಗಾಗಿ ತರಲು ಹೇಳಿದಾಗ ಕೂಡಲೇ ಹೊರಟ ಭೂತರಾಜರು ಬದರಿಕಾಶ್ರಮದಿಂದ ತಮ್ಮ ರಥದಲ್ಲಿ ರಮಾತ್ರಿವಿಕ್ರಮ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಆಕಾಶಮಾರ್ಗದಲ್ಲಿ ಬರುತ್ತಿದ್ದಾಗ ದೈತ್ಯನೊಬ್ಬನು ಎದುರಾದನು. ವಾದಿರಾಜರು ಹೇಳಿದ ಮುಹೂರ್ತದಲ್ಲಿ ಅಲ್ಲಿರಬೇಕೆಂದು ಯೋಚಿಸಿ ಭೂತರಾಜರು ಸಮಯ ವ್ಯರ್ಥ ಮಾಡದೆ ತಮ್ಮ ರಥದ ಒಂದು ಚಕ್ರವನ್ನು ಕಿತ್ತು ಆ ದೈತ್ಯನ ಮೇಲೆ ಎಸೆದಾಗ ಆತ ಕೂಡಲೇ ಅಸುನೀಗಿದ. ವಿಗ್ರಹವನ್ನು ಹೊತ್ತ ಭೂತರಾಜರು ಸೋದೆಯಲ್ಲಿ ಬಂದಿಳಿದಾಗ ವಾದಿರಾಜರು ಆ ವಿಗ್ರಹವನ್ನು ಅಲ್ಲೇ ಸ್ಥಾಪಿಸುತ್ತ ಇದು ಕಲಿಯುಗವಾದ್ದರಿಂದ ಈ ಬಂಗಾರದ ರಥ ಹಾಗೆಯೇ ಈ ಬಂಗಾರದ ವಿಗ್ರಹ ಎರಡೂ ಕಲ್ಲಿನ ರೂಪದಲ್ಲಿ ಇರುತ್ತದೆ ಎಂದರು.
ಇಂದಿಗೂ ನೀವು ಸೋದೆಯಲ್ಲಿ ಆ ಒಂದು ಚಕ್ರವಿಲ್ಲದ ರಥವನ್ನು ನೋಡಬಹುದು.
ಆಚರಣೆ ಮತ್ತು ಸೇವಾ ಪದ್ಧತಿ
ಈ ಕ್ಷೇತ್ರದ ಪದ್ಧತಿಯಂತೆ ಇಲ್ಲಿಗೆ ಬಂದ ಕೂಡಲೇ ಮಾಡಬೇಕಾದ ಕೆಲಸವೆಂದರೆ ಭೂತರಾಜರ ಸನ್ನಿಧಿಯಲ್ಲಿ ತೆಂಗಿನ ಕಾಯಿ ಉರುಳಿಸುವುದು. ನೀವು ನಿಮ್ಮ ಸ್ವಂತ ವಾಹನದಲ್ಲಿ ಬಂದಿದ್ದರೆ ಚಕ್ರಕ್ಕೊಂದು ಎಂಬಂತೆ ಕಾಯಿ ಉರುಳಿಸಬೇಕು. ಇನ್ನು ಇಲ್ಲಿನ ವಿಶೇಷ ಸೇವಾ ಪದ್ಧತಿ ಎಂದರೆ ಕಾಯಿ ಕಟ್ಟಿಕೊಂಡು ಸೇವೆ ಮಾಡುವುದು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ಸೇವೆಯನ್ನು ಮಾಡುವರು. ಇಲ್ಲಿ ಸೇವೆ ಮಾಡಿ ನಿಶ್ಚಿತ ಫಲ ಕಂಡವರು ಬಹಳಷ್ಟು ಮಂದಿ ಇದ್ದಾರೆ. ಈಗಲೂ ಕಾಣುತ್ತಿದ್ದರೆ. ಈ ಸೇವೆಯ ರೀತಿ ಹೀಗಿದೆ.
ಮೊದಲಿಗೆ ಧವಳಗಂಗೆಯಲ್ಲಿ ಮಿಂದು ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಬಂದು ವಾದಿರಾಜರ ಬೃಂದಾವನದ ಬಳಿ ಬಂದರೆ ಅಲ್ಲಿ ಅರ್ಚಕರು ಬಂದು ಆ ಕಾಯನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿ ತಂದುಕೊಡುತ್ತಾರೆ. ಆ ಸಮಯದಿಂದ ಆ ಕಾಯನ್ನು ನೆಲಕ್ಕೆ ತಾಗಿಸುವಂತಿಲ್ಲ. ಹಾಗೆಯೇ ಆ ಕಾಯನ್ನು ತೆಗೆದುಕೊಂಡು ಹೋಗಿ ಒಂದು ವಸ್ತ್ರದಲ್ಲಿ ಕಟ್ಟಿ ನಿಮ್ಮ ಟೊಂಕಕ್ಕೆ ಕಟ್ಟಿಕೊಳ್ಳಬೇಕು. ನಂತರ ಧವಳಗಂಗೆಯಲ್ಲಿ ಏಳು ಬಾರಿ ಮುಳುಗಿ ಮೇಲಕ್ಕೆ ಬಂದು ಮೈ ಒರೆಸಿಕೊಳ್ಳಬಾರದು. ಹಾಗೆಯೇ ಬಟ್ಟೆಯಿಂದ ನೀರನ್ನು ಮಾತ್ರ ಹಿಂಡಿ ಅದೇ ಒದ್ದೆ ಬಟ್ಟೆಯಲ್ಲಿ ಹೆಂಗಸರು ಹಣೆಗೆ ಕುಂಕುಮ ಇಟ್ಟುಕೊಂಡು, ಗಂಡಸರು ಗೋಪಿಚಂದನವನ್ನು ಹಚ್ಚಿಕೊಂಡು ಮೊದಲಿಗೆ ಅಲ್ಲೇ ಪಕ್ಕದಲ್ಲಿ ಇರುವ ಮುಖ್ಯಪ್ರಾಣ ದೇವರಿಗೆ ನಮಸ್ಕಾರ ಹಾಕಿ ಎಡಕ್ಕೆ ತಿರುಗಿದರೆ ತುಳಸಿ ಬೃಂದಾವನ ಇದೆ ಅದಕ್ಕೆ ನಮಸ್ಕಾರ ಹಾಕಿ, ಪ್ರದಕ್ಷಿಣೆ ರೀತಿಯಲ್ಲಿ ಬಂದರೆ ಗೋಪಾಲಕೃಷ್ಣ ದೇವರ ಸನ್ನಿಧಿ ಇದೆ ಅದಕ್ಕೊಂದು ನಮಸ್ಕಾರ ಹಾಕಿ ಮುಂದೆ ಬಂದರೆ ಸಂತಾನ ಗೋಪಾಲಕೃಷ್ಣ ದೇವರ ಸನ್ನಿಧಿ ಇದೆ. ಅಲ್ಲೊಂದು ನಮಸ್ಕಾರ ಹಾಕಿ ಮುಂದೆ ಬಂದರೆ ಅರಳಿ ಕಟ್ಟೆ ಅಲ್ಲಿ ಒಂದು ನಮಸ್ಕಾರ ಹಾಕಿ ಮುಂದೆ ಬಂದರೆ ವೇದ ಮಂದಿರ ಅಲ್ಲೊಂದು ನಮಸ್ಕಾರ ಹಾಕಿ ಹಾಗೆಯೇ ಹೊರಗಿನಿಂದಲೇ ವಾದಿರಾಜರಿಗೆ ನಮಸ್ಕಾರ ಹಾಕಿ ಮುಂದಕ್ಕೆ ಸಾಗಿದರೆ ಅಲ್ಲಿ ಯತಿಗಳ ಬ್ರುಂದಾವನಗಳಿವೆ ಅಲ್ಲಿ ಒಂದು ನಮಸ್ಕಾರ ಹಾಕಿ ಮುಂದೆ ಬಂದರೆ ನಾಗಬನ ಅಲ್ಲೊಂದು ನಮಸ್ಕಾರ, ಮುಂದೆ ಪಾಪ ವಿಮೋಚನಾ ತೀರ್ಥ ಅಲ್ಲೊಂದು ನಮಸ್ಕಾರ, ನಂತರ ಹೊರಗಿನಿಂದಲೇ ಭೂತರಾಜರಿಗೆ ನಮಸ್ಕಾರ ಹಾಕಿ ಮುಂದೆ ಬಂದರೆ ಚಂದ್ರಮೌಳೇಶ್ವರ ಸನ್ನಿಧಿ ಅಲ್ಲಿ ಒಂದು ನಮಸ್ಕಾರ ಹಾಕಿ ಮುಂದೆ ಬಂದರೆ ವೀಣೆ ಸಹಿತ ಮುಖ್ಯಪ್ರಾಣ ದೇವರು ಅಲ್ಲಿಗೆ ಒಂದು ನಮಸ್ಕಾರ ಹಾಕಿದರೆ ಒಂದು ಸುತ್ತು ಮುಗಿದಂತೆ. ಇದೆ ಪದ್ಧತಿಯಲ್ಲಿ ಒಟ್ಟು ಏಳು ಸುತ್ತು ಪ್ರದಕ್ಷಿಣೆ ಹಾಕಬೇಕು. ಅಂದರೆ ಒಟ್ಟು ೪೯ ಸಲ ಮುಳುಗಬೇಕು. ಏಳು ಪ್ರದಕ್ಷಿಣೆಯ ನಂತರ ಮೇಲಕ್ಕೆ ಬಂದು ರಮಾತ್ರಿವಿಕ್ರಮ ದೇವರಿಗೆ ತಮ್ಮ ಶಕ್ತ್ಯಾನುಸಾರ ಪ್ರದಕ್ಷಿಣೆ ನಮಸ್ಕಾರ ಹಾಕಬೇಕು. ನಂತರ ಧವಳಗಂಗೆ ಬಲೆ ಬಂದು ಟೊಂಕಕ್ಕೆ ಕಟ್ಟಿದ್ದ ಆ ಕಾಯನ್ನು ವಸ್ತ್ರದ ಸಮೇತ ಹಾಗೆಯೇ ಬಿಚ್ಚಿ ಅಲ್ಲೇ ಪಕ್ಕದಲ್ಲಿ ಇರುವ ಮುಖ್ಯಪ್ರಾಣ ದೇವರ ಗುಡಿಯ ಕಟ್ಟಡಕ್ಕೆ ಇರುವ ಕಂಬಿಗಳಿಗೆ ಕಟ್ಟಬೇಕು. ನಂತರ ಸ್ನಾನ ಮಾಡಿ ಒಣಗಿದ ವಸ್ತ್ರವನ್ನು ಉಟ್ಟಿ ವಾದಿರಾಜರ ಸನ್ನಿಧಿಗೆ ಬಂದು ೧೦೮ ಪ್ರದಕ್ಷಿಣೆ ನಮಸ್ಕಾರಗಳನ್ನು ಹಾಕಬೇಕು. ಇಲ್ಲೂ ಅಷ್ಟೇ ಶಕ್ತಿ ಇದ್ದರೆ ಒಮ್ಮೆಲೇ ೧೦೮ ಹಾಕಬಹುದು ಇಲ್ಲದ್ದಿದ್ದರೆ ಊಟವಾದ ನಂತರವೂ ಹಾಕಬಹುದು. ಇಷ್ಟು ಮಾಡಿದರೆ ಒಂದು ದಿನದ ಸೇವೆ ಮುಗಿಯುವುದು. ಈ ರೀತಿ ೩,೫,೭ ಹೀಗೆ ಬೆಸ ಸಂಖ್ಯೆಯಲ್ಲಿ ತಮ್ಮ ಶಕ್ತ್ಯಾನುಸಾರ ದಿನಗಳಷ್ಟು ಸೇವೆ ಮಾಡಬಹುದು. ಸೇವೆ ಮಾಡುವ ಅಷ್ಟು ದಿವಸ ಪಾಲಿಸಬೇಕಾದ ನಿಯಮಗಳೆಂದರೆ ಒಂದೇ ಹೊತ್ತು ಊಟ, ರಾತಿಯ ಹೊತ್ತು ಫಲಾಹಾರ ಸೇವಿಸಬೇಕು, ಮಧ್ಯಾಹ್ನ ಮಲಗಬಾರದು, ಕಾಲಿಗೆ ಚಪ್ಪಲಿ ತೊಡಬಾರದು, ತಲೆಗೆ ಎಣ್ಣೆ ಹಚ್ಹ ಬಾರದು, ಮುಖ್ಯವಾಗಿ ಆ ಸ್ಥಳ ಬಿಟ್ಟು ಹೊರಗೆ ಹೋಗಬಾರದು. ಹೀಗೆ ತಾವು ಅಂದುಕೊಂಡಷ್ಟು ದಿನಗಳ ಕಾಲ ಸೇವೆಯನ್ನು ಮುಗಿಸಿದ ಮೇಲೆ ಅಂದರೆ ಮೂರು ದಿವಸ ಸೇವೆ ಇದ್ದರೆ ನಾಲ್ಕನೇ ದಿವಸ ಬೆಳಿಗ್ಗೆ ಆ ಸ್ನಾನ ಮಾಡಿ ಆ ಕಾಯನ್ನು ಬಿಚ್ಚಿಕೊಂಡು ಮರಳಿ ವಾದಿರಾಜರ ಸನ್ನಿಧಿಗೆ ಬಂದು ಅರ್ಚಕರ ಕೈಗೆ ಕೊಟ್ಟರೆ ಅವರು ಪುನಃ ಬೃಂದಾವನದ ಬಳಿ ಇಟ್ಟು ಪೂಜಿಸಿ ಕೊಡುತ್ತಾರೆ. ನಂತರ ಊರಿಗೆ ಮರಳಿದ ಮೇಲೆ ಆ ಕಾಯಿಂದ ಏನಾದರೂ ಸಿಹಿಯನ್ನು ಮಾಡಿ ಪ್ರಸಾದವಾಗಿ ಸ್ವೀಕರಿಸಬೇಕು.
ಭೂತರಾಜರ ಸ್ತೋತ್ರ - "ರಕ್ತಂ ವಿಚಿತ್ರವಸನಂ ಮಣಿಕುಂಡಲಾಡ್ಯಂ ಬಂದೂಕಪುಷ್ಪ ಸದ್ರುಶಾಧಾರ ಪಾಣಿಪಾದಂ
ಉದ್ಯದ್ದಿನೇಶ ಕರುಣಾರುಣ ದೇಹಭಾಜಾಂ ನಾರಾಯಣಂ ನಮತಾಂ ಚಾಪಶರಾನ್ ಧಧಾನಂ"

ವಾದಿರಾಜ ಪಾಹಿಮಾಂ ಭೂತರಾಜ ರಕ್ಷಮಾಂ

No comments:

Post a Comment