ನಂಬದಿರು ಈ ದೇಹ ನಿತ್ಯವೆಲ್ಲಾ
ಅಂಬುಜಾಕ್ಷನ ಭಜಿಸಿ ಸಿಖಿಯಾಗು ಮನವೆ ।।
ಎಲುಬು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ
ಒಳಗೆ ಮಲ ಮೂತ್ರಾದಿ ಕ್ರಿಮಿಗಳಿಹವು
ಹಲವು ವ್ಯಾಧಿಯ ಬಿಡು ಪಂಚಭೂತದ ನಾಡು
ಬಲಹು ದೇಹವ ನೆಚ್ಚಿ ಕೆಡಬೇಡ ಮನುಜ ।।೧।।
ಸತಿಸುತರು ಹಿತರೆಂದು ಮತಿ ಮರೆತು ಮಮತೆಯಲಿ
ಅತಿಕಾಂಕ್ಷೆಯಿಂದ ದುರ್ವಿಷಯ ಬಲಿದು
ಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದ
ಅತಿಶೂನ್ಯನಾಗಿ ನೀ ಕೆಡಬೇಡ ಮನುಜ ।।೨।।
ಪರರ ನಿಂದಿಸದೆ ಪರವಧುಗಳನು ಬಯಸದೆ
ಗುರುವಿಪ್ರ ಸೇವೆಯನು ಮಾಡು ಬಿಡದೆ
ಹರಿಸ್ತುತಿಯ ನೀ ಕೇಳು ಹರಿಕೀರ್ತನೆಯ ಮಾಡು
ಸಿರಿ ಪುರಂದರವಿಠಲನೊಲಿದು ಪಾಲಿಸುವ ।।೩।।
No comments:
Post a Comment