Monday, November 25, 2013
Sunday, November 24, 2013
ಎಷ್ಟು ಸಾಹಸವಂತ ನೀನೆ ಬಲವಂತ
ಎಷ್ಟು ಸಾಹಸವಂತ ನೀನೆ ಬಲವಂತ । ಇಷ್ಟದಾಯಕ ಭಳಿ ಭಳಿರೇ ಹನುಮಂತ॥ 
ಅಟ್ಟುತ ಖಳರನು ಮೆಟ್ಟಿ ಸೀಳುತಲಿ । ಕುಟ್ಟಿ ಚಂಡಾಡಿದ ಧಿಟ್ಟ ನೀನಹುದೋ ॥ ಪ ॥ 
ರಾಮರಪ್ಪಣೆಯಿಂದ ಶರಧಿಯ ದಾಟಿ । ಆ ಮಹಾ ಅಸುರೆಯ ಸೀಳಿ ಬಿಸಾಟಿ । 
ಸ್ವಾಮಿ ಕಾರ್ಯವನುಕೂಲದಿ ಯೋಚಿಸಿ । ಪ್ರೇಮದಿ ನಡೆದನು ಆರೆಲೆ ಸಾಟಿ ॥ ೧ ॥ 
ದೂರದಿಂದಸುರನ ಪುರವನ್ನೇ ನೋಡಿ । ಮನದಿ ಶ್ರೀರಾಮರ ಸ್ಮರಣೆಯಾ ಮಾಡಿ । 
ಹಾರುತ ಹರುಷದಿ ವರಸಿಲಂಕಿಣಿಯನು । ವಾರಿಜ ಮುಖಿಯಳ ಕಂಡು ಮಾತಾಡಿ ॥ ೨ ॥ 
ರಾಮರ ಕ್ಷೇಮವ ರಮಣಿಗೆ ಪೇಳಿ । ತಾಮಸ ಮಾಡದೆ ಮುದ್ರಿಕೆಯ ನೀಡಿ । 
ಭೂಮಿಜೆ ಜಾನಕಿ ಕುರುಡು ನೀಡಲಾಗ । ಆ ಮಹಾವನದೊಳು ಫಲಗಳ ಬೇಡಿ ॥ ೩ ॥ 
ಕಣ್ಣಿಗೆ ಬೇಕಾದ ಹಣ್ಣು ಸವಿದು । ಹಣ್ಣಿನ ನೆವದಲಿ ಅಸುರರ ಬಡಿದು । 
ಟಣ್ಣನೆ ಟಣ್ಣನೆ ಹಾರಿ ನೆಗೆದಾಡುತ । ಬಣ್ಣಿಸಿ ಅಸುರರ ಬಲವನು ಮುರಿದು ॥ ೪ ॥ 
ಶೃಂಗಾರ ವನದಲ್ಲಿದ್ದ ರಾಕ್ಷಸರ ಅಂಗವನಳಿಸಿದ್ಯೋ ಅತಿಶಯ ಶೂರಾ । 
ನುಂಗಿ ಅಸ್ತ್ರವನು ಅಕ್ಷಯ ಕುವರನ । ಭಂಗಿಸಿ ಬಿಸುಟಿದ್ಯೋ ಬಂದ ರಕ್ಕಸರಾ ॥ ೫ ॥ 
ದೂರ ಪೇಳುವರೆಲ್ಲ ರಾವಣನೊಡನೆ । ಚೀರುತ ಕರೆಸಿದ ಇಂದ್ರಜಿತುವನ್ನೇ । 
ಚೋರ ಕಪಿಯನು ಹಿಡಿದುತಾ ಎನ್ನುತ । ಶೂರರ ಕಳಿಸಿದ ನಿಜಸುತರೊಡನೆ ॥ ೬ ॥ 
ಪಿಡಿದನು ಇಂದ್ರಜಿತು ಕಡುಕೋಪದಿಂದ । ಹೆಡೆಮುರಿಗೆ ಕಟ್ಟಿದ ಬ್ರಹ್ಮಾಸ್ತ್ರದಿಂದ ॥ 
ಗುಡುಗುಡು ಗುಟ್ಟುತ ಕಿಡಿಕಿಡಿಯಾಗುತ । ನಡೆದನು ಲಂಕೆಯ ಒಡೆಯನಿದ್ದಲ್ಲಿಗೆ ॥ ೭ ॥ 
ಕಂಡ ರಾವಣನು ಉದ್ದಂಡ ಕಪಿಯನ್ನೆ । ಮಂಡೆಯ ತೂಗುತ ಮಾತನಾಡಿಸಿದ । 
ಭಂಡು ಮಾಡದೆ ಬಿಡೆ ನೋಡು ಕಪಿಯನೆ । ಕಂಡು ದುರದುರನೆ ನಡೆದನಾಗ ॥ ೮ ॥ 
ಛಲವ್ಯಾಕೋ ನಿನಗಿಷ್ಟು ಎಲವೋಕೋಡಗನೆ । ನೆಲೆ ಯಾವುದ್ಹೇಳೋ ನಿನ್ನೊಡೆಯನ ಹೆಸರನ್ನ । 
ಬಲವಂತ ರಾಮರ ಬಂಟ ಬಂದಿಹೆನೋ । ಹಲವು ಮಾತ್ಯಾಕೋ ಹನುಮನೆ ನಾನು ॥ ೯ ॥ 
ಬಡ ರಾವಣನೆ ನಿನ್ನ ಬಡಿದು ಹಾಕುವೆನು । ಎನ್ನೊಡೆಯನಪ್ಪಣೆಯಿಲ್ಲೆಂದು ತಾಳಿದೆನು । 
ಪುಡಿಮಾಡುವೆ ಫುಲ್ಲ ರಕ್ಕಸನೆ । ತೊಡೆವೆನು ನಿನ್ನಪಣೆಯ ಅಕ್ಷರವ ॥ ೧೦ ॥ 
ನಿನ್ನಂತ ದೂತರು ರಾಮರ ಬಳಿಗೆ । ಇನ್ನೆಷ್ಟು ಮಂದಿಗಳುಂಟು ಹೇಳೋ ನೀತ್ವರಿಯಾ । 
ನನ್ನಂತ ದೂತರು ನಿನ್ನಂತ ಪ್ರೇತರು । ಇನ್ನೂರು ಕೋಟಿ ಕೇಳರಿಯಾ ॥ ೧೧ ॥ 
ಕಡುಕೋಪದಿಂದಲಿ ಖೂಳ ರಾವಣನು । ಸುಡಿಸುಡಿ ಬಾಲವ ಸುತ್ತಿವಸನನು । 
ಒಡೆಯನ ಮಾತಿಗೆ ತಡೆಬಡೆಯಿಲ್ಲದೆ । ಒಡನೆ ಮುತ್ತಿದರು ಗಡಿಮನೆಯವರು ॥ ೧೨ ॥ 
ತಂದಿರುವಸನವ ತಂಡ ತಂಡದಲಿ । ಒಂದೊಂದು ಮೂಟೆ ಎಂಭತ್ತು ಕೋಟಿಯಲಿ । 
ಚಂದದಿ ಹರಳಿನ ತೈಲದೊಳದ್ದಿಸಿ । ನಿಂದ ಹನುಮನು ಬಾಲವ ಬೆಳೆಸುತ ॥ ೧೩ ॥ 
ಶಾಲುಶಕಲಾತಿಯು ಸಾಲದೆಯಿರಲು । ಬಾಲೆರ ವಸ್ತ್ರವ ಸೆಳೆದು ತಾರೆನಲು । 
ಬಾಲವ ನಿಲ್ಲೆಸಿ ಬೆಂಕಿಯನಿಡುತಲಿ । ಕಾಲ ಮೃತ್ಯುವ ಕೆಣಕಿದರಲ್ಲಿ ॥ ೧೪ ॥ 
ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ । ಇಣುಕಿ ನೋಡುತ ಅಸುರರಣಕಿಸುತ । 
ಝಣಝಣ ಝಣರೆನೆ ಬಾಲದ ಗಂಟೆಯು । ಮನದಿ ಶ್ರೀರಾಮರ ಪಾದವ ನೆನೆಯುತ ॥ ೧೫ ॥ 
ಮಂಗಳಂ ಶ್ರೀರಾಮಚಂದ್ರ ಮೂರುತಿಗೆ । ಮಂಗಳಂ ಸೀತಾದೇವಿ ಚರಣಂಗಳಿಗೆ । 
ಮಂಗಳವೆನುತ ಲಂಕೆಯ ಸುಟ್ಟು । ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ ೧೬ ॥ 
ಹತ್ತಿತು ಅಸುರನ 
ಗಡ್ಡಮೀಸೆಗಳು । ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು । 
ಚಿತ್ತದಿರಾಮರು ಕೋಪಿಸುವರು ಎಂದು । ಚಿತ್ತದಿ ನಡೆದನು ಅಸುರನಿದ್ದೆಡೆಗೆ ॥ ೧೭ ॥ 
ಸೀತೆಯ ಕ್ಷೇಮವ ಶ್ರೀರಾಮರಿಗೆ ಹೇಳಿ । ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ । 
ಸೇತುವೆ ಕಟ್ಟಿ ಚದುರಂಗ ಬಲಸಹ । ಮುತ್ತಿತು ಲಂಕೆಯ ಸೂರೆಗೈಯುತಲಿ ॥ ೧೮ ॥ 
ವೆಗ್ಗಳವಾಯಿತು ರಾಮರ ದಂಡು । ಮುತ್ತಿತು ಲಂಕೆಯ ಕೋಟೆಯ ಕಂಡು । 
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ । ಝಗ್ಗನೆ ಪೇಳ್ದರು ರಾವಣಗಂದು ॥ ೧೯ ॥ 
ರಾವಣ ಮೊದಲಾದ ರಾಕ್ಷಸರ ಕೊಂದು । ಭಾವಶುದ್ಧದಲಿ ವಿಭೀಷಣಬಾಳೆಂದು । 
ದೇವಿ ಸೀತೆಯ ನೋಡಗೊಂಡಯೋಧ್ಯದಿ । ದೇವ ಶ್ರೀರಾಮ ರಾಜ್ಯವಾಳಿದರು ॥ ೨೦ ॥ 
ಶಂಖದೈತ್ಯನ ಕೊಂದೆ ಶರಣು ಶರಣಯ್ಯ ।  ಶಂಖಾಗಿರಿಯಲಿ ನಿಂದ ಹನುಮಂತರಾಯ । 
ಪಂಕಜಾಕ್ಷ ಹಯವದನ ಕಟಾಕ್ಷದಿ । ಬಿಂಕದಿ ಪಡೆದೆಯೋ ಅಜಪದವಿಯನು ॥ ೨೧ ॥ 
Subscribe to:
Comments (Atom)
 
 
