ನವಮ ಸಂಧಿ 
ರಾಘವೇಂದ್ರರ ವಿಜಯ ಪೇಳುವೆ 
ರಾಘವೇಂದ್ರರ ಕರುಣ ಬಲದಲಿ 
ರಾಘವೇಂದ್ರರ ಭಕುತರಾದವರಿದನು ಕೇಳುವುದು//
ಜಯತು ಜಯ ಗುರುರಾಜ ಶುಭತಮ 
ಜಯತು ಕವಿಜನಗೇಯ ಸುಂದರ 
ಜಯತು ನಿಜಜನಪಾಲಕ ಜಯತು ಕರುಣಾಳೊ 
ಜಯತು ಸಜ್ಜನ ವಿಜಯದಾಯಕ 
ಜಯತು ಕುಜನಾರಣ್ಯ ಪಾವಕ 
ಜಯತು ಜಯ ಜಯ ದ್ವಿಜವರಾರ್ಚಿತ ಪಾದಪಂಕಜ//೧//
ಹಿಂದೆ ನೀ ಪ್ರಹ್ಲಾದನೆನಿಸಿ 
ತಂದೆಸಂಗಡ ವಾದ ಮಾಡೀ 
ಇಂದಿರೇಶನ ತಂದು ಕಂಬದಿ ಅಂದು ತೋರಿಸಿದೆ 
ಮುಂದೆ ನಿನ್ನಯ ಪಿತಗೆ ಸದ್ಗತಿ 
ಛಂದದಿಂದಲಿ ಕೊಡಿಸಿ ಮೆರೆದೆಯೊ 
ಎಂದು ನಿನ್ನಯ ಮಹಿಮೆ ಪೊಗಳಲು ಎನಗೆ ವಶವಲ್ಲ//೨//
ತೊಳಪುನಾಶಿಕ ಕದಪುಗಳು ಬಲು 
ಪೊಳೆವ ಕಂಗಳು ನೀಳ ಪೂರ್ಭುಗಳೆಸೆವ 
ತಾಪೆರೆನೊಸಲು ಥಳಥಳ ನಾಮವಕ್ಷತಿಯು 
ಲಲಿತ ಅರುಣಾಧರದಿ ಮಿನುಗುವ 
ಸುಲಿದ ದಂತಸುಪಂಕ್ತಿ ಸೂಸುವ 
ಎಳೆನಗೆಯ ಮೊಗದಲ್ಲಿ ಶೋಭಿಪ ಚುಬುಕ ತಾನೊಪ್ಪ//೩//
ಕಂಬುಕಂಠವು ಸಿಂಹಸ್ಕಂದವು 
ಕುಂಭಿಕರಸಮ ಬಾಹುಯುಗ್ಮವು 
ಅಂಬುಜೋಪಮ ಹಸ್ತಯುಗಳವು ನೀಳಬೆರಳುಗಳು 
ಅಂಬುಜಾಂಬಕ ಸದನಹೃದಯದಿ 
ಅಂಬುಜಾಕ್ಷೀ ತುಳಸಿ ಮಾಲಾ 
ಲಂಬಿತಾಮಲ ಕುಕ್ಷಿವಳಿತ್ರಯ ಗುಂಭಸುಳಿನಾಭೀ//೪//
ತೊಳಪುನಾಮ ಸಮುದ್ರಿಕಾವಳಿ 
ಪೊಳೆವೋ ಪೆಣೆಯೊಳಗೂರ್ಧ್ವಪುಂಡ್ರವು 
ತಿಲಕದೋಪರಿ ಮಿನುಗೊದಕ್ಷತಿ ರತ್ನ ಮಣಿಯೊಪ್ಪೆ 
ಲಲಿತ ಮೇಖಲ ಕೈಪ ಕಟಿತಟ 
ಚಲುವ ಊರೂಯುಗಳ ಜಾನೂ 
ಜಲಜ ಜಂಘೆಯು ಗುಲ್ಫ ಪದಯುಗ ಬೆರಳು ನಖವಜ್ರ//೫//
ಅರುಣ ಶಾಠಿಯು ಶಿರದಲಿಂದಲಿ 
ಚರಣ ಪರಿಯಂತರದಲೊಪ್ಪಿರೆ 
ಚರಣಪಾದುಕಯುಗಳ ಪುರದಲಿ ನಿರುತ ಶೋಭಿಪದು 
ಕರುಣಪೂರ್ಣ ಕಟಾಕ್ಷದಿಂದಲಿ 
ಶರಣಜನರನ ಪೊರೆವೊ ಕಾರಣ 
ಕರೆದರಾಕ್ಷಣ ಬರುವನೆಂಬೊ ಬಿರುದು ಪೊತ್ತಿಹನು//೬//
ರಾಯನಮ್ಮೀಜಗಕೆ ಯತಿಕುಲ 
ರಾಯನಂ ಕಲ್ಯಾಣಗುಣಗಣ 
ಕಾಯನಂ ನಿಸ್ಸೀಮ ಸುಖತತಿದಾಯನೆನಿಸಿರ್ಪ 
ರಾಯ ವಾರಿಧಿ ವೃದ್ಧ ಗುಣಗಣ 
ರಾಯ ನಿರ್ಮಲಕೀರ್ತಿಜೋತ್ಸ್ನನು 
ರಾಯರಾಯನು ಎನಿಸಿ ಶೋಭಿಪನೆಂದು ಕಾಂಬುವೆನು//೭//
ಗಂಗಿಗಾದುದು ಯಮುನೆಸಂಗದಿ 
ತುಂಗತರ ಪಾಲ್ಗಡಲಿಗಾದುದು 
ರಂಗನಂಗದಿ ನೈಲ್ಯತೋರ್ಪುದು ಸರ್ವಕಾಲದಲಿ 
ಸಿಂಗರಾದ ಸುವಾಣಿದೇವಿಗೆ 
ಉಂಗರೋರುಸು ಗುರುಳು ಸರ್ವದ 
ಮಂಗಳಾಂಗಿಯು ಗೌರಿ ಹರನಿಂ ಕಪ್ಪು ಎನಿಸಿಹಳೋ//೮//
ಮದವು ಏರೋದು ದೇವಗಜಕೆ 
ರದನದಲಿ ನಂಜುಂಟು ಫಣಿಗೆ 
ಮದವು ಮಹವಿಷ ಕಪ್ಪು ದೋಷವು ಎನಗೆ ಇಲ್ಲೆಂಬ 
ಮುದದಿ ಲೋಕತ್ರಯದಿ ತಾನೇ 
ಒದಗಿ ದಿನದಿನ ಪೇಳ್ವ ತೆರದಲಿ 
ಸದಮಲಾತ್ಮಕರಾದ ರಾಯರ ಕೀರ್ತಿ ಶೋಭಿಪುದು//೯//
ಸರ್ವಸಂಪದ ನೀಡಲೋಸುಗ 
ಸರ್ವಧರ್ಮವ ಮಾಡೊಗೋಸುಗ 
ಸರ್ವವಿಘ್ನವ ಕಳಿಯೊಗೋಸುಗ ಕಾರ್ಯನೇರ್ವಿಕೆಗೆ 
ಸರ್ವಜನರಿಗೆ ಕಾಮಿತಾರ್ಥವ 
ಸರ್ವರೀತಿಲಿ ಸಲಿಸೊಗೋಸುಗ 
ಊರ್ವಿತಳದೊಳು ತಾನೆ ಬೆಳಗೋದು ಅಮಲ ಗುರುಕೀರ್ತಿ//೧೦//
ಇಂದುಮಂಡಲರೋಚಿಯೋ 
ಪಾಲ್ಸಿಂಧುರಾಜನ ವೀಚಿಯೋ ಸುರರಿಂದ್ರ 
ನೊಜ್ರ ಮರೀಚಿಯೋ ಸುರತುರಗ ಸದ್ರುಚಿಯೋ 
ಕಂದುಗೊರಳನ ಗಿರಿಯೋ ರಾಘವೇಂದ್ರ 
ಗುರುಗಳ ಕೀರ್ತಿಪೇಳ್ವಡೆ 
ಮಂದಬುದ್ಧಿಗೆ ತೋರದಂದದಿ ಕೀರ್ತಿ ರಾಜಿಪದು//೧೧//
ನಿಟಿಲ ನೇತ್ರನ ತೆರದಿ ಸಿತ 
ಸುರತಟಿನಿಯಂದದಿ ಗೌರಗಾತರ 
ಸ್ಫಟಿಕಮಣಿಮಯ ಪೀಠದಂದದಿ ಧವಳ ರಾಜಿಪದು 
ಮಠದೊಳುತ್ತಮ ಮಧ್ಯಮಂಟಪ 
ಸ್ಫುಟಿತಹಾಟಕರತ್ನ ಮುಕುರದ 
ಕಟಕಮಯವರ ಪೀಠದಲಿ ಗುರುರಾಯ ಶೋಭಿಸಿದೆ//೧೨//
ಹರಿಯ ತೆರದಲಿ ಲಕ್ಷ್ಮೀನಿಲಯನು 
ಹರಣ ತೆರದಲಿ ಜಿತಮನೋಜನು 
ಸರಸಿಜೋದರ ತೆರದಿ ಸರ್ವದ ಸೃಷ್ಟಿಕಾರನು 
ಮರುತನಂತಾಮೋದಕಾರಿಯು 
ಸುರಪನಂತೆ ಸುಧಾಕರನು ತಾ 
ಸುರರ ತರುವರದಂತೆ ಕಾಮದ ನೆನಿಪ ಗುರುರಾಯ//೧೩//
ಚಿತ್ತಗತ ಅಭಿಲಾಷದಂದದಿ 
ಮತ್ತೆ ಮತ್ತೆ ನವೀನ ತಾ ಘನ 
ಉತ್ತಮೋತ್ತಮ ಲಕುಮಿಯಂದದಿ ವಿಭವಕಾಸ್ಪದನೂ 
ಮತ್ತೆ ಚಂದ್ರನ ತೆರದಿ ಗುರುವರ 
ನಿತ್ಯದಲಿ ಸುಕಳಾದಿನಾಥನು 
ಮೃತ್ಯುಯಿಲ್ಲದ ಸ್ವರ್ಗ ತೆರದಲಿ ಸುರಭಿ ಸಂಭ್ರುತನು//೧೪//
ಗಗನದಂದದಿ ಕುಜ ಸುಶೋಭಿತ 
ನಿಗಮದಂದದಿ ನಿಶ್ಚಿತಾರ್ಥನು 
ರಘುಕುಲೇಶನ ತೆರದಿ ಸರ್ವದ ಸತ್ಯಭಾಷಣನು 
ನಗವರೋತ್ತಮನಂತೆ ನಿಶ್ಚಲ 
ಗಗನ ನದಿತೆರ ಪಾಪಮೋಚಕ 
ಮುಗಿಲಿನಂದದಿ ಚಿತ್ರಚರ್ಯನು ಎನಿಸಿ ತಾ ಮೆರೆವ//೧೫//
ಸರಸಿಜೋದ್ಭವನಂತೆ ಸರ್ವದ 
ಸರಸವಿಬುಧರ ಸ್ತೋಮವಂದಿತ 
ಸುರವರೇಂದ್ರನ ತೆರದಿ ಸಾಸಿರನಯನಕಾಶ್ರಯನು 
ತರುಗಳಾರಿಯ ತೆರದಿ ಸಂತತ 
ಸುರಗಣಾನನನೆನಿಪ ಕಾಲನ 
ತೆರದಿ ಸಂತತ ಕುಜನರಿಗೆ ತಾಪವನೆ ಕೊಡುತಿಪ್ಪ//೧೬//
ನಿರುತ ನಿರ್ಋತಿಯಂತೆ ಮದ್ಗುರುವರ 
ಸದಾ ನವವಿಭವನೆನಿಪನು 
ವರುಣನಂದದಿ ಸಿಂಧುರಾಜಿತನಮಿಪ ಬಲಿಯುತನೂ 
ಮರುತನಂತೆ ಸ್ವಸತ್ತ್ವಧಾರಿತ 
ಪರಮ ಶ್ರೀ ಭೂ ರಮಣಸೇವಕ 
ಹರಣ ಮಿತ್ರನ ತೆರದಿ ಮಹಧನಕೋಶ ಸಂಯುತನೂ//೧೭//
ಈಶನಂತೆ ವಿಭೂತಿಧಾರಕ 
ಭೇಶನಂತೆ ಕಳಾಸುಪೂರಣ 
ಕೀಶನಂತೆ ಜಿತಾಕ್ಷ ನಿರ್ಜಿತಕಾಮ ಸುಪ್ರೇಮಾ 
ವ್ಯಾಸನಂತೆ ಪ್ರವೀಣಶಾಸ್ತ್ರ 
ದಿನೇಶನಂದದಿ ವಿಗತದೋಷ 
ನರೇಶನಂದದಿ ಕಪ್ಪಕಾಣಿಕೆ ನಿರುತ ಕೊಳುತಿಪ್ಪಾ//೧೮//
ವನದತೆರ ಸುರಲೋಕ ತೆರದಲಿ 
ಅನವರತ ಸುಮನೋಭಿವಾಸನು 
ಇವನ ತೆರದಲಿ ಇಂದು ತೆರದಲಿ ಕಮಲಕಾಶ್ರಯನು 
ವನಜನೇತ್ರನ ತೆರದಿ ನಭತೆರ 
ಮಿನುಗೊ ಸದ್ವಿಜರಾಜರಂಜಿತ 
ಕನಕ ಕವಿತೆಯ ತೆರದಲಂಬುಧಿ ತೆರದಿ ತಾ ಸರಸ//೧೯//
ಇನತೆ ಗುಣಗಳು ನಿನ್ನೊಳಿಪ್ಪವೊ 
ಘನಮಹಿಮ ನೀನೊಬ್ಬ ಲೋಕಕೆ 
ಕನಸಿಲಾದರು ಕಾಣೆ ಕಾವರ ನಿನ್ನ ಹೊರತಿನ್ನು 
ಮನವಚನ ಕಾರ್ಯಗಳ ಪೂರ್ವಕ 
ತನುವು ಮನಿ ಮೊದಲಾದುದೆಲ್ಲನು 
ನಿನಗೆ ನೀಡಿದೆ ಇದಕೆ ಎನಗನುಮಾನವಿನಿತಿಲ್ಲ//೨೦//
ಹರಿಯು ಭಕುತರ ಪೊರೆದ ತೆರದಲಿ 
ಗುರುವೇ ನಿನ್ನಯ ಭಕುತ ಜನರನು 
ಧರೆಯ ತಳದಲಿ ಪೊರೆಯೊಗೋಸುಗ ನಿನ್ನವತಾರ 
ಕೊರತೆ ಇದಕೇನಿಲ್ಲ ನಿಶ್ಚಯ 
ಪರಮಕರುಣಿಯು ನೀನೆ ಎನ್ನನು 
ಶಿರದಿ ಕರಗಳನಿಟ್ಟು ಪಾಲಿಸೊ ಭಕುತಪರಿಪಾಲಾ//೨೧//
ಎನ್ನ ಪಾಲಕ ನೀನೆ ಸರ್ವದ 
ನಿನ್ನ ಬಾಲಕ ನಾನೇ ಗುರುವರ 
ಎನ್ನ ನಿನ್ನೊಳು ನ್ಯಾಯವ್ಯಾತಕೆ ಘನ್ನಗುಣನಿಧಿಯೇ 
ಬನ್ನ ಬಡಿಸುವ ಭವದಿ ತೊಳಲುವದನ್ನು 
ನೋಡೀ ನೋಡದಂದದಿ 
ಇನ್ನು ಕಾಯದಲಿರುವರೇನಾಪನ್ನಪರಿಪಾಲಾ//೨೨//
ನಂಬಿಭಜಿಸುವ ಜನಕೆ ಗುರುವರ 
ಇಂಬುಗೊಟ್ಟವರನ್ನು ಕಾಯುವಿ 
ಎಂಬೋ ವಾಕ್ಯವು ಎಲ್ಲಿ ಪೋಯಿತೋ ತೋರೋ ನೀನದನು 
ಬಿಂಬಮೂರುತಿ ನೀನೆ ವಿಶ್ವ 
ಕುಟುಂಬಿ ಎನ್ನನು ಸಲಹೊ ಸಂತತ 
ಅಂಬುಜೋಪಮ ನಿನ್ನ ಪದಯುಗ ನಮಿಪೆನನವರತ//೨೩//
ಮಾತೆ ತನ್ನಯ ಬಾಲನಾಡಿದ 
ಮಾತಿನಿಂದಲಿ ತಾನು ಸಂತತ 
ಪ್ರೀತಳಾಗುವ ತೆರದಿ ಎನ್ನಯ ನುಡಿದ ನುಡಿಯಿಂದ 
ತಾತ ನೀನೆ ಎನಗೆ ಸರ್ವದ 
ಪ್ರೀತನಾಗುವುದಯ್ಯ ಕಾಮಿತದಾತ 
ಗುರುಜಗನ್ನಾಥವಿಠಲ ಲೋಲ ಪರಿಪಾಲ//೨೪//
//ಇತಿ ಶ್ರೀ ರಾಘವೇಂದ್ರ ವಿಜಯ ನವಮ ಸಂಧಿ ಸಮಾಪ್ತಂ//