Tuesday, March 11, 2014

ಈಸಬೇಕು ಇದ್ದು ಜೈಸಬೇಕು

ಈಸಬೇಕು ಇದ್ದು ಜೈಸಬೇಕು
ಹೇಸಿಗೆ ಸಂಸಾರದಲ್ಲಿ ಆಸೆ ಲೇಶ ಇಡದ್ಹಾ೦ಗೆ
ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ ।।೧।।

ಕಾಮಿತ ಕೈಗೊಂಬರೆಲ್ಲ
ಗೇರುಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ
ಮೀರಿಯಾಸೆ ಮಾಡದಲೆ
ಧೀರ ಕೃಷ್ಣನ ಭಕುತರೆಲ್ಲ ।।೨।।

ಮಾಂಸದಾಸೆಗೆ ಮತ್ಸ್ಯ ಸಿಲುಕಿ
ಹಿಂಸೆ ಪಡುವ ಪರಿಯೊಳು
ಮೋಸ ಹೋಗದ್ಹಾ೦ಗೆ
ಜಗದೀಶ ಪುರಂದರವಿಠಲನ ನೆನೆದು ।।೩।।

ಇದು ಏನಂಗಮೋಹನಾಂಗ

ರಾಗ : ದರ್ಬಾರು
ತಾಳ : ಅಟ್ಟತಾಳ
ಇದು ಏನಂಗಮೋಹನಾಂಗ ಪ।
ಮದನಜನಕ ತೊರವೆಯ ನರಸಿಂಗ ।। ।।

ಸುರರು ನುತಿಸಿದರೆ ತುಟಿಯ ಮಿಸಕದವ
ಮರೆದೇತಕೆ ಬಾಯ ತೆರೆದೆ ಪೇಳೊಮ್ಮೆ ।।೧।।

ವರ ನೀಲ ಮುತ್ತು ಮಾಣಿಕ ಹಾರಗಳಿರೆ
ಕೊರಳಲಿ ಕರುಳಮಾಲೆಯನ್ನಿಟ್ಟು ಮೆರೆವುದು ।।೨।।

ತೊರವೆಯ ನರಹರಿ ಪುರಂದರ ವಿಠಲ
ಸಿರಿಯಿಪ್ಪ ತೊಡೆಯೊಳು ಅರಿಯನಟ್ಟಿರುವುದು ।।೩।।

Friday, March 7, 2014

ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ

 ಇಂದು ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ. 

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಾಯಚ//
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ//

ಕಲಿಯುಗದ ಮಹಿಮೆಯು ಕಾಣಬಂತೀಗ

ಕಲಿಯುಗದ ಮಹಿಮೆಯು ಕಾಣಬಂತೀಗ
ಆಲಜಾಕ್ಷ ಮೇಲ್ಗಿರಿಯ ಶ್ರೀ ವೆಂಕಟೇಶ ।।

ಹರಿಕಥೆಯನೆ ಬಿಟ್ಟು ಹೀನ ನುಡಿ ನುಡಿಯುವರು
ಗುರುಹಿರಿಯರ ದೂಷಿಸಲು ಎಣಿಸುವರು
ಪೊರೆದ ತಾಯ್ತಂದೆಗಳ ಮಾತುಗಳ ಮನ್ನಿಸದೆ
ತರುಣಿಯರ ನಿಡಿಗೇಳಲಿಚ್ಚಿಸುತ್ತಿಹರು ।।೧।।

ಪಟ್ಟದರಸಿಯ ಬಿಟ್ಟು ಪರಸತಿಯ ಬಯಸುವರು
ಕೊಟ್ಟ ಸಾಲವ ನುಂಗಿ ಕೊಳಲೆಣಿಪರು
ಮುಟ್ಟಿ ಭಾಷೆಯ ಕೊಟ್ಟು ಮೋಸವನೆ ಮಾಡುವರು
ಬಿಟ್ಟು ಪರದೈವವನು ಮಾರಿಗೆರಗುವರು ।।೨।।

ಕಂಡುದನು ಹೇಳರು ಕಾಣದನು ಪೇಳುವರು
ಉಂಡ ಮನೆಗೆರಡು ಬಗೆಯುತ್ತಲಿಹರು
ಕೊಂಡಾಡಿ ಬೇಡಿದರೆ ಕೊಡರೊಂದು ರುವ್ವಿಯನು
ದಂಡಿಸಿ ಕೇಳಿದರೆ ಧನವ ಕೊಡುತಿಹರು ।।೩।।

ಕಳ್ಳರೊಳು ಅತಿಸ್ನೇಹ ಸುಳ್ಳರೊಳು ಸೋಲುವರು
ಒಳ್ಳೆಯವರೊಡನೆ ವಂಚನೆ ಮಾಡುವರು
ಇಲ್ಲದ ಅನಾಥರಿಗೆ ಇಷ್ಟೊಂದವಿಕ್ಕರು
ಬಲ್ಲಿದರೆ ಬಾಯಿಸವಿಯನುಣಿಸುವರು ।।೩।।

ಮಾಡಿದುಪಕಾರವನು ಮರೆತುಕೊಂಬರು ಮತ್ತೆ
ಕೊಡಲೇ ಕಾದುವರು ಕಪಟತ್ವದಿಂದ
ರೂಢಿಯೊಳಗೆ ನಮ್ಮ ಪುರಂದರವಿಠಲನ್ನ
ಪಾಡಿಪೊಗಳುವರಿಗಿನ್ನಾರ ಭಯವಿಲ್ಲ ।।೪।।